ಅಮೇಜಾನ್ ಪ್ರೈಮ್ ಇಂದು ‘ಪುದಮ್ ಪುದು ಕಾಲೈ ವಿದಿಯಾಥ’ ತಮಿಳು ಆಂಥಾಲಜಿ ಸರಣಿಯ ಟ್ರೈಲರ್ ಬಿಡುಗಡೆಗೊಳಿಸಿದೆ. ಕಾಲಿವುಡ್ನ ಪ್ರತಿಭಾವಂತ ನಿರ್ದೇಶಕರ ಸಾರಥ್ಯದಲ್ಲಿ ಐದು ಕತೆಗಳು ಸಿದ್ಧವಾಗಿವೆ. ಜನವರಿ 14ರಿಂದ ಪ್ರೈಮ್ನಲ್ಲಿ ಸರಣಿ ಸ್ಟ್ರೀಮ್ ಆಗಲಿದೆ.
‘ಪುದಮ್ ಪುದು ಕಾಲೈ’ ಆಂಥಾಲಜಿ ಸರಣಿಯ ಸೆಕೆಂಡ್ ಇನ್ಸ್ಟಾಲ್ಮೆಂಟ್ ಆಗಿ ನೂತನ ಆಂಥಾಲಜಿ ಸರಣಿ ‘ಪುದಮ್ ಪುದು ಕಾಲೈ ವಿದಿಯಾಥ’ ಸಿದ್ಧವಾಗಿದ್ದು, ಟ್ರೈಲರ್ ಬಿಡುಗಡೆಯಾಗಿದೆ. ಲಾಕ್ಡೌನ್ನಿಂದ ಜನರು ಅನಿವಾರ್ಯವಾಗಿ ತಮ್ಮ ಹುಟ್ಟೂರಿಗೆ ತೆರಳಬೇಕಾದ ಸಂದರ್ಭ ಸೃಷ್ಟಿಯಾಗಿದ್ದು, ಊರಿಗೆ ತೆರಳಿದ ಅವರು ತಮ್ಮವರೊಂದಿಗೆ ಮರಳಿ ಸಂಬಂಧಗಳನ್ನು ಬೆಸೆದುಕೊಂಡ ಸನ್ನಿವೇಶಗಳೊಂದಿಗೆ ಐದು ಕತೆಗಳ ಸರಣಿ ಸಿದ್ಧವಾಗಿದೆ. ಪ್ರಾಣಹಾನಿ, ನಿರುದ್ಯೋಗ, ಆರ್ಥಿಕ ಹಿನ್ನೆಡೆಯ ಮಧ್ಯೆಯೂ ಬದುಕಿನ ಕುರಿತು ಸಕಾರಾತ್ಮಕ ಮನೋಭಾವ ತಳೆಯುವಂತಹ ಕತೆಗಳು ಟ್ರೈಲರ್ನಲ್ಲಿ ಕಾಣಿಸುತ್ತವೆ.
ಆಂಥಾಲಜಿಯಲ್ಲಿ ಐದು ಭಿನ್ನ ಕತೆಗಳಿವೆ. ಮೊದಲನೆಯದ್ದು ಬಾಲಾಜಿ ಮೋಹನ್ ನಿರ್ದೇಶನದ ‘ಮುಗಕವಾಸ ಮುದಂ’. ಗೌರಿ ಕಿಶನ್ ಮತ್ತು ಟಿ.ಜೆ.ಅರುಣಾಚಲಂ ಅಭಿನಯಿಸಿದ್ದಾರೆ. ಎರಡನೆಯ ಕತೆ ‘ಲೋನರ್ಸ್’. ಹಲಿತಾ ಶಮೀಮ್ ನಿರ್ದೇಶನದ ಕಿರುಚಿತ್ರದಲ್ಲಿ ‘ಜೈ ಭೀಮ್’ ಸಿನಿಮಾ ಖ್ಯಾತಿಯ ಲಿಜಮೋಲ್ ಜೋಸ್ ಮತ್ತು ಅರ್ಜುನ್ ದಾಸ್ ನಟಿಸಿದ್ದಾರೆ. ಮಧುಮಿತ ನಿರ್ದೇಶನದ ‘ಮೌನಮೇ ಪಾರ್ವಯೈ’ ಚಿತ್ರದಲ್ಲಿ ನಾಡಿಯಾ ಮೊಯಿದು ಮತ್ತು ಜೋಜು ಜಾರ್ಜ್ ಅಭಿನಯಿಸಿದ್ಧಾರೆ. ರಿಚರ್ಡ್ ಆಂಟೋನಿ ನಿರ್ದೇಶನದ ‘ನಿಝಾಲ್ ತುರಮ್ ಇಧಮ್’ನಲ್ಲಿ ಐಶ್ವರ್ಯ ಲಕ್ಷ್ಮಿ ಮತ್ತು ನಿರ್ಮಲ್ ಪಿಳ್ಳೈ ನಟಿಸಿದ್ದಾರೆ. ಸೂರ್ಯಕೃಷ್ಣ ನಿರ್ದೇಶನದ ‘ದಿ ಮಾಸ್ಕ್’ ಕಿರುಚಿತ್ರದಲ್ಲಿ ಸನಂತ್ ಮತ್ತು ದಿಲೀಪ್ ಸುಬ್ಬರಾಯನ್ ನಟಿಸಿದ್ದಾರೆ. 2022ರ ಜನವರಿ 14ರಿಂದ ಅಮೇಜಾನ್ ಪ್ರೈಮ್ನಲ್ಲಿ ‘ಪುದಮ್ ಪುದು ಕಾಲೈ ವಿದಿಯಾಥ’ ಸ್ಟ್ರೀಮ್ ಆಗಲಿದೆ.
	
		









