ತಮಿಳು ನಟ ವಿಜಯ್ ಸಾಮಾಜಿಕ ಸೇವಾಕಾರ್ಯಗಳಲ್ಲಿ ಸದಾ ಮುಂದು. ಈ ಬಾರಿ ಅವರು ದೊಡ್ಡ ಮಟ್ಟದ ಸಾಮಾಜಿಕ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ‘ದಳಪತಿ ವಿಜಯ್ ಸಂಸ್ಥೆ’ ಆರಂಭಿಸಿ ರಾಜ್ಯದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಪಣತೊಟ್ಟಿದ್ದಾರೆ.
ನಟ ವಿಜಯ್ ಇಂದು (ಜುಲೈ 15) ‘ದಳಪತಿ ವಿಜಯ್ ಸಂಸ್ಥೆ’ಗಳನ್ನು ಪ್ರಾರಂಭಿಸಿದ್ದಾರೆ. ಈ ಸಂಸ್ಥೆಯ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಗುರಿ ಅವರದು. ವರದಿಗಳ ಪ್ರಕಾರ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಮರಾಜ್ ಅವರ ಜನ್ಮದಿನವಾದ ಇಂದು ತಮಿಳುನಾಡಿನಾದ್ಯಂತ 234 ಸ್ಥಳಗಳಲ್ಲಿ ದಳಪತಿ ವಿಜಯ್ ಸಂಸ್ಥೆಗಳನ್ನು ಪ್ರಾರಂಭಿಸಲಾಗುತ್ತಿದೆ. ವಿಜಯ್ ಇತ್ತೀಚಿಗೆ ತಮಿಳುನಾಡಿನ ಜಿಲ್ಲೆಗಳಲ್ಲಿ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದರು. ಇದಾದ ಕೆಲವು ದಿನಗಳ ನಂತರ ವಿಜಯ್ ಅವರು ರಾಜಕೀಯ ಪ್ರವೇಶಿಸುತ್ತಾರೆ ಎಂಬ ಮಾತುಗಳು ಕೇಳಿಬಂದವು. ಇದರ ಮಧ್ಯೆ ಮಧುರೈನ ಕಾಲವಾಸಲ್‌ನ ಖಾಸಗಿ ಥಿಯೇಟರ್‌ನಲ್ಲಿ ಅವರ ಅಭಿಮಾನಿಗಳು ಥಿಯೇಟರ್ ಸಿಬ್ಬಂದಿಯೊಂದಿಗೆ 50 KG ಕೇಕ್ ಕತ್ತರಿಸಿದ್ದರು. ‘2026 ರಿಂದ ವಿಜಯ್ ತಮಿಳುನಾಡನ್ನು ಆಳುತ್ತಾರೆ’ ಎಂಬ ಸಂದೇಶವನ್ನು ಕೇಕ್ ಮೇಲೆ ಬರೆಯಲಾಗಿತ್ತು.
ಇದಾದ ನಂತರ ನಟನ ಅಭಿಮಾನಿಗಳ ಸಂಘವು ಮಧುರೈನಾದ್ಯಂತ ಬಡವರಿಗೆ ಮತ್ತು ಅಗತ್ಯವಿರುವವರಿಗೆ ಆಹಾರ ನೀಡಿದ್ದರು. ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್, ಪೆನ್ನು ಮತ್ತು ಪೆನ್ಸಿಲ್ ವಿತರಿಸಿದ್ದರು. ಇದರ ಜೊತೆಗೆ ಕಾರ್ಯಕ್ರಮದ ಭಾಗವಾಗಿ, ನಟನ ಬ್ಲಾಕ್‌ಬಸ್ಟರ್ ‘ಮಾಸ್ಟರ್’ ಚಿತ್ರದ ಪ್ರದರ್ಶನವನ್ನು ಮಧುರೈ ಥಿಯೇಟರ್‌ಗಳಲ್ಲಿ ಏರ್ಪಡಿಸಲಾಗಿತ್ತು. ಇತ್ತೀಚಿಗೆ ವಿಜಯ್ ಚೆನ್ನೈನ ಆರ್ ಕೆ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅಲ್ಲಿ 10 ಮತ್ತು 12 ಬೋರ್ಡ್ ಪರೀಕ್ಷೆಯ ಟಾಪ್- 3ರಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ, ‘ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು ಮತ್ತು ಮತದಾರರು ಜಾಗೃತರಾಗಬೇಕು. ವಿದ್ಯಾರ್ಥಿಗಳು ಡಾ ಬಿ ಆರ್ ಅಂಬೇಡ್ಕರ್, ಪೆರಿಯಾರ್ ಮತ್ತು ಕಾಮರಾಜ್‌ರಂತಹ ದಿಗ್ಗಜರ ಬಗ್ಗೆ ತಿಳುವಳಿಕೆ ಹೊಂದಿರಬೇಕು’ ಎಂದು ಕಿವಿಮಾತು ಹೇಳಿದ್ದರು. ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100ರ ಪಟ್ಟಿಯಲ್ಲಿ ಒಬ್ಬರಾಗಿರುವ ವಿಜಯ್ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟರಲ್ಲೊಬ್ಬರು.