ಕನ್ನಡ ಸಿನಿಮಾ | ರತ್ನನ್ ಪ್ರಪಂಚ
ತೆರೆಯ ಮೇಲಿನ ಭಾವುಕತೆಗಳು ಕಣ್ಣಂಚಲ್ಲಿ ನೀರಾಡಿಸುವಂತಿರಬೇಕು. ಅತಿಭಾವುಕತೆಗಳನ್ನು ತುರುಕಿ ಕರ್ಚೀಫು ಹಿಂಡುವಂತೆ ಮಾಡಲು ಹೊರಟರೆ ತಲೆನೋವು ಬರುತ್ತದೆ. ಕಣ್ಣೀರ ಸಿನಿಮಾಗಳ ಕಾಲ ಮುಗಿದಿದೆ. ಹೇಳುವ ರೀತಿಯೂ ಬದಲಾಗಲೇಬೇಕಾಗುತ್ತದೆ.
ಸಿನಿಮಾಗಳು ನಿರೀಕ್ಷೆ ಹುಟ್ಟಿಸಲು ಬೇರೆ ಬೇರೆ ಕಾರಣಗಳಿರುತ್ತವೆ. ಪಾತ್ರಧಾರಿಗಳು, ನಿರ್ದೇಶಕ, ಯಾವುದೋ ಕಾಡುವ ಹಾಡು ಹೀಗೆ ಯಾವುದೋ ಕಾರಣ ಸಿನಿಮಾ ಒಂದನ್ನು ನೋಡಬೇಕು ಅನಿಸುವಂತೆ ಮಾಡುತ್ತದೆ. ಕೆಲವು ಸಿನಿಮಾಗಳು ಅದರ ಹೆಸರು ಮತ್ತು ಪೋಸ್ಟರ್ಗಳಿಂದಲೂ ಗಮನ ಸೆಳೆಯುತ್ತವೆ. ‘ರತ್ನನ್ ಪ್ರಪಂಚ’ ಅಂತಾ ಸಿನಿಮಾ. ಧನಂಜಯ ಎಂಬ ಭರವಸೆಯ ನಟ, ಸಾಹಿತಿ ಜಿ.ಪಿ.ರಾಜರತ್ನಂ ಅವರು ಸಮೀಕರಿಸಿದ ‘ರತ್ನನ್ ಪ್ರಪಂಚ” ಎಂಬ ಚಿರಪರಿಚಿತ ಹೆಸರು, ಆಕರ್ಷಣೀಯ ಪೋಸ್ಟರ್, ಟ್ರೇಲರ್ ಇವೆಲ್ಲ ‘ರತ್ನನ್ ಪ್ರಪಂಚ’ದ ಬಗ್ಗೆ ನಿರೀಕ್ಷೆ ಹುಟ್ಟಿಸಿದ್ದವು. ಒಟಿಟಿಯಲ್ಲಿ ಒಳ್ಳೆಯ ಕನ್ನಡ ಸಿನಿಮಾಕ್ಕಾಗಿ ಬರಗೆಟ್ಟು ಕಾದಂತೆ ಎಲ್ಲರೂ ನೋಡಿದ್ದೂ ಆಯಿತು. ಆದರೆ ರತ್ನನ್ ಪ್ರಪಂಚ ನಿರೀಕ್ಷೆಯನ್ನು ಸುಳ್ಳು ಮಾಡಿತು.
ನಮ್ಮ ನಾಯಿ ಕಳೆದುಹೋಗಿದೆ ಅಂತ ಪತ್ರಿಕಾ ಕಛೇರಿಗೆ ಬರುವ ರತ್ನನಿಗೆ, ಪತ್ರಕರ್ತೆಯೂ ಅವನ ನಿಜದ ಕುಟುಂಬವನ್ನು ಹುಡುಕುವ ವೈಯಕ್ತಿಕ ಕೆಲಸಕ್ಕೆ ವಿನಾಕಾರಣ ಯಾಕೆ ಕೈ ಹಾಕುತ್ತಾರೆ? ಹಿಂದೆ ಮುಂದೆ ಯೋಚಿಸದೇ ಸೀದಾ ಆ ವ್ಯಕ್ತಿಗೇ ಫೋನು ಮಾಡಿ, “ನೀನು ಸರೋಜಳ ಸ್ವಂತ ಮಗ ಅಲ್ಲ” ಅಂತ ಯಾಕೆ ಹೇಳುತ್ತಾರೆ ಎಂಬುದೊಂದು ತರ್ಕವೇ ಇಲ್ಲದ ಅಸಹಜ ಸಂಗತಿ. ಅದು ಗೊತ್ತಾದ ಮೇಲೆ ಆ ವಿಷಯವನ್ನು ಸಾಕುತಾಯಿಯೊಂದಿಗೆ ಮಾತಾಡುವ ರೀತಿಯಲ್ಲಿ ಅಷ್ಟೊಂದು ಅಸೂಕ್ಷ್ಮ, ಒರಟುತನ ಇದ್ದದ್ದು ಯಾಕೆ? ನಿಜದ ತಾಯಿಯನ್ನೂ, ಕುಟುಂಬವನ್ನೂ ಹುಡುಕಿ ಹೊರಡುವ ಅವನ ಪಯಣವೇ ಈ ಸಿನಿಮಾದ ಕತೆ.
ಭೈರಪ್ಪನವರ ‘ನಿರಾಕರಣ’ ಕಾದಂಬರಿ ನೆನಪಾಗುತ್ತದೆ. ಅದರಲ್ಲಿಯೂ ಅವನು ತನ್ನ ಮಕ್ಕಳನ್ನೆಲ್ಲ ಒಬ್ಬೊಬ್ಬರಿಗೆ ದತ್ತುಕೊಟ್ಟು ಮತ್ತೆ ಎಲ್ಲರನ್ನೂ ಹುಡುಕಿ ಹೋಗುವ ಚಿತ್ರವಿದೆ. ಅನ್ಯಧರ್ಮವನ್ನೇ ಸೇರಿದ ಅಕ್ಕ, ಇನ್ನೆಲ್ಲೋ ಇರುವ ತಮ್ಮ.. ಅವರು ಅವರ ಪಾಡಿಗೆ ಅವರ ಬದುಕಿನಲ್ಲಿ ಸಂತೋಷವಾಗಿರುವಾಗ ರತ್ನ ಯಾಕೆ ನಿಜ ಹೇಳಬೇಕಾಗಿತ್ತು? ಎಂಬುದೊಂದು ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಪ್ರಶಾಂತ ಕೊಳದಂತಿದ್ದ ಬದುಕುಗಳಲ್ಲಿ ರತ್ನ ಹೇಳುವ ಸತ್ಯ ಎಬ್ಬಿಸುವ ರಾಡಿಯೇ ಸಿನಿಮಾದ ಕತೆಯ ಸಾಗುವಿಕೆಯ ಆಧಾರ ಎನ್ನುವುದಾದರೆ ರತ್ನನ ಪಾತ್ರದ ವ್ಯಕ್ತಿತ್ವ, ಘನತೆ ಏನು ಹಾಗಾದರೆ? ಅವನು ಹೇಳದೆಯೇ ಬಂದಿದ್ದರೆ ಪಾತ್ರದ, ಮೂಲಕ ಸಿನಿಮಾದ ತೂಕವೂ ಹೆಚ್ಚುತ್ತಿತ್ತಾ? ಅನು ಪ್ರಭಾಕರ್ ಪಾತ್ರ ‘ಎಷ್ಟೋ ವರ್ಷಗಳ ಮೇಲೆ ಬರುವ ಈ ಸಂಬಂಧಕ್ಕೆ ಹೆಸರು ಕೊಡಬಹುದು, ಅರ್ಥವನ್ನಲ್ಲ. ನೀನು ಎಂದಿದ್ದರೂ ಅತಿಥಿ. ನನ್ನ ಮನೆಗೂ, ಬದುಕಿಗೂ’ ಅಂತ ಹೇಳುವುದು ಎಷ್ಟು ಅರ್ಥಪೂರ್ಣ ಮಾತು. ಆದರೆ ನಮ್ ರತ್ನ ಆ ಮಾತನ್ನು ಕುಂಡೆ ಕೆಳಗೆ ಹಾಕಿ ಮುಂದಿನ ಪ್ರಯಾಣ ಮಾಡಿಯೇ ಬಿಡುತ್ತಾನಲ್ಲಾ.. ಮತ್ತೆ ರಾಡಿ ಏಳುತ್ತದಲ್ಲಾ.. ಇದು ಸಿನಿಮಾದ ಹಿತವೆನಿಸದ, ಎಲ್ಲೋ ಮಿಸ್ ಹೊಡೀತಿದೆಯಲ್ಲಾ ಅನಿಸುವ ಬೆಳವಣಿಗೆ.
ಕತೆ ಎಬ್ಬಿಸುವ ರಾಡಿ ಏನೇ ಇದ್ದರೂ ಶೃತಿ ಮತ್ತು ಪ್ರಮೋದ್ ಎಂಬ ಎರಡು ಪಾತ್ರಗಳ ರಾಕ್ಷಸೀ ನಟನೆ ಮಾತ್ರ ಇಡೀ ಸಿನಿಮಾದ ಜೀವಜೀವಾಳ. ಉಮಾಶ್ರೀ ಅವರ ಡೈಲಾಗುಗಳು ಕೆಲವು ಕಡೆ ಕೃತಕ ಅನಿಸುತ್ತವೆ. ಶೃತಿ ಪ್ರತೀ ಫ್ರೇಮಿನಲ್ಲೂ ಘನತೆಯೇ ಮೈಮೇಲೆ ಬಂದಂತೆ ನಟಿಸಿದ್ದಾರೆ. ಇನ್ನು ಪ್ರಮೋದ್ ಬಂದ ಮೇಲೆ ಕೆಲವು ಕಡೆ ಧನಂಜಯ್ ಕೂಡ ಮಂಕಾಗಿ ಕಾಣುತ್ತಾರೆ. ‘ಏನ್ ಮರ್ತಹೋಗಿದ್ಯೋ ಯಪ್ಪಾ’ ಅಂದರೆ ‘ಮೈ ಮರ್ತು ಹೋಗಿದ್ನೇ ಯವ್ವಾ’ ಅನ್ನುತ್ತಾನವನು. ಆಗ ಶೃತಿ ಕೊಡುವ ರಿಯಾಕ್ಷನ್ ಇದೆಯಲ್ಲಾ… ಓಹ್!
ಇದು ಕಾಮಿಡಿ, ಎಮೋಷನ್ಸ್, ಡ್ರಾಮಾ ಏನೂ ಆಗದ, ಆದರೆ ಎಲ್ಲಾ ಇರುವ ಸಿನಿಮಾ. ಕೆಲವು ದೃಶ್ಯಗಳು ಒಂದು ಡೈಲಾಗಿನ ಮೋಹಕ್ಕಾಗಿ ಹುಟ್ಟಿದಂತಿವೆ. ವೆಜ್ ಮತ್ತು ನಾನ್ವೆಜ್ ವಿಷಯ, ಅವನು ಓದುವ ಸಹಸ್ರನಾಮಗಳು ಕತೆಗೆ ಅಗತ್ಯವೇ ಇಲ್ಲದವು. ಒಳ್ಳೆಯವನು, ಸಭ್ಯ, ಪುಕ್ಕಲ, ಸಿಡುಕ, ಗೊಂದಲಮಯ ಹೀಗೆ ರತ್ನನ ಕ್ಯಾರಕ್ಟರಿಗೇ ಒಂದು ಸ್ಪಷ್ಟತೆ ಇದ್ದ ಹಾಗಿಲ್ಲ. ಹೆತ್ತವರು ಮಾತ್ರ ತಾಯ್ತಂದೆ ಅಲ್ಲ, ಬದುಕನ್ನು ಆತುಕೊಂಡವರು, ಕಟ್ಟಿಕೊಟ್ಟವರೂ ತಂದೆತಾಯ್ಗಳೇ ಅನ್ನುವ ಡೈಲಾಗ್ ಏನೋ ಚೆನ್ನಾಗಿದೆ. ಅದನ್ನು ಹೇಳುವಾಗಿನ ಚಿಕಿತ್ಸಕ ಗುಣ ಸಿನಿಮಾದಲ್ಲಿ ಮಿಸ್ಸು ಹೊಡೆದಿದೆ. ತೆರೆಯ ಮೇಲಿನ ಭಾವುಕತೆಗಳು ಕಣ್ಣಂಚಲ್ಲಿ ನೀರಾಡಿಸುವಂತಿರಬೇಕು. ಅತಿಭಾವುಕತೆಗಳನ್ನು ತುರುಕಿ ಕರ್ಚೀಫು ಹಿಂಡುವಂತೆ ಮಾಡಲು ಹೊರಟರೆ ತಲೆನೋವು ಬರುತ್ತದೆ. ಕಣ್ಣೀರ ಸಿನಿಮಾಗಳ ಕಾಲ ಮುಗಿದಿದೆ. ಹೀರೋಯಿನ್ ಆಗಿದ್ದ ಶೃತಿಯ ಕಾಲಕ್ಕೂ, ತಾಯಾದ ಶೃತಿಯ ಕಾಲಕ್ಕೂ ನೋಡುಗರು ಬದಲಾಗಿದ್ದಾರೆ. ಹೇಳುವ ರೀತಿಯೂ ಬದಲಾಗಲೇಬೇಕಾಗುತ್ತದೆ. ದಯವಿಟ್ಟು ಗಮನಿಸಿ, ಇಷ್ಟ್ರಲ್ಲೇ ಮಿಸ್ಸು, ರತ್ನನ್ ಪ್ರಪಂಚ ಅಂತೆಲ್ಲ ಸೊಗಸಾದ ಟೈಟಲುಗಳನ್ನು ಹುಡುಕುವ ರೋಹಿತ್, ನಿಮ್ಮಿಂದ ಇನ್ನೂ ಸೊಗಸಾದ ಸಿನಿಮಾಗಳೂ ಬರಲಿ.
ನಿರ್ಮಾಪಕರು : ಕಾರ್ತೀಕ್ ಗೌಡ, ಯೋಗಿ ಜಿ.ಗೌಡ | ನಿರ್ದೇಶಕ : ರೋಹಿತ್ ಪದಕಿ | ಛಾಯಾಗ್ರಹಣ : ಶ್ರೀಶ ಕೂದುವಳ್ಳಿ | ಸಂಗೀತ : ಬಿ.ಅಜನೀಶ್ ಲೋಕನಾಥ್ | ತಾರಾಬಳಗ : ಧನಂಜಯ, ರೆಬಾ ಮೊನಿಕಾ, ಉಮಾಶ್ರೀ, ಶ್ರುತಿ, ಪ್ರಮೋದ್, ಅನು ಪ್ರಭಾಕರ್, ರವಿಶಂಕರ್ ಗೌಡ ಇತರರು.