ಮೊನ್ನೆ ತಾನೇ ‘ಗಿಚ್ಚ ಗಿಲಿಗಿಲಿ’ ಅನ್ನೋ ಹಾಡಿನ ಬಗ್ಗೆ ಕೇಳಿದವರಿಗೆ, ‘ಅರೇ ಇದೇನಿದು’ ಅಂತ ಅನ್ನಿಸೋದು ಸಹಜ. ಏಕೆಂದರೆ ‘ರತ್ನನ್ ಪ್ರಪಂಚ’ದಲ್ಲಿ ಕಾಣಿಸಿಕೊಂಡಿದ್ದ ಅಥವಾ ಕೇಳಿಸಿದ್ದ ‘ಗಿಚ್ಚ ಗಿಲಿ ಗಿಲಿ’ ಹಾಡು ಈಗ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಇನ್ನೊಂದು ರೂಪದಲ್ಲಿ ಕಾಣಿಸಿಕೊಂಡಿದೆ.
ರೋಹಿತ್ ಪದಕಿ ನಿರ್ದೇಶನದಲ್ಲಿ ಧನಂಜಯ ಅಭಿನಯಿಸಿದ್ದ ‘ರತ್ನನ್ ಪ್ರಪಂಚ’ ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸದಭಿರುಚಿಯ ಚಿತ್ರ ಎಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರದಲ್ಲಿ ಪ್ರಮೋದ್ ಅವರ ಅಭಿನಯದ ‘ಗಿಚ್ಚ ಗಿಲಿಗಿಲಿ’ ಹಾಡು ಸೂಪರ್ ಹಿಟ್ ಎನಿಸಿಕೊಂಡಿದೆ. ಪುನೀತ್ ರಾಜಕುಮಾರ್ ಹಾಡಿರುವ ಈ ಹಾಡು ಉತ್ತರ ಕರ್ನಾಟಕದ ಶೈಲಿಯ ಹಾಡೊಂದರ ಸ್ಫೂರ್ತಿಯಿಂದ ಮಾಡಿದ್ದು. ಆದರೆ ಈಗ ‘ಓಲ್ಡ್ ಮಾಂಕ್’ ಚಿತ್ರದ ನಿರ್ದೇಶಕ ಮತ್ತು ನಾಯಕ ಎಂ.ಜಿ.ಶ್ರೀನಿವಾಸ್ ಸುಮ್ನೆ ಸ್ಫೂರ್ತಿ ಗೀರ್ತಿ ಯಾಕೆ ಅನ್ನೋ ರೀತಿಯಲ್ಲಿ ಆ ಮೂಲ ಹಾಡನ್ನೇ ಅನಾಮತ್ತಾಗಿ ಎತ್ತಿಕೊಂಡು ತಮ್ಮ ಚಿತ್ರದಲ್ಲಿ ಹಾಕಿಕೊಂಡುಬಿಟ್ಟಿದ್ದಾರೆ.
ಹೌದು ಉತ್ತರ ಕರ್ನಾಟಕದ ಶೈಲಿಯ ಮುದುಕಣ್ಣ ಮೊರಬ ಅವರ ಈ ಹಾಡು ಯೂಟ್ಯೂಬ್‌ನಲ್ಲಿ ದೊಡ್ಡ ಹಿಟ್ ಆಗಿತ್ತು. ಹಾಗಾಗಿ ಈ ಹಾಡಿನ ಮೇಲೆ ‘ರತ್ನನ್ ಪ್ರಪಂಚ’ದ ರೋಹಿತ್ ಪದಕಿ ಮತ್ತು ‘ಓಲ್ಡ್ ಮಾಂಕ್’ ನ ಶ್ರೀನಿ ಇಬ್ಬರೂ ಕಣ್ಣು ಹಾಕಿದ್ದರು ಅನ್ನಿಸುತ್ತೆ. ಆದರೆ ಹೀಗೆ ಅವರು ಕಣ್ಣು ಹಾಕಿರೋದು ಒಬ್ಬರಿಗೊಬ್ಬರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾಗಿ ಆಲ್ ಮೋಸ್ಟ್ ಒಂದೇ ರೀತಿಯ ಎರಡು ಹಾಡುಗಳನ್ನು ಕೇಳುವ ಭಾಗ್ಯ ಕನ್ನಡ ಪ್ರೇಕ್ಷಕರಿಗೆ ಸಿಕ್ಕಿದೆ. ಹಾಗೆ ನೋಡಿದರೆ ಈ ಹಾಡಿನ ಟ್ಯೂನನ್ನು ಉಪೇಂದ್ರ ಅವರ ‘ಕುಟುಂಬ’ ಚಿತ್ರದಲ್ಲೇ ಕನ್ನಡ ಪ್ರೇಕ್ಷಕ ಕೇಳಿದ್ದಾನೆ. ‘ಥಳುಕ್ಕು ಬಳುಕಿನ ಹಾಳೂರಲ್ಲಿ ಉಳಿದೋನೇ ಗೌಡ’ ಎಂಬ ಹಾಡಿನ ಟ್ಯೂನ್ ಇರುವ ‘ಗಿಚ್ಚ ಗಿಲಿ ಗಿಲಿ’ ಹಾಡು ಈಗ ‘ಓಲ್ಡ್ ಮಾಂಕ್’ ನಲ್ಲೂ ಕಿಕ್ಕೇರಿಸಲು ರೆಡಿಯಾಗಿದೆ. ಅಂದಹಾಗೆ ಈ ಚಿತ್ರ ತೆಲುಗಿನಲ್ಲೂ ಬಿಡುಗಡೆ ಆಗುತ್ತಿರುವ ಕಾರಣ ಈ ಹಾಡು ಈಗ ತೆಲುಗು ಆವೃತ್ತಿಯಲ್ಲೂ ಬಿಡುಗಡೆ ಆಗಿದೆ. ಯೂಟ್ಯೂಬ್‌ನಲ್ಲಿ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆ ಆಗಿದ್ದು ಶ್ರೀನಿ ಮತ್ತು ಅದಿತಿ ಪ್ರಭುದೇವ ಅವರ ಕಾಂಬಿನೇಷನ್‌ನಲ್ಲಿ ಸಖತ್ ಕಲರ್‌ಫುಲ್ ಆಗಿದೆ. ಒಟ್ಟಿನಲ್ಲಿ ಒಂದೇ ವಾರದಲ್ಲಿ ಎರಡೆರಡು ಬಾರಿ ‘ಗಿಚ್ಚ ಗಿಲಿ ಗಿಲಿ’ ಅನ್ನೋ ಲಕ್ ಕನ್ನಡ ಸಿನಿಮಾ ಪ್ರೇಕ್ಷಕರದ್ದು.