ತಿಳಿ ಹಾಸ್ಯದೊಂದಿಗೆ ಸಾಗುವ ಪ್ರತಿ ದೃಶ್ಯ ‘ಇದೇ ಇರಬಹುದು’ ಅಂತ ಊಹಿಸಿದರೂ ನಮ್ಮೆಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಕಡೆಗೊಂದು ಮಹತ್ತರ ಸಂದೇಶವೊಂದನ್ನು ನೀಡುತ್ತದೆ. ಇಷ್ಟು ಹೊತ್ತು ನೋಡಿದ್ದು ಇದೇ ಸಿನಿಮಾನ ಅನ್ನುವಷ್ಟರ ಮಟ್ಟಿಗೆ ದಂಗುಬಡಿಸುತ್ತದೆ. ಭೂತಾನ್ ದೇಶದ ಸಿನಿಮಾ ‘The Monk and the Gun’ ಪ್ರಪಂಚದ ಎಲ್ಲ ದೇಶಗಳ ಬಗೆಗಿನ ಕತೆ ಅನಿಸಿಬಿಡುತ್ತದೆ.

2006ನೇ ವರ್ಷ. ಭೂತಾನ್ ಸಾಮ್ರಾಜ್ಯ ಕೊನೆಗೊಂಡು ನಿಧಾನಕ್ಕೆ ಪ್ರಜಾಪ್ರಭುತ್ವಕ್ಕೆ ತೆರೆದುಕೊಳ್ಳುವ ಸಮಯ. ಆದರೆ ಯಾವ ಬದಲಾವಣೆಯೂ ಭೂತಾನ್‌ನಂತಹ ಪುಟ್ಟ ದೇಶದಲ್ಲಿ ಅಷ್ಟೊಂದು ಸುಲಭವಲ್ಲ. ಮೊಬೈಲ್ ಮತ್ತು ಇಂಟರ್‌ನೆಟ್‌ಗೆ ತನ್ನನ್ನು ತೆರೆದುಕೊಂಡ ಕಡೆಯ ದೇಶ ಎಂದರೆ ಅದು ಭೂತಾನ್. ಏಕೆಂದರೆ ಅವರು ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಿರುವಾಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಜನರನ್ನು ಅಣಿಗೊಳಿಸುವುದು ತುಂಬಾ ಕಷ್ಟದ ಕೆಲಸ. ಪಕ್ಷಗಳು, ಚುನಾವಣೆ, ಮತದಾನ, ನಾಯಕನನ್ನು ತಾವಾಗಿಯೇ ಆರಿಸಿಕೊಳ್ಳುವಿಕೆ ಇಂತಹ ಕಾನ್ಸೆಪ್ಟುಗಳು ಅವರಿಗೆ ತೀರಾ ಎಂದರೆ ತೀರಾ ಹೊಸತು.

ಹೀಗಿರುವಾಗ ಜನರಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸುವುದು ಮೊದಲ ಕರ್ತವ್ಯ ತಾನೆ? ಹಾಗಾಗಿಯೇ ಇದಕ್ಕಾಗಿಯೇ ನಿಯೋಜನೆಗೊಂಡ ಚುನಾವಣಾ ಅಧಿಕಾರಿಯೊಬ್ಬಳು ಎಲ್ಲಾ ಹಳ್ಳಿಗಳಿಗೆ ಹೋಗಿ ಜನರನ್ನು ಸೇರಿಸಿ mock election ಹಮ್ಮಿಕೊಂಡು ಚುನಾವಣೆಯಲ್ಲಿ ಹೇಗೆ ಮತ ಹಾಕುವುದು ಅನ್ನುವುದರ ಬಗ್ಗೆ ಅರಿವು ಮೂಡಿಸಲು ತೊಡಗುತ್ತಾಳೆ. TV ಕೂಡ ಆಗ ತಾನೇ ಕಾಲಿಟ್ಟ ಆ ಪ್ರದೇಶಕ್ಕೆ ಆಕೆ ಸದ್ಯದಲ್ಲೇ ಬರಲು ಪ್ಲ್ಯಾನ್‌ ಮಾಡಿಕೊಳ್ಳುತ್ತಾಳೆ. ಅದೇ ಊರಿನಲ್ಲಿ ಬೌದ್ಧ ಬಿಕ್ಕುವೊಬ್ಬನಿದ್ದಾನೆ. ಎಲ್ಲ ಜನರು ಆತನನ್ನು ತುಂಬಾ ಭಯ ಭಕ್ತಿ ಗೌರವಗಳಿಂದ ಕಾಣುತ್ತಾರೆ. ಎಲ್ಲ ವಿಷಯಗಳಿಗೆ ಆತನ ನಿರ್ಧಾರವೇ ಅಂತಿಮ ಅನ್ನುವಷ್ಟರ ಮಟ್ಟಿಗೆ ಆತ ಹೇಳಿದ್ದೇ ಅವರಿಗೆ ವೇದವಾಕ್ಯ. ಸದ್ಯ, ಆತನ ಮುಖದಲ್ಲಿ ಅದೇನೋ ಅಸಮಾಧಾನವೊಂದು ಎದ್ದು ಕಾಣುತ್ತಿದೆ.

ಅದೊಂದು ದಿನ ಆ ಬೌದ್ಧ ಬಿಕ್ಕು ತನ್ನ ಅನುಯಾಯಿಯೊಬ್ಬನನ್ನು ಕರೆದು ಮುಂಬರುವ ಹುಣ್ಣಿಮೆಯೊಳಗೆ ಎರಡು ಬಂದೂಕುಗಳನ್ನು ವ್ಯವಸ್ಥೆ ಮಾಡುವಂತೆ ಆದೇಶಿಸುತ್ತಾನೆ! ಬೌದ್ಧ ಬಿಕ್ಕುವಿಗೇಕೆ ಬಂದೂಕು? ಇದು ಆ ಸಿನಿಮಾದ ಎಲ್ಲಾ ಪಾತ್ರಗಳಂತೆಯೇ ಪ್ರೇಕ್ಷಕರಲ್ಲಿಯೂ ಹುಟ್ಟುವ ಪ್ರಶ್ನೆ. ಇದು ಸಿನಿಮಾದ ಆರಂಭವಷ್ಟೇ. ಇಲ್ಲಿ ಬರೆದಿದ್ದನ್ನು ಓದಿದರೆ ಬಹಳ ರೋಚಕ ಅನ್ನಿಸಿದರೂ ಸಿನಿಮಾ ಇರುವುದು ಮಾತ್ರ ಸಂಪೂರ್ಣ ಹಾಸ್ಯಮಯವಾಗಿ! ತಿಳಿ ಹಾಸ್ಯವನ್ನೇ ಬಡಿಸುತ್ತ ಸಾಗುವ ಪ್ರತಿ ದೃಶ್ಯ ‘ಇದೇ ಇರಬಹುದು’ ಅಂತ ಊಹಿಸಿದರೂ ನಮ್ಮೆಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಕಡೆಗೊಂದು ಮಹತ್ತರ ಸಂದೇಶವೊಂದನ್ನು ನೀಡುತ್ತದೆ. ಇಷ್ಟು ಹೊತ್ತು ನೋಡಿದ್ದು ಇದೇ ಸಿನಿಮಾನ ಅನ್ನುವಷ್ಟರ ಮಟ್ಟಿಗೆ ದಂಗುಬಡಿಸುತ್ತದೆ. ಮೊದಲಿಗೆ ಇದು ಭೂತಾನ್ ದೇಶದ ಸಿನಿಮಾ ಅಂದೆನಲ್ಲ. ಆದರೆ ಕೊನೆಕೊನೆಗೆ ಈ ‘The Monk and the Gun’ ಸಿನಿಮಾ ಇಡೀ ಪ್ರಪಂಚದ ಎಲ್ಲ ದೇಶಗಳ ಬಗೆಗಿನ ಕತೆ ಅನಿಸಿಬಿಡುತ್ತದೆ.

ಗಂಭೀರ ಸಿನಿಮಾವೊಂದು ಹೇಳಲು ಕಷ್ಟಪಡುವ ಕಥೆಯನ್ನು ಹಾಸ್ಯ ಸಿನಿಮಾವೊಂದು ಅಷ್ಟೇ ಪರಿಣಾಮಕಾರಿಯಾಗಿ ಹೇಳಬಲ್ಲದು ಅನ್ನುವುದಕ್ಕೆ ಈ ಸಿನಿಮಾ ಸಾಕ್ಷಿ. ಎಲ್ಲವೂ ಕತೆ, ಚಿತ್ರಕಥೆ ಬರೆಯುವರ ಮೇಲೆ ಅವಲಂಬಿತ. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಸಿನಿಮಾ ನೋಡುವಾಗ ಪ್ರೇಕ್ಷಕರಿಂದ ಬಿದ್ದ ಚಪ್ಪಾಳೆ, ಹರ್ಷೋದ್ಗಾರ, ಕಡೆಗೆ ಎದ್ದು ನಿಂತು ಗೌರವ ಸೂಚಿಸಿದ ರೀತಿ ಈ ಸಿನಿಮಾದ ತೂಕವೇನು ಎಂಬುದನ್ನು ಹೇಳುತ್ತಿತ್ತು.

LEAVE A REPLY

Connect with

Please enter your comment!
Please enter your name here