ಭಾಗ್ಯ ಕೆ ಮೂರ್ತಿ ಅವರ ಕಾದಂಬರಿ ಆಧರಿಸಿ ಕೋಡ್ಲು ರಾಮಕೃಷ್ಣ ನಿರ್ದೇಶಿಸುತ್ತಿರುವ ‘ಶಾನುಭೋಗರ ಮಗಳು’ ಸಿನಿಮಾದ ಫೋಟೊಗಳು ಬಿಡುಗಡೆಯಾಗಿವೆ. ಇದು ಸ್ವಾತಂತ್ರ್ಯಪೂರ್ವದ ಕತೆ. ರಾಗಿಣಿ ಪ್ರಜ್ವಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾದಲ್ಲಿ ನಟ ಕಿಶೋರ್ ಅವರು ಟಿಪ್ಪು ಸುಲ್ತಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಾದಂಬರಿ ಆಧರಿಸಿ ಹೆಚ್ಚು ಸಿನಿಮಾಗಳನ್ನು ಮಾಡಿರುವ ನಿರ್ದೇಶಕರಲ್ಲಿ ಕೋಡ್ಲು ರಾಮಕೃಷ್ಣ ಅವರ ಹೆಸರೂ ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಭಾಗ್ಯ ಕೆ ಮೂರ್ತಿ ಅವರ ಕಾದಂಬರಿ ಆಧರಿಸಿ ಅವರು ‘ಶಾನುಭೋಗರ ಮಗಳು’ ಸಿನಿಮಾ ಮಾಡುತ್ತಿರುವ ಬಗ್ಗೆ ಹೇಳಿದ್ದರು. ಇಂದು ಚಿತ್ರದ ಕುರಿತಂತೆ ಮತ್ತಷ್ಟು ಮಾಹಿತಿ ಮತ್ತು ಫೋಟೊಗಳು ಲಭ್ಯವಾಗಿವೆ. ‘ಚಿತ್ರದಲ್ಲಿ ಬ್ರಿಟಿಷರು, ಟಿಪ್ಪು ಸುಲ್ತಾನ್ ಹಾಗೂ ಮೈಸೂರಿನ ಮಹಾರಾಜರ ಸನ್ನಿವೇಶಗಳು ಹೆಚ್ಚಿವೆ. ಶಾನುಭೋಗರ ಮಗಳ ಪಾತ್ರ ನಿರ್ವಹಿಸುತ್ತಿರುವ ರಾಗಿಣಿ ಪ್ರಜ್ವಲ್ ನಾಲ್ಕಾರು ಬ್ರಿಟಿಷರನ್ನು ಗುಂಡಿಟ್ಟು ಸಾಯಿಸುವ ದೃಶ್ಯವನ್ನು ಇತ್ತೀಚೆಗೆ ಶ್ರೀರಂಗ ಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟದ ಸುತ್ತಮುತ್ತ ಚಿತ್ರೀಕರಿಸಲಾಯಿತು’ ಎಂದು ನಿರ್ದೇಶಕ ಕೋಡ್ಲು ರಾಮಕೃಷ್ಣ ಹೇಳುತ್ತಾರೆ.
ಭುವನ್ ಫಿಲಂಸ್ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಕಿಶೋರ್ ಅಭಿನಯಿಸುತ್ತಿದ್ದಾರೆ. ರಮೇಶ್‍ಭಟ್, ಸುಧಾಬೆಳವಾಡಿ, ಪದ್ಮಾ ವಾಸಂತಿ, ವಾಣಿಶ್ರೀ, ಭಾಗ್ಯಶ್ರೀ, ಕುಮಾರಿ ಅನನ್ಯ, ಟಿ.ಎನ್. ಶ್ರೀನಿವಾಸ ಮೂರ್ತಿ, ನಿರಂಜನ ಶೆಟ್ಟಿ ಪ್ರಧಾನ ಪಾತ್ರಗಳಲ್ಲಿದ್ದಾರೆ. ಶಮಿತಾ ಮಲ್ನಾಡ್ ಸಂಗೀತ, ಬಿ ಎ ಮಧು ಚಿತ್ರಕಥೆ ಮತ್ತು ಸಂಭಾಷಣೆ, ಜೈ ಆನಂದ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ ಚಿತ್ರಕ್ಕಿದೆ. ‘ರಿಷಭಪ್ರಿಯ’ ಕಿರುಚಿತ್ರದ ಮೂಲಕ ನಟಿಯಾದ ರಾಗಿಣಿ ಪ್ರಜ್ವಲ್ ಅವರು ‘Law’ ಸಿನಿಮಾದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯಿಸಿದ್ದರು. ಈಗ ಅವರ ‘ಶಾನುಭೋಗರ ಮಗಳು’ ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ. ನಿರ್ದೇಶಕ ಕೋಡ್ಲು ರಾಮಕೃಷ್ಣ ನಟ ಪ್ರಜ್ವಲ್ ಅವರಿಗೆ ಈ ಹಿಂದೆ ‘ಮಿ ಡೂಪ್ಲಿಕೇಟ್’ ಸಿನಿಮಾ ಮಾಡಿದ್ದರು. ಈಗ ಪ್ರಜ್ವಲ್ ಪತ್ನಿ ರಾಗಿಣಿಯನ್ನೂ ನಿರ್ದೇಶಿಸುತ್ತಿರುವುದು ವಿಶೇಷ.