ಮಲಯಾಳಂ ಸಿನಿಮಾದ ಮೇರು ನಟರಾದ ಮೋಹನ್ ಲಾಲ್- ಶ್ರೀನಿವಾಸನ್ ಅವರ ಸಿನಿಮಾ ನೋಡಿ ಬೆಳೆದವರಿಗೆ ಇದೊಂದು ನಾಸ್ಟಾಲ್ಜಿಯಾ. ಇಲ್ಲಿ ಮೋಹನ್ ಲಾಲ್ ಮಗ ಪ್ರಣವ್- ಶ್ರೀನಿವಾಸನ್ ಮಗ ಧ್ಯಾನ್ ಇದ್ದಾರೆ. ವಿನೀತ್ ಶ್ರೀನಿವಾಸನ್ ರಚನೆ, ನಿರ್ದೇಶನದ ‘ವರ್ಷಂಙಳ್​​ಕ್ ಶೇಷಂ’ ಸಿನಿಮಾವನ್ನು ಒಂದೇ ಸಾಲಿನಲ್ಲಿ ವಿವರಿಸಬೇಕೆಂದರೆ ಅದು ಸಿನಿಮಾದೊಳಗೊಂದು ಸಿನಿಮಾ.

ವಿನೀತ್ ಶ್ರೀನಿವಾಸನ್ ರಚನೆ, ನಿರ್ದೇಶನದ ‘ವರ್ಷಂಙಳ್​​ಕ್ ಶೇಷಂ’ ಸಿನಿಮಾವನ್ನು ಒಂದೇ ಸಾಲಿನಲ್ಲಿ ವಿವರಿಸಬೇಕೆಂದರೆ ಅದು ಸಿನಿಮಾದೊಳಗೊಂದು ಸಿನಿಮಾ. ಸಿನಿಮಾದ ಮೇಲಿನ ಪ್ರೀತಿಯಿಂದ ಪ್ರತಿದಿನ ನೂರಾರು ಮಂದಿ ತಮಿಳುನಾಡಿನ ಕೋಡಂಬಾಕ್ಕಂಗೆ ಬರುತ್ತಾರೆ. ಅವರಲ್ಲಿ ಗೆದ್ದವರು ಮತ್ತು ಸೋತವರೂ ಇದ್ದಾರೆ. ಸಿನಿಮಾದಲ್ಲಿ ನಟಿಸಬೇಕು, ಸಿನಿಮಾ ಮಾಡಬೇಕು ಎಂಬ ಹುಚ್ಚು ಇರುವವರು ಮೊದಲು ಓಡಿ ಬರುವುದು ಮದ್ರಾಸ್‌ಗೆ. ಎಲ್ಲರಂತೆ ಸಿನಿಮಾ ಕ್ಷೇತ್ರಕ್ಕೆ ಕಾಲಿಡಬೇಕು ಎಂದು ಕನಸು ಹೊತ್ತ ಇಬ್ಬರು ಯುವಕರು ಮುರಳಿ ಮತ್ತು ವೇಣು ಕೇರಳದಿಂದ ಮದ್ರಾಸ್‌ಗೆ ರೈಲು ಹತ್ತುತ್ತಾರೆ.

ಕೂತುಪರಂಬ್‌ನ ಹಳ್ಳಿಯಲ್ಲಿ ನಾಟಕ ಬರೆದು ಪ್ರದರ್ಶಿಸಬೇಕು ಎಂದು ಆಸೆ ಇರುವ ಚಿಗುರು ಮೀಸೆಯ ಹುಡುಗ ವೇಣು (ಧ್ಯಾನ್ ಶ್ರೀನಿವಾಸನ್). ಅಲ್ಲಿನ ಮಹಲಿನ ಮೆಹಫಿಲ್‌ನಲ್ಲಿ ಹಾಡುಗಾರನಾಗಿರುವ ಮುರಳಿ (ಪ್ರಣವ್ ಮೋಹನ್ ಲಾಲ್). ನಾಟಕಕ್ಕೆ ಸಂಗೀತ ನುಡಿಸಲು ಅವನ್ನು ಕರೆದುಕೊಂಡು ಬರಲೇಬೇಕು ಎಂದು ಶೇಕ್ಸ್‌ಪಿಯರ್ ಶೇಖರನ್ (ದೀಪಕ್ ಪರಂಬೋಳ್) ವೇಣುವಿಗೆ ಕೆಲಸ ವಹಿಸಿಕೊಟ್ಟಾಗ ಮದ್ಯದ ನಶೆಯಲ್ಲಿರುವ ಮುರಳಿಯನ್ನು ವೇಣು ಕರೆದುಕೊಂಡು ಬರುತ್ತಾನೆ. ಹೀಗೆ ಬರುವಾಗ ಅವರಿಬ್ಬರೂ ಬೇಗನೆ ಸ್ನೇಹಿತರಾಗುತ್ತಾರೆ. ಸಾಹಿತ್ಯದಲ್ಲಿ ಇಬ್ಬರಿಗೂ ಇರುವ ಆಸಕ್ತಿಯೇ ಅವರ ಈ ಗೆಳೆತನಕ್ಕೆ ಕಾರಣ. ಇಬ್ಬರಿಗೂ ಊರು ಬಿಟ್ಟು ಹೋಗಲು ಮನಸ್ಸು ಇಲ್ಲ. ಸಾಧಿಸುವುದಾದರೆ ಇಲ್ಲೇ ಸಾಧಿಸಬೇಕು, ಜನರು ನಮ್ಮನ್ನು ಗುರುತಿಸಬೇಕು ಎಂದು ಪರಸ್ಪರ ಹೇಳಿಕೊಂಡವರು.

ಒಂದು ಪುಸ್ತಕದ ನೆಪದಲ್ಲಿ ಮುರಳಿ, ವೇಣು ಕಲಿಯುತ್ತಿರುವ ಅದೇ ಕಾಲೇಜಿನ ಆನಿ (ಕಲ್ಯಾಣಿ ಪ್ರಿಯದರ್ಶನ್) ಯನ್ನು ಕಾಲೇಜಿನಲ್ಲಿ ಭೇಟಿಯಾಗುತ್ತಾನೆ. ಇಬ್ಬರೂ ಒಳ್ಳೆಯ ಗೆಳೆಯರಾಗುತ್ತಾರೆ. ಆನಿಯನ್ನು ಮುರಳಿ ಪ್ರೀತಿಸುತ್ತಿದ್ದು, ಪ್ರೇಮ ನಿವೇದನೆಯನ್ನು ಆಕೆ ನಿರಾಕರಿಸುತ್ತಾಳೆ. ಅಲ್ಲಿಂದ ಕೆಲ ದಿನ ನಾಪತ್ತೆಯಾದ ಮುರಳಿ, ವೇಣುವಿಗೊಂದು ಪತ್ರ ಬರೆಯುತ್ತಾನೆ. ‘ಬಾ..ಮದ್ರಾಸ್ ರೈಲು ಹತ್ತು’ ಎಂದು.

ಹಾಗೇ ವೇಣು ಸಿನಿಮಾ ನಿರ್ದೇಶಕನಾಗಲು ಮತ್ತು ಮುರಳಿ ಸಂಗೀತ ನಿರ್ದೇಶಕನಾಗಲು ಕನಸು ಹೊತ್ತು ಮದ್ರಾಸಿಗೆ ಹೋಗುತ್ತಾರೆ . ಅಲ್ಲಿ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವಕಾಶ ಕೇಳಿ ಹಲವರ ಮುಂದೆ ಬೇಡಿಕೊಳ್ಳುವ ಪರಿಸ್ಥಿತಿ. ಜೀವನದಲ್ಲಿ ಸೋಲುಗಳು, ಹತಾಶೆಗಳು, ಸಂತೋಷಗಳು ಎಲ್ಲವನ್ನೂ ಅವರು ಇಲ್ಲಿ ಜತೆಯಾಗಿಯೇ ಕಾಣುತ್ತಾರೆ. ವರ್ಷಗಳು ಕಳೆಯುತ್ತವೆ. ಆ ಯುವಕರು ಈಗ ಮಧ್ಯ ವಯಸ್ಕರಾಗಿದ್ದಾರೆ. ಅವರ ಬದುಕಿನ ಏರಿಳಿತದ ಕತೆಗಳನ್ನು ಟ್ಯಾಕ್ಸಿ ಡ್ರೈವರ್ (ವಿನೀತ್ ಶ್ರೀನಿವಾಸನ್) ನಲ್ಲಿ ವೇಣು ಹೇಳುತ್ತಾ, ಕತೆಯಲ್ಲಿ ಫ್ಲ್ಯಾಶ್ ಬ್ಯಾಕ್ ತರಲಾಗಿದೆ.

ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದ ಧ್ಯಾನ್ ಇಲ್ಲಿ ಗಂಭೀರ ಪಾತ್ರ ಮಾಡಿದ್ದಾರೆ. ನೋಟ, ಮುಖಭಾವ, ಕುಳಿತುಕೊಳ್ಳುವುದು ಮತ್ತು ನಡೆಯುವುದು ಅಷ್ಟೇ ಗಂಭೀರ. ಅದಕ್ಕಾಗಿ ನಿರ್ದೇಶಕ ವಿನೀತ್ ಶ್ರೀನಿವಾಸನ್‌ಗೆ ಥ್ಯಾಂಕ್ಸ್ ಹೇಳಲೇ ಬೇಕು. ವೇಣು ಮತ್ತು ಮುರಳಿ ಅವರ ಸ್ನೇಹ, ಪ್ರೀತಿ ಮತ್ತು ಜೀವನದ ಕಥೆಗಳ ಮೊದಲಾರ್ಧವು ತುಂಬಾ ನಾಸ್ಟಾಲ್ಜಿಕ್ ಆಗಿದ್ದರೆ, ದ್ವಿತೀಯಾರ್ಧ ಹೆಚ್ಚು ಹಾಸ್ಯಮಯವಾಗಿದೆ. ನಿಜವಾದ ಕಥೆ ವರ್ಷಗಳ ನಂತರ ದ್ವಿತೀಯಾರ್ಧದಲ್ಲಿ ನಡೆಯುತ್ತದೆ. ದ್ವಿತೀಯಾರ್ಧದಲ್ಲಿ ಕಥೆಯ ದಿಕ್ಕನ್ನೇ ಬದಲಿಸುವ ‘ನಿತಿನ್ ಮೋಳಿ'( ನಿವಿನ್ ಪೌಲಿ) ಯ ಆಗಮನ ಅದ್ಧೂರಿಯಾಗಿದೆ. ಮೊದಲಾರ್ಧ ನಿಧಾನಗತಿಯಲ್ಲಿದ್ದರೂ ದ್ವಿತಿಯಾರ್ಧದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಮತ್ತು ನಗಿಸಲು ಬೇಕಾದ ಎಲ್ಲಾ ಅಂಶಗಳು ತುಂಬಿವೆ. ಮೊದಲಾರ್ಧದಲ್ಲಿ ವೇಣು ಪೂರ್ತಿಯಾಗಿ ಆವರಿಸಿಕೊಂಡಿದ್ದರೆ ದ್ವಿತಿಯಾರ್ಧದಲ್ಲಿ ಗಮನ ಸೆಳೆಯುವುದು ನಿತಿನ್ ಮೊಳಿ. ಸ್ವಜನಪಕ್ಷಪಾತ, ಬಾಡಿ ಶೇಮಿಂಗ್, ಸೆಲ್ಫ್ ಟ್ರೋಲ್ ಮತ್ತು ಜೋಕ್‌ಗಳು ಎಲ್ಲವನ್ನೂ ನಿತಿನ್ ಬಾಯಿಯಿಂದ ಹೇಳಿಸಿದ್ದಾರೆ ನಿರ್ದೇಶಕರು. ಬಹುಶಃ ಆ ದೃಶ್ಯಗಳನ್ನು ನಿವಿನ್ ಪೌಲಿ ಅಲ್ಲದೆ ಬೇರೆ ನಟ ಮಾಡಿದ್ದರೆ ಈ ಕಿಕ್ ಸಿಗುತ್ತಿರಲಿಲ್ಲ.

ನಟನೆಯಲ್ಲಿ ಪ್ರಣವ್‌ಗಿಂತ ಧ್ಯಾನ್ ಅವರೇ ಒಂದು ಹೆಜ್ಜೆ ಮುಂದಿದ್ದಾರೆ. ಚಿತ್ರದಲ್ಲಿ ಪ್ರಣವ್‌ನ ಹಲವು ಪಾತ್ರಗಳು ದೇವದೂತನ್‌ನಲ್ಲಿ ಮೋಹನ್‌ಲಾಲ್‌ರನ್ನು ನೆನಪಿಸುತ್ತದೆ. ನಿರ್ಮಾಪಕರಾಗಿ ಪಾತ್ರ ನಿರ್ವಹಿಸಿದ ಅಜು ವರ್ಗೀಸ್, ಸಹಾಯಕ ನಿರ್ದೇಶಕರಾಗಿ ಬಾಸಿಲ್ ಜೋಸೆಫ್ ಮತ್ತು ಚಿತ್ರದಲ್ಲಿ ನಟನಾಗಿ ಖ್ಯಾತ ಸಂಗೀತ ನಿರ್ದೇಶಕ ಶಾನ್ ರೆಹಮಾನ್ ತಮ್ಮ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.. ಚಿಕ್ಕ ದೃಶ್ಯದಲ್ಲಿದ್ದರೂ ನೀತಾ ಪಿಳ್ಳೈ, ಕಲ್ಯಾಣಿ ಪ್ರಿಯದರ್ಶನ್ ಮತ್ತು ನೀರಜ್ ಮಾಧವ್ ಅವರ ಉಪಸ್ಥಿತಿ ಊಟದೊಂದಿಗೆ ಉಪ್ಪಿನಕಾಯಿ ಇದ್ದಂತೆ. ಅವರ ಜೊತೆಯಲ್ಲಿ ಉಲ್ಲೇಖಿಸಬೇಕಾದ ಇನ್ನೊಂದು ಪಾತ್ರವೆಂದರೆ ಸ್ವಾಮಿ ಲಾಡ್ಜ್‌ನ ಸ್ವಾಮಿ (ವೈ ಜಿ ಮಹೇಂದ್ರನ್) ಅವರದ್ದು.

ಸಿನಿಮಾದ ನಾಡಿಮಿಡಿತವೇ ‘ಜ್ಞಾಪಕಂ…’ ಹಾಡು. ಅನೇಕ ಹಾಡುಗಳ ನಡುವೆ, ಈ ತಮಿಳು ಹಾಡು ಚಿತ್ರದ ಕೊನೆಯಲ್ಲಿ ಹಾಡುವ ಹಾಡಾಗಿರುತ್ತದೆ. ಬಾಂಬೆ ಜಯಶ್ರೀ ಅವರ ಪುತ್ರ ಅಮೃತ್ ರಾಮನಾಥ್ ಅವರ ಸಂಗೀತ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್. ವಿಶ್ವಜಿತ್ ಒಡುಕ್ಕತ್ತಿಲ್ ಅವರ ಛಾಯಾಗ್ರಹಣ ಮತ್ತು ರಂಜನ್ ಅಬ್ರಹಾಂ ಅವರ ಸಂಕಲನ ಚಿತ್ರವನ್ನು ಸುಂದರಗೊಳಿಸಿದೆ. ಅದರಲ್ಲೂ 80ರ ದಶಕದ ಮದ್ರಾಸ್ ನಗರದ ದೃಶ್ಯಗಳು ಸಖತ್ ಆಗಿ ಮೂಡಿ ಬಂದಿವೆ.

ವೇಣು ಮತ್ತು ಮುರಳಿ ನಿರೀಕ್ಷೆಗಳ ಭಾರವನ್ನು ಹೊತ್ತು ಪ್ರೇಕ್ಷಕರ ಹೃದಯಕ್ಕೆ ಗೆಲ್ಲುತ್ತಾ ಹೋಗುತ್ತಾರೆ. ವಿನೀತ್ ಶ್ರೀನಿವಾಸನ್ ಫೀಲ್-ಗುಡ್ ಪ್ಯಾಟರ್ನ್ ಅಂದರೆ ಇದೇ. ಕನಸು ಮತ್ತು ಕಸುವು ಇದ್ದರೆ ಅದನ್ನು ಯಾರಿಗೂ ಕದಿಯಲು ಸಾಧ್ಯವಿಲ್ಲ. ತನ್ನ ಸಾಮರ್ಥ್ಯದಲ್ಲಿ ನಂಬಿಕೆ ಇದ್ದು ಮುನ್ನಡೆದರೆ ಇಡೀ ಜಗತ್ತೇ ನಿಮ್ಮ ಮುಂದೆ ನಿಲ್ಲುತ್ತದೆ. ಅದೆಷ್ಟೇ ವರ್ಷ ಕಳೆದರೂ ಕೈಲಾಗದೆ ಕೈಬಿಟ್ಟ ಕೆಲಸವಾದರೂ ಸರಿ, ಅದನ್ನು ಮತ್ತೆ ಕೈಗೆತ್ತಿ ಪರಿಶ್ರಮಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ನೀಡುವ ಸಿನಿಮಾ ಇದು. ಹಾಡುಗಳು ಚಂದ ಇವೆ, ಮುರಳಿ ನುಡಿಸುವ ವಯಲಿನ್ ಹಿತವಾಗಿದೆ.

ಮಲಯಾಳಂ ಸಿನಿಮಾದ ಮೇರು ನಟರಾದ ಮೋಹನ್ ಲಾಲ್- ಶ್ರೀನಿವಾಸನ್ ಅವರ ಸಿನಿಮಾ ನೋಡಿ ಬೆಳೆದವರಿಗೆ ಇದೊಂದು ನಾಸ್ಟಾಲ್ಜಿಯಾ. ಇಲ್ಲಿ ಮೋಹನ್ ಲಾಲ್ ಮಗ ಪ್ರಣವ್- ಶ್ರೀನಿವಾಸನ್ ಮಗ ಧ್ಯಾನ್ ಇದ್ದಾರೆ. ಅಪ್ಪನ ಸಿನಿಮಾದಲ್ಲಿನ ಡೈಲಾಗ್‌ಗಳು, ತಮಾಷೆಗಳು, ಬಾಬುರಾಜ್ ಸಂಗೀತ ನಿರ್ದೇಶಿಸಿದ ‘ಒರು ಪುಷ್ಪಂ ಮಾತ್ರಮೆನ್’ ಎಂಬ ಎವರ್ ಗ್ರೀನ್ ಹಾಡಿನ ಸಾಲನ್ನು ಇಲ್ಲಿ ಬಳಸಿದ್ದು ನಿರ್ದೇಶಕರ ಜಾಣ್ಮೆ.

LEAVE A REPLY

Connect with

Please enter your comment!
Please enter your name here