‘Oppenheimer’ ಮತ್ತು ‘Barbie’, ಇಂದು (ಜುಲೈ 21) ತೆರೆಕಂಡ ಎರಡು ಬಹುನಿರೀಕ್ಷಿತ ಇಂಗ್ಲಿಷ್‌ ಸಿನಿಮಾಗಳು. ‘Oppenheimer’, ಪರಮಾಣು ಬಾಂಬ್‌ ಪಿತಾಮಹ, ಭೌತಶಾಸ್ತ್ರಜ್ಞ Robert Oppenheimer ಬಯೋಪಿಕ್‌ ಆದರೆ ‘Barbie’ ಅಡ್ವೆಂಚರ್‌ ಫ್ಯಾಂಟಸಿ ಕಾಮಿಡಿ.

Oppenheimer | ಇಂಗ್ಲಿಷ್‌ | ಪರಮಾಣು ಬಾಂಬ್ ಪಿತಾಮಹ ಭೌತಶಾಸ್ತ್ರಜ್ಞ J Robert Oppenheimer ಬಯೋಪಿಕ್‌ ಚಿತ್ರವಿದು. ಯೂನಿವರ್ಸಲ್‌ ಪಿಕ್ಚರ್ಸ್, ಸಿಂಕೋಪಿ ಇಂಕ್ ಮತ್ತು ಅಟ್ಲಾಸ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ತಯಾರಾಗಿದೆ. ಭೌತಶಾಸ್ತ್ರಜ್ಞ ಜೆ ರಾಬರ್ಟ್ ಓಪನ್‌ ಹೈಮರ್ ಮತ್ತು ಅವರ ವಿವಾದಾತ್ಮಕ ಮ್ಯಾನ್‌ಹ್ಯಾಟನ್ ಪ್ರಾಜೆಕ್ಟ್ ಕುರಿತು ಸಿನಿಮಾ ಹೇಳುತ್ತದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ವಿಶ್ವದ ಮೊದಲ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆ, ಸಂಶೋಧನೆ ಮತ್ತು ಅದರ ನಿರ್ಮಾಣದ ಸುತ್ತ ಹೆಣೆದಿರುವ ಕಥಾಹಂದರ.

ಮೊದಲ ಪರಮಾಣು ಬಾಂಬ್ ಪರೀಕ್ಷಿಸಲು ತಯಾರಾಗುವ ಸಂಧರ್ಭಗಳನ್ನು ಸಿನಿಮಾ ಒಳಗೊಂಡಿದೆ. ಪುಲಿಟ್ಜರ್ ಪ್ರಶಸ್ತಿ ವಿಜೇತ ಕೈ ಬರ್ಡ್ ಮತ್ತು ಮಾರ್ಟಿನ್ ಜೆ ಶೆರ್ವಿನ್ ಅವರ ‘American Prometheus: The Triumph and Tragedy of J. Robert’ ಪುಸ್ತಕವನ್ನು ಆಧರಿಸಿದ ಸಿನಿಮಾ. ಆಸ್ಕರ್ ನಾಮನಿರ್ದೇಶಿತ ಛಾಯಾಗ್ರಾಹಕ Hoyte van Hoytema ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಸಿಲಿಯನ್ ಮರ್ಫಿ, ಎಮಿಲಿ ಬ್ಲಂಟ್, ಮ್ಯಾಟ್ ಡ್ಯಾಮನ್, ರಾಬರ್ಟ್ ಡೌನಿ ಜೂನಿಯರ್, ಮತ್ತು ಫ್ಲಾರೆನ್ಸ್ ಪಗ್ ನಟಿಸಿರುವ ಚಿತ್ರ ಇಂದು (ಜುಲೈ 21) ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಜಗತ್ತಿನ ಹಲವೆಡೆ ಬಿಡುಗಡೆಯಾಗಿದೆ. ಹಿಂದಿ ಭಾಷೆಯಲ್ಲಿಯೂ ಸಿನಿಮಾ ತೆರೆಕಂಡಿದೆ.

Barbie | ಇಂಗ್ಲಿಷ್‌ | ಅಡ್ವೆಂಚರ್ ಫ್ಯಾಂಟಸಿ, ಕಾಮಿಡಿ ಇಂಗ್ಲಿಷ್ ಸಿನಿಮಾ. ನೋವಾ ಬಾಂಬಾಚ್ ಚಿತ್ರಕಥೆ ರಚಿಸಿದ್ದು, ಗ್ರೆಟಾ ಗೆರ್ವಿಗ್ ಸಿನಿಮಾ ನಿರ್ದೇಶಿಸಿದ್ದಾರೆ. ಮ್ಯಾಟ್ಟೆಲ್ ಅವರ ‘ಬಾರ್ಬಿ ಫ್ಯಾಶನ್ ಗೊಂಬೆ’ಗಳನ್ನು ಆಧರಿಸಿ ಹಲವಾರು ಅನಿಮೇಷನ್‌, ಟೀವಿ ಸಿನಿಮಾಗಳು ತಯಾರಾಗಿವೆ. ಆದರೆ ಈ ಚಿತ್ರವು ಮೊದಲ ಲೈವ್ – ಆಕ್ಷನ್ ಬಾರ್ಬಿ ಚಲನಚಿತ್ರವಾಗಿದೆ. ಚಿತ್ರದಲ್ಲಿ ಮಾರ್ಗಾಟ್ ರಾಬಿ ‘ಬಾರ್ಬಿ’ಯಾಗಿ ಮತ್ತು ರಿಯಾನ್ ಗೊಸ್ಲಿಂಗ್ ಕೆನ್ ಆಗಿ ನಟಿಸಿದ್ದಾರೆ. ಬಾರ್ಬಿಲ್ಯಾಂಡ್‌ನ ಬೊಂಬೆ ಲೋಕದಲ್ಲಿ ಬಾರ್ಬಿಯ (ಮಾರ್ಗೋಟ್ ರಾಬಿ) ಸುವ್ಯವಸ್ಥಿತ ಜೀವನದಲ್ಲಿ ಅಲ್ಲೋಲ ಕಲ್ಲೋಲವಾಗಲು ಪ್ರಾರಂಭವಾಗುತ್ತದೆ. ಆಗ ಅವಳು ಬಾರ್ಬಿಲ್ಯಾಂಡ್‌ ಅನ್ನು ಬಿಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅವಳು ಅಲ್ಲಿಂದ ಹೊರಬಂದು ದಾರಿ ಹುಡುಕುತ್ತಾ ಮಾನವ ಲೋಕಕ್ಕೆ ಬರುತ್ತಾಳೆ, ಅಲ್ಲಿ ತನ್ನ ಬದಲಾದ ಜೀವನ ಶೈಲಿಯೊಂದಿಗೆ ಬದುಕು ಕಟ್ಟಿಕೊಂಡು ಹೇಗೆ ಈ ಲೋಕದಲ್ಲಿ ಜೀವನ ಸಾಗಿಸುತ್ತಾಳೆ ಎಂಬುದನ್ನು ಚಿತ್ರ ತೋರಿಸಲಿದೆ. ಚಿತ್ರದಲ್ಲಿ ಅಮೇರಿಕಾ ಫೆರೆರಾ, ಕೇಟ್ ಮೆಕಿನ್ನನ್, ಮೈಕೆಲ್ ಸೆರಾ, ಅರಿಯಾನಾ ಗ್ರೀನ್‌ಬ್ಲಾಟ್, ಇಸಾ ರೇ, ರಿಯಾ ಪರ್ಲ್ಮನ್, ಹೆಲೆನ್ ಮಿರೆನ್ ಮತ್ತು ವಿಲ್ ಫೆರೆಲ್ ನಟಿಸಿದ್ದಾರೆ. ಈ ಸಿನಿಮಾ ಭಾರತದಲ್ಲಿ ಹಿಂದಿ ಭಾಷೆಯಲ್ಲಿಯೂ ತೆರೆಕಂಡಿದೆ.

LEAVE A REPLY

Connect with

Please enter your comment!
Please enter your name here