ವಿಶಿಷ್ಟ ಕತೆಗಳನ್ನೇ ಆಯ್ಕೆ ಮಾಡುವ ನಿರ್ದೇಶಕ ಪವನ್ ಕುಮಾರ್ ತಮ್ಮ ಮೊದಲ ವೆಬ್ ಸೀರೀಸ್ಗೆ ಆಯ್ಕೆ ಮಾಡಿರುವುದೂ ಅಂಥದ್ದೇ ಕತೆ. ಎಂಟು ಅಧ್ಯಾಯಗಳ ಈ ತೆಲುಗು ವೆಬ್ ಸರಣಿ ‘ಆಹಾ’ದಲ್ಲಿ ಸ್ಟ್ರೀಮ್ ಆಗುತ್ತಿದೆ.
ನೀವು ಬೆಳಗ್ಗೆ ಏಳುತ್ತೀರಿ, ನಿಮ್ಮ ಮುಂದಿರುವುದು ವಿಸ್ತಾರವಾದ ಒಂದು ದಿನ. ನಿತ್ಯ ಕರ್ಮ ಮುಗಿಸಿ ಕಾಯಕಕ್ಕೆ ಹೊರಡುತ್ತೀರಿ. ದಾರಿಯಲ್ಲಿ ಅದೇ ಟ್ರಾಫಿಕ್ಕು, ಏಕತಾನತೆ ಅಂದುಕೊಳ್ಳುತ್ತಿರುವಾಗಲೇ ನಿಮಗೊಂದು ವಿಶೇಷ ಗಮನಕ್ಕೆ ಬರುತ್ತದೆ. ನಿನ್ನೆಯೂ ಆ ಟ್ರಾಫಿಕ್ಕು ನಿಮ್ಮನ್ನು ಅದೇ ಜಾಗದಲ್ಲಿ ನಿಲ್ಲಿಸಿತ್ತು, ಅದೇ ವಾಹನದ ಹಿಂದೆ, ಪಕ್ಕದಲ್ಲೂ ನಿನ್ನೆಯಿದ್ದ ಅದೇ ಕಾರು, ಅದೇ ಅಂಗಿಯಲ್ಲಿ ಅದೇ ಡ್ರೈವರು! ಅಂದರೆ ನೀವು ಆ ದಿನವನ್ನು ಅದಾಗಲೇ ಬದುಕಿದ್ದೀರಿ. ಕೆಲವೊಮ್ಮೆ ಹೀಗಾಗುತ್ತದೆ, ಕನಸಲ್ಲಿ ಕಂಡದ್ದೇ ಕಣ್ಣೆದುರು ಬರುತ್ತದೆ ಅಂದುಕೊಂಡೇ ಆ ದಿನ ಕಳೆಯುತ್ತೀರಿ. ಆದರೆ ಮರುದಿನ ಮತ್ತದೇ ವರ್ತುಲ. ಅದೇ ದಿನವನ್ನು ಮರುದಿನವೂ ಮತ್ತೆ ಬದುಕುತ್ತಿದ್ದೀರಿ ಎಂಬ ಅರಿವಾದಾಗ ಏನಾಗಬಹುದು? ದಿಗಿಲು? ಆತಂಕ? ಕುತೂಹಲ?
ಅಂಥದ್ದೇ ದಿಗಿಲು, ಆತಂಕ ಮತ್ತು ಕುತೂಹಲದ ಅನುಭವ ಆಗಬೇಕಿದ್ದರೆ ತೆಲುಗು ವೆಬ್ ಸೀರೀಸ್ ‘ಕುಡಿ ಎಡಮೈತೆ’ (ಬಲ ಎಡವಾದರೆ) ನೋಡಬೇಕು. ರಾಮ್ ಮಾಧವ್ ಬರೆದ ಕತೆಯನ್ನು ‘ಯೂ ಟರ್ನ್’, ‘ಲೂಸಿಯಾ’ದಂಥ ವಿಶೇಷ ಸಿನಿಮಾಗಳನ್ನು ಕೊಟ್ಟ ಕನ್ನಡದ ನಿರ್ದೇಶಕ ಪವನ್ ಕುಮಾರ್ ‘ಆಹಾ’ ಒಟಿಟಿಗೆ ಎಂಟು ಅಧ್ಯಾಯಗಳ ಈ ವೆಬ್ ಸರಣಿ ಮಾಡಿದ್ದಾರೆ.
ರಿಪೀಟ್ ಎಂಬ ಫುಡ್ ಡೆಲಿವರಿ ಕಂಪೆನಿಗೆ ಕೆಲಸ ಮಾಡುವ ಆದಿ ಅವಕಾಶಗಳಿಗೆ ಹುಡುಕಾಡುತ್ತಿರುವ ನಟ. ನಾಟಕ, ಕಿರುಚಿತ್ರಗಳಲ್ಲಿ ಅಭಿನಯಿಸಿ ಅನುಭವ ಇರುವ ಆತ ಹೊಸ ಅವಕಾಶಗಳಿಗಾಗಿ ಹಾತೊರೆಯುತ್ತಿದ್ದಾನೆ. ಮತ್ತೊಂದೆಡೆ ದುರ್ಗಾ ಎಂಬ ಸರ್ಕಲ್ ಇನ್ಸ್ಪೆಕ್ಟರ್ ಮಕ್ಕಳ ಸರಣಿ ಅಪಹರಣ ಪ್ರಕರಣ ಭೇದಿಸುವ ಜವಾಬ್ದಾರಿ ಹೆಗಲಿಗೆ ಹಾಕಿಕೊಂಡಿದ್ದಾಳೆ. ನಾಲ್ಕು ವರ್ಷಗಳಿಗೊಮ್ಮೆ ಬರುವ ಫೆಬ್ರವರಿ 29 ಈ ಇಬ್ಬರನ್ನೂ ಟೈಮ್ ಲೂಪಿನ ಒಳಗೆ ಬಂಧಿಸುತ್ತದೆ. ಕೊಲೆಯೊಂದಕ್ಕೆ ಆದಿ ಸಾಕ್ಷಿಯಾದರೆ ಅಪಹರಣದ ದುರಂತ ಅಂತ್ಯವನ್ನು ದುರ್ಗಾ ನೋಡುವಂತಾಗುತ್ತದೆ. ಆದರೆ ಇಬ್ಬರೂ ಈಗಾಗಲೇ ಬದುಕಿದ ದಿನವನ್ನೇ ಮತ್ತೆ ಬದುಕುವ ಕಾರಣ ನಡೆಯುವ ಆ ಕೊಲೆ ತಪ್ಪಿಸಲು ಆದಿಗೆ ಅವಕಾಶವಿದೆ, ಅಪಹರಣ ಪ್ರಕರಣಕ್ಕೆ ಸುಖಾಂತ್ಯ ಕಾಣಿಸುವ ಅವಕಾಶ ದುರ್ಗಾ ಕೈಯಲ್ಲಿದೆ.
ತೀರಾ ಕಾಲ್ಪನಿಕವಾದ ಇಂಥ ಸಂಕೀರ್ಣ ಕತೆಯನ್ನು ಹಿಡಿದು ಹೊರಟಾಗ ತಾಳ ತಪ್ಪುವ ಅಪಾಯ ಹೆಚ್ಚು. ಒಂದೋ ಕತೆಯೇ ಪ್ರೇಕ್ಷಕನಿಗೆ ಹಾಸ್ಯಾಸ್ಪದ ಅನಿಸಬಹುದು, ಅಥವಾ ಅದದೇ ಸನ್ನಿವೇಶ ಬೋರು ಹೊಡೆಸಬಹುದು. ಈ ಎರಡು ಅಲಗಿನ ಕತ್ತಿಯನ್ನು ನಾಜೂಕಿನಿಂದ ನಿಭಾಯಿಸಿದ ಪವನ್ ಕುಮಾರ್ ತಮ್ಮ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಮತ್ತೆ ಮತ್ತೆ ಬರುವ ಏಕರೀತಿಯ ದೃಶ್ಯಗಳನ್ನು ಒಂದಕ್ಕಿಂತ ಮತ್ತೊಂದನ್ನು ಭಿನ್ನವಾಗಿಸಲು ಸೂಕ್ಷ್ಮ ಪರಿವರ್ತನೆ ಅಳವಡಿಸಿಕೊಂಡಿದ್ದಾರೆ. ಆರಂಭದ ಎರಡು ಎಪಿಸೋಡುಗಳಲ್ಲಿ ಪುನರಾವರ್ತನೆ ಎಂದನಿಸಿದರೂ ಕ್ರಮೇಣ ಆ ದೃಶ್ಯಗಳೇ ನಮ್ಮನ್ನು ವರ್ತುಲದೊಳಗೆ ಎಳೆದುಕೊಳ್ಳುತ್ತದೆ.
ಆದಿ ಮತ್ತು ದುರ್ಗಾ ಅನುಭವಿಸುವ ಆ ಸಮಯದ ವರ್ತುಲ ಅವರಿಬ್ಬರ ಭ್ರಮೆಯಲ್ಲ ಎಂದು ಸಾಬೀತುಪಡಿಸುವುದು ಭಿಕ್ಷುಕನ ಪಾತ್ರ. ಕೊನೆಯವರೆಗೆ ಒಂದೂ ಸಂಭಾಷಣೆಯಿರದ ಆ ಪಾತ್ರ ಅತ್ಯುತ್ತಮ ಸೃಷ್ಟಿ. ಎರಡು ಪಾತ್ರಗಳು ಒಂದೇ ದೃಶ್ಯದಲ್ಲಷ್ಟೇ ಎದುರು ಬದುರಾದಾಗಲೂ ಅವರಿಬ್ಬರ ನಡುವಿನ ಬಾಂಧವ್ಯವನ್ನು ಸಮರ್ಥವಾಗಿ ಬಿಂಬಿಸಬಹುದು ಎಂಬುದಕ್ಕೆ ಆದಿ ಮತ್ತು ಫಾರೂಕ್ ಬಾಯ್ ಬುತ್ತಿಯೂಟ ತಿನ್ನುವ ದೃಶ್ಯ ಸಾಕ್ಷಿ.
ಇದರ ಜತೆಜತೆಗೇ ಒಂಟಿ ಹೆಣ್ಣಿನ ಯಾತನೆ, ಒಂಟಿ ಪುರುಷನ ವೇದನೆಗಳ ಕಡೆಗೂ ಈ ಸರಣಿ ಬೆಳಕು ಹಾಯಿಸುತ್ತದೆ. ಆಧುನಿಕ ಜೀವನ ಶೈಲಿಯ ಪರಿಣಾಮ ಒದಗಿ ಬರುವ ಒಂಟಿತನ, ದಿಢೀರ್ ಪ್ರೇಮ ಪ್ರಸಂಗ, ಅದರ ಆಚೆಗಿರುವ ಕಾಣದ ಅಪಾಯಗಳನ್ನು ಟೈಮ್ ಲೂಪಿನ ನಡುವೆಯೇ ಪೋಣಿಸಿದ್ದು ಕತೆಗಾರನ ಕಲೆಗಾರಿಕೆ. ಮದುವೆಯಾಗದೇ ಧರಿಸಿದ ಗರ್ಭ ಹೆಣ್ಣಿಗೆ ತರಬಹುದಾದ ಆಘಾತವನ್ನು ಒಂದೆಡೆ ಚಿತ್ರಿಸಿದರೆ ಆಕಸ್ಮಿಕ ಬಸಿರೂ ತಾಯಿಯಾಗುವ ಆನಂದ ಚಿಗುರೊಡೆಸುತ್ತದೆ ಎಂಬುದನ್ನೂ ತೋರಿಸಿದೆ. ಇವೆಲ್ಲವುಗಳ ನಡುವೆ ಇರುವ ಮಗುವನ್ನು ಉಳಿಸಿಕೊಳ್ಳುವ ಕಷ್ಟ ಸರಣಿಯುದ್ದಕ್ಕೂ ಇದ್ದರೆ, ಮಗುವನ್ನು ಕಳೆದುಕೊಂಡವರ ಕಷ್ಟ ಅರ್ಧಕ್ಕೇ ಕಡಿತಗೊಳಿಸುವ ಒಂದೇ ಒಂದು ಫೋನ್ ಕರೆಯಲ್ಲಿ ಸೆರೆಯಾಗಿದೆ.
ಸರಣಿಯನ್ನು ಎಲ್ಲಾ ಕಡೆ ಸಮರ್ಥವಾಗಿ ನಡೆಸಿಕೊಂಡು ಹೋಗುವುದು ಅಭಿನಯ. ಆದಿ ಪಾತ್ರದಲ್ಲಿ ರಾಹುಲ್ ವಿಜಯ್ ನಟನೆಯಲ್ಲಿ ನೈಜತೆಯಿದೆ. ಪಾತ್ರದ ಆತಂಕ-ಧಾವಂತಗಳನ್ನು ಸಮರ್ಥವಾಗಿ ಮುಖದ ಮೇಲೆ ಹೊತ್ತಿದ್ದಾರೆ. ಒಂಟಿ ಹೆಣ್ಣಾಗಿ, ಅಮಲಿಗೆ ದಾಸಿಯಾಗಿ, ಪೊಲೀಸ್ ಅಧಿಕಾರಿಯಾಗಿ ಅಮಲಾ ಪೌಲ್ ನಟನೆ ಚೆನ್ನಾಗಿದೆ. ಒಂದು ಕಡೆಯಲ್ಲಿ ಅತಿಯಾದ ಮೇಕಪ್ನಿಂದ ದೃಶ್ಯ ಹಾಳು ಮಾಡಿದ್ದರ ಹೊರತು ಕೊರತೆಗಳಿಲ್ಲ. ಪಾಪದ ಪೇದೆ ಮೂರ್ತಿ ಪಾತ್ರಧಾರಿ ಸಿಲ್ವರ್ ಸುರೇಶ್ ಬಹುಕಾಲದಿಂದ ಖಾಕಿಯಲ್ಲೇ ಇದ್ದಂತೆ ಅನಿಸಿದರೆ ಅಪಹರಣಕಾರನಾಗಿ ರವಿ ಪ್ರಕಾಶ್ ಪ್ರಕಾಶಮಾನ. ಠಾಣೆಯಲ್ಲಿ ಬಂಧಿಯಾಗಿ ಪೆಟ್ಟು ತಿನ್ನುವ ಅಪರಾಧಿಯೂ ಕಳ್ಳನಂತೆಯೇ ಚೆನ್ನಾಗಿ ಅಭಿನಯಿಸಿದ್ದರೆ ಆ ಶ್ಲಾಘನೆಯ ಬಹುಪಾಲು ನಿರ್ದೇಶಕನಿಗೇ ಸಲ್ಲಬೇಕು. ಹೀಗಿದ್ದೂ ಸ್ವತಃ ಒಂದು ಪಾತ್ರ ನಿರ್ವಹಿಸಿರುವ ನಿರ್ದೇಶಕರು ಮೂಲ ವೃತ್ತಿಯ ಕಡೆಗೆ ಮಾತ್ರವೇ ಗಮನ ಹರಿಸಿದ್ದರೆ ಉತ್ತಮವಿತ್ತು.
ಒಂದೇ ಪರದೆಯನ್ನು ಎರಡು-ಮೂರಾಗಿಸುವ ಪವನ್ ಕುಮಾರ್ ಅಭ್ಯಾಸ ತೆಲುಗಿನಲ್ಲಿಯೂ ಮುಂದುವರಿದಿದೆ. ಹಿಂದಿನಂತೆಯೇ ಇಲ್ಲಿಯೂ ಆ ತಂತ್ರ ಪರಿಣಾಮಕಾರಿಯಾಗಿದೆ ಎನ್ನಬಹುದು. ಕನ್ನಡಿಗಳಿರುವ ದೃಶ್ಯಗಳು ಮತ್ತು ರಾತ್ರಿಯ ಸನ್ನಿವೇಶಗಳು ಯಾವುದೇ ಛಾಯಾಗ್ರಾಹಕನಿಗೆ ಸವಾಲು. ಅದ್ವೈತ ಗುರುಮೂರ್ತಿ ಅವುಗಳನ್ನಿಲ್ಲಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ದೃಶ್ಯಗಳ ಜತೆಗೆ ಹಿನ್ನೆಲೆಯಲ್ಲಿ ಸಂಗೀತವಿದೆ ಎಂಬುದೇ ತಿಳಿಯದಂತೆ ಮಿಳಿತವಾದ ನಾದ ನೀಡುವುದೇ ಹಿನ್ನೆಲೆ ಸಂಗೀತದ ಯಶಸ್ಸು. ಅದನ್ನಿಲ್ಲಿ ಸಾಧಿಸಿದವರು ಪವನ್ ಕುಮಾರ್ ತಂಡದ ಕನ್ನಡದ ಪ್ರತಿಭೆ ಪೂರ್ಣಚಂದ್ರ ತೇಜಸ್ವಿ.
ಕೂತೂಹಲಕಾರಿ ಘಟ್ಟದಲ್ಲಿ ನಿಲ್ಲುವ ‘ಕುಡಿ ಎಡಮೈತೆ’ ಸರಣಿಯ ಎರಡನೇ ಭಾಗ ಬರಲಿದೆ ಎಂಬ ಸೂಚನೆಯಷ್ಟೇ ಅಲ್ಲ, ಸಂದೇಶ ನೀಡಿಯೇ ಕೊನೆಯಾಗಿದೆ.