ಭಾರತೀಯ ಮಹಿಳಾ ಕ್ರಿಕೆಟ್ ಮಾಜಿ ಕ್ಯಾಪ್ಟನ್ ಝುಲನ್ ಗೋಸ್ವಾಮಿ ಬಯೋಪಿಕ್‌ನಲ್ಲಿ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ಸಿನಿಮಾ ತಯಾರಾಗುತ್ತಿದ್ದು, ಟೀಸರ್ ಬಿಡುಗಡೆಯಾಗಿದೆ.
ನಟಿ ಅನುಷ್ಕಾ ಶರ್ಮಾ ನಾಲ್ಕು ವರ್ಷಗಳ ನಂತರ ‘ಚಕ್ಡಾ ಎಕ್ಸ್‌ಪ್ರೆಸ್’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಮರಳಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್‌ನ ಮಾಜಿ ಕ್ಯಾಪ್ಟನ್ ಝುಲನ್ ಗೋಸ್ವಾಮಿ ಬಯೋಪಿಕ್ ಇದು. ನೆಟ್‌ಫ್ಲಿಕ್ಸ್ ನಿರ್ಮಿಸುತ್ತಿರುವ ಚಿತ್ರದಲ್ಲಿ ಅನುಷ್ಕಾ ಶರ್ಮಾ ಝುಲನ್ ಪಾತ್ರ ನಿರ್ವಹಿಸಲಿದ್ದಾರೆ. ಟೀಸರ್‌ನಲ್ಲಿ 2008ರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆಯ ಮ್ಯಾಚ್ ಕುರಿತು ಪ್ರಸ್ತಾಪವಾಗುತ್ತದೆ. “ಕ್ರಿಕೆಟ್ ಒಂದು ಧರ್ಮವೇ ಆಗಿದ್ದರೆ, ಪುರುಷ ಕ್ರಿಕೆಟಿಗರನ್ನಷ್ಟೇ ಆರಾಧಿಸಬೇಕೇಕೆ?” ಎಂದು ಟೀಸರ್ ಪ್ರಶ್ನೆ ಮಾಡುತ್ತದೆ. ಅಭಿಷೇಕ್ ಬ್ಯಾನರ್ಜಿ ಚಿತ್ರಕಥೆ ರಚಿಸಿದ್ದು ಪ್ರೋಸಿತ್ ರಾಯ್ ನಿರ್ದೇಶಿಸಲಿದ್ದಾರೆ. ಕ್ಲೀನ್ ಸ್ಟೇಟ್ ಫಿಲ್ಮ್ಸ್ ಸಿನಿಮಾ ನಿರ್ಮಿಸುತ್ತಿದೆ.
‘ಚಕ್ಡಾ ಎಕ್ಸ್‌ಪ್ರೆಸ್’ ಸಿನಿಮಾ ಕುರಿತು ಮಾತನಾಡುವ ಅನುಷ್ಕಾ, “ತ್ಯಾಗ, ಸ್ಫೂರ್ತಿಯ ಗುಣಗಳುಳ್ಳ ಈ ಸಿನಿಮಾ ವಿಶೇಷವಾದದ್ದು. ಝುಲನ್ ಗೋಸ್ವಾಮಿ ಅವರ ಬದುಕಿನ ಪ್ರೇರಣೆಯಿಂದ ತಯಾರಾಗುತ್ತಿರುವ ಸಿನಿಮಾ. ಭಾರತದ ಮಹಿಳಾ ಕ್ರಿಕೆಟ್ ಬೆಳೆದುಬಂದ ಹಾದಿಯನ್ನೊಮ್ಮೆ ತಿರುಗಿ ನೋಡುವ ಪ್ರಯತ್ನ. ಮಹಿಳೆಯರು ಆಟೋಟಗಳಲ್ಲಿ ಭಾಗವಹಿಸುವುದೇ ದುಸ್ತರವಾಗಿದ್ದ ದಿನಗಳಲ್ಲಿ ಭಾರತದ ಮಹಿಳಾ ಕ್ರಿಕೆಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾದ ಜರ್ನೀಯೇ ರೋಚಕವಾದದ್ದು. ಝುಲನ್ ಕ್ರಿಕೆಟ್ ಬದುಕಿನ ಚಿತ್ರಣ ಯುವ ಪೀಳಿಗೆಗೆ ಸ್ಫೂರ್ತಿಯಾಗಲಿದೆ. ಈ ಸಿನಿಮಾ ಅವರಿಗೆ ನಾವು ಸಲ್ಲಿಸುತ್ತಿರುವ ಗೌರವವೂ ಹೌದು” ಎನ್ನುತ್ತಾರೆ. ಶಾರುಖ್ ಖಾನ್ ಅಭಿನಯದ ‘ಜೀರೊ’, ಅನುಷ್ಕಾ ತೆರೆ ಮೇಲೆ ಕಾಣಿಸಿಕೊಂಡಿದ್ದ ಕೊನೆಯ ಸಿನಿಮಾ.