ನಿರ್ದೇಶಕಿ ಜೋಯಾ ಅಖ್ತರ್ ‘ಜಿಂದಗಿ ನಾ ಮಿಲೇಗಿ ದೋ ಬಾರಾ’ ಹಿಂದಿ ಸಿನಿಮಾದ ಸೀಕ್ವೆಲ್‌ಗೆ ತಯಾರಿ ನಡೆಸಿದ್ದಾರೆ. 2011ರಲ್ಲಿ ತೆರೆಕಂಡಿದ್ದ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸೀಕ್ವೆಲ್‌ನಲ್ಲಿಯೂ ಮೊದಲ ಭಾಗದಲ್ಲಿ ನಟಿಸಿದ್ದ ನಟ, ನಟಿಯರು ಕಾಣಿಸಿಕೊಳ್ಳಲಿದ್ದಾರೆ.
ಜೋಯಾ ಅಖ್ತರ್ ನಿರ್ದೇಶಿಸಿದ್ದ ‘ಜಿಂದಗಿ ನಾ ಮಿಲೇಗಿ ದೋಬರಾ’ (2011) ಹಿಂದಿ ಚಿತ್ರದ ಸೀಕ್ವೆಲ್ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನಿರ್ಮಾಪಕಿ, ನಟಿ ಈ ಚಿತ್ರದ ಮುಂದುವರಿದ ಭಾಗ ರಚಿಸುವುದರ ಕುರಿತು ಆಸಕ್ತಿ ಹೊಂದಿದ್ದಾರೆ. ಜೋಯಾ ಈ ಕುರಿತು ಮಾತನಾಡಿ, ‘ಈ ಚಲನಚಿತ್ರವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಮುಂದುವರಿದ ಭಾಗವನ್ನು ತೆರೆಯ ಮೇಲೆ ತರಲು ನಾನು ಇಚ್ಚಿಸುತ್ತೇನೆ. ಚಿತ್ರದ ಕುರಿತು ನಿರ್ಮಾಪಕರು, ನಟರು ಸೇರಿದಂತೆ ಎಲ್ಲರಿಗೂ ಆಸಕ್ತಿ ಇದೆ. ಆ ಚಿತ್ರ ನಮಗೆ ಬಹಳಷ್ಟು ಕಲಿಸಿದೆ. ಆದ್ದರಿಂದ ಎರಡನೇ ಭಾಗಕ್ಕೆ ಒಂದೊಳ್ಳೆಯ ಕತೆ ಮಾಡಿಕೊಂಡು ಮುಂದುವರೆಯುತ್ತೇವೆ. ಎರಡನೇ ಭಾಗವನ್ನು ವೀಕ್ಷಿಸಲು ಪ್ರೇಕ್ಷಕರು ಬಂದಾಗ ಅವರು ಒಂದು ನಿರ್ದಿಷ್ಟ ನಿರೀಕ್ಷೆಯನ್ನು ಹೊಂದಿರುತ್ತಾರೆ. ಇದಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ’ ಎಂದಿದ್ದಾರೆ.
ಜೋಯಾ ಅವರು ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ‘ತಲಾಶ್: ದಿ ಆನ್ಸರ್ ಲೈಸ್ ವಿಥಿನ್’, ಕೌಟುಂಬಿಕ ಕಥೆ ‘ದಿಲ್ ಧಡಕ್ ನೇ ದೋ’, ಮ್ಯೂಸಿಕಲ್ ಡ್ರಾಮಾ ‘ಗಲ್ಲಿ ಬಾಯ್’ ಸೇರಿದಂತೆ ವಿಭಿನ್ನ ಮತ್ತು ಆಸಕ್ತಿದಾಯಕ ಕಥೆಗಳನ್ನು ರಚಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ‘ಖೋ ಗಯೇ ಹಮ್ ಕಹಾ’ ಮತ್ತು ‘ಲೇ ಜರಾ’ ಸರಣಿಗಳು ಅವರ ಯೋಜನೆಯಲ್ಲಿವೆ. ಈ ಕುರಿತು ಮಾತನಾಡಿದ ಅವರು, ‘ಈ ಚಿತ್ರಕ್ಕಾಗಿ ನಾವು ದಿನಾಂಕಗಳನ್ನು ಹೊಂದಿಸಲು ಕಾಯುತ್ತಿದ್ದೇವೆ. ಹೊಸ ವರ್ಷದ ಮೊದಲು ಚಿತ್ರದ ಅಧಿಕೃತ ಮಾಹಿತಿ ತಿಳಿಸುತ್ತೇವೆ. ನಾವು ಅದನ್ನು ಬರೆದು ನಿರ್ಮಿಸಿದ್ದೇವೆ. ಅರ್ಜುನ್ ವರೈನ್ ಸಿಂಗ್ ನಿರ್ದೇಶಿಸಿದ್ದಾರೆ’ ಎಂದು ತಿಳಿಸಿದ್ದಾರೆ.