ಇತ್ತೀಚೆಗೆ ತರೆಕಂಡ ’83’ ಹಿಂದಿ ಸಿನಿಮಾದ ನಿರ್ಮಾಪಕರಲ್ಲೊಬ್ಬರಾಗಿದ್ದರು ನಟಿ ದೀಪಿಕಾ ಪಡುಕೋಣೆ. 1983ರ ವರ್ಲ್ಡ್ ಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ಯಶೋಗಾಥೆಯಿದು. ಇದೀಗ ದೀಪಿಕಾ ತಮ್ಮ ತಂದೆ, ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಬಯೋಪಿಕ್ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.
ಬಾಲಿವುಡ್ ನಟಿ, ನಿರ್ಮಾಪಕಿ ದೀಪಿಕಾ ಪಡುಕೋಣೆ ತಮ್ಮ ತಂದೆ, ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಅವರ ಬದುಕು – ಸಾಧನೆ ಆಧರಿಸಿದ ಬಯೋಪಿಕ್‌ಗೆ ಸಿದ್ಧತೆ ನಡೆಸಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಭಾರತದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ದಾಖಲಿಸಿದ ಆರಂಭದ ಅಥ್ಲೀಟ್‌ಗಳಲ್ಲಿ ಪ್ರಕಾಶ್ ಪಡುಕೋಣೆ ಒಬ್ಬರು. ಇತ್ತೀಚಿಗೆ ತೆರೆಕಂಡ ’83’ ಹಿಂದಿ ಚಿತ್ರದ ನಿರ್ಮಾಣದಲ್ಲಿ ದೀಪಿಕಾರ ಸಹಯೋಗವಿತ್ತು. 1983ರ ವಿಶ್ವ ಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ಯಶೋಗಾಥೆಯ ಈ ಸಿನಿಮಾದಲ್ಲಿ ಅವರ ಪತಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸ್ಪೋರ್ಟ್ಸ್ ಡ್ರಾಮಾ ಸ್ಫೂರ್ತಿಯಿಂದ ದೀಪಿಕಾ ಈಗ ತಂದೆಯ ಬಯೋಪಿಕ್ ತಯಾರಿಸಲು ಮುಂದಾಗಿದ್ದಾರೆ.
“1983ರಲ್ಲಿ ಭಾರತ ಕ್ರಿಕೆಟ್ ತಂಡ ವರ್ಲ್ಡ್ ಕಪ್ ಗೆಲ್ಲುವ ಮುನ್ನ 1981ರಲ್ಲೇ ಅಪ್ಪ ವರ್ಲ್ಡ್ ಚಾಂಪಿಯನ್ ಆಗಿದ್ದರು. ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ದಾಖಲಿಸಿದ್ದರು. ಈ ಸಾಧನೆಯ ಹಾದಿ ಸುಲಭವಾಗಿರಲಿಲ್ಲ. ಮದುವೆ ಹಾಲ್‌ನಲ್ಲಿ ಅವರು ಬ್ಯಾಡ್ಮಿಂಟನ್ ಪ್ರಾಕ್ಟೀಸ್ ಮಾಡುತ್ತಿದ್ದರಂತೆ. ತಮಗೆ ಎದುರಾದ ಅಡೆತಡೆಗಳನ್ನು ಅವರು ವರವನ್ನಾಗಿ ಮಾಡಿಕೊಂಡರು. ಇಂದಿನ ಅಥ್ಲೀಟ್‌ಗಳಿಗೆ ಸಿಗುತ್ತಿರುವಂತಹ ಅನುಕೂಲತೆಗಳು ಆಗ ಅವರಿಗೆ ಸಿಕ್ಕಿದ್ದರೆ, ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಿದ್ದರು” ಎಂದಿದ್ದಾರೆ ದೀಪಿಕಾ.
ಬಯೋಪಿಕ್ ಕುರಿತ ಕೆಲಸ ಇದೀಗಷ್ಟೇ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ ದೀಪಿಕಾ. ಇದೊಂದು ಸ್ಫೂರ್ತಿದಾಯಕ ಸಿನಿಮಾ ಆಗಲಿದ್ದು, ಯುವ ಪೀಳಿಗೆಗೆ ಪ್ರೇರಣೆ ನೀಡಲಿದೆ ಎಂದಿದ್ದಾರೆ. ಮೊನ್ನೆಯಷ್ಟೇ ಅವರು ಪ್ರಮುಖ ಪಾತ್ರದಲ್ಲಿರುವ ‘ಗೆಹ್ರಾಯಿಯಾ’ ಹಿಂದಿ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡಿದೆ. ಸಿದ್ದಾರ್ಥ್ ಚತುರ್ವೇದಿ, ಅನನ್ಯಾ ಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾಗೆ ವೀಕ್ಷಕರ ಮೆಚ್ಚುಗೆ ಸಿಕ್ಕಿದೆ. ಉಳಿದಂತೆ ಅವರ ನಾಲ್ಕು ಸಿನಿಮಾಗಳು ತೆರೆಗೆ ಸಿದ್ಧವಾಗುತ್ತಿವೆ. ಶಾರುಖ್ ಖಾನ್ ಜೊತೆ ‘ಪಠಾಣ್’, ಹೃತಿಕ್ ರೋಷನ್ ನಟನೆಯ ‘ಫೈಟರ್’, ಪ್ರಭಾಸ್ ಜೋಡಿಯಾಗಿ ‘ಪ್ರಾಜೆಕ್ಟ್ K’ ಮತ್ತು ಅಮಿತಾಭ್ ಜೊತೆಗಿನ ಸಿನಿಮಾ ಚಿತ್ರೀಕರಣದಲ್ಲಿವೆ. ಇಂಗ್ಲಿಷ್ ಸಿನಿಮಾ ‘ದಿ ಇಂಟರ್ನ್’ ಹಿಂದಿ ಅವರತರಣಿಕೆಯಲ್ಲಿ ದೀಪಿಕಾ ಅವರು ಸೀನಿಯರ್ ಬಚ್ಚನ್ ಜೊತೆ ನಟಿಸಲಿದ್ದಾರೆ.