ತೆಲುಗು ಸಿನಿಮಾ ನೃತ್ಯ ನಿರ್ದೇಶಕ ರಾಕೇಶ್ ಮಾಸ್ಟರ್ ಅಗಲಿದ್ದಾರೆ. ಟಾಲಿವುಡ್‌ನ ಹತ್ತಾರು ಸ್ಟಾರ್ ಹೀರೋಗಳಿಗೆ ಅವರು ನೃತ್ಯ ಸಂಯೋಜಿಸಿದ್ದಾರೆ. ರಾಕೇಶ್ ಮಾಸ್ಟರ್ ನಿಧನಕ್ಕೆ ತೆಲುಗು ಚಿತ್ರರಂಗದ ಹಲವಾರು ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.
ತೆಲುಗಿನ ಖ್ಯಾತ ನೃತ್ಯ ನಿರ್ದೇಶಕ ರಾಕೇಶ್ ಮಾಸ್ಟರ್ (53 ವರ್ಷ) ನಿಧನರಾಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ವಿಶಾಖಪಟ್ಟಣಕ್ಕೆ ಶೂಟಿಂಗ್ ತೆರಳಿ ಹೈದರಾಬಾದ್‌ಗೆ ವಾಪಸಾಗಿದ್ದರು. ಅಲ್ಲಿಂದ ಬರುತ್ತಿದ್ದಂತೆ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸನ್‌ಸ್ಟ್ರೋಕ್ ಆಗಿದ್ದರಿಂದ ಅವರ ಆರೋಗ್ಯ ಸಮಸ್ಯೆ ಉಲ್ಬಣಿಸಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಆಗದೆ ಅವರು ಭಾನುವಾರ ಸಂಜೆ (ಜೂನ್ 18) ಇಹಲೋಕ ತ್ಯಜಿಸಿದ್ದಾರೆ. ರಾಕೇಶ್ ನಿಜವಾದ ಹೆಸರು ರಾಮರಾವ್. ಇವರು 1968ರಲ್ಲಿ ತಿರುಪತಿಯಲ್ಲಿ ಜನಿಸಿದರು. ಕಿರುತೆರೆಯ ಡ್ಯಾನ್ಸ್ ರಿಯಾಲಿಟಿ ಶೋಗಳಿಂದ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ರಾಕೇಶ್ ಮಾಸ್ಟರ್, ಸುಮಾರು 1,500ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದು ಅವರ ನೃತ್ಯ ಸಂಯೋಜನೆಯ ಹಲವಾರು ಹಾಡುಗಳು ಹಿಟ್ ಆಗಿವೆ. ಡ್ಯಾನ್ಸ್ ಮಾಸ್ಟರ್ ಆಗಿ ಆಗುವ ಮುನ್ನ ಮುಕ್ಕು ರಾಜು ಮಾಸ್ಟರ್ ಅವರೊಡನೆ ಕೆಲಸ ಮಾಡುತ್ತಿದ್ದರು.
ವೆಂಕಟೇಶ್, ನಾಗಾರ್ಜುನ, ಮಹೇಶ್ ಬಾಬು, ರಾಮ್ ಪೋತಿನೇನಿ, ಪ್ರಭಾಸ್ ಸೇರಿದಂತೆ ಅನೇಕ ಸ್ಟಾರ್ ಹೀರೋಗಳಿಗೆ ರಾಕೇಶ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ತೆಲುಗಿನ ಪ್ರಸಿದ್ದ ನೃತ್ಯ ನಿರ್ದೇಶಕರಾದ ಶೇಖರ್ ಮಾಸ್ಟರ್, ಜಾನಿ ಮಾಸ್ಟರ್ ಸೇರಿದಂತೆ ಇತರರಿಗೆ ತರಬೇತಿ ನೀಡಿದ್ದರು. ‘ಲಾಹಿರಿ ಲಾಹಿರಿ ಲಾಹಿರಿ’, ‘ದೇವದಾಸು’, ‘ಚಿರುನಾವುತ್ತು’, ‘ಸೀತಯ್ಯ’, ‘ಅಮ್ಮೋ ಪೋಲಿಸೋಳ್ಳು’ ಅವರು ನೃತ್ಯ ಸಂಯೋಜನೆಯ ಕೆಲವು ಪ್ರಮುಖ ಸಿನಿಮಾಗಳು. ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನೃತ್ಯ ಸಂಯೋಜಕ ರಾಕೇಶ್ ಮಾಸ್ಟರ್ ನಿಧನಕ್ಕೆ ಟಾಲಿವುಡ್‌ನ ಹಲವರು ಸಂತಾಪ ಸೂಚಿಸಿದ್ದಾರೆ. ರಾಕೇಶ್ ಮಾಸ್ಟರ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹಳೆಯ ವೀಡಿಯೋಗಳನ್ನು ಹಂಚಿಕೊಂಡು ಅಗಲಿದ ನೃತ್ಯ ಸಂಯೋಜಕನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
https://twitter.com/UnqBoi007/status/1670473587365675008?ref_src=twsrc%5Etfw%7Ctwcamp%5Etweetembed%7Ctwterm%5E1670473587365675008%7Ctwgr%5Edf94dd98cdd482b79f542785be157a1f75171ffe%7Ctwcon%5Es1_c10&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2FUnqBoi0072Fstatus2F1670473587365675008widget%3DTweet