ದೊಡ್ಡ ಸಿನಿಮಾಗಳ ನಿರ್ಮಾಪಕರು OTTಗೆ ಮೊರೆ ಹೋಗಿರುವುದು ಸಹಜವಾಗಿಯೇ ವಿತರಕರು, ಪ್ರದರ್ಶಕರಿಗೆ ಆತಂಕ ತಂದೊಡ್ಡಿದೆ. ಇದು ತಮಿಳು ಸಿನಿಮಾ ಮಾರ್ಕೆಟ್‌ನ ಡೈನಾಮಿಕ್ಸ್‌ ಅನ್ನೇ ಬದಲಾಯಿಸಿತು. ಈಗ ನಿರ್ಮಾಪಕರು ಮೇನ್‌ಸ್ಟ್ರೀಮ್‌ ಕಮರ್ಷಿಯಲ್‌ ಸಿನಿಮಾದ ಗ್ರಾಮರ್‌ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ವಿತರಕರ ಮೂಲಕ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನಗೊಳ್ಳುವ ಸಾಂಪ್ರದಾಯಿಕ ವ್ಯವಸ್ಥೆಗೆ ಪರ್ಯಾಯವಾಗಿ OTT ಬೆಳೆಯುತ್ತಿರುವುದಕ್ಕೆ 2021 ಸಾಕ್ಷಿಯಾಯ್ತು. ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆದರೂ ಥಿಯೇಟರ್‌ನಲ್ಲಿ ದೊಡ್ಡ ಪರದೆ ಮೇಲೆ ಸಿನಿಮಾ ವೀಕ್ಷಿಸುವ ಅನುಭವವನ್ನು ಜನರು ಕಳೆದುಕೊಳ್ಳಲಾರರು ಎಂದು ಒಂದು ವರ್ಗ ನಂಬಿದೆ. ಈ ನಂಬಿಕೆಯೂ ಮುಂದಿನ ಕೆಲವು ದಿನಗಳಲ್ಲಿ ಕಳೆದುಹೋಗುವ ಸಾಧ್ಯತೆಗಳಿವೆ. ವಿಜಯ್‌ ಅವರಂತಹ ದೊಡ್ಡ ಸ್ಟಾರ್‌ ಹೀರೋ ನಟಿಸಿದ ‘ಮಾಸ್ಟರ್‌’ ಸಿನಿಮಾ ಥಿಯೇಟರ್‌ಗೆ ಬಂದ ಎರಡೇ ವಾರದಲ್ಲಿ ಓಟಿಟಿಗೆ ಹೋಗಿದ್ದು ಉದ್ಯಮಕ್ಕೆ ಅಚ್ಚರಿ ತಂದಿತ್ತು. ಈ ಬೆಳವಣಿಗೆಯಿಂದ ಸಿನಿಮಾ ವಿತರಕರು ಮತ್ತು ಪ್ರದರ್ಶಕರು ಎಚ್ಚೆತ್ತುಕೊಂಡಿದ್ದಾರೆ. ಅವರೀಗ ನಿರ್ಮಾಪಕರಿಂದ ಸಿನಿಮಾವೊಂದನ್ನು ಖರೀದಿಸುವ ಮುನ್ನ ಅವರ OTT ಸ್ಟ್ರ್ಯಾಟಜಿ ಕುರಿತಂತೆ ಪ್ರಶ್ನಿಸುವುದು ಕಡ್ಡಾಯವಾಗಿದೆ.

ಕೋವಿಡ್‌ ಎರಡನೇ ಅಲೆಯ ಭಯದಲ್ಲಿ ದೊಡ್ಡ ಸಿನಿಮಾಗಳ ನಿರ್ಮಾಪಕರು OTTಯನ್ನು ಆಯ್ಕೆ ಮಾಡಿಕೊಂಡಿದ್ದು ಸಹಜವಾಗಿಯೇ ವಿತರಕರಿಗೆ ಆತಂಕ ತಂದೊಡ್ಡಿತ್ತು. ಇದು ತಮಿಳು ಸಿನಿಮಾ ಮಾರ್ಕೆಟ್‌ನ ಡೈನಾಮಿಕ್ಸ್‌ ಅನ್ನೇ ಬದಲಾಯಿಸಿತು. ಈಗ ನಿರ್ಮಾಪಕರು ಮೇನ್‌ಸ್ಟ್ರೀಮ್‌ ಕಮರ್ಷಿಯಲ್‌ ಸಿನಿಮಾದ ಗ್ರಾಮರ್‌ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಮಾಡಿದಂತೆ ಅದೇ ಹಳೇ ಫಾರ್ಮುಲಾದೊಂದಿಗೆ ಸಿನಿಮಾ ಮಾಡಿದರೆ ಜನರು ಥಿಯೇಟರ್‌ಗೆ ಬರುವುದಿಲ್ಲ ಎನ್ನುವುದು ಅವರಿಗೆ ಮನವರಿಕೆಯಾಗಿದೆ. 2021ರಲ್ಲಿ ಬಹಳಷ್ಟು ಸಿನಿಮಾಗಳು ನೇರ ಓಟಿಟಿಯಲ್ಲಿ ಸ್ಟ್ರೀಮ್‌ ಆದರೆ ಕೆಲವು ಸಿನಿಮಾಗಳಷ್ಟೇ ಥಿಯೇಟರ್‌ಗಳಲ್ಲಿ ತೆರೆಕಂಡವು. ಎಂದಿನಂತೆ ಇವುಗಳಲ್ಲಿ ಉತ್ತಮ ಚಿತ್ರಗಳೂ ಇದ್ದವು, ಜೊಳ್ಳೂ ಇದ್ದವು.

ನಿರಾಸೆ ಮೂಡಿಸಿದ ಚಿತ್ರಗಳು : ಈ ವರ್ಷ ತೆರೆಕಂಡ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯ ಸಿನಿಮಾಗಳು ನಿರಾಸೆ ಮೂಡಿಸಿದವು. ಇವುಗಳ ಪೈಕಿ ದೊಡ್ಡ ಹೆಸರುಗಳ ಕೆಲವು ಚಿತ್ರಗಳನ್ನು ಪ್ರಮುಖವಾಗಿ ಹೆಸರಿಸಬಹುದು. ನಿರ್ದೇಶಕ ಸುಸೀಂದ್ರನ್‌ ಮತ್ತು ಸಿಂಬು ಜೋಡಿಯ ‘ಈಶ್ವರನ್‌’ ಈ ಪಟ್ಟಿಯಲ್ಲಿ ಹೆಸರಿಸಬಹುದಾದ ಒಂದು ಸಿನಿಮಾ. ಆಗಷ್ಟೇ ಜನರು ಕೋವಿಡ್‌ ಮೊದಲ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದರು. ತಿಂಗಳುಗಳ ಕಾಲ ಚಿತ್ರಮಂದಿರಗಳಿಂದ ದೂರವಿದ್ದ ಜನರನ್ನು ಸೆಳೆಯುವಲ್ಲಿ ಈ ಕಳಪೆ ಸಿನಿಮಾ ಸಂಪೂರ್ಣವಾಗಿ ವಿಫಲವಾಯ್ತು. ನೇರವಾಗಿ ಓಟಿಟಿಗೆ ಬಂದ ಜಯಂ ರವಿ ಅಭಿನಯದ ‘ಭೂಮಿ’ ಮತ್ತೊಂದು ಕೆಟ್ಟ ಸಿನಿಮಾ. ಸಾಕಷ್ಟು ಸುದ್ದಿ ಮಾಡುತ್ತಾ ಬಂದ ಸೈನ್ಸ್‌ – ಫಿಕ್ಷನ್‌ ಸಿನಿಮಾ ‘ದಿಕ್ಕಿಲೂನಾ’ ದಶಕಗಳ ಹಿಂದಿನ ನಿರೂಪಣೆಯೊಂದಿಗೆ ಜನರ ತಿರಸ್ಕಾರಕ್ಕೀಡಾಯ್ತು. ‘ಅರಣ್‌ಮನೈ 3’ ಚಿತ್ರದಲ್ಲಿ ನಿರ್ದೇಶಕ ಸುಂದರ್‌ ಸಿ. ಬೇಸರ ಮೂಡಿಸಿದರು.

ಗಮನ ಸೆಳೆದ ಪ್ರಯೋಗಗಳು : ಲೋಕೇಶ್‌ ಕನಗರಾಜ್‌ ನಿರ್ದೇಶನದ ‘ಮಾಸ್ಟರ್‌’ ಸಿನಿಮಾ ನಟ ವಿಜಯ್‌ರಿಗೆ ಬೇರೆಯದ್ದೇ ಇಮೇಜು ತಂದುಕೊಟ್ಟಿತು. ಇದು ವಿಜಯ್‌ರ ಎಂದಿನ ಮಸಾಲೆ ಸಿನಿಮಾಗಳಂತಿರಲಿಲ್ಲ. ಎರಡನೇ ಬಾರಿ ವೀಕ್ಷಿಸಿ ಖುಷಿ ಪಡಬಹುದಾದ ಗುಣವಿತ್ತು ಈ ಚಿತ್ರಕ್ಕೆ. ಖಳಪಾತ್ರದಲ್ಲಿ ವಿಜಯ್‌ ಸೇತುಪತಿಗೂ ಪ್ರಾಮುಖ್ಯತೆ ಕೊಟ್ಟಿದ್ದು, ಅವಸರದ ನಿರೂಪಣೆಯಿಲ್ಲದ ಸಮಾಧಾನವಾಗಿ ಕತೆ ಹೇಳುವ ಶೈಲಿ ವಿಜಯ್‌ ಸಿನಿಮಾಗೆ ವರವಾಯ್ತು. ಇನ್ನು ಮಾರಿ ಸೆಲ್ವರಾಜ್‌ ನಿರ್ದೇಶನದ ‘ಕರ್ಣನ್‌’ ಒಂದು ದೃಶ್ಯಕಾವ್ಯ. ಸೆಲ್ವರಾಜ್‌ರ ಹಿಂದಿನ ಸಿನಿಮಾ ‘ಪರಿಯೇರಮ್‌ ಪೆರುಮಾಳ್‌’ನಲ್ಲಿ ಹೀರೋ ಕಾಲೇಜು ಯುವಕ. ಅಹಿಂಸೆಯನ್ನು ಪ್ರತಿಪಾದಿಸುವ ಆತ ಎಲ್ಲಾ ಅಪಮಾನಗಳನ್ನು ಸಹನೆಯಿಂದ ಎದುರಿಸುತ್ತಾನೆ. ಆದರೆ ಕತ್ತಿ ಹಿಡಿದ ‘ಕರ್ಣನ್‌’ ಜಾತಿಯ ಮೇಲಾಟದಲ್ಲಿ ನಡೆಯುವ ತಾರತಮ್ಯವನ್ನು ಸಹಿಸುವುದಿಲ್ಲ. ಈ ಸಿನಿಮಾದಲ್ಲಿ ಧನುಷ್‌ ಅವರದ್ದು ಅಮೋಘ ನಟನೆ.

ಮಡೋನ್ನಾ ಅಶ್ವಿನ್‌ ನಿರ್ದೇಶನದ ‘ಮಂಡೇಲಾ’ ನಿಜವಾಗಿಯೂ ಅಚ್ಚರಿ. ಜಾತಿಯಿಂದ ಬೇರ್ಪಡಿಸಿರುವ ಪುಟ್ಟ ಗ್ರಾಮವೊಂದರ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕತೆ. ರಾಜಕೀಯದಲ್ಲಿ ಜಾತಿ ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೆಳುಹಾಸ್ಯದೊಂದಿಗೆ ಹೇಳುವ ಪ್ರಯತ್ನವಿದು. ನಟ ಯೋಗಿ ಬಾಬು ಅವರ ನೈಜ ಮತ್ತು ಪಾತ್ರೋಚಿತ ನಟನೆಯಿಂದ ಸಿನಿಮಾ ಗೆಲುವು ಸಾಧಿಸಿತು. ಇನ್ನು ಬಾಕ್ಸಿಂಗ್‌ ಸಿನಿಮಾಗಳ ಕುರಿತಾಗಿ ಪ್ರಸ್ತಾಪಿಸುವಾಗ ‘ಸರ್ಪಟ್ಟ ಪರಾಂಬರೈ’ ಕಾಲಿವುಡ್‌ನಲ್ಲೊಂದು ಬೆಂಚ್‌ಮಾರ್ಕ್‌ ಚಿತ್ರವಾಯ್ತು. ಇದು ಬಾಕ್ಸಿಂಗ್‌ ಬಗೆಗಷ್ಟೇ ಹೇಳಲಿಲ್ಲ, ಮರೆತೇ ಹೋಗಿದ್ದ ಚೆನ್ನೈನ ಬಾಕ್ಸಿಂಗ್‌ ಕಲ್ಚರ್‌ ನೆನಪು ಮಾಡಿತು. ನಿರ್ದೇಶಕ ಪಾ.ರಂಜಿತ್‌ ತಮ್ಮ ಹಿಂದಿನ ಚಿತ್ರಗಳಂತೆ ಇಲ್ಲಿ ಖಳರನ್ನು ಪ್ರತ್ಯೇಕವಾಗಿ ತೋರಿಸಲಿಲ್ಲ. ಜನಾಂಗದೊಳಗೇ ಕತ್ತಿ ಮಸಿಯುವ ಖೂಳರನ್ನು ಪರಿಚಯಿಸಿದರು. ಹೊಟ್ಟೆಕಿಚ್ಚು, ದುರಾಸೆ, ಅಭದ್ರತೆ, ಸ್ವಮರುಕದಂತಹ ಭಾವಗಳು ಕತೆಯೊಂದಿಗೆ ಬೆರೆತಿದ್ದವು.

ಮದರಾಸು ಹೈಕೋರ್ಟ್‌ಜಸ್ಟೀಸ್‌ಕೆ.ಚಂದ್ರು ಅವರ ವೃತ್ತಿ ಬದುಕಿನ ಪ್ರಕರಣವೊಂದನ್ನು ಆಧರಿಸಿ ಟಿ.ಜೆ.ಜ್ಞಾನವೇಲ್‌ನಿರ್ದೇಶಿಸಿದ ಸಿನಿಮಾ ಭಾರತದಾದ್ಯಂತ ಸದ್ದು ಮಾಡಿತು. ಸೂರ್ಯ ನಟಿಸಿ, ನಿರ್ಮಿಸಿದ್ದ ಸಿನಿಮಾ ಅಮೇಜಾನ್‌ಪ್ರೈಮ್‌ನಲ್ಲಿ ನೇರವಾಗಿ ಸ್ಟ್ರೀಮ್‌ಆಗಿತ್ತು. ಬುಡಕಟ್ಟು ಮಹಿಳೆ ಕಣ್ಮರೆಯಾದ ತನ್ನ ಪತಿಯನ್ನು ಹುಡುಕುವ ಹಾದಿ, ವ್ಯವಸ್ಥೆಯಲ್ಲಿನ ದೋಷಗಳನ್ನು ಚಿತ್ರದಲ್ಲಿ ಪ್ರಭಾವಶಾಲಿಯಾಗಿ ಹೇಳಲಾಗಿತ್ತು. ಆಕೆಗೆ ನೆರವಾಗುವ ಚಳವಳಿಕಾರ, ವಕೀಲನ ಪಾತ್ರದಲ್ಲಿ ನಟ ಸೂರ್ಯ ಗಮನ ಸೆಳೆದಿದ್ದರು. ನೆಲ್ಸನ್‌ದಿಲೀಪ್‌ಕುಮಾರ್‌ನಿರ್ದೇಶನದಲ್ಲಿ ಶಿವಕಾರ್ತಿಕೇಯನ್‌ನಟಿಸಿದ್ದ ಸಿನಿಮಾ ‘ಡಾಕ್ಟರ್‌’. ಮಾನವ ಕಳ್ಳಸಾಗಾಣಿಕೆಯ ಕಥಾವಸ್ತು. ಡಾರ್ಕ್‌ಕಾಮಿಡಿ ಜಾನರ್‌ನ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು.

ರಜನೀಕಾಂತ್‌ ಅಭಿನಯದ ‘ಅಣ್ಣಾತ್ತೆ’ ಮಿಶ್ರ ಪ್ರತಿಕ್ರಿಯೆ ಮಧ್ಯೆಯೂ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿತು. ಆಕರ್ಷಕ ತಾರಾಬಳಗದ ಸಿನಿಮಾ ಮೂಲಕ ರಜನಿ ತಮ್ಮ ಸೂಪರ್‌ಸ್ಟಾರ್‌ ಇಮೇಜನ್ನು ಮರಳಿ ಸ್ಥಾಪಿಸಿದರು. ಅರುಣ್‌ ಪ್ರಭು ಪುರುಷೋತ್ತಮ್‌ ನಿರ್ದೇಶನದ ರೋಡ್‌ ಮೂವಿ ‘ವಾಝಲ್‌’ ಕಾಲಿವುಡ್‌ನ ಮತ್ತೊಂದು ವಿಶ್ಯುಯಲ್‌ ಟ್ರೀಟ್.‌ ನಗರ ಬದುಕಿನ ತಲ್ಲಣಗಳನ್ನು ವಿಶಿಷ್ಟ ಶೈಲಿಯಲ್ಲಿ ಹೇಳಿದ್ದರು ನಿರ್ದೇಶಕ ಅರುಣ್‌ ಪ್ರಭು. ‘ಈಶ್ವರನ್‌’ ಚಿತ್ರದ ಸೋಲಿನ ಸುಳಿಯಲ್ಲಿದ್ದ ನಟ ಸಿಂಬು ‘ಮಾನಾಡು’ ಚಿತ್ರದೊಂದಿಗೆ ಯಶಸ್ಸಿಗೆ ಮರಳಿದರು. ಈ ಟೈಮ್‌ಲೂಪ್‌ ಸಿನಿಮಾದ ಆಕರ್ಷಕ ನಿರೂಪಣೆಯೊಂದಿಗೆ ನಿರ್ದೇಶಕ ವೆಂಕಟ್‌ ಪ್ರಭು ಅವರ ಪ್ರತಿಭೆ ಅನಾವರಣಗೊಂಡಿತು. ಕೋವಿಡ್‌ನಿಂದ ಬಸವಳಿದಿದ್ದ ಕಾಲಿವುಡ್‌ ಹಲವು ಗೆಲುವುಗಳ ಮೂಲಕ ಮತ್ತೆ ಚುರುಕಾಗಿದೆ. ಮುಖ್ಯವಾಗಿ OTT ವೇದಿಕೆ ಬಲಗೊಂಡಿದ್ದು, ಮುಂದಿನ ದಿನಗಳಲ್ಲಿ ಕಂಟೆಂಟ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಬದಲಾವಣೆಗಳನ್ನು ನೋಡಬಹುದು.

LEAVE A REPLY

Connect with

Please enter your comment!
Please enter your name here