ಯೌವನದ ಅಜಾಗರೂಕತೆಯ ಬದುಕಿನಿಂದಾಗಿ ಜೀವನ ಹೇಗೆಲ್ಲಾ ಹಳಿ ತಪ್ಪಬಹುದು ಎನ್ನುವುದನ್ನು ಉದಾಹರಿಸುತ್ತಾ ಕೊನೆಯಲ್ಲಿ ಎಲ್ಲದಕ್ಕೂ ಒಂದು ಅರ್ಥ ಕಲ್ಪಿಸಿರುವ ಪರಿ ಚೆನ್ನಾಗಿದೆ. ಶರತ್ ನಿರ್ದೇಶನದ ‘ವೇಯಿಲ್’ ಮಲಯಾಳಂ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ವೇಯಿಲ್.. ಅಂದರೆ ಸೂರ್ಯನ ಕಾಂತಿ. ಬೆಳಕನ್ನು ಉತ್ತಮ ಕತೆಗಾರಿಕೆಯೊಂದಿಗೆ ನಿರ್ದೇಶಕರು ಚಿತ್ರಕ್ಕೆ ಸೊಗಸಾಗಿ ಹೊಂದಿಸಿದ್ದಾರೆ. ಕಗ್ಗತ್ತಲು ಕವಿದಂತಹ ಒಂದು ಪಾತ್ರಕ್ಕೆ ಮತ್ತೊಂದು ಪಾತ್ರ ಸೂರ್ಯನ ಬೆಳಕಿನಂತೆ ಬಂದೊದಗುತ್ತದೆ. ಬೆಳಕನ್ನು ರೂಪಕದಂತೆ ಬಳಕೆ ಮಾಡಿರುವ ನಿರ್ದೇಶಕರ ಸೃಜನಶೀಲತೆ ಗಮನ ಸೆಳೆಯುತ್ತದೆ. ಜೀವನವನ್ನು ಒಂದು ಕವಿತೆಯಂತೆ ನೋಡುವ ಕವಿಹೃದಯಿಗಳಿಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ. ಮಧ್ಯಮವರ್ಗದ ಜನರಿಗೆ ಸರಳವಾಗಿ ಕನೆಕ್ಟ್ ಆಗುವಂಥ, ಒಟ್ಟಾರೆಯಾಗಿ ಯುವ ಸಮೂಹಕ್ಕೆ ಇದೊಂದು ರೀತಿ ಫೀಲ್ ಗುಡ್ ಸಿನಿಮಾ ಎನಿಸಬಹುದು.
ತುಂಬಾ ಹಳೆಯದಲ್ಲದ ಫೋಟೊವೊಂದನ್ನು ನೋಡುತ್ತಾ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುವ ಸಿದ್ದು ಮೇಲೆ ಚಿತ್ರಣಗೊಂಡಿರುವ ಸನ್ನಿವೇಶದೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ. ಓದಿನ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ಸಿದ್ದು, ತನ್ನ ಆಪ್ತ ಸ್ನೇಹಿತನೊಂದಿಗೆ ತಿರುಗುತ್ತಾ, ಅಜಾಗರೂಕ ವರ್ತನೆಯಿಂದಾಗಿ ಅಮ್ಮನಿಂದ ಸದಾ ಬಯ್ಯಿಸಿಕೊಳ್ಳುವುದು, ಮೃದು ಸ್ವಭಾವದ ಆತನ ಅಣ್ಣ, ಸುಳಿವಿಲ್ಲದೆ ಚಿಗುರುವ ಪ್ರೀತಿ, ಮನೆಯ ಪರಿಸ್ಥಿತಿಯಿಂದಾಗಿ ಆತನಿಗೆ ಎದುರಾಗುವ ಮಾನಸಿಕ ಒತ್ತಡ, ಸಮಾಜದಲ್ಲಿವ ಒಳಿತು – ಕೆಡುಕುಗಳು ಹೇಗೆ ಒಬ್ಬ ಸಾಮಾನ್ಯನ ಬದುಕಿಗೆ ಸುತ್ತಿಕೊಳ್ಳುತ್ತವೆ ಎನ್ನುವುದು ಕಥಾ ಹಂದರ.
ಮಧ್ಯಮವರ್ಗದ ಹರೆಯದ ಯುವಕರು ಈ ಸಿನಿಮಾಗೆ ಬಹುಬೇಗ ಕನೆಕ್ಟ್ ಆಗುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ ಅವರು ಬದುಕಲ್ಲಿ ಎಲ್ಲದಕ್ಕೂ ಹೆಣಗಾಡಬೇಕು ಚಟಗಳೇನೂ ಹುಟ್ಟುತ್ತಲೇ ಜೊತೆಯಾಗುವುದಿಲ್ಲ. ಒಳಿತು ಕೆಡಕು ಬಲ್ಲವರು ಅಷ್ಟು ಸುಲಭಕ್ಕೆ ಯಾವುದಕ್ಕೂ ದಾಸರಾಗುವುದಿಲ್ಲ, ಅಂತಹ ಹತ್ತಾರು ಸೂಕ್ಷ್ಮತೆ ಮತ್ತು ನೈಜತೆಗಳೊಂದಿಗೆ ಒಂದು ಮುಖ್ಯ ಪಾತ್ರ ಕಟ್ಟಿದ್ದಾರೆ ನಿರ್ದೇಶಕರು. ಹತ್ತಾರು ಕಷ್ಟದ ಪರಿಸ್ಥಿತಿಗಳನ್ನೆದುರಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಾ, ತಾಯಿಯ ನೆರಳಲ್ಲಿ ಬೆಳೆದ ಯುವಕನ ಜೀವನವನ್ನು ತೋರಿಸುತ್ತಾರೆ. ತಾಯಿ – ಮಗನ ಪ್ರೀತಿ ವಾತ್ಸಲ್ಯ, ಗೆಳೆತನದ ಬಾಂಧವ್ಯ. ಪರಿಶುದ್ದ ಪ್ರೀತಿ… ಎಲ್ಲವನ್ನೂ ಸಮರ್ಪಕವಾಗಿ ಹೆಣೆದಿದ್ದಾರೆ. ಸಾಲದೆಂಬಂತೆ ಮಾನವೀಯ ಮೌಲ್ಯ ಹಾಗೂ ರಾಜಕಾರಣದ ಎಳೆಯೂ ಚಿತ್ರದಲ್ಲಿದೆ.
ಯೌವನದ ಅಜಾಗರೂಕತೆಯ ಬದುಕಿನಿಂದಾಗಿ ಜೀವನ ಹೇಗೆಲ್ಲಾ ಹಳಿ ತಪ್ಪಬಹುದು ಎನ್ನುವುದನ್ನು ಉದಾಹರಿಸುತ್ತಾ ಕೊನೆಯಲ್ಲಿ ಎಲ್ಲದಕ್ಕೂ ಒಂದು ಅರ್ಥ ಕಲ್ಪಿಸಿರುವ ಪರಿ ಚೆನ್ನಾಗಿದೆ. ನಾಯಕನ ಅಣ್ಣ ಮತ್ತು ತಾಯಿ ಪಾತ್ರಗಳು ಕಾಡುತ್ತವೆ. ‘ಬಬಲ್ ಗಮ್ ಬ್ಯೂಟಿ’ಯಾಗಿ ಸೋನಾ ಒಲಿಕ್ಕಾಲ್ ಪಾತ್ರದ ಸ್ವಭಾವದಿಂದ ಹೃದಯ ಕದಿಯುತ್ತಾಳೆ. ಶಾಜ್ ಮೊಹಮ್ಮದ್ ಅವರ ಛಾಯಾಗ್ರಹಣ ಚಿತ್ರದ ನೈಜ ನಿರೂಪಣಾ ಶೈಲಿಗೆ ಪೂರಕವಾಗಿದೆ. ಚಿತ್ರದ ಹಿನ್ನೆಲೆ ಸಂಗೀತ ತನ್ನ ವಿಭಿನ್ನತೆಯಿಂದ ಇಷ್ಟವಾಗುತ್ತದೆ. RAP ಸಾಂಗ್ ಸೇರಿದಂದೆ ಆಲಾಪದಿಂದ ಶುರುವಾಗುವ ಮತ್ತೊಂದು ಹಾಡು ಕೂಡ ಇಷ್ಟವಾಗುತ್ತದೆ. ಚಿತ್ರದುದ್ದಕ್ಕೂ ವಾಹ್ ಎನ್ನುವಂತಹ ಸಂಭಾಷಣೆಗಳಿವೆ.