ಇತ್ತೀಚೆಗೆ ತೆರೆಕಂಡು ಹಿಟ್‌ ಆದ ‘ಹನುಮಾನ್‌’ ಚಿತ್ರದಲ್ಲಿ ವರಲಕ್ಷೀ ಶರತ್‌ ಕುಮಾರ್‌ ಅವರ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಚಿತ್ರದ ನಂತರ ಈಗ ವರಲಕ್ಷ್ಮೀ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಪವರ್‌ಫುಲ್‌ ಪಾತ್ರದೊಂದಿಗೆ ನಾಯಕಿಯಾಗಿ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ.

ಬಹುಭಾಷಾ ನಟಿ ವರಲಕ್ಷ್ಮೀ ಶರತ್‌ ಕುಮಾರ್‌ ನಾಯಕಿಯಾಗಿ ಮಿಂಚುತ್ತಿರುವಾಗಲೇ ವಿಭಿನ್ನವಾದ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮನೆಮಾತಾದರು. ಇದೀಗ ಮಹಿಳಾ ಪ್ರಧಾನ ಸಿನಿಮಾ ‘ಶಬರಿ’ಯಲ್ಲಿ ನಾಯಕಿಯಾಗಿ ವರಲಕ್ಷ್ಮೀ ಅಭಿನಯಿಸುತ್ತಿದ್ದಾರೆ. ಮಹಾ ಮೂವೀಸ್‌ ಬ್ಯಾನರ್‌ನಲ್ಲಿ ಮಹೇಂದ್ರ ನಾಥ್‌ ಕೊಂಡ್ಲಾ ನಿರ್ಮಿಸುತ್ತಿರುವ ಶಬರಿ ಚಿತ್ರವನ್ನು ಅನಿಲ್‌ ಕಾಟ್ಜ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಅನಿಲ್‌ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಅನ್ನೋದು ವಿಶೇಷ.

ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾ ಈ ರಿಲೀಸ್‌ಗೆ ಸಜ್ಜಾಗಿದೆ. ಮಹಿಳಾ ಪ್ರಧಾನ ಹಾಗೂ ಎಮೋಷನಲ್‌ ಥ್ರಿಲ್ಲರ್‌ ಆಗಿರುವ ಈ ಸಿನಿಮಾ ಮೇ 3ರಂದು ಪಂಚ ಭಾಷೆಗಳಲ್ಲಿ ರಿಲೀಸ್‌ ಆಗಲಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್‌ ಅಭಿನಯದ ‘ಮಾಣಿಕ್ಯ’, ಅರ್ಜುನ್‌ ಸರ್ಜಾ ನಟನೆಯ ‘ವಿಸ್ಮಯ’ ಹಾಗೂ ಚಿರಂಜೀವಿ ಸರ್ಜಾ ಅವರ ‘ರಣಂ’ ಚಿತ್ರಗಳಲ್ಲಿ ವರಲಕ್ಷ್ಮೀ ನಟಿಸಿದ್ದಾರೆ. ಇನ್ನು ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಖಳ ಹಾಗೂ ವಿಭಿನ್ನ ಪೋಷಕ ಪಾತ್ರಗಳಲ್ಲೂ ಹೆಸರು ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡು ಯಶಸ್ಸು ಕಂಡ ‘ಹನುಮಾನ್‌’ ತೆಲುಗು ಸಿನಿಮಾದಲ್ಲೂ ವರಲಕ್ಷ್ಮೀ ಅಭಿನಯ ಪ್ರೇಕ್ಷಕರ ಮನಸ್ಸು ಗೆದಿತ್ತು.

ನಿರ್ಮಾಪಕ ಮಹೇಂದ್ರನಾಥ್‌ ಕೊಂಡ್ಲಾ ಸಿನಿಮಾ ಬಗ್ಗೆ ಮಾತನಾಡಿ, ‘ಈ ಸಿನಿಮಾದ ಕಥೆ ಮತ್ತು ಸ್ಕ್ರೀನ್‌ ಪ್ಲೇ ತುಂಬಾ ವಿಶೇಷವಾಗಿದೆ. ಭಾವುಕ ಎಳೆಯ ಜತೆಗೆ ಸೀಟಿನ ತುದಿಗೆ ತಂದು ಕೂರಿಸುವ ಥ್ರಿಲ್ಲರ್‌ ಕಥೆ ಚಿತ್ರದಲ್ಲಿರಲಿದೆ. ಇಲ್ಲಿವರೆಗೆ ವರಲಕ್ಷ್ಮೀ ಅಭಿನಯದ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಇದು ತುಂಬ ವಿಭಿನ್ನ. ಈ ಸಿನಿಮಾದಲ್ಲಿ ಅವರ ನಟನೆಯೂ ಅಷ್ಟೇ ರೋಚಕವಾಗಿಯೇ ಮೂಡಿಬಂದಿದೆ. ಈಗಾಗಲೇ ತೆಲುಗು ಮತ್ತು ತಮಿಳಿನ ಮೊದಲ ಕಾಪಿಯನ್ನು ನೋಡಿದ್ದು, ಎಲ್ಲರಿಗೂ ಈ ಚಿತ್ರ ಇಷ್ಟವಾಗಲಿದೆ ಎಂದು ನಂಬಿದ್ದೇನೆ. ಈ ನಡುವೆ ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಡಬ್ಬಿಂಗ್‌ ಕೆಲಸಗಳು ನಡೆಯುತ್ತಿದೆ. ಹೀಗಾಗಿ ಮೇ 3ರಂದು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್‌ ಮಾಡಲಿದ್ದೇವೆ’ ಎಂದಿದ್ದಾರೆ.

ವರಲಕ್ಷ್ಮೀ ಶರತ್‌ ಕುಮಾರ್‌ ಜೊತೆಗೆ ಗಣೇಶ್‌ ವೆಂಕಟರಮಣನ್‌, ಶಶಾಂಕ್‌, ಮೈಮ್‌ ಗೋಪಿ, ಸುನಯನಾ, ರಾಜಶ್ರೀ ನಾಯರ್‌, ಮಧುನಂದನ್‌, ರಶಿಕಾ ಬಾಲಿ (ಬಾಂಬೆ), ವಿವಾ ರಾಘವ್‌, ಪ್ರಭು, ಭದ್ರಮ್‌, ಕೃಷ್ಣ ತೇಜ, ಬಿಂದು ಪಜಿದಿಮರ್ರಿ, ಅಸ್ರಿತಾ ವೆಮುಗಂಟಿ, ಹರ್ಷಿಣಿ ಕೊಡುರು, ಅರ್ಚನ್‌ ಅನಂತ್‌, ಪ್ರಮೋದಿನಿ, ಬೇಬಿ ನಿವೇಕ್ಷಾ, ಬೇಬಿ ಕೃತಿಕಾ ಸಿನಿಮಾದ ತಾರಾಗಣದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here