ಕಾಟೇರ 80ರ ದಶಕದ ಕತೆಯಾದರೂ ಅಲ್ಲಿರುವ ಎಷ್ಟೋ ಸಾಮಾಜಿಕ ಸಮಸ್ಯೆಗಳು ಈಗಲೂ ಪ್ರಸ್ತುತ. ಆರ್ಟ್ ಸಿನಿಮಾಗಳು ಎಷ್ಟೇ ಕಲಾತ್ಮಕವಾಗಿ ಇಂತಹ ವಿಷಯಗಳನ್ನು ತೋರಿಸಿದರೂ, ಮೇನ್‌ಸ್ಟ್ರೀಮ್‌ ಸಿನಿಮಾಗಳು, ಒಬ್ಬ ಸ್ಟಾರ್‌ ನಟನನ್ನು ಇಟ್ಟುಕೊಂಡು ಇಂತಹ ಸಾಮಾಜಿಕ ವಿಷಯಗಳ ಕುರಿತು ಮಾತನಾಡುವುದು ತೀರಾ ಮುಖ್ಯವಾಗುತ್ತದೆ. ಈ ಕೆಲಸವನ್ನು ತರುಣ್ ಮನರಂಜನಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಿದ್ದಾರೆ.

ಎಂಬತ್ತರ ದಶಕದ, ಹಳ್ಳಿಯ ಕಥಾವಸ್ತು ಹೊಂದಿದ್ದ ಸಿನಿಮಾಗಳಲ್ಲಿ, ಊರಿನ ಗೌಡನೋ, ಪಟೇಲನೋ, ಶ್ಯಾನುಭೋಗನೋ ಅಥವಾ ಎಲ್ಲರೂ ಸೇರಿಯೋ ನಡೆಸುವ ದುಷ್ಟ ಕಾರ್ಯಗಳು, ಅವರ ದುರುಳತನಗಳು ಮತ್ತು ಅವರನ್ನು ಎದುರಿಸಿ ಊರಿನ ಬಡವರನ್ನು ರಕ್ಷಿಸುವ ನಾಯಕನ ಕತೆಗಳನ್ನು ಸಾಕಷ್ಟು ನೋಡಿದ್ದೇವೆ. ಇಂತಹ ಮುಖ್ಯವಾಹಿನಿಯ ಸಿನಿಮಾಗಳು ಈ ಸಂಘರ್ಷವನ್ನು ಹೆಚ್ಚಾಗಿ ನೋಡುತ್ತಿದ್ದದ್ದು ಶ್ರೀಮಂತ ಮತ್ತು ಬಡವರ ನಡುವಿನ ಅಂತರವಾಗಿ, ಕದನವಾಗಿ. ಆದರೆ, ಹಳ್ಳಿಗಳಲ್ಲಿ ಅತೀ ವ್ಯಾಪಕವಾಗಿದ್ದ ಜಾತಿಪದ್ಧತಿಯ ಬಗ್ಗೆ ಮಾತ್ರ ದೊಡ್ಡ ಮಟ್ಟದಲ್ಲಿ ಈ ಸಿನಿಮಾಗಳು ಮಾತನಾಡುತ್ತಿರಲಿಲ್ಲ.

ಅಲ್ಲಿ ಇಲ್ಲಿ ಸಣ್ಣ ಉಲ್ಲೇಖಗಳು ಕಂಡರೂ, ಜಮೀನ್ದಾರ ಮತ್ತು ಬಡವರ ನಡುವಿನ ಸಂಘರ್ಷವನ್ನು ವರ್ಗ ಸಂಘರ್ಷವಾಗಿ ಬಿಂಬಿಸಲಾಗುತ್ತಿತ್ತೇ ಹೊರತು ಅಲ್ಲಿ ಜಾತಿ ಸಂಘರ್ಷ ಮುನ್ನೆಲೆಗೆ ಬರುತ್ತಿದ್ದದ್ದು ಕಡಿಮೆಯೇ. ಉದಾಹರಣೆಗೆ ನಾಯಕ ನಾಯಕಿ ನಡುವಿನ ಪ್ರೀತಿಗೆ ಅಂತಸ್ತು ಅಡ್ಡಿಯಾದ ಸಿನಿಮಾಗಳ ಹೆಸರು ಕೇಳಿದರೆ ಸಾಲು ಸಾಲು ನೆನಪಾಗುತ್ತವೆ, ಆದರೆ, ಜಾತಿ ತಾರತಮ್ಯ ಪ್ರೀತಿಗೆ ಅಡ್ಡವಾಗುವ ಸಿನಿಮಾಗಳ ಹೆಸರು ಕೇಳಿದರೆ ಯೋಚಿಸುವಂತಾಗುತ್ತದೆ. ತರುಣ್ ಸುಧೀರ್ ನಿರ್ದೇಶನದ ಹೊಸ ಚಿತ್ರ ‘ಕಾಟೇರ’, ದರ್ಶನ್‌ರಂತಹ ದೊಡ್ಡ ಮಾಸ್ ಹೀರೋನನ್ನು ಇಟ್ಟುಕೊಂಡು, ಜಮೀನ್ದಾರಿ ಪದ್ಧತಿ ಮತ್ತು ಅದಕ್ಕೆ ಅಂಟಿಕೊಂಡಿರುವ ಜಾತಿ ವ್ಯವಸ್ಥೆಯೂ ಸೇರಿದಂತೆ ಅನೇಕ ಸಾಮಾಜಿಕ ವಿಷಯಗಳ ಬಗ್ಗೆ ಮಾತನಾಡುತ್ತದೆ ಎಂಬುದೇ ದೊಡ್ಡ ವಿಶೇಷ.

ಚಿತ್ರದ ಮುಖ್ಯ ಕತೆ ನಡೆಯುವುದು ಭೀಮನಹಳ್ಳಿ ಮತ್ತು ಮಲ್ಲನಕೆರೆ ಎಂಬ ಗ್ರಾಮಗಳಲ್ಲಿ. ಆ ಊರುಗಳನ್ನು ಆಳುತ್ತಿರುವವರು ಇಬ್ಬರು ದುರುಳ ಜಮೀನ್ದಾರರು. ಭೀಮನಹಳ್ಳಿಯಲ್ಲಿ ಕಮ್ಮಾರಿಕೆ ನಡೆಸುತ್ತಿರುವ ಕಾಟೇರನ (ದರ್ಶನ್) ಇರುವುದರಲ್ಲೇ ಸುಖ, ನೆಮ್ಮದಿಯ ಜೀವನ. ಅಮ್ಮ, ಅಕ್ಕ, ಭಾವ, ಮತ್ತು ಊರ ಮಂದಿಯ ಜೊತೆಗೆ ಸೌಹಾರ್ಧದ, ಪ್ರೀತಿಯ ಬದುಕು. ಊರ ರಾಜಕೀಯಕ್ಕೆ ತಲೆ ಹಾಕದೆ ತನ್ನ ಕೆಲಸ ಮಾಡಿಕೊಂಡು, ಊರಿನ ರೀತಿ ರಿವಾಜಿನಂತೆ ತಗ್ಗಿ ಬಗ್ಗಿ ನಡೆಯುವ ಕಾಟೇರನನ್ನು ಕಂಡರೆ ಊರಿನ ಶ್ಯಾನುಭೋಗರ ಮಗಳು ಪ್ರಭಾವತಿಗೆ (ಆರಾಧನಾ ರಾಮ್) ಹುಚ್ಚು ಪ್ರೇಮ. ತಮ್ಮ ನಡುವೆ ಇರುವ ಹಲವು ರೀತಿಯ ಅಂತರಗಳನ್ನು ಅರಿತಿರುವುದರಿಂದ, ಪ್ರಭಾಳ ಪ್ರೇಮವನ್ನೂ ನಿರಾಕರಿಸುವ ಶಾಂತ ಗುಣದ ಕಾಟೇರ ಕೊನೆಗೊಮ್ಮೆ ಸಿಡಿದೇಳುತ್ತಾನೆ. ಅದು ಏಕೆ ಮತ್ತು ಅವನು ಎಚ್ಚೆತ್ತಾಗ ಇಡೀ ಊರೇ ಹೇಗೆ ಎದ್ದು ನಿಲ್ಲುತ್ತದೆ ಎಂಬುದು ಕಥಾಹಂದರ.

‘ಕಾಟೇರ’ದ ದೊಡ್ಡ ಶಕ್ತಿ ಅದರ ಕತೆ. ಭೂಸುಧಾರಣಾ ಕಾಯ್ದೆಯ ಸಂದರ್ಭವನ್ನು ಆಯ್ದುಕೊಂಡು ಅದರೊಳಗೆ ಜಾತಿ ತಾರತಮ್ಯ, ಜಮೀನ್ದಾರರ ದಬ್ಬಾಳಿಕೆ, ಮರ್ಯಾದ ಹತ್ಯೆ, ರೈತರ ಬದುಕು ಬವಣೆ ಮುಂತಾದ ಹಲವು ಸಂಗತಿಗಳನ್ನು ಹೆಣೆಯಲಾಗಿದೆ. ಕತೆಯನ್ನು ಮೂರು ಟ್ರ್ಯಾಕ್‌ಗಳಲ್ಲಿ ನಿರೂಪಿಸಿರುವುದು ಇತ್ತೀಚಿನ ಶೈಲಿಯೇ. ಆದರೆ, ಸಿನಿಮಾದ ಕತೆಯಂತೆಯೇ ತೆರೆಯ ಮೇಲೆ ಕಾಣುವ ಸಿನಿಮಾದ ಒಟ್ಟು ನೋಟಕ್ಕೂ ಎಂಬತ್ತರ ದಶಕದ ಗುಂಗಿದೆ. ಹಾಗಂತ, ಚಿತ್ರ ಪುರಾತನ ಎಂದೇನೂ ಅನಿಸುವುದಿಲ್ಲ, ಮೊದಲಾರ್ಧದಲ್ಲಿ ಪಾತ್ರಗಳ ಮತ್ತು ಕತೆಯ ಪರಿಸರವನ್ನು ಪರಿಚಯಿಸುವ ನಿರ್ದೇಶಕರು ಚಿತ್ರಕ್ಕೊಂದು ಸಶಕ್ತ ಅಡಿಪಾಯ ಹಾಕುತ್ತಾರೆ.

ಡಿಬಾಸ್‌ ಹೀರೋ ಆಗಿದ್ದರೂ, ನಿರ್ದೇಶಕರು ಭರ್ಜರಿ ಹೀರೋ ಎಂಟ್ರಿ ದೃಶ್ಯವನ್ನೇನೋ ಸಂಯೋಜಿಸಿಲ್ಲ. ಆ್ಯಕ್ಷನ್ ಚಿತ್ರವೇ ಆದರೂ ಮೊದಲ ಹೊಡೆದಾಟದ ದೃಶ್ಯ ಬರುವುದೇ ಒಂದು ಗಂಟೆಯ ನಂತರ. ಅಂದರೆ, ಅನಗತ್ಯವಾಗಿ ಫೈಟ್‌ ಸೀನ್‌ಗಳಿಂದ ಚಿತ್ರವನ್ನು ತುಂಬಿಸಿಲ್ಲ. ಆದರೆ, ಚಿತ್ರದ ದ್ವಿತಿಯಾರ್ಧ ಹೆಚ್ಚು ಮಾಸ್‌ ಆಗುತ್ತಾ ಹೋಗುತ್ತದೆ. ಮೂರೂ ಗಂಟೆಗಿಂತ ದೊಡ್ಡದಿರುವ ಸಿನಿಮಾದ ಕೊನೆಕೊನೆಗೆ ಇಷ್ಟು ಹಿಂಸೆಯ ಅಗತ್ಯವಿತ್ತೇ ಎನಿಸತೊಡಗುತ್ತದೆ. ಚಿತ್ರದಲ್ಲಿರುವುದು ಮೂರೇ ಫೈಟ್ ಸೀಕ್ವೆನ್ಸ್ ಆದರೂ ಅವು ದೊಡ್ಡದಾಗಿವೆ ಮತ್ತು ಪ್ರತಿಯೊಂದನ್ನು ವಿಭಿನ್ನವಾಗಿಸಲು ಯತ್ನಿಸಲಾಗಿದೆ. ಎರಡು ಪ್ರೇಮ ಗೀತೆಗಳ ಅಗತ್ಯವಿರಲಿಲ್ಲ. ಅವು ಒಂದರ ಹಿಂದೆ ಒಂದು ಬಂದಂತೆ ಅನಿಸುತ್ತದೆಯಲ್ಲದೆ, ಹಾಡುಗಳು ಕೇಳಿ ಮರೆತುಬಿಡುವಂತಿರುವುದರಿಂದ, ಚಿತ್ರಕ್ಕೆ ಹೊಸದೇನನ್ನೂ ನೀಡುವುದಿಲ್ಲ. ಬದಲಿಗೆ ಸಿನಿಮಾದ ಅವಧಿಯನ್ನು ಹಿಗ್ಗಿಸಿವೆಯಷ್ಟೆ.

ಹಿಂಸೆಯಿಂದ ಕೂಡಿದ ಚಿತ್ರದ ಅಂತ್ಯದಲ್ಲಿ, ನಾಯಕನೇ ದ್ವೇಷ ಮರೆಯುವ ಮಾತನಾಡುತ್ತಾನೆ. ನಾಯಕನ ಉದ್ದದ ಮೊನೋಲಾಗ್ ಸ್ವಲ್ಪ ಉಪದೇಶದಂತೆ ಕೇಳುತ್ತದೆ. ಆದರೆ, ಉತ್ತಮ ಸಂದೇಶವನ್ನು ನೀಡುತ್ತದೆ. ಒಂದು ಮಾಸ್ ಸಿನಿಮಾದಲ್ಲಿ ಸಂದೇಶಗಳನ್ನು ಸೂಕ್ಷ್ಮರೀತಿಯಲ್ಲಿ ದಾಟಿಸಬೇಕು ಎಂದು ನಿರೀಕ್ಷಿಸುವುದು ತಪ್ಪಾದ್ದರಿಂದ, ಆ ಕೊನೆಯ ಭಾಷಣವನ್ನು ಒಪ್ಪಿಕೊಳ್ಳಬಹುದು. ಸಿನಿಮಾದಲ್ಲಿ ನಾಯಕ ತಯಾರಿಸುವ ಆಯುಧಗಳಿಂಗಿಂತ ಹರಿತವಾದ ಸಂಭಾಷಣೆಗಳಿವೆ. ನಾಯಕನಿಗೆ ಮಾತ್ರವಲ್ಲದೇ ಎಲ್ಲಾ ಪಾತ್ರಗಳಿಗೂ ಒಳ್ಳೆಯ ಸಂಭಾಷಣೆಗಳನ್ನು ನೀಡಿರುವುದು ವಿಶೇಷ. ಜೊತೆಗೆ, ಇವು ಯಾವುದೂ ತರ್ಕವಿಲ್ಲದ ಮಾಸ್ ಡೈಲಾಗ್‌ಗಳಾಗಿರದೆ, ಅರ್ಥವತ್ತಾಗಿರುವುದು ಖುಷಿ ಕೊಡುತ್ತದೆ. ಪ್ರತೀ ದೃಶ್ಯದಲ್ಲೂ ಇಂತಹ ಒಂದು ಶಕ್ತಿಶಾಲಿ ಡೈಲಾಗ್‌ ಬರೆದಿರುವ ಮಾಸ್ತಿ ಚಿತ್ರವನ್ನು ಬೇರೆಯದೇ ಎತ್ತರಕ್ಕೆ ಏರಿಸಿದ್ದಾರೆ. ಸಿನಿಮಾದಲ್ಲಿ ಬಳಕೆಯಾಗಿರುವ ಗಾದೆಗಳೂ ಕೂಡ ನೆಲದ ಸೊಗಡಿನಿಂದ ತುಂಬಿವೆ. ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಜಡೇಶ್‌ ಕೆ ಹಂಪಿ ಚಿತ್ರಕಥೆ ಸಿದ್ಧಪಡಿಸುವ ಸಂದರ್ಭದಲ್ಲಿ ಸಾಕಷ್ಟು ಹೋಂವರ್ಕ್‌ ಮಾಡಿದ್ದಾರೆ. ಸಿನಿಮಾದಲ್ಲಿ ಹಲವು ರೀತಿಯ ಕನ್ನಡ ಡಯಲೆಕ್ಟ್‌ಗಳು ಕೇಳಿಬರುವುದರಿಂದ ಕತೆ ನಡೆಯುವ ಪ್ರಾಂತ್ಯವನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟವಾಗುತ್ತದೆ. ಆದರೆ, ಅದು ತೊಂದರೆಯೆಂದಾಗಲಿ, ಅಸಹಜ ಎಂದಾಗಲಿ ಅನಿಸುವುದಿಲ್ಲ.

ಸ್ಟಾರ್‌ ನಟರು ಭ್ರಷ್ಟಾಚಾರ, ಬಡತನ, ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರದ ಅವ್ಯವಸ್ಥೆಗಳು ಇಂತಹ ಸಾರ್ವತ್ರಿಕವಾಗಿ ಒಪ್ಪಿತವಾಗಿರುವ ಸಮಸ್ಯೆಗಳನ್ನು ತಮ್ಮ ಕಮರ್ಷಿಯಲ್ ಸಿನಿಮಾಗಳಲ್ಲಿ ತರುತ್ತಾರೆ. ಆದರೆ, ಜಾತಿ ಪದ್ಧತಿಯಂತಹ ಹೆಚ್ಚು ಸೂಕ್ಷ್ಮವಾದ ವಿಷಯಗಳನ್ನು ಮುಟ್ಟಲು ಹಿಂಜರಿಯುತ್ತಾರೆ. ಆ ದೃಷ್ಟಿಯಲ್ಲಿ ನೋಡಿದರೆ ಇದು ಕನ್ನಡದ ಮಟ್ಟಿಗೆ ಅಪರೂಪವೆನಿಸುವ ಪೊಲಿಟಿಕಲ್ ಸಿನಿಮಾ. ಹೀಗಾಗಿ, ದರ್ಶನ್ ಇದನ್ನು ಕೈಗೆತ್ತಿಕೊಂಡಿರುವುದು ಪ್ರಶಂಸನೀಯ. ಮತ್ತು ದರ್ಶನ್ ಮಾಸ್ ಅಪೀಲ್ ಅನ್ನು ಸಮರ್ಪಕವಾಗಿ ಬಳಸಿಕೊಂಡು ತರುಣ್ ಕೆಲವು ವಿಷಯಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಯತ್ನಿಸಿರುವುದೂ ಕೂಡ ಶ್ಲಾಘನೀಯ. ದರ್ಶನ್ ಅವರನ್ನು ಎರಡು ರೀತಿಯ ಪಾತ್ರದಲ್ಲಿ ನೋಡುವುದಕ್ಕೆ ಸಿಗುತ್ತದೆಯಾದ್ದರಿಂದ ಅವರ ಅಭಿಮಾನಿಗಳಿಗೆ ಇದು ಖಂಡಿತಾ ಖುಷಿ ಕೊಡುವ ಸಿನಿಮಾ. ಜೊತೆಗೆ, ಅಭಿನಯಕ್ಕೂ ಸಾಕಷ್ಟು ಅವಕಾಶವಿರುವುದರಿಂದ ದರ್ಶನ್ ತಮ್ಮ ಸ್ಕ್ರೀನ್ ಪ್ರಸೆನ್ಸ್‌ ಜೊತೆಗೆ, ಸಿನಿಮಾದ ಭಾವನಾತ್ಮಕ ಸನ್ನಿವೇಶಗಳಲ್ಲೂ ಗೆಲ್ಲುತ್ತಾರೆ.

ಚಿತ್ರದ ಇನ್ನೊಂದು ಖುಷಿಯ ಅಂಶವೆಂದರೆ, ಮಾಸ್ ಸಿನಿಮಾಗಳಲ್ಲಿ ಸಾಧಾರಣವಾಗಿ ಆಗುವಂತೆ ನಾಯಕಿ ಪಾತ್ರವನ್ನು ಕೇವಲ ಡ್ಯೂಯೆಟ್‌ಗೆ ಬಳಸಿಕೊಂಡಿಲ್ಲ. ನಾಯಕಿಗೊಂದು ಸಶಕ್ತ, ಗಟ್ಟಿ ವ್ಯಕ್ತಿತ್ವ ನೀಡಲಾಗಿದೆ. ನಟಿ ಮಾಲಾಶ್ರೀ ಮಗಳು ಅರಾಧನಾ ರಾಮ್‌ಗೆ ಇದು ಚೊಚ್ಚಲ ಚಿತ್ರವಾಗಿದ್ದು, ಅಭಿನಯಕ್ಕೆ ಉತ್ತಮ ಅವಕಾಶ ದೊರಕಿದೆ. ಮೊದಲಿಗೆ ಅಷ್ಟೇನೂ ಸೆಳೆಯದ ಈ ಪಾತ್ರ ನಂತರ ನಿಧಾನವಾಗಿ ಬೆಳೆಯುತ್ತಾ ಹೋಗುತ್ತದೆ ಮತ್ತು ಆರಾಧನಾ ನಟಿಯಾಗಿಯೂ ಬೆಳೆಯುತ್ತಾ ಹೋಗುತ್ತಾರೆ. ಕುಮಾರ್ ಗೋವಿಂದ್ ತಮ್ಮೆಲ್ಲಾ ನಾಯಕ ಪಾತ್ರಗಳಿಗಿಂತಲೂ ಈ ಸಿನಿಮಾದಲ್ಲೇ ಚೆನ್ನಾಗಿ ಅಭಿನಯಿಸಿದ್ದಾರೆ. ಬಿರಾದರ್, ಶೃತಿ ಗಮನ ಸೆಳೆಯುತ್ತಾರೆ. ಅಚ್ಯುತ್ ಪ್ರತಿಭೆಯ ಸದುಪಯೋಗವಾಗಿಲ್ಲ. ಅವರಿಗೆ ಹೆಚ್ಚೇನು ಅವಕಾಶ ಸಿಕ್ಕಿಲ್ಲ. ಖಳನಟರಾಗಿ ಜಗಪತಿ ಬಾಬು ಮತ್ತು ವಿನೋದ್ ಆಳ್ವ ನಟನೆಯಲ್ಲಿ ಮಿಂಚುತ್ತಾರೆ. ಆದರೆ, ನಿರ್ದೇಶಕರು ಅವರ ಪಾತ್ರಗಳನ್ನು ಸರಿಯಾಗಿ ಕಟ್ಟಿಲ್ಲ. ನಾಯಕನಿಗೆ ಸಮನಾದ ಸಶಕ್ತ ಖಳ ಪಾತ್ರ ಇಲ್ಲದಿರುವುದು ಚಿತ್ರದ ಕೊರತೆಯೂ ಹೌದು. ಹಾಗೆ ನೋಡಿದರೆ, ಅವಿನಾಶ್ ಪಾತ್ರದ ಕಟ್ಟುವಿಕೆ ಮತ್ತು ಬೆಳವಣಿಗೆ ಉತ್ತಮವಾಗಿದೆ.

ಸುಧಾಕರ್ ಕ್ಯಾಮರಾ ವರ್ಕ್ ತುಂಬಾ ಚೆನ್ನಾಗಿದೆ. ಹರಿಕೃಷ್ಣ ಅವರ ಬಿಜಿಎಂ ಸೂಕ್ತವಾಗಿದೆ ಆದರೆ, ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಭಾರತೀಯ ಚಿತ್ರರಂಗದವರು ಮೇಕಪ್‌ ವಿಷಯದಲ್ಲಿ ಮಾತ್ರ ಪದೇ ಪದೇ ಎಡವುತ್ತಾರೆ. ನಾಯಕನೂ ಸೇರಿದಂತೆ ಎಲ್ಲರ ವಿಗ್‌ಗಳು, ಕೃತಕ ಮೀಸೆ, ಗಡ್ಡಗಳು ಅಸಹಜವಾಗಿ ಕಾಣುತ್ತವೆ. ವಯಸ್ಸಾದ ದರ್ಶನ್ ಪಾತ್ರವನ್ನು ಅಗತ್ಯಕ್ಕಿಂತ ಹೆಚ್ಚು ಮುದುಕನನ್ನಾಗಿಸಲಾಗಿದೆ. 15 ವರ್ಷದ ಅಂತರದ ಉಳಿದವರಿಗಿಂತ ಎರಡು ಪಟ್ಟು ಜಾಸ್ತಿ ವಯಸ್ಸಾದಂತೆ ತೋರಿಸಲಾಗಿದೆ. ಜೊತೆಗೆ, ಚಿತ್ರದ ಪ್ರಕಾರ ಒಂದು ಕಥಾ ಹಳಿಯ ಕಾಲಘಟ್ಟವೂ 80ರ ದಶಕ. ಆದರೆ, ಅಲ್ಲಿ ಬರುವ ಫೋರೆನ್ಸಿಕ್ ಅಧಿಕಾರಿ 2020ರ ದಶಕದವರಂತೆ ಕಾಣುತ್ತಾರೆ ಮತ್ತು ನಡೆದುಕೊಳ್ಳುತ್ತಾರೆ.

ಕಾಟೇರ 80ರ ದಶಕದ ಕತೆಯಾದರೂ ಅಲ್ಲಿರುವ ಎಷ್ಟೋ ಸಾಮಾಜಿಕ ಸಮಸ್ಯೆಗಳು ಈಗಲೂ ಪ್ರಸ್ತುತ. ಆರ್ಟ್ ಸಿನಿಮಾಗಳು ಎಷ್ಟೇ ಕಲಾತ್ಮಕವಾಗಿ ಇಂತಹ ವಿಷಯಗಳನ್ನು ತೋರಿಸಿದರೂ, ಮೇನ್‌ಸ್ಟ್ರೀಮ್‌ ಸಿನಿಮಾಗಳು, ಒಬ್ಬ ಸ್ಟಾರ್‌ ನಟನನ್ನು ಇಟ್ಟುಕೊಂಡು ಇಂತಹ ಸಾಮಾಜಿಕ ವಿಷಯಗಳ ಕುರಿತು ಮಾತನಾಡುವುದು ತೀರಾ ಮುಖ್ಯವಾಗುತ್ತದೆ. ಈ ಕೆಲಸವನ್ನು ತರುಣ್ ಮನರಂಜನಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here