‘ಅಸುರನ್’ ಚಿತ್ರದ ಉತ್ತಮ ನಟನೆಗಾಗಿ BRICS ಸಿನಿಮೋತ್ಸವದ ಅತ್ಯುತ್ತಮ ನಟ ಗೌರವಕ್ಕೆ ಪಾತ್ರರಾಗಿದ್ದಾರೆ ಧನುಷ್. ಟ್ವಿಟರ್‌ನಲ್ಲಿ ಅವರು ಈ ಸಂತಸ ಹಂಚಿಕೊಂಡಿದ್ದಾರೆ. ವೆಟ್ರಿಮಾರನ್ ನಿರ್ದೇಶನದ ‘ಅಸುರನ್’ ಯಶಸ್ವೀ ಸಿನಿಮಾ ಮೂರು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದೆ.
ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಜೊತೆಯಲ್ಲೇ BRICS ಸಿನಿಮೋತ್ಸವ ಆಯೋಜನೆಗೊಂಡಿತ್ತು. ಚಿತ್ರೋತ್ಸವದ ಸ್ಪರ್ಧೆಯಲ್ಲಿ ನಟ ಧನುಷ್ ಅವರಿಗೆ ‘ಅಸುರನ್’ ಚಿತ್ರದ ಉತ್ತಮ ನಟನೆಗೆ ಪ್ರಶಸ್ತಿ ಸಂದಿದೆ. ‘ಆನ್ ವ್ಹೀಲ್ಸ್’ ಬ್ರೆಜಿಲ್ ಸಿನಿಮಾದ ಉತ್ತಮ ನಟನೆಗೆ ಲಾರಾ ಬೋಲ್ಡೊರಿನಿ ಅವರು ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರರಾಗಿದ್ದಾರೆ. ‘ಬರಾಕತ್’ (ಆಫ್ರಿಕಾ) ಮತ್ತು ‘ದಿ ಸನ್ ಎಬವ್ ಮಿ ನೆವರ್ ಸೆಟ್ಸ್’ (ರಷ್ಯಾ) ಅತ್ಯುತ್ತಮ ಸಿನಿಮಾ ಪುರಸ್ಕಾರಕ್ಕೆ ಪಾತ್ರವಾಗಿವೆ. ನಟ ಧನುಷ್ ಟ್ವಿಟರ್‌ನಲ್ಲಿ ಈ ಸಂಭ್ರಮ ಹಂಚಿಕೊಂಡಿದ್ದಾರೆ.
ಕಲೈಪುಲಿ ಎಸ್ ತನು ನಿರ್ಮಾಣ, ವೆಟ್ರಿಮಾರನ್ ನಿರ್ದೇಶನದ ‘ಅಸುರನ್’ (2019) ಸಿನಿಮಾ ಮೂರು ರಾಷ್ಟ್ರಪ್ರಶಸ್ತಿ ಪಡೆದಿದೆ. 78ನೇ ಗೋಲ್ಡನ್ ಗ್ಲೋಬ್‌ನ ‘ಅತ್ಯುತ್ತಮ ವಿದೇಶಿ ಸಿನಿಮಾ’ ವಿಭಾಗದಲ್ಲೂ ‘ಅಸುರನ್’ ಸ್ಕ್ರೀನ್ ಆಗಿತ್ತು. ಪೂಮಾಣಿ ಅವರ ‘ವೆಕ್ಕೈ’ ಕೃತಿಯನ್ನು ಆಧರಿಸಿದ ಈ ಚಿತ್ರದಲ್ಲಿ ಧನುಷ್ ಜೊತೆ ಮಂಜು ವಾರಿಯರ್ ನಟಿಸಿದ್ದಾರೆ. ಈ ಸಿನಿಮಾ ‘ನಾರಪ್ಪ’ ಶೀರ್ಷಿಕೆಯಡಿ ತೆಲುಗಿಗೂ ರೀಮೇಕಾಗಿದೆ. ವೆಂಕಟೇಶ್ ಮತ್ತು ಪ್ರಿಯಾಮಣಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಇನ್ನು ನಟ ದನುಷ್ ಅಭಿನಯಿಸಿದ್ದ ‘ಜಗಮೆ ತಂಧಿರಮ್’ ತಮಿಳು ಚಿತ್ರ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಿತ್ತು.