ಕನ್ನಡ ಸಿನಿಮಾ | ಪ್ರೇಮಂ ಪೂಜ್ಯಂ
ಪ್ರೇಮ್ ಅಭಿನಯದ ಇಪ್ಪತ್ತೈದನೇ ಸಿನಿಮಾ ಎನ್ನುವ ವಿಸಿಟಿಂಗ್ ಕಾರ್ಡ್‌ನೊಂದಿಗೆ ತೆರೆಕಂಡ ‘ಪ್ರೇಮ ಪೂಜ್ಯಂ’ ಸಿನಿಮಾ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಸಮಾನಮನಸ್ಕ ವೈದ್ಯರು ಜೊತೆಗೂಡಿ ನಿರ್ಮಿಸಿರುವ ಚಿತ್ರವಿದು. ನಿರ್ದೇಶಕ ರಾಘವೇಂದ್ರ ಕೂಡ ವೃತ್ತಿಯಲ್ಲಿ ವೈದ್ಯರು ಎನ್ನುವುದು ನಿರೀಕ್ಷೆ ಹೆಚ್ಚಿಸಿದ್ದ ಮತ್ತೊಂದು ಅಂಶ. ನಟ ಪ್ರೇಮ್‌ರ ಲವರ್‌ಬಾಯ್ ಇಮೇಜಿಗೆ ಸೂಕ್ತ ಕತೆ ಹೆಣೆದಿರುವ ನಿರ್ದೇಶಕರು ತಮ್ಮ ವೃತ್ತಿಯ ಅನುಭವ, ಶ್ರೇಷ್ಠತೆಯನ್ನು ಹದವಾಗಿ ಬೆಸೆದು ಸುಂದರ ಸಿನಿಮಾ ಕಟ್ಟಿದ್ದಾರೆ. ಕೋವಿಡ್ ನಂತರದ ದಿನಗಳ ನವಿರು ಪ್ರೇಮಕತೆಯ ಚಿತ್ರವಾಗಿ ‘ಪ್ರೇಮಂ ಪೂಜ್ಯಂ’ ಆಪ್ತವೆನಿಸುತ್ತದೆ. ಕೆಲವೇ ಮಿತಿಗಳ ಮಧ್ಯೆ ನಿಸ್ಸಂಶಯವಾಗಿ ಕನ್ನಡದ ಉತ್ತಮ ಪ್ರೇಮಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಳಿಸಬಹುದಾದ ಕೃತಿ.
ನಿರ್ದೇಶಕ ರಾಘವೇಂದ್ರ ಅವರು ತುಂಬಾ ಸಮಾಧಾನದಿಂದಲೇ ಸಿನಿಮಾ ಕಟ್ಟಿದ್ದಾರೆ. ಕತೆ, ಪಾತ್ರ, ದೃಶ್ಯಸಂಯೋಜನೆ, ನಿರೂಪಣೆ, ಸಂಕಲನ… ಎಲ್ಲಾ ವಿಭಾಗಗಳಲ್ಲೂ ಅವರು ಸಮಾಧಾನಿ. ಚಿತ್ರಿಸುವ ಪ್ರತೀ ಸೀನ್‌ಗಳ ಒಂದೊಂದು ಫ್ರೇಮ್ ಕೂಡ ಅಂದವಾಗಿ ಕಾಣಬೇಕೆನ್ನುವ ಹಂಬಲ. ಪರಿಶುದ್ಧ ಪ್ರೀತಿಯ ಕತೆಯನ್ನು ಚೆಂದದ ಫ್ರೇಮ್‌ನೊಳಗೆ ಕಟ್ಟಿಕೊಡುವ ಅವರ ಉತ್ಸಾಹಕ್ಕೆ ಛಾಯಾಗ್ರಾಹಕ ನವೀನ್ ಕುಮಾರ್ ಅವರಿಂದ ಉತ್ತಮ ಬೆಂಬಲ ಸಿಕ್ಕಿದೆ. ನಿರ್ದೇಶಕ ರಾಘವೇಂದ್ರ ಅವರೇ ಚಿತ್ರದ ಸಂಗೀತ ನಿರ್ದೇಶಕರೂ ಹೌದು. ಪ್ರೇಮಕತೆಯ ಸಿನಿಮಾದಲ್ಲಿ ಗೀತಸಾಹಿತ್ಯ, ಸಂಗೀತವೇ ಜೀವಾಳ. ತಮ್ಮ ಕಲ್ಪನೆಯನ್ನು ತೆರೆಗೆ ಅಳವಡಿಸುವ ಸಂದರ್ಭದಲ್ಲಿ ರಾಘವೇಂದ್ರ ಅವರು ಸಂಗೀತದ ಹೊಣೆಯನ್ನೂ ತಾವೇ ಹೆಗಲಿಗೇರಿಸಿಕೊಂಡಿದ್ದಾರೆ. ಇದು ಸಿನಿಮಾಗೆ ಕೊಂಚ ಹಿನ್ನೆಡೆಯಾಗಿದೆ. ಥಿಯೇಟರ್‌ನಲ್ಲಿ ಕುಳಿತಾಗ ದೃಶ್ಯವೈಭವದೊಡನೆ ಹಾಡುಗಳು ಆಪ್ತವೆನಿಸುತ್ತವೆ. ಆದರೆ ಥಿಯೇಟರ್‌ನಿಂದ ಹೊರಬಿದ್ದರೆ ಹಾಡುಗಳು ನೆನಪಾಗುವುದಿಲ್ಲ. ಸಂಗೀತದಲ್ಲಿ ವೆರೈಟಿ ಇದ್ದಿದ್ದರೆ ಹಾಡುಗಳಿಗೆ ಕಾಡುವ ಗುಣ ಸಿಗುತ್ತಿತ್ತೇನೋ…
‘ನೆನಪಿರಲಿ’ ಸಿನಿಮಾ ಮೂಲಕ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾದ ಪ್ರೇಮ್ ಅವರದ್ದು ವೃತ್ತಿಬದುಕಿನಲ್ಲಿ ಏಳು-ಬೀಳಿನ ಹಾದಿ. ‘ಪ್ರೇಮಂ ಪೂಜ್ಯಂ’ ಅವರ ಇಪ್ಪತ್ತೈದನೇ ಸಿನಿಮಾ. ಈ ಚಿತ್ರಕ್ಕಾಗಿ ಅವರು ಅಪಾರ ಶ್ರಮ ವಹಿಸಿದ್ದಾರೆ. ಸಿನಿಮಾ ಮತ್ತು ಪಾತ್ರದೆಡೆಗಿನ ಅವರ ಪ್ರೀತಿ ಇಲ್ಲಿ ಎದ್ದು ಕಾಣುತ್ತದೆ. ಐದಾರು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಪಾತ್ರದ ಅಗತ್ಯತೆಗಾಗಿ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದಾರೆ. ನಾಯಕನಟಿ ಬೃಂದಾ ಆಚಾರ್ಯ ಚಿತ್ರಕ್ಕೆ ಅತ್ಯಂತ ಸೂಕ್ತ ಆಯ್ಕೆ. ಶೆರ್ಲಿನ್ ಪಾತ್ರವನ್ನು ಅವರು ಜೀವಿಸಿದ್ದಾರೆ. ಪ್ರೇಮಕತೆಯ ಮಧ್ಯೆ ಸ್ನೇಹಕ್ಕೂ ಇಲ್ಲಿ ಜಾಗವಿದೆ. ಹೀರೋನ ಸ್ನೇಹಿತರಾಗಿ ಮಾಸ್ಟರ್ ಆನಂದ್, ಸಾಧುಕೋಕಿಲ ಸನ್ನಿವೇಶಗಳನ್ನು ತಿಳಿಗೊಳಿಸುತ್ತಾರೆ. ಮುನ್ನಾರ್, ಡಾರ್ಜಲಿಂಗ್‌ನ ಸುಂದರ ಪರಿಸರದಲ್ಲಿ ಬಹುಪಾಲು ಚಿತ್ರೀಕರಣ ನಡೆದಿದೆ. ವಿಯಟ್ನಾಮ್‌ನಲ್ಲಿ ಹಾಡುಗಳನ್ನು ಚಿತ್ರಿಸಿದ್ದಾರೆ. ನಿರ್ದೇಶಕ ರಾಘವೇಂದ್ರ ಪ್ರೀತಿಯ ಕತೆಯನ್ನು ಸೊಗಸಾಗಿ ನಿರೂಪಿಸಿದ್ದಾರೆ. ನಿರೂಪಣೆಯ ಅವಧಿ ದೀರ್ಘವಾಗಿರುವುದು ಚಿತ್ರದ ಮಿತಿ. ಇದರ ಹೊರತಾಗಿ ‘ಫೀಲ್ ಗುಡ್ ಸಿನಿಮಾ’ ಆಗಿ ‘ಪ್ರೇಮಂ ಪೂಜ್ಯಂ’ ಇಷ್ಟವಾಗುತ್ತದೆ.
ನಿರ್ಮಾಪಕರು : ಡಾ.ರಕ್ಷಿತ್ ಕೆದಂಬಾಡಿ, ಡಾ.ರಾಜಕುಮಾರ್ | ನಿರ್ದೇಶಕಮತ್ತು ಸಂಗೀತ : ಡಾ.ರಾಘವೇಂದ್ರ | ಛಾಯಾಗ್ರಹಣ : ನವೀನ್ ಕುಮಾರ್ |ತಾರಾಬಳಗ : ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ, ಅವಿನಾಶ್, ಮಾಳವಿಕಾ, ಮಾಸ್ಟರ್ ಆನಂದ್, ಸಾಧು ಕೋಕಿಲ, ನಾಗಾಭರಣ ಇತರರು.