ಮಮ್ಮೂಟಿ ಚಿತ್ರ ಜೀವನದ ಒಂದು ಮೈಲಿಗಲ್ಲು ಈ 'ಭ್ರಮಯುಗಂ' - Kannadamojo360

ಕಪ್ಪು ಬಿಳುಪಾಗಿದ್ದರೂ ಚಿತ್ರ ಶ್ರೀಮಂತವಾಗಿ ಮೂಡಿಬಂದಿದೆ. ಕಾಡಿನ ಆ ಅಗಾಧತೆ, ದಟ್ಟತೆ, ಮಹಲಿನ ನಿಗೂಢತೆ ಬಣ್ಣದಲ್ಲಿ ಹೇಗೆ ಕಾಣಬಹುದು ಎಂಬ ಕುತೂಹಲ ಮೂಡುತ್ತದೆಯಾದರೂ, ಚಿತ್ರವನ್ನು ಬಣ್ಣದಲ್ಲಿ ಕಲ್ಪಿಸುವುದೂ ಕಷ್ಟವಾಗುವಷ್ಟು ತೆರೆಯ ಮೇಲಿನ ಮೋನಕ್ರೋಮಿನ ಲೋಕಕ್ಕೆ ಒಗ್ಗಿ ಹೋಗಿರುತ್ತೇವೆ. ಅದ್ಭುತ ಮೇಕಿಂಗ್‌ನಿಂದಾಗಿ ಗಮನಸಳೆಯುವ ‘ಭ್ರಮಯುಗಂ’ನ ಪೂರ್ಣ ಅನುಭವ ಪಡೆಯಬೇಕೆಂದರೆ ದೊಡ್ಡ ತೆರೆಯ ಮೇಲೆ ನೋಡುವುದೇ ಉತ್ತಮ.

ಹಾರರ್ ಕತೆ, ಕಾದಂಬರಿಗಳನ್ನು ಓದುತ್ತಾ ಬೆಳೆದವರಿಗೆ ಕೇರಳದ ಮಂತ್ರ – ತಂತ್ರ, ವಾಮಾಚಾರ, ಕುಟ್ಟಿಚಾತನ್ ಕತೆಗಳು ಅಪರಿಚಿತವೇನಲ್ಲ. ಹಾಗೆಯೇ, ಭಾರತದ ಮೊದಲ ತ್ರೀಡಿ ಸಿನಿಮಾ ಮಲಯಾಳಂನ ‘ಮೈ ಡಿಯರ್ ಕುಟ್ಟಿಚಾತನ್’ ಹೆಸರನ್ನು ಬಹುತೇಕ ಎಲ್ಲರೂ ಕೇಳಿಯೇ ಇರುತ್ತಾರೆ. ಭೂತವೊಂದಕ್ಕೆ ಮಕ್ಕಳ ಮುಗ್ದತೆಯನ್ನು ನೀಡಿ ಮನರಂಜಿಸಿದ್ದ ಈ ಜನಪ್ರಿಯ ಸಿನಿಮಾ, ಕೇರಳದ ಈ ಚಿರಪರಿಚಿತ ದೈವದ ಸ್ವರೂಪವನ್ನೇ ಬದಲಿಸಿತ್ತು. ಕೇರಳದಲ್ಲಿ ಇಂತಹ ಅತಿಮಾನಷ ಶಕ್ತಿಗಳು, ಅವುಗಳನ್ನು ಆಳುವ, ನಿಯಂತ್ರಿಸುವ ಮಾಂತ್ರಿಕರು, ಅವರಿಗೆ ಗೊತ್ತಿರುವ ವಿವಿಧ ತಂತ್ರ ವಿದ್ಯೆಗಳು, ಮಾಯ ಮಂತ್ರಗಳು, ಇವುಗಳ ಸುತ್ತ ದೊಡ್ಡ ಜನಪದ ಲೋಕವೇ ಬೆಳೆದು ನಿಂತಿದೆ. ಐತಿಯಮಾಲ ಎಂಬುದು ಇಂತಹ ದಂತಕತೆಗಳನ್ನು ಒಳಗೊಂಡಿರುವ ಸಂಗ್ರಹಿತ ಗ್ರಂಥ. ಈ ಪುಸ್ತಕದ ಕತೆಯೊಂದನ್ನು ಆಧರಿಸಿ ತೆರೆಯ ಮೇಲೆ ವಿಶಿಷ್ಟ ಲೋಕವೊಂದನ್ನು ಸೃಷ್ಟಿಸಿರುವ ಸಿನಿಮಾ ‘ಭ್ರಮಯುಗಂ’.

ನಿರ್ದೇಶಕ ರಾಹುಲ್ ಸದಾಶಿವನ್ ಅವರ ಹಿಂದಿನ ಚಿತ್ರ ‘ಭೂತಕಾಲಂ’ ನೋಡಿದ್ದವರಿಗೆ ಅವರ ಪ್ರತಿಭೆಯ ಅರಿವಿರುತ್ತದೆ. ಈಗ ಮತ್ತೆ ಹಾರರ್ ಪ್ರಕಾರವನ್ನೇ ರಾಹುಲ್ ಆಯ್ದುಕೊಂಡಿದ್ದರೂ, ಈ ಸಿನಿಮಾದ ಸ್ವರೂಪ ಮತ್ತು ನೋಟ ಪೂರ್ತಿಯಾಗಿ ಬೇರೆಯಾಗಿದೆ. ‘ಭ್ರಮಯುಗಂ’ ಸಿನಿಮಾದ ಕಾಲಘಟ್ಟ 17ನೇ ಶತಮಾನ. ಯಾರಿಂದಲೋ ತಪ್ಪಿಸಿಕೊಳ್ಳಲು ಹೋಗಿ, ಕಾಡುಪಾಲಾಗಿರುವ ತೇವನ್ (ಅರ್ಜುನ್ ಅಶೋಕನ್) ರಾಜನ ಆಸ್ಥಾನದಲ್ಲಿ ಹಾಡುವ ಜನಪದ ಗಾಯಕ. ಕಾಡಿನಲ್ಲಿ ಹಾದಿ ತಪ್ಪಿ ಅಲೆಯುತ್ತಿರುವ ತೇವನ್‌ಗೆ ಪಾಳುಬಿದ್ದ ಅರಮನೆಯಂತಹ ಮಹಲು ಕಣ್ಣಿಗೆ ಬೀಳುತ್ತದೆ. ಅಂತಹ ದೊಡ್ಡ ಮಹಲಿನಲ್ಲಿರುವುದು ಯಜಮಾನ ಕೊಡುಮೋನ್ ಪೊಟ್ಟಿ (ಮಮ್ಮುಟ್ಟಿ) ಮತ್ತು ಆತನ ಅಡುಗೆಯಾತ (ಸಿದ್ಧಾರ್ಥ್ ಭರತನ್) ಮಾತ್ರ.

ನಿಗೂಢ ಕಾಡಿನಿಂದ ರಕ್ಷಣೆ ಪಡೆದು, ಹೊಟ್ಟೆ ತುಂಬ ಉಂಡು, ಸ್ವಲ್ಪ ವಿಶ್ರಾಂತಿ ಪಡೆದು ತನ್ನ ಪ್ರಯಾಣ ಮುಂದುವರಿಸಲು ಯೋಚಿಸಿ ಒಳಹೊಕ್ಕ ತೇವನ್‌ ನೋಡುವ, ಕೇಳುವ, ಅನುಭವಿಸುವ ಸಂಗತಿಗಳು, ಎದುರಿಸುವ ಪರಿಸ್ಥಿತಿಗಳು ಭ್ರಮಯುಗಂ – ದಿ ಏಜ್ ಆಫ್ ಮ್ಯಾಡ್‌ನೆಸ್‌ನ ಕಥಾ ಹಂದರ. ಸಿನಿಮಾದ ಒಟ್ಟು ಗತಿ ನಿಧಾನವಾಗಿದೆ. ಕತೆಗಿಂತ ಮುಖ್ಯವಾಗಿ ಈ ಸಿನಿಮಾ ಒಂದು ಅನುಭವವಾಗಿ ದಾಖಲಾಗುವಂಥದ್ದು. ತುಂಬಾ ರೋಚಕವಾಗಿ ಆರಂಭವಾಗುವ ಸಿನಿಮಾ ಮಹಲಿನೊಳಗಿನ ಅಗಾಧತೆಯಲ್ಲಿ ಮತ್ತು ಕತ್ತಲಲ್ಲಿ ತಡವರಿಸುತ್ತದೆ. ಆ ಪಾಳು ಮನೆಯಲ್ಲಿ ಕಾಲ ನಿಂತುಬಿಟ್ಟಂತೆ, ಪ್ರೇಕ್ಷಕರ ಮನಸ್ಸಿನಲ್ಲೂ ಕಾಲ ಸ್ಥಗಿತಗೊಂಡಂತೆ ಕಾಣುತ್ತದೆ. ಕಾಲವನ್ನು ಕೊಲ್ಲಲು ತೆರೆಯ ಮೇಲೆ ಕೊಡುಮೊನ್ ಮತ್ತು ತೇವನ್ ಪಗಡೆಯಾಡುತ್ತಾರೆ. ಪ್ರೇಕ್ಷಕರು ಬೇಸರ ನೀಗಲು ಕತೆ ಮುಂದುವರೆಯುವುದಕ್ಕಾಗಿ ಕಾಯುತ್ತಾರೆ. ದ್ವಿತಿಯಾರ್ಧದಲ್ಲಿ ಮತ್ತೆ ಚುರುಕಾಗುವ ಕತೆ, ರೋಚಕ ಕ್ಲೈಮ್ಯಾಕ್ಸ್‌ನೊಂದಿಗೆ ಕೊನೆಗೊಳ್ಳುತ್ತದೆ.

‘ಭ್ರಮಯುಗಂ’ನಲ್ಲಿರುವುದು ಮೇಲಿನ ಮೂರು ಮುಖ್ಯ ಪಾತ್ರಗಳು ಮಾತ್ರ. ಇನ್ನೆರಡು ಪಾತ್ರಗಳು ಕೇವಲ 5 ನಿಮಿಷಗಳ ಕಾಲ ಬಂದು ಹೋಗುತ್ತವಷ್ಟೆ. ಆದರೆ, ಇವರ ಜೊತೆಗೆ ಆ ಪಾಳು ಅರಮನೆ ಮತ್ತು ದಟ್ಟ ಕಾಡು ಕೂಡ, ಚಿತ್ರದ ಪಾತ್ರವೇ ಆಗಿಬಿಡುತ್ತವೆ. ಇಡೀ ಚಿತ್ರ ಕಪ್ಪು ಬಿಳುಪಿನಲ್ಲಿದೆ. 17ನೇ ಶತಮಾನದ ಕತೆ ಎಂಬುದಕ್ಕೆ, ಹಾರರ್ ಅಂಶಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಮತ್ತು ಕಲಾತ್ಮಕ ಕಾರಣಗಳಿಗಾಗಿ ನಿರ್ದೇಶಕರು ಈ ನಿರ್ಧಾರಕ್ಕೆ ಬಂದಿರಬಹುದು. ಕಪ್ಪು ಬಿಳುಪಾಗಿದ್ದರೂ, ಚಿತ್ರ ಶ್ರೀಮಂತವಾಗಿ ಮೂಡಿಬಂದಿದೆ. ಫ್ರೇಮ್‌ಗಳು, ಕೋನಗಳಿಂದ ಕೂಡಿದ ಶೆಹನಾದ್ ಜಲಾಲ್ ಅವರ ಅದ್ಭುತ ಸಿನಿಮಟೋಗ್ರಫಿ, ನಿರ್ದೇಶಕರ ಕಪ್ಪು ಬಿಳುಪು ಪ್ರಯೋಗವನ್ನು ಯಶಸ್ವಿಯಾಗಿಸಿದೆ. ಕಾಡಿನ ಆ ಅಗಾಧತೆ, ದಟ್ಟತೆ, ಮಹಲಿನ ನಿಗೂಢತೆ ಬಣ್ಣದಲ್ಲಿ ಹೇಗೆ ಕಾಣಬಹುದು ಎಂಬ ಕುತೂಹಲ ಮೂಡುತ್ತದೆಯಾದರೂ, ಚಿತ್ರವನ್ನು ಬಣ್ಣದಲ್ಲಿ ಕಲ್ಪಿಸುವುದೂ ಕಷ್ಟವಾಗುವಷ್ಟು ತೆರೆಯ ಮೇಲಿನ ಮೋನಕ್ರೋಮಿನ ಲೋಕಕ್ಕೆ ಒಗ್ಗಿ ಹೋಗಿರುತ್ತೇವೆ.

ಚಿತ್ರದ ಮತ್ತೊಂದು ಅಮೋಘ ಅಂಶ ಅದರ ಹಿನ್ನಲೆ ಸಂಗೀತ. ಕ್ರಿಸ್ಟೋ ಕ್ಸೇವಿಯರ್ ಸಂಗೀತ ಚಿತ್ರವನ್ನು ಮತ್ತೊಂದು ಹಂತ ಮೇಲೇರಿಸಿದೆ. ದನಿಯಷ್ಟೇ ಪರಿಣಾಮಕಾರಿಯಾಗಿ ಅವರು ನಿಶ್ಯಬ್ಧವನ್ನೂ ಬಳಸಿಕೊಂಡಿದ್ದಾರೆ. ಶಬ್ಧ ಮತ್ತು ನಿಶ್ಯಬ್ಧಗಳ ಒಟ್ಟು ಪರಿಣಾಮ ಭಯ ಹುಟ್ಟಿಸುವ ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಚಿತ್ರದ ರೋಚಕತೆಯನ್ನು ಹೆಚ್ಚಿಸುತ್ತದೆ. ತಮ್ಮ ಹಿಂದಿನ ‘ಭೂತಕಾಲಂ’ ಚಿತ್ರದಲ್ಲಿ ಪ್ರೇಕ್ಷಕರನ್ನು ಹೆದರಿಸಲು ಹಾರರ್ ಸಿನಿಮಾಗಳು ಧಾರಾಳವಾಗಿ ಬಳಸುವ ಯಾವುದೇ ತಂತ್ರಗಳ ಮೊರೆ ಹೋಗದೇ ವಿಶಿಷ್ಟತೆ ಕಾಪಾಡಿಕೊಂಡಿದ್ದ ರಾಹುಲ್ ಇದರಲ್ಲೂ ಜಂಪ್ ಸ್ಕೇರ್‌ಗಳನ್ನು ಬಳಸಿಲ್ಲ. ಆದರೆ, ಉಳಿದ ಅಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅನನ್ಯತೆ ಕಾಯ್ದುಕೊಂಡಿದ್ದಾರೆ.

ಚಿತ್ರದ ನಾಯಕ ತೇವನ್. ಸಿನಿಮಾ ಆತನ ಪಾತ್ರದೊಂದಿಗೆ ಆರಂಭವಾಗಿ ಆತನ ಪಾತ್ರದೊಂದಿಗೆ ಕೊನೆಗೊಳ್ಳುತ್ತದೆ. ಅರ್ಜುನ್ ಅಶೋಕನ್ ಈ ಪಾತ್ರದಲ್ಲಿ ಅದರ ಎಲ್ಲಾ ಸಂಕೀರ್ಣತೆಗಳನ್ನು ಅರಿತು, ಅತ್ಯುತ್ತಮವಾಗಿ ನಟಿಸಿದ್ದಾರೆ. ಪಾತ್ರದಲ್ಲಿ ಆಗುತ್ತಾ ಹೋಗುವ ಬದಲಾವಣೆಗಳನ್ನು ಚೆನ್ನಾಗಿ ಬಿಂಬಿಸಿದ್ದಾರೆ. ಅಡುಗೆಯಾತನ ಪಾತ್ರದಲ್ಲಿ ಸಿದ್ಧಾರ್ಥ್ ಭರತನ್ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಆದರೆ, ನಿರೀಕ್ಷಿಸಿದಂತೆ ಮಮ್ಮೂಟಿ ವಿಶಿಷ್ಟವಾದ ಪಾತ್ರದ ಮೂಲಕ ತಮ್ಮ ವೃತ್ತಿ ಜೀವನಕ್ಕೆ ಮೈಲುಗಲ್ಲಾಗಬಹುದಾದಂತಹ ಅಭಿನಯ ನೀಡಿದ್ದಾರೆ. ಅವರ ನಟನೆ ಮೊದಲಿಗೆ ‘ವಿಧೇಯನ್’ ಚಿತ್ರದ ಭಾಸ್ಕರ್ ಪಟೇಲರ ಪಾತ್ರವನ್ನು ನೆನಪಿಸಿದರೂ, ನಂತರ ಬೇರೆಯದೇ ಮಟ್ಟಕ್ಕೆ ಏರುತ್ತದೆ. ಭೀತಿ ಹುಟ್ಟಿಸುವ ಮುಖ ಭಾವ, ಭಯ ಮೂಡಿಸುವ ನಗು, ಆಳವಾದ ದ್ವನಿ ಮತ್ತು ಕೆಲವು ವಿಶಿಷ್ಟ ಚರ್ಯೆಗಳ ಮೂಲಕ ಈ ಪಾತ್ರವನ್ನು ಅವರು ಸ್ಮರಣೀಯವಾಗಿಸಿದ್ದಾರೆ. ಮಮ್ಮೂಟಿ ತೆರೆ ಮೇಲೆ ಇಲ್ಲದಾಗಲೂ ಅವರ ಇರುವಿಕೆ ಎದ್ದು ಕಾಣುತ್ತದೆ. ಚಿತ್ರದಲ್ಲಿ ಕಾಣುವ ಚಾತನ್ ಮತ್ತು ಯಕ್ಷಿಗಿಂತ ಭಯ ಹುಟ್ಟಿಸುವುದು ಮಮ್ಮೂಟಿ ನಗು ಮತ್ತು ದನಿ. ಅವರು ತೆರೆಯ ಮೇಲೆ ಕಾಣಿಸಿಕೊಳ್ಳುವ ಮೊದಲೇ ಕೇಳಿಬರುವ ಅವರ ಧ್ವನಿಯೇ ಪಾತ್ರಕ್ಕೆ ಸಾಕಷ್ಟು ಹೈಪ್ ಕೊಟ್ಟಿರುತ್ತದೆ. ಅಲ್ಲಲ್ಲಿ ಸೋಲುವ ಚಿತ್ರಕತೆಯನ್ನು ಎತ್ತಿ ನಿಲ್ಲಿಸುವುದು ಮಮ್ಮೂಟಿ ಅಭಿನಯ, ಸಿನಿಮಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ.

‘ಭ್ರಮಯುಗಂ’ ಅಲ್ಲಲ್ಲಿ ಮರಾಠಿ ಚಿತ್ರ ‘ತುಂಬಡ್’ ಅನ್ನು ನೆನಪಿಸುತ್ತದೆ. ಎರಡೂ ಚಿತ್ರಗಳು ಶತಮಾನಗಳ ಹಿಂದೆ ನಡೆಯುವ ಜನಪದ ಶೈಲಿಯ ಫ್ಯಾಂಟಸಿ ಹಾರರ್ ಕತೆಗಳು. ಎರಡೂ ಚಿತ್ರಗಳು ಹಾರರ್ ಮೂಲಕ ದೊಡ್ಡ ಸತ್ಯವನ್ನು ಹೇಳಲು ಯತ್ನಿಸುತ್ತವೆ. ‘ತುಂಬಡ್’ ದುರಾಸೆಯ ಕತೆಯನ್ನು ಅತ್ಯದ್ಭುತವಾಗಿ ತೆರೆಯ ಮೇಲೆ ಮೂಡಿಸಿತ್ತು. ‘ಭ್ರಮಯುಗಂ’ ಶೋಷಣೆಯ ಬಗ್ಗೆ ಮಾತನಾಡುತ್ತದೆ. ಹಾರರ್ ಸಿನಿಮವಾಗಿದ್ದೂ, ಚಿತ್ರ ಮಾಡುವ ರಾಜಕೀಯ ಹೇಳಿಕೆಗಳು ಪ್ರಖರವಾಗಿವೆ. ಅಧಿಕಾರದ ಮೋಹ ಮತ್ತು ಅಧಿಕಾರದೊಂದಿಗೆ ಬದಲಾಗುವ ಮನಸ್ಥಿತಿ ಮತ್ತು ಶೋಷಣೆಯ ನಿರಂತರತೆಯನ್ನು ಸಿನಿಮಾ ಹೇಳುತ್ತದೆ. ಈ ಕಾರಣಕ್ಕಾಗಿಯೇ ಚಿತ್ರ ಶತಮಾನಗಳ ಹಿಂದಿನ ಕೇರಳದಲ್ಲಿದ್ದ ದಾಸ್ಯ, ಯಜಮಾನಿಕೆಯ ಪಾತ್ರಗಳನ್ನು ತರುತ್ತದೆ. ಜೀತದಿಂದ ತಪ್ಪಿಸಿಕೊಂಡು ಓಡಿ ಬರುವ ತೇವನ್ ಕೆಳಜಾತಿಯವ, ಮಹಲಿನೊಳಗೆ ಕಾಲಿಡಲು ಹಿಂಜರಿಯುತ್ತಾನೆ. ಹುಟ್ಟಿನಿಂದ ಬರುವುದಲ್ಲ ಜಾತಿ ಎಂದು ಹೇಳಿ ಒಳಗೆ ಕರೆದುಕೊಳ್ಳುವ ಯಜಮಾನ ಕೊಡುಮೋನ್, ನಂತರ ಅವನನ್ನು, ಅವನ ಸಂಗೀತವನ್ನೂ ಬಂಧಿಸುತ್ತಾನೆ.

ಕೊಡುಮೋನ್ ಅಡುಗೆಯಾತ, ತಾನೇ ಯಜಮಾನನಾಗಲು ಬಯಸಿದಾಗ ತೇವನ್ ಅವನನ್ನು ತಡೆಯುತ್ತಾನೆ. ಅಧಿಕಾರದ ಮೋಹ ಬಿಡು. ಇದರಿಂದಲೇ ನಮ್ಮಂತಹ ಒಂದು ವರ್ಗ ಸದಾ ಶೋಷಣೆಗೆ ಒಳಗಾಗುತ್ತಲೇ ಇರುತ್ತೇವೆ ಎನ್ನುತ್ತಾನೆ. ವಿಪರ್ಯಾಸವೆಂಬಂತೆ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳ ಬಂದವನು, ದಬ್ಬಾಳಿಕೆಯ ಮುಖವಾಗುತ್ತಾನೆ. ಚಿತ್ರದ ಕೊನೆಯಲ್ಲಿ ಕಾಡಿಗೆ ಕಾಲಿಡುವ ಪೋರ್ಚ್‌ಗೀಸ್ ಸೈನ್ಯ, ಭಾರತ ಮುಂದೆ ಕಂಡ ಶೋಷಣೆಯ ಹೊಸ ಶಕೆಯನ್ನು ಪ್ರತಿಬಿಂಬಿಸುತ್ತದೆ. ಕೊನೆಗೂ ಶೋಷಕರು ಬದಲಾಗುತ್ತಾರಷ್ಟೇ, ಶೋಷಣೆ ನಿಲ್ಲುವುದಿಲ್ಲ. ಅದ್ಭುತ ಮೇಕಿಂಗ್‌ನಿಂದಾಗಿ ಗಮನಸಳೆಯುವ ‘ಭ್ರಮಯುಗಂ’ನ ಪೂರ್ಣ ಅನುಭವ ಪಡೆಯಬೇಕೆಂದರೆ ದೊಡ್ಡ ತೆರೆಯ ಮೇಲೆ ನೋಡುವುದೇ ಉತ್ತಮ.

LEAVE A REPLY

Connect with

Please enter your comment!
Please enter your name here