ಯಶವಂತ್ ಕತೆ, ಚಿತ್ರಕಥೆ ರಚಿಸಿ ಮೊದಲ ಬಾರಿ ನಿರ್ದೇಶಿಸುತ್ತಿರುವ ಸಿನಿಮಾ ಸೆಟ್ಟೇರಿದೆ. ಹೊಸ ಹುಡುಗರ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಸ್ವಪ್ನಾ ರಾಜ್ ಮತ್ತು ಶೋಭರಾಜ್ ನಟಿಸುತ್ತಿದ್ದಾರೆ. ಹರೀಶ್ ನಟಿಸಿ, ನಿರ್ಮಿಸುತ್ತಿರುವ ಚಿತ್ರವಿದು.
ಯಾವುದೇ ಜವಾಬ್ದಾರಿ ಇಲ್ಲದೆ ಪೋಲಿಯಾಗಿ ಅಲೆಯುತ್ತಿದ್ದ ಹುಡುಗನೊಬ್ಬನ ಜೀವನ ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವ ಕಥಾನಕ ಹೊಂದಿರುವ ಸಿನಿಮಾ ‘ನಾನ್ ಪೋಲಿ’. ಎಂ.ಯಶವಂತ್ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ ಚಿತ್ರ ಸೆಟ್ಟೇರಿದೆ. ಹರೀಶ್ ನಟಿಸಿ, ನಿರ್ಮಿಸುತ್ತಿರುವ ಚಿತ್ರದ ನಾಯಕಿಯಾಗಿ ದಿಶಾ ಶೆಟ್ಟಿ ಇದ್ದಾರೆ. ನಿರ್ದೇಶಕ ಯಶವಂತ್ ಚಿತ್ರದ ಬಗ್ಗೆ ಮಾತನಾಡಿ, “ಈ ಚಿತ್ರಕ್ಕಾಗಿಯೇ 6 ತಿಂಗಳ ಕಾಲ ವರ್ಕ್ ಮಾಡಿದೆ. ಒಳ್ಳೆಯ ಕಂಟೆಂಟ್ ಸಿಕ್ಕಿತು, ಜೊತೆಗೆ ಒಳ್ಳೆಯ ತಂಡವೂ ರಚನೆ ಆಯ್ತು. ಸ್ನೇಹಿತರಿಬ್ಬರ ಕಥೆಯಿದು. ಪೋಷಕರ ಕನಸುಗಳ ಕಾರಣದಿಂದ ಮಕ್ಕಳ ಜೀವನ ಹೇಗೆ ಹಾಳಾಗುತ್ತೆ ಎಂದು ಈ ಚಿತ್ರದಲ್ಲಿ ಹೇಳಹೊರಟಿದ್ದೇನೆ. ಸ್ನೇಹದ ಮಹತ್ವ, ತಾಯಿ ಸೆಂಟಿಮೆಂಟ್ ಮೇಲೆ ಚಿತ್ರದ ಕಥೆ ಸಾಗುತ್ತದೆ” ಎಂದರು.
ತಾಯಿಯ ಪಾತ್ರದಲ್ಲಿ ಸ್ವಪ್ನರಾಜ್ ಹಾಗೂ ಖಳನಾಯಕನ ಪಾತ್ರದಲ್ಲಿ ಶೋಭರಾಜ್ ನಟಿಸುತ್ತಿದ್ದಾರೆ. 45 ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿ ನಂತರ ಉತ್ತರ ಬಾರತದ ಕಡೆ ಹೋಗುವ ಯೋಜನೆ ಚಿತ್ರತಂಡದ್ದು. “ಕಲಾವಿದನಾಗಬೇಕೆಂದು 200ಕ್ಕೂ ಹೆಚ್ಚು ಆಡಿಷನ್‌ಗಳಲ್ಲಿ ಭಾಗವಹಿಸಿದ್ದೆ. ಈ ಚಿತ್ರದ ಮೂಲಕ ನಾಯಕನಾಗುವ ಅವಕಾಶ ಸಿಕ್ಕಿದೆ. ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋದ ನಂತರ ಯುವಕನ ಬದುಕಿನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ? ತಾಯಿ ಮಗನ ಬಗ್ಗೆ ಕಾಣುವ ಕನಸುಗಳ ಸುತ್ತ ಚಿತ್ರಕಥೆ ಸಾಗುತ್ತದೆ” ಎಂದರು ಚಿತ್ರದ ಹೀರೋ ಮತ್ತು ನಿರ್ಮಾಪಕ ಹರೀಶ್. ನಾಯಕಿ ದಿಶಾ ಶೆಟ್ಟಿ ಮಾತನಾಡಿ, “ಕಿರುಚಿತ್ರಗಳಲ್ಲದೆ ಸಿನಿಮಾಗಳ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದೇನೆ. ಮೊದಲ ಬಾರಿಗೆ ನಾಯಕಿಯಾಗಿದ್ದು, ಅಭಿನಯಕ್ಕೆ ಹೆಚ್ಚು ಅವಕಾಶವಿರುವ ಹೋಮ್ಲಿ ಗರ್ಲ್ ಪಾತ್ರ ನನ್ನದು” ಎಂದರು. ಕೀರ್ತಿವರ್ಧನ್ ಛಾಯಾಗ್ರಹಣ, ಚೇತನ್ ಸಂಗೀತ ಸಂಯೋಜನೆ, ಭಾರ್ಗವ ಸಂಕಲನ ಚಿತ್ರಕ್ಕಿದೆ.