ಮನಸ್ಸು ತಟ್ಟುವ, ಅರಿವು ಹೆಚ್ಚಿಸುವ, ಕಾಡುವಂಥ ಹಲವು ಸಿನಿಮಾಗಳಿಗೆ ಈ ಬಾರಿಯ ಬೆಂಗಳೂರು ಸಿನಿಮೋತ್ಸವ ಸಾಕ್ಷಿಯಾಯ್ತು. ಚಿತ್ರೋತ್ಸವದಲ್ಲಿ ಸಂಬಂಧಗಳು ನವೀಕರಿಸಲ್ಪಡುತ್ತವೆ. ಹಾಗೂ ಹೊಸ ಸಂಬಂಧಗಳು ಬೆಳೆಯುತ್ತವೆ. ಚಿತ್ರಗಳಲ್ಲಿ ಸಂಬಂಧಗಳನ್ನು ಹುಡುಕುವುದಕ್ಕಿಂಥ ಇಂತ ಉತ್ಸವಗಳು ಮಾನವ ಸಂಬಂಧಗಳಿಗೆ ಬೆಸುಗೆ ಹಾಕಲಿ ಎಂದು ಆಶಿಸೋಣ.

ಮಳೆ ನಿಂತ ಮೇಲೆ ಹನಿ ಬೀಳುವಂತೆ, 14ನೇ ಬೆಂಗಳೂರು ಚಿತ್ರೋತ್ಸವ ಮುಗಿದರೂ ಒಂದೆರೆಡು ದಿನ‌ ಗುಂಗು ಇದ್ದೇ ಇರುತ್ತದೆ. ನೋಡಿದ ಚಿತ್ರಗಳನ್ನು ಪುನರಾವಲೋಕಿಸಿ, ಮನಸ್ಸಿಗೆ ತಟ್ಟಿದ್ದು,ಅರಿವನ್ನು ಹೆಚ್ಚಿಸಿದ್ದು ಮತ್ತು ಚಿಂತನೆಗೆ ಹಚ್ಚಿದ್ದನ್ನು ಗುರುತಿಸಲು ಪ್ರಯತ್ನಿಸಿದ್ದೇನೆ. ಹಲವರಿಗೆ ನನ್ನ‌ ಅಭಿಪ್ರಾಯಗಳು ಹಿಡಿಸದೆಯೂ ಇರಬಹುದು. ಆದರಿದು ನನ್ನ ಗ್ರಹಿಕೆ ಮತ್ತು ಮಿತಿ.

ಕಾಡಿದ ಸಿನಿಮಾಗಳು : ತಲೆ ಕೆಡಿಸಿಕೊಳ್ಳುವಂತೆ ಮಾಡುವ ಸಿನಿಮಾಗಳು ನನಗಿಷ್ಟ.ನೋಡಿದ ಚಿತ್ರ ಗುಂಗಿ ಹುಳದಂತೆ‌ ಕೊರೆಯುತ್ತಿರಬೇಕು. ಚಿತ್ರೋತ್ಸವದ ಚಿತ್ರಗಳು ಧಾವಂತದಲ್ಲಿ ಕಾಡದೇ ಇರುವ ಸಾಧ್ಯತೆಯೂ ಇದೆ. ಅಂಥದ್ದರಲ್ಲಿ ಬೆನ್ನು ಬಿಡದೆ ಕಾಡಿದ ಸಿನಿಮಾಗಳು – Wood Cutter Story ಮತ್ತು RMN.

ಸಾಮಾನ್ಯ ಸಿನಿಮಾದಂತೆ ಹುಟ್ಟುಹಬ್ಬದ ಆಚರಣೆಯಲ್ಲಿ ಪ್ರಾರಂಭವಾಗುವ ‘ವುಡ್‌ಕಟ್ಟರ್ ಸ್ಟೋರಿ’, ನಂತರ ರೂಪಕಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಫ್ಯಾಕ್ಟರಿ ಮುಚ್ಚಿ ಎಲ್ಲರೂ ನಿರುದ್ಯೋಗಿಗಳಾಗುವ ಪ್ರಸಂಗ ಬಂದಾಗಲೂ ಪೆಪೆ ಕಳವಳ ಪಡುವುದಿಲ್ಲ.ಸರಿಯಾಗುತ್ತದೆ ಎನ್ನುವ ಅವನಿಗೆ ಸಮಸ್ಯೆಗಳು ಎದುರಾಗುತ್ತವೆ. ಹೆಂಡತಿ‌ ತೊರೆದು ಹೋಗುತ್ತಾಳೆ. ತಾಯಿ seizureನಿಂದ ಸಾಯುತ್ತಾಳೆ. ಸಾಯವಾಗ ‘ನಿನ್ನನ್ನು ಕಂಡರೆ ನನಗೆ ಸಮಾಧಾನವಾಗುತ್ತದೆ. ಚಳಿಯಲ್ಲಿ ಅಗ್ಗಿಷ್ಟಿಕೆಯ ಮುಂದೆ ಕುಳಿತಂತೆ’ ಎನ್ನುತ್ತಾಳೆ. ತಾಯಿ ಹೇಳಿದ ಮಾತನ್ನು ಪೆಪೆ ಮಗನಿಗೆ ಹೇಳುವಾಗ ‘ಪ್ರೀತಿಯೆಂದರೆ ಚಳಿಯಲ್ಲಿ ಅಗ್ಗಿಷ್ಟಿಕೆಯ ಮುಂದೆ ಕೂತಂತೆ’ ಎಂದು ಹೇಳುತ್ತಾನೆ.

ಸತ್ತವರನ್ನು ಮಾತಾಡಿಸುವವ, ಉರಿವ ಗೋಲ, ಉರಿಯುತ್ತಿರುವ ಕಾರು ಹೀಗೆ ಸರ್‌ರಿಯಲಿಸ್ಟಿಕ್‌ ಪ್ರತಿಮೆಗಳು ಒತ್ತೊತ್ತಾಗಿವೆ. ಪೆಪೆಯಂತೆ ದಿರಿಸು ತೊಟ್ಟ‌ ಅವನ ಮಗ ಆಲ್ಟರ್ ಇಗೋ ಎಂದ ಗೆಳೆಯರ ಮಾತಿಗೆ ನನ್ನ ಸಹಮತವಿದೆ. ಹಾಗೆಯೇ‌‌ ದಿನನಿತ್ಯದ ಜಂಜಡಗಳನ್ನು ಎದುರಿಸಲೇಬೇಕಾದ ಅರ್ಥ ಹೀನ ಅಸ್ತಿತ್ವದ ಸೂಕ್ಷ್ಮಗಳು ಚಿತ್ತದಲ್ಲಿವೆ ಅನ್ನಿಸಿತು. ಫಿನ್ಲೆಂಡಿನ ಈ ಚಿತ್ರವನ್ನು ಮಿಕ್ಕೋ ಮೈಲಿಲಾಟಿ ನಿರ್ದೇಶಿಸಿದ್ದಾರೆ.

ಮಿದುಳನ್ನು ಸ್ಕಾನ್ ಮಾಡುವ ವಿಧಾನವೊಂದಕ್ಕೆ R.M.N ಎಂದು ಹೇಳಲಾಗುತ್ತದಂತೆ. ಮಥಾಯಿಸ್ ತಂದೆಯ ಮಿದುಳಲ್ಲಿ ಗಡ್ಡೆಯಿದೆ. ಬೇರೊಂದು ರೀತಿಯ ಗಡ್ಡೆ ಎಲ್ಲರ ಮಿದುಳಲ್ಲೂ ಬೆಳೆಯುತ್ತಿದೆ. ಅದು ಕ್ಯಾನ್ಸರ್ ಗಡ್ಡೆಯಂತೆ ಬೆಳೆಯುವ ಜನಾಂಗೀಯ ಭಾವನೆ. ಭಾಷೆ, ಧರ್ಮ, ರಾಷ್ಟ್ರೀಯತೆ, ಹುಟ್ಟು ಇವು ಸಂಬಂಧಗಳನ್ನು, ಬದುಕನ್ನು ಸಮಸ್ಯಾತ್ಮಕವಾಗಿಸುವುದರ ಬಗ್ಗೆ ನಿರ್ದೇಶಕ ಮುಂಗ್ಯು ಕಾಳಜಿ ಚಿತ್ರದಲ್ಲಿ ವ್ಯಕ್ತವಾಗುತ್ತದೆ. ಆದರೆ ತೀರ್ಮಾನ ಕೊಡಲು ಹೋಗುವುದಿಲ್ಲ.ಇದು ಚಿತ್ರದ ಧನಾತ್ಮಕ ಅಂಶ. ರುಮಾನಿಯದ ಈ ಚಿತ್ರ ಸಿಕ್ಕರೆ ಮತ್ತೆ ನೋಡಬೇಕು.

ಚಿತ್ರಾಸಕ್ತರನ್ನೂ, ಟೈಂ ಪಾಸ್ ಮಾಡುವವರನ್ನೂ ಮೆಚ್ಚಿಸುವ ಗುಣವುಳ್ಳ ಚಿತ್ರ Triangle of Sadness. ರೂಪದರ್ಶಿಗಳಿಬ್ಬರ ಕತೆಯೆಂಬಂತೆ ಮೊದಲ ಭಾಗದಲ್ಲಿ ಕುತೂಹಲ ಮೂಡಿಸುವ ಚಿತ್ರ ಎರಡನೇ ಭಾಗದಲ್ಲಿ ಕ್ಯಾಪಿಟಲಿಸಂನ ಅಸಹ್ಯ ಮುಖವನ್ನು ಅನಾವರಣ ಮಾಡುವ ಪ್ರಯತ್ನ ಮಾಡುವುದರೊಂದಿಗೆ ಕಮ್ಯುನಿಸಂ ಅನ್ನು ಪ್ರಶ್ನೆ ಮಾಡುತ್ತದೆ. ಕೆಳಸ್ತರದ ಕೆಲಸಗಾತಿಯ ಮೂರನೇ ಭಾಗ ನಿರಾಶೆ ಮೂಡಿಸುತ್ತದೆ. ಖ್ಯಾತ ನಿರ್ದೇಶಕ ರೂಬೆನ್ ಒಸ್ಟ್ ಲುಂಡ್ ನಿರ್ದೇಶನದ ಟಚ್ ಎಂಡ್ ಗೋ‌ ವಿಧಾನ ಅಷ್ಟು ಹಿಡಿಸಲಿಲ್ಲ.

ಸಾಮಾಜಿಕ ಸಮಸ್ಯೆಗಳು

ಜಾಗತೀಕರಣದ ಕಾಲದಲ್ಲೂ ದೇಶದಿಂದ ದೇಶಕ್ಕೆ ಸಮಸ್ಯೆಗಳು ಭಿನ್ನವಾಗಿರುತ್ತವೆ. ಅವರ ಸಮಸ್ಯೆಗಳಲ್ಲಿ ನಮ್ಮ ಸಮಸ್ಯೆಗಳ ಛಾಯೆಯೂ ಇರುತ್ತದೆ. ಜನರನ್ನು, ಅವರ ಬದುಕನ್ನು ಅರಿಯಲು ಅವಕಾಶವಿದ್ದ ನಾಲ್ಕು ಚಿತ್ರಗಳಲ್ಲಿ ತುಂಬಾ ಇಷ್ಟವಾಗಿದ್ದು- ಫೋಟೋ

ಕೊರೋನಾ ಕಾಲದ ಸಂಕಷ್ಟವನ್ನು ಈ‌ ರೀತಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದನ್ನು‌‌‌ ಬೇರೆ ನೋಡಿಲ್ಲ. ದುರ್ಗ್ಯಾನ ಸಣ್ಣ ಅಸೆಯೆಂಬಂತೆ ತೋರುವ ಚಿತ್ರ, ಹೆಚ್ಚು ವಿವರಗಳಿಗೆ ಹೋಗದೆ ಏನು ಹೇಳಬೇಕೋ ಅದನ್ನು ಹೇಳಿಬಿಡುತ್ತದೆ. ಮನೆ ಕತ್ತಲಲ್ಲಿರುವಾಗ ದೀಪ‌ ಬೆಳಗಿಸುವುದು, ಬುಡಮೇಲಾದ ಖಾಲಿ ಸಿಲಿಂಡರ್ ಮೇಲೆ ಕೂತಿರುವುದು, ತಟ್ಟೆ ಬಡಿಯುವುದು, ಜಾಲಿ ಮರ ಇಂತಹ ಪ್ರತಿಮೆಗಳ‌ ಮೂಲಕ ನಿರ್ದೇಶಕ ಉತ್ಸವ್ ಗೋನ್ವಾರ್ ಛಾಪು ಮೂಡಿಸಿದ್ದಾರೆ‌. ದುರ್ಗ್ಯಾ, ಅವನ ತಂದೆ, ತಾಯಿ, ಮಾವ ಇವರ ಅಭಿನಯದ ಕೊನೆಯ ದೃಶ್ಯ ಮರೆಯಲಾರದ ಅನುಭವ ನೀಡುತ್ತದೆ. ಪ್ರಶಸ್ತಿ ನೀಡುವಾಗ‌‌ ಈ ಚಿತ್ರಕ್ಕೆ ಅನ್ಯಾಯವಾದಂತೆ ಕಾಣುತ್ತದೆ. ಈಗ ಕೊಟ್ಟಿರುವ ‘ಸಮಾಧಾನಕರ’ ಪ್ರಶಸ್ತಿಗಿಂತ ಹೆಚ್ಚಿನದಕ್ಕೆ ಇದು‌ ಅರ್ಹವಾಗಿತ್ತು.

No Bears ಚಿತ್ರದಲ್ಲಿ ಖ್ಯಾತ ಇರಾನಿಯನ್ ನಿರ್ದೇಶಕ ಜಾಫರ್ ಫನಾಹಿ ಹಳ್ಳಿಯೊಂದರಲ್ಲಿ ವಾಸಕ್ಕೆ ಬರುತ್ತಾರೆ. ಗಡಿ ಪ್ರದೇಶದ ಜನರು ತಪ್ಪಿಸಿಕೊಂಡು ಹೋಗುವುದನ್ನು ಚಿತ್ರೀಕರಿಸುವುದು ಅವರ ಉದ್ದೇಶ. ಕ್ಯಾಮರಾದಲ್ಲಿ‌ ಪ್ರೇಮಿಗಳನ್ನು ಸೆರೆ ಹಿಡಿದಿದ್ದಾರೆ ಎನ್ನುವ ಅನುಮಾನ ಊರವರದ್ದು.ಇದೇ ಸಂದರ್ಭದಲ್ಲಿ ಫ್ರಾನ್ಸ್‌ಗೆ ತೆರಳಲು ಪ್ರಯತ್ನ ಪಡುವ ದಂಪತಿಯ‌ ಬದುಕನ್ನು ದೃಶ್ಯೀಕರಿಸಲು ಫನಾಹಿ ಸಹಾಯಕನಿಗೆ ಹೇಳಿರುತ್ತಾರೆ. ನಂಬಿಕೆ, ಕಟ್ಟು ಪಾಡುಗಳು, ಸರ್ಕಾರದ ಹತೋಟಿ, ಸಂಬಂಧಗಳು, ಅವುಗಳನ್ನು ಮೀರುವ ಪ್ರಯತ್ನ ಇಲ್ಲಿ ಪರೀಕ್ಷೆಗೊಳಗಾಗುತ್ತದೆ. Bears ಇದೆ – ಇಲ್ಲ‌ ಎಂದು ಹೇಳುತ್ತಾ ಮನುಷ್ಯರೇ Bears ಎಂದು ಸೂಕ್ಷ್ಮವಾಗಿ ಹೇಳುವ ಸಿನಿಮಾ.

When the Wave are Gone ಲಾಜ್ ಡಯಾಸ್‌ನ ಮೂರೂಕಾಲು ಗಂಟೆಯ ಸಿನಿಮಾ. ಫಿಲಿಪೈನ್ಸ್‌ನಲ್ಲಿ ಮಾದಕ ದೃವ್ಯ ವ್ಯವಹಾರವನ್ನು ಹತೋಟಿಯಲ್ಲಿಡುವ ನೆವದಲ್ಲಿ ಸರ್ವಾಧಿಕಾರಿ ಡುಕಾರ್ಟೆ ಅತಿರೇಕದ ಕ್ರಮಗಳನ್ನು ಕೈಗೊಂಡ. ಮಾನವ ಹಕ್ಕುಗಳನ್ನು ಉಲ್ಲಂಘಿಸಿ, ಹಲವರನ್ನು ಹತ್ಯೆ ಮಾಡಲಾಯಿತು. ಸರಕಾರದ ಅಂಗಗಳನ್ನು ನಿರ್ದಯವಾಗಿ ಬಳಸಿಕೊಳ್ಳಲಾಯಿತು. ನಿರ್ದೇಶಕ ಇಬ್ಬರು‌ ಪೋಲೀಸ್ ಅಧಿಕಾರಿಗಳ‌ ಮೂಲಕ ತಣ್ಣಗೆ ಕರುಳು‌ ಧ್ರವಿಸುವಂತೆ‌ ಈ ಕ್ರೌರ್ಯವನ್ನು ಕಟ್ಟಿಕೊಡುತ್ತಾರೆ. ಫಿಲಿಪೈನ್ಸ್‌ನ ದುರಂತ‌ದ ಸಾಕ್ಷಿ ಈ ಸಿನಿಮಾ.

Until Tomorrow ವಿವಾಹ ಬಾಹಿರ ಸಂಬಂಧದಿಂದ ಹುಟ್ಟಿದ ಮಗುವನ್ನು ತಂದೆತಾಯಿಗೆ ತಿಳಿಯದಂತೆ ಬಚ್ಚಿಡಲು ಯತ್ನಿಸುವ ಹೆಣ್ಣೊಬ್ಬಳ ಕತೆಯಷ್ಟೆ ಆಗಿದ್ದರೆ ಇಷ್ಟವಾಗುತ್ತಿರಲಿಲ್ಲ. ಅದು ಧರ್ಮಾಧಾರಿತ ರಾಷ್ಟ್ರದಲ್ಲಿ ಹೆಣ್ಣೊಬ್ಬಳ‌‌‌ ಸಂಕಟಗಳ‌ ಕಡೆಗೆ ಗಮನ ಹರಿಸುತ್ತದೆ. ಗಂಡಸರ ಹತೋಟಿಯಲ್ಲಿರುವ ಮಹಿಳೆಯರೇ ನೆರವು ನೀಡುವುದಿಲ್ಲ, ಪ್ರೀತಿಸಿದವಳಿಗಿಂತ ತಂದೆಯ ಹೆದರಿಕೆಯೇ ಪ್ರಿಯತಮನಿಗೆ ಹೆಚ್ಚು, ತನ್ನ ಮಗುವಿನ‌ ಬಗೆಗೆ ಅನುಮಾನ, ಪರಿಸ್ಥಿತಿ‌ಯ ದುರ್ಲಾಭ ಪಡೆಯಲು‌‌ ಯತ್ನಿಸುವ ಪ್ರತಿಷ್ಠಿತ ‌ವ್ಯಕ್ತಿ, ಕಾನೂನಿನ‌ ತೊಡಕುಗಳು – ಹೀಗೆ ಪೆಟ್ರಿಯಾರ್ಕಿಯ ಲಕ್ಷಣಗಳನ್ನು ಬಿಚ್ಚಿಡುವ ಈ‌‌ ಚಿತ್ರ ಇಷ್ಟವಾಯಿತು. ಅದರೆ ಅದು‌ ಸಂಬಂಧದ ಸಮಸ್ಯೆಗಳನ್ನು ಹೇಳುವ ಇರಾನಿನ ಸಿದ್ಧ ಮಾದರಿಯಿಂದ ಕಳಚಿಕೊಂಡಿಲ್ಲ.

ನಿರ್ದೇಶಕಿಯರ‌‌ ಸಿನಿಮಾಗಳು

ಗಂಡಸರಿಗಿಂತ ಭಿನ್ನವಾಗಿ ಯೋಚಿಸಿ‌ ಸಿನಿಮಾ ಮಾಡುವ ಹಲವು ನಿರ್ದೇಶಕಿಯರಿದ್ದಾರೆ. ಹೊಸ ರೀತಿಯ ನೋಟದೊಂದಿಗೆ, ಚಿತ್ರ‌ಕಟ್ಟುವ ವಿಧಾನವೂ ಬೇರೆಯೇ ಆದ ಮಹಿಳಾ ನಿರ್ದೇಶಕಿಯರ ಮೂರು ಸಿನಿಮಾಗಳು ಇಷ್ಟವಾದವು.

Snow and the Bear ಹಿಮಾಚ್ಛಾದಿತ ಟರ್ಕಿಯ ಗಡಿ ಪ್ರದೇಶದ ಸುಂದರ ಛಾಯಾಗ್ರಹಣದ ಚಿತ್ರ. ಪೇಟ್ರಿಯಾರ್ಕಿಯನ್ನು ತಟ್ಟುತ್ತಾ, ಪ್ರಕೃತಿ ಮತ್ತು ಮನುಷ್ಯನ ಅಂತರ್ ಸಂಬಂಧವನ್ನು ಸೊಗಸಾಗಿ ಕಟ್ಟಿ ಕೊಡುತ್ತದೆ. ನಿರ್ದೇಶಕಿ ಸೆಸೆನ್ ಎರ್ಗುನ್. ಯುಕ್ರೇನಿನ Klondike ಚಿತ್ರ 2014ರಲ್ಲಿ ಮಲೇಶಿಯಾದ ವಿಮಾನ ಯುಕ್ರೇನ್- ರಷ್ಯಾ ಗಡಿಯಲ್ಲಿ ಪತನವಾದ ನಂತರದ ನಿಜ ಘಟನೆಗಳನ್ನು ಆಧರಿಸಿದೆ‌. ಯುಕ್ರೇನ್ ಸ್ವಾಯತ್ತತೆಯನ್ನು ಬಯಸುವವರು ಮತ್ತು ಪ್ರತ್ಯೇಕತಾವಾದಿಗಳು ರಷ್ಯಾದ ನೆರವಿನೊಂದಿಗೆ ಗಡಿ ಪ್ರದೇಶದಲ್ಲಿ‌ ಅಂತರ್ಯುದ್ಧ ಮಾಡುವ ಸಂದರ್ಭದಲ್ಲಿ‌ ಕುಟುಂಬವೊಂದರ‌ ದುರಂತ ಸಿನಿಮಾದ ವಸ್ತು. ಅಮಾಯಕ ಮಹಿಳೆಯರಿಗೆ ಚಿತ್ರವನ್ನು ಅರ್ಪಿಸಿರುವ ನಿರ್ದೇಶಕಿ ಮರ್ಯಾನಾ ಗೋರ್ಬಾಕ್ ಯುದ್ಧದ ಪರಿಣಾಮಗಳನ್ನು‌ ನಿರ್ಲಿಪ್ತತೆಯಿಂದ ನಿರ್ವಹಿಸಿದ್ದಾರೆ.

Before Now and Then ನಲ್ಲಿ ಪ್ರೀತಿಸಿದಂತೆ ಬಾಳಬೇಕು ಎನ್ನುವ ಮಾತಿದೆ. ಎಲ್ಲಾ ಅನುಕೂಲತೆಗಳಿದ್ಧರೂ‌ ಹೃದಯದ ಮಾತನ್ನು ಕೇಳುವ ಸಂಪ್ರದಾಯಸ್ಥ ಇಂಡೋನೇಷ್ಯಾದ ಮಹಿಳೆಯ ದಿಟ್ಟ‌ ನಿರ್ಧಾರವನ್ನು ನಿರ್ದೇಶಕಿ ಕಮಿಲಾ ಆಂಡಿನಿ ಸಂಯಮದಿಂದ‌ ಕಟ್ಟಿಕೊಟ್ಟಿದ್ದಾರೆ.

ಇವಲ್ಲದೆ ಪಾಲೆಸ್ತೀನಿಯನ್ ಸಿನಿಮಾ Alam ತಮ್ಮ ನೆಲದಲ್ಲಿ‌ ಪರಕೀಯಾಗುವ ತರುಣರ ಕತೆಯನ್ನು ಆಪ್ತವಾಗಿ ಕಟ್ಟಿಕೊಡುತ್ತದೆ. Boy from Heavenನಲ್ಲಿ ಅಮಾಯಕ ಹುಡುಗನೊಬ್ಬನನ್ನು ದಾಳವಾಗಿ ಬಳಸುವುದನ್ನು ಕಾಣಬಹುದು. ಚಿತ್ರಕಥೆಗೆ ಹಲವು ಪ್ರಶಸ್ತಿಗಳನ್ನು ಪಡೆದ ಈ‌ ಚಿತ್ರ ಕ್ಲಿಷ್ಟ ವಿಷಯವನ್ನು ಸೊಗಸಾಗಿ ಹಿಡಿದಿಡುತ್ತದೆ. ಕೊನೆಯಲ್ಲಿ‌ ಯೂನಿವರ್ಸಿಟಿಯಲ್ಲಿ ಏನು ಕಲಿತೆ ಎನ್ನುವ ಪ್ರಶ್ನೆಗೆ ಉತ್ತರಿಸದೆ, sail ಮಾಡುವುದನ್ನು ತೋರಿಸಿರುವುದು ಅರ್ಥಪೂರ್ಣ.

ಹಲವು ಕೊರತೆಗಳನ್ನು, ಪ್ರಶ್ನೆಗಳನ್ನು ಇಟ್ಟುಕೊಂಡೇ ಚಿತ್ರೋತ್ಸವ ಮುಕ್ತಾಯವಾಯಿತು. ಹಿಂದೆ ಮಾಡಿದ ತಪ್ಪುಗಳು ಹಾಗೇ ಇವೆ. ಅವನ್ನು ಸರಿ ಮಾಡಿ, ಎಲ್ಲರನ್ನು ಒಳಗೊಳ್ಳುವ, ಬೆಂಗಳೂರಿಂದಾಚೆಯೂ ಪ್ರದರ್ಶನಗೊಳ್ಳುವ ವ್ಯವಸ್ಥೆ ರೂಪಿಸಿದರೆ ಚೆನ್ನಾಗಿರುತ್ತಿತ್ತು. ಪಟ್ಟಭದ್ರರಿಗೆ ಗೇಟ್ ಪಾಸ್ ಕೊಡುವುದೊಳ್ಳೆಯದು. ಚಿತ್ರೋತ್ಸವದಲ್ಲಿ ಸಂಬಂಧಗಳು ನವೀಕರಿಸಲ್ಪಡುತ್ತವೆ. ಹಾಗೂ ಹೊಸ ಸಂಬಂಧಗಳು ಬೆಳೆಯುತ್ತವೆ. ಚಿತ್ರಗಳಲ್ಲಿ ಸಂಬಂಧಗಳನ್ನು ಹುಡುಕುವುದಕ್ಕಿಂಥ ಇಂತ ಉತ್ಸವಗಳು ಮಾನವ ಸಂಬಂಧಗಳಿಗೆ ಬೆಸುಗೆ ಹಾಕಲಿ ಎಂದು ಆಶಿಸೋಣ.

LEAVE A REPLY

Connect with

Please enter your comment!
Please enter your name here