ಅಕ್ಷಯ್ ಕುಮಾರ್ ಅಭಿನಯದ ‘ಬೆಲ್ ಬಾಟಮ್‌’ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ಭಾರತದಾದ್ಯಂತ ಜನರು ಸಿನಿಮಾ ವೀಕ್ಷಿಸಿದ್ದು, ಜಗತ್ತಿನ 199 ದೇಶಗಳಲ್ಲಿ ಚಿತ್ರಕ್ಕೆ ವೀಕ್ಷಕರು ಸಿಕ್ಕಿದ್ದಾರೆ ಎಂದಿದೆ ಪ್ರೈಮ್‌. ಈ ಗೆಲುವಿಗೆ ಕಾರಣರಾದ ವೀಕ್ಷಕರಿಗೆ ಅಕ್ಷಯ್‌ ಧನ್ಯವಾದ ಅರ್ಪಿಸಿದ್ದಾರೆ.

ಅಕ್ಷಯ್‌ ಕುಮಾರ್ ಅಭಿನಯದ ‘ಬೆಲ್ ಬಾಟಮ್‌’ ಹಿಂದಿ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಕಳೆದ ತಿಂಗಳು ಸೆಪ್ಟೆಂಬರ್‌ 16ರಿಂದ ಸ್ಟ್ರೀಮ್ ಆಗಿತ್ತು. ಇದೀಗ ಅಮೇಜಾನ್‌ ಪ್ರೈಮ್‌, ‘ಇದು ನಮ್ಮ ಓಟಿಟಿಯಲ್ಲಿ ಜನರು ಅತಿ ಹೆಚ್ಚು ವೀಕ್ಷಣೆ ಮಾಡಿದ ಚಿತ್ರಗಳಲ್ಲೊಂದು’ ಎಂದಿದೆ. ಸ್ಟ್ರೀಮ್ ಆದ ಹದಿನಾಲ್ಕು ದಿನಗಳಲ್ಲಿ ಭಾರತದ ಶೇ.98ರಷ್ಟು ಪಿನ್‌ಕೋಡ್‌ ಪ್ರದೇಶಗಳು ಸೇರಿದಂತೆ ಜಗತ್ತಿನ 199 ದೇಶಗಳ ಜನರು ಸಿನಿಮಾ ವೀಕ್ಷಿಸಿದ್ದಾರೆ ಎಂದು ಪ್ರೈಮ್ ಅಂಕಿ-ಅಂಶಗಳ ಆಧರಿಸಿ ಹೇಳಿದೆ. “ನಿಮ್ಮ ಪ್ರೀತಿ ಮತ್ತು ನಂಬರ್‌ಗಳು ಎಲ್ಲವನ್ನೂ ಹೇಳುತ್ತಿವೆ. ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ. ಪ್ರೈಮ್ ವೀಡಿಯೋದಲ್ಲಿ ಬೆಲ್‌ ಬಾಟಮ್ ಸಿನಿಮಾ ವೀಕ್ಷಿಸಿ” ಎಂದು ಅಕ್ಷಯ್ ಕುಮಾರ್ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದಾರೆ.

ಬೆಲ್‌ ಬಾಟಮ್‌ ಸ್ಟ್ರೀಮ್‌ ಆದಾಗಿನಿಂದ ಚಿತ್ರಕ್ಕೆ ಸಕಾರಾತ್ಮಕ ವಿಮರ್ಶೆಗಳು ಬಂದಿದ್ದವು. “ಕೋವಿಡ್‌ ಸಂಕಷ್ಟದ ಸಮಯದಲ್ಲಿ ಜನರು ಚಿತ್ರಮಂದಿರಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಈ ಸಮಯದಲ್ಲಿ ಒಳ್ಳೆಯ ಮನರಂಜನಾತ್ಮಕ ಸಿನಿಮಾ” ಎನ್ನುವ ವಿಮರ್ಶಕರು ಬರೆದಿದ್ದರು. “ಅತಿ ಕಡಿಮೆ ಅವಧಿಯಲ್ಲಿ ಚಿತ್ರವನ್ನು ಅತಿ ಹೆಚ್ಚು ಜನರು ವೀಕ್ಷಿಸುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಕಂಫರ್ಟ್‌ ಆಗಿ ತಮ್ಮ ಮನೆಯಲ್ಲೇ ಜನರು ಸಿನಿಮಾ ನೋಡಿ ಹಾರೈಸಿದ್ದಾರೆ. ಈ ಪ್ರೀತಿ ಸದಾ ಇರಲಿ” ಎಂದಿದ್ದಾರೆ ನಟ ಅಕ್ಷಯ್‌. ‘ಬೆಲ್‌ ಬಾಟಮ್‌’ಗೆ ಬಾಕ್ಸ್‌ ಆಫೀಸ್‌ನಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ‘ರಕ್ಷಾ ಬಂಧನ್‌’ ಹಬ್ಬದ ಸಂದರ್ಭದಲ್ಲಿ ತೆರೆಕಂಡಿದ್ದ ಸಿನಿಮಾ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಹದಿಮೂರು ಕೋಟಿ ರೂಪಾಯಿ ಗಳಿಸಿತ್ತು. ಮೂರನೇ ವಾರದ ಹೊತ್ತಿಗೆ ಸುಮಾರು 28 ಕೋಟಿ ರೂಪಾಯಿ ಗಳಿಕೆ ಮಾಡಿತ್ತು ಎನ್ನಲಾಗಿದೆ. ರಂಜಿತ್ ತಿವಾರಿ ನಿರ್ದೇಶನದ ಚಿತ್ರದಲ್ಲಿ ವಾಣಿ ಕಪೂರ್‌, ಹ್ಯುಮಾ ಖುರೇಶಿ, ಲಾರಾ ದತ್ತಾ, ಆದಿಲ್ ಹುಸೇನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here