ಸರಣಿ ಘಟನೆಗಳೊಂದಿಗೆ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತದೆ ಸಿನಿಮಾ. ನಿರ್ದೇಶಕ ಮನೀಶ್ ಗುಪ್ತಾ ಬಿಗಿ ನಿರೂಪಣೆಯೊಂದಿಗೆ ಸಸ್ಪೆನ್ಸ್ – ಥ್ರಿಲ್ಲರ್ ಕೋರ್ಟ್ ಡ್ರಾಮಾವೊಂದನ್ನು ವೀಕ್ಷಕರಿಗೆ ಯಶಸ್ವಿಯಾಗಿ ದಾಟಿಸಿದ್ದಾರೆ. – ZEE5ನಲ್ಲಿ ಸ್ಟ್ರೀಮ್ ಆಗುತ್ತಿದೆ ‘420 IPC’ ಹಿಂದಿ ಸಿನಿಮಾ.
ಕೋರ್ಟ್ ಡ್ರಾಮಾ ಕತೆಗಳು ಬಾಲಿವುಡ್ಗೆ ಹೊಸತೇನಲ್ಲ. ‘420 IPC’ ಈ ಪಟ್ಟಿಗೆ ಹೊಸ ಸೇರ್ಪಡೆ. ಈ ಸಿನಿಮಾದಲ್ಲಿ ಎಲ್ಲೂ ಅನಗತ್ಯ ದೃಶ್ಯ, ಅತಿರೇಕದ ಸಂಭಾಷಣೆಗಳಿಲ್ಲ. ಸಿನಿಮಾ ಒಳಹೊಕ್ಕ ಪ್ರೇಕ್ಷಕನಿಗೆ ಪಾತ್ರಗಳು ಕನೆಕ್ಟ್ ಆಗುತ್ತಿದ್ದಂತೆ ಕತೆ ಅರ್ಥವಾಗುತ್ತಾ ಹೋಗುತ್ತದೆ. ಸಿನಿಮಾ ವೀಕ್ಷಿಸತೊಡಗುತ್ತಿದ್ದಂತೆ ಚಾರ್ಟೆಡ್ ಅಕೌಂಟೆಂಟ್ ಬನ್ಸಾಲಿ ಪಾತ್ರದ ಮೇಲೆ ಕರುಣೆ ಉಕ್ಕುವುದು ಹೌದು. ಕಾನೂನಿನ ಕಣ್ಣಿಗೆ ಪ್ರಾಮಾಣಿಕ, ಬಡವನೇ ಸದಾ ಕಳ್ಳನಾಗಿ ಕಾಣಿಸುತ್ತಾನೆ ಎನ್ನುವ ನಿರೂಪಣೆ ಇಲ್ಲಿಯೂ ಇದೆಯೇ ಎಂದು ಆಲೋಚಿಸುತ್ತಿದ್ದಂತೆ ಲಾಯರ್ ಬೀರ್ಬಲ್ ಚೌಧರಿಯ ಪ್ರವೇಶವಾಗುತ್ತದೆ. ಆತ ಚಾಣಾಕ್ಷ್ಯತನದಿಂದ ಸಾಕ್ಯಧಾರಗಳನ್ನು ಕಲೆಹಾಕುವಂತೆ ಕತೆ ಸಾಗುತ್ತದೆ. ಮಧ್ಯಂತರದಲ್ಲಂತೂ ಎಲ್ಲವೂ ಲಾಜಿಕಲೀ ತಲೆಕೆಳಗಾಗಿ ಬನ್ಸಾಲಿ ಹೆಂಡತಿಯ ಹಾದಿತಪ್ಪಿದ ಮೋಹದ ಮೋಸವೇ ಅವನ ಆ ಸ್ಥಿತಿಗೆ ಕಾರಣ ಎಂದು ಪ್ರೇಕ್ಷಕ ಅಂದುಕೊಳ್ಳುತ್ತಾನೆ. ಹಾಗೆ ಅಂದುಕೊಳ್ಳುತ್ತಿದ್ದಂತೆಯೇ ಕತೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. “ಲಕ್ಷ್ಮೀ ತೋ ಮಾ ಹೈ, ಮಾ ಕಿ ದೇಖ್ಬಾಲ್ ಕರ್ನಾ ತೋ ಇನ್ಸಾನ್ ಕಾ ಫರ್ಝ್ ಹೋತಾ ಹೈ!” ಎನ್ನುವ ಸಂಭಾಷಣೆಯೊಂದಿಗೆ ಪಾತ್ರದ ಅಸಲಿಯತ್ತು ವೀಕ್ಷಕನಿಗೆ ಗೋಚರವಾಗುತ್ತದೆ. ಸರಣಿ ತಿರುವುಗಳುಳ್ಳ ಕತೆ ವೀಕ್ಷಕರನ್ನು ಕಡೆತನಕ ಕಾಪಿಟ್ಟು ಕಡೆಗೊಂದು ರೋಚಕ ಅನುಭವ ನೀಡುವುದು ದಿಟ.
ಚಿತ್ರಕಥೆಯಲ್ಲಾಗಲೀ, ಅಭಿನಯದಲ್ಲಾಗಲೀ, ಮೇಕಿಂಗ್ನಲ್ಲಾಗಲೀ ಸಿನಿಮಾ ಎಲ್ಲೂ ಪೇಲವ ಎನಿಸದು. ಒಂದು ಹಂತದಲ್ಲಿ ನಿರ್ದೇಶಕನ ಅಭಿರುಚಿಯ ಬಗ್ಗೆ ಗುಮಾನಿ ಮೂಡುತ್ತದಾದರೂ ಕ್ಷಣಾರ್ಧದಲ್ಲಿ ಅವರು ಚಿತ್ರಕಥೆಯನ್ನು ಸರಿದೂಗಿಸಿ ನಮ್ಮ ಅಭಿಪ್ರಾಯವನ್ನು ಸುಳ್ಳು ಮಾಡುತ್ತಾರೆ. ಸರ್ಕಾರಿ ಅಧಿಕಾರಿಯೊಬ್ಬನ ಕುಟುಂಬದ ಸದಸ್ಯರ ಅಕೌಂಟ್ಸ್ ನೋಡಿಕೊಳ್ಳುತ್ತಿರುವ CA ಬನ್ಸಾಲಿ ಮನೆಯ ಪರಿಸ್ಥಿತಿ ತೆರೆದಿಡುತ್ತಾರೆ ನಿರ್ದೇಶಕರು. ಮುಂದಿನ ಸನ್ನಿವೇಶಗಳು ಆತನ ಮನೆಯ ಸಿಬಿಐ ಶೋಧನೆಯೊಂದಿಗೆ ಶುರುವಾಗುತ್ತವೆ. ಆತನ ಕ್ಲೈಂಟ್ ಸಂದೇಶ್ ಬೋಂಸ್ಲೇ ಕೋಟ್ಯಂತರ ರೂಪಾಯಿ ಹಗರಣ ಮಾಡಿ ಸರ್ಕಾರಕ್ಕೆ ಬಿಲಿಯನ್ಗಟ್ಟಲೆ ಹಣ ವಂಚಿಸಿದ್ದು, ಆ ಆರೋಪದಡಿ ಕೇಸವಾನಿ ಅರೆಸ್ಟ್ ಆಗುತ್ತದೆ. ಆತನ ತನಿಖೆ ಮಾಡಿ ಅದರಲ್ಲಿ ಇವನ ಪಾತ್ರ ಏನಿಲ್ಲ ಎಂಬುದನ್ನ ತಿಳಿದು ಬಿಟ್ಟು ಕಳುಹಿಸಿ ಒಂದು ಕಣ್ಣಿಟ್ಟುರುತ್ತಾರೆ. ನಂತರದಲ್ಲಿ ಆತನ ಮತ್ತೊಬ್ಬ ಕ್ಲೈಂಟ್ ಆಗಿದ್ದ ನೀರಜ್ ಸೇನಾನ ಕಚೇರಿಯಲ್ಲಿ ಮೂರು ಚೆಕ್ ಕದ್ದು ಫೋರ್ಜರಿ ಮಾಡಿರುವ ಪ್ರಕರಣದಲ್ಲಿ ಕಥೆಯ ಪ್ರಮುಖ ಪಾತ್ರವಾಗಿರುವ ಅದೇ ಕೇಸವಾನಿಯನ್ನು ಪೋಲಿಸರು ಬಂಧಿಸುತ್ತಾರೆ.
ಈ ರೀತಿಯಾಗಿ ಒಂದರಿಂದೊಂದಂತೆ ತೆರೆದುಕೊಳ್ಳುವ ಸರಣಿ ಘಟನೆಗಳೊಂದಿಗೆ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತದೆ ಸಿನಿಮಾ. ನಿರ್ದೇಶಕ ಮನೀಶ್ ಗುಪ್ತಾ ಬಿಗಿ ನಿರೂಪಣೆಯೊಂದಿಗೆ ಸಸ್ಪೆನ್ಸ್ – ಥ್ರಿಲ್ಲರ್ ಕೋರ್ಟ್ ಡ್ರಾಮಾವೊಂದನ್ನು ವೀಕ್ಷಕರಿಗೆ ಯಶಸ್ವಿಯಾಗಿ ದಾಟಿಸಿದ್ದಾರೆ. ಒಂದು ಅದ್ಭುತ ಎನ್ನುವಂತಹ ಸಿನಿಮಾ ಅಲ್ಲದಿದ್ದರೂ ವೀಕ್ಷಕರನ್ನು ನಿರಾಸೆಗೊಳಿಸದು. ಕಲಾವಿದರೆಲ್ಲರ ಅಭಿನಯ ಅಚ್ಚುಕಟ್ಟಾಗಿದ್ದು, ರೋಹನ್ ಮೆಹ್ರಾ ಚಾಲಾಕಿ ಯುವ ವಕೀಲನ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ರಣವೀರ್ ಶೌರಿ, ವಿನಾಯಕ್ ಪಾಠಕ್, ಗುಲ್ ಪನಾಗ್ ಅವರದ್ದು ಪಾತ್ರೋಚಿತ ನಟನೆ. ತಾಂತ್ರಿಕವಾಗಿಯೂ ಸಿನಿಮಾ ಉತ್ತಮವಾಗಿದೆ.










