ತನ್ನ ವಿರುದ್ಧದ ಹೇಳಿಕೆಗಳಿಗೆ ಅಪನ್ಹೈಮರ್ ವಿಚಲಿತನಾಗುವುದಿಲ್ಲ. ವಿರೋಧಿಯ ಕೈ ಕುಲುಕಿದ್ದಕ್ಕೆ ಆತನ ಹೆಂಡತಿ, ‘ನೀನು ಹುತಾತ್ಮನಾಗಬೇಡ’ ಎಂದು ನಿಷ್ಠುರವಾಗಿ ಪ್ರತಿಕ್ರಿಯಿಸುತ್ತಾಳೆ.‌ ಅಪನ್ಹೈಮರ್‌ಗೆ ತನಗೊದಗುವ ಶಿಕ್ಷೆಗಿಂತ ಅಣುಬಾಂಬಿನ ದುಷ್ಪರಿಣಾಮಗಳ‌ ಕಾಳಜಿಯೇ ಮುಖ್ಯ ಎನ್ನುವುದನ್ನು ಬಿಂಬಿಸುವಲ್ಲಿ ಚಿತ್ರ ಸಫಲವಾಗಿದೆ.

ಅಪನ್ಹೈಮರ್ ಸತ್ತು 60 ವರ್ಷಗಳಾದ ನಂತದ ನ್ಯೂಕ್ಲಿಯರ್ ಬಾಂಬ್ ಜನಕನೆಂದು ಹೆಸರಾದ ವ್ಯಕ್ತಿಯ ಸಿನಿಮಾ ಮುಖ್ಯವಾಗುವುದೇಕೆ? ಕ್ರಿಸ್ಟೋಪರ್ ನೊಲಾನ್ ಅದ್ಭುತ ನಿರ್ದೇಶನ, ಉತ್ತಮ ನಟನೆ, ಬಿಗಿಯಾದ ಚಿತ್ರಕಥೆ -ನಿರೂಪಣೆ ಎಲ್ಲವೂ ಇದೆ, ಸರಿ. ಆದರೆ ವಿಚಾರಣೆಯ ಹೊರತಾಗಿ ನಾಟಕೀಯ ಸನ್ನಿವೇಶಗಳಿಲ್ಲದ ವ್ಯಕ್ತಿಯೊಬ್ಬನ ಜೀವನ ಚರಿತ್ರೆಗೆ ನಿಷ್ಟವಾದ ಸಿನಿಮಾವೊಂದು ತಾಂತ್ರಿಕ ಅಂಶಗಳಿಂದಷ್ಟೇ ಜನರನ್ನು ಆಕರ್ಷಿಸಿದೆಯೇ? ಇರಲಾರದು ಎಂದೆನಿಸುತ್ತದೆ.

ಅಮೇರಿಕಾ ಸವಾಲು ಎಂದು ತಿಳಿದುಕೊಂಡ ಸೋವಿಯತ್ ರಷ್ಯಾ ಈಗಿಲ್ಲ. ಜಗತ್ತು ಕಮ್ಯುನಿಸಮ್ ಅಪ್ಪಿಕೊಳ್ಳುತ್ತದೆ ಎನ್ನುವ ಅಂಜಿಕೆಯೂ ಸುಳ್ಳಾಗಿದೆ. ಅಪನ್ಹೈಮರ್‌ನನ್ನು ಸಂಶಯಿಸಲು ಕಾರಣವಾದ ಅಂಶಗಳೂ ಈಗ ಅಪ್ರಸ್ತುತವೆನ್ನಿಸಿದೆ. ಆದರೆ ಜಗತ್ತನ್ನು ಸರ್ವ ನಾಶ ಮಾಡಬಲ್ಲ ಅಣು ಬಾಂಬುಗಳು ಅಪನ್ಹೈಮರ್ ಊಹಿಸಿದಂತೆ ಹಲವು ರಾಷ್ಟ್ರಗಳ ಶಸ್ತ್ರಾಗಾರ ಸೇರಿದೆ. ಇದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಸುವ ಕೆಲಸವನ್ನು ಚಿತ್ರ ಮಾಡಿದೆ.

ಸೆನ್ಸಿಟಿವಿಟಿ ಇರುವ ಮನುಷ್ಯ ಒಪ್ಪಿತವಲ್ಲದ ರೀತಿಯಿಂದ ಬಂದ ಕೀರ್ತಿಯನ್ನು ಅರಗಿಸಿಕೊಳ್ಳಲಾರ. ಅಪನ್ಹೈಮರ್‌ಗೆ ಬಾಂಬಿನ‌ ಪರಿಣಾಮಗಳು ಗಾಢವಾಗಿ ತಟ್ಟಿವೆ. ಮಾತನಾಡುವಾಗ ಹಿನ್ನೆಲೆಯಲ್ಲಿ, ದೃಶ್ಯರೂಪದಲ್ಲಿ ಇದನ್ನು ತಂದಿದ್ದು ಪರಿಣಾಮಕಾರಿಯಾಗಿದೆ. ಈ ನೋವಿನ ಬಿಸಿ ನೋಡುಗನಿಗೂ ದಾಟುತ್ತವೆ. ಲೂಯಿಸ್ ಸ್ಟ್ರಾಸ್ ಥರದವರು ಎಲ್ಲಾ ಕಾಲಗಳಲ್ಲೂ ಇರುತ್ತಾರೆ. ಅಪನ್ಹೈಮರ್ ವಿರುದ್ಧ ಕೆಲವರು ಸಾಕ್ಷ್ಯ ನೀಡಿದರೂ, ಪರವಾಗಿ ಧೈರ್ಯದಿಂದ ಹೇಳಿಕೆ ನೀಡಿದವರೂ ಇದ್ದರೆನ್ನುವುದು ನ್ಯಾಯದ ಮೇಲಿನ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ.

ತನ್ನ ವಿರುದ್ಧದ ಹೇಳಿಕೆಗಳಿಗೆ ಅಪನ್ಹೈಮರ್ ವಿಚಲಿತನಾಗುವುದಿಲ್ಲ. ಹೆಂಡತಿ ವಿರೋಧಿಯ ಕೈ ಕುಲುಕಿದ್ದಕ್ಕೆ ‘ನೀನು ಹುತಾತ್ಮನಾಗಬೇಡ’ ಎಂದು ನಿಷ್ಠುರವಾಗಿ ಪ್ರತಿಕ್ರಿಯಿಸುತ್ತಾಳೆ.‌ ಅಪನ್ಹೈಮರ್‌ಗೆ ತನಗೊದಗುವ ಶಿಕ್ಷೆಗಿಂತ ಅಣುಬಾಂಬಿನ ದುಷ್ಪರಿಣಾಮಗಳ‌ ಕಾಳಜಿಯೇ ಮುಖ್ಯ ಎನ್ನುವುದನ್ನು ಬಿಂಬಿಸುವಲ್ಲಿ ಚಿತ್ರ ಸಫಲವಾಗಿದೆ. ಕೊನೆಯ ದೃಶ್ಯದಲ್ಲಿ ‘What of it’ ಎಂದು ಐನ್ ಸ್ಟೈನ್ ಕೇಳುವಾಗ ಅಪನ್ಹೈಮರ್ ‘I believe we did it’ ಅನ್ನುತ್ತಾನೆ. ನಾವು‌ ಬಾಂಬ್ ಹಾಕಿ ಗೆದ್ದೆವು ಎಂದೂ, ಜಗತ್ತನ್ನು‌ ವಿನಾಶದತ್ತ ಒಯ್ದೆವು ಎಂದೂ ಅರ್ಥೈಸಬಹುದು. ಚಿಂತನೆಗೆ ಹಚ್ಚುವುದರೊಂದಿಗೆ, ಜಗತ್ತಿನ ವಿನಾಶದ ಬಗ್ಗೆ ಕಾಳಜಿಯನ್ನು ಮೂಡಿಸುವಲ್ಲೂ ಚಿತ್ರ ಯಶಸ್ವಿಯಾಗುತ್ತದೆ.

LEAVE A REPLY

Connect with

Please enter your comment!
Please enter your name here