ಬದುಕುಳಿದ ನಂತರದವರ ಮನಸ್ಥಿತಿ ಏನು? ನಾವೇ ಅವರ ಸ್ಥಳದಲ್ಲಿ ಇದ್ದಿದ್ದರೆ, ನಮಗೇ ಮತ್ತೊಬ್ಬರನ್ನು ತಿಂದು ಬದುಕುವ ಸ್ಥಿತಿ ಬಂದಿದ್ದರೆ ನಾವು ಏನನ್ನು ಆಯ್ಕೆ ಮಾಡಿಕೊಳ್ಳುತ್ತಾ ಇದ್ದೆವು? ಅಂತಿಮವಾಗಿ ನಮ್ಮ ಉಳಿವು ಇತರರ ಮೇಲಿನ ಅನುಕಂಪಕ್ಕಿಂತ ಮುಖ್ಯವೇ? ಮತ್ತೊಬ್ಬರನ್ನು ಭಕ್ಷಿಸಿ ನಾವು ಉಳಿದುಕೊಂಡರೂ ಅದು ನಮ್ಮನ್ನು ಕಾಡದೇ ಬಿಡುತ್ತದೆಯೇ? ಎಂಬಿತ್ಯಾದಿ ಅನೇಕ ತಾತ್ವಿಕ ದ್ವಂದ್ವಗಳನ್ನು ನಮ್ಮಲ್ಲಿ ಹುಟ್ಟುಹಾಕುವ ಚಿತ್ರವಿದು. ‘ಸೊಸೈಟಿ ಆಫ್ ದ ಸ್ನೋ’ Netflixನಲ್ಲಿ ಲಭ್ಯವಿದೆ.
ಕೆಲವು ಹೇಳಲಾರದ ಆದರೂ ಹೇಳಲೇಬೇಕಾದ ಕಥೆಗಳು ಇರುತ್ತವೆ. ಆಂಡಸ್ ದುರಂತದ ಬದುಕುಳಿದವರ ಕಥೆ ಕೂಡ ಅಂಥದ್ದೇ ಒಂದು ಕಥೆ. 1972ನೇ ಇಸವಿ ಅಕ್ಟೊಬರ್ 13ರಂದು ಆಂಡಸ್ ಪರ್ವತದಲ್ಲಿ ಅಪ್ಪಳಿಸಿ ದುರಂತಕ್ಕೆ ಈಡಾದ ಉರುಗ್ವೆ ವಾಯುಸೇನೆಯ ವಿಮಾನ 571ರ ಘೋರ ಕಥೆ ಇದು. ಅವೆಷ್ಟೋ ಜನ ಹಲವು ಬಾರಿ ಈ ಕಥೆಯನ್ನು ಹೇಳುತ್ತಲೇ ಬಂದಿದ್ದಾರೆ. ಆದರೂ ಆ ದುರಂತದ ತೀವ್ರತೆಯ ಹತ್ತಿರಕ್ಕೂ ಹೋಗಲು ಯಾರಿಗೂ ಸಾಧ್ಯವಾಗಿಲ್ಲ. ಪಾಬ್ಲೋ ವಿಯರ್ಸಿ 2019 ಅಲ್ಲಿ ಈ ದುರಂತದಲ್ಲಿ ಬದುಕುಳಿದವರ ಬಗ್ಗೆ ಬರೆದ ಪುಸ್ತಕ ‘ಅಲೈವ್’ ಆಧರಿಸಿ ಈಗ ‘ಸೊಸೈಟಿ ಆಫ್ ದ ಸ್ನೋ’ ಸಿನಿಮಾ ಬಿಡುಗಡೆಯಾಗಿದೆ. ಈ ಹಿಂದೆ ಇದೇ ಘಟನೆಯ ಬಗ್ಗೆ ಬಂದ ಸುಮಾರು ಚಿತ್ರಗಳಲ್ಲಿ ಅನೇಕ ತಪ್ಪುಗಳು ನುಸುಳಿದ್ದು ಈ ಚಿತ್ರದ ನಿರ್ದೇಶಕರಾದ ಬಯೋನ ಅಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸಿದ್ದಾರೆ.
ಈ ದುರಂತದ ವಿವರಗಳೇ ಬಹಳ ಭಯ ಹುಟ್ಟಿಸುವಂಥದ್ದು. ವಿಮಾನ, ಪರ್ವತಕ್ಕೆ ಅಪ್ಪಳಿಸಿದಾಗ ಅಕ್ಷರಶಃ ಅರ್ಧಕ್ಕೆ ಸೀಳಿ ಸುಮಾರು ಜನ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಅವೆಷ್ಟೋ ದಿನಗಳ ವ್ಯರ್ಥ ಹುಡುಕಾಟದ ನಂತರ ಕಾರ್ಯಾಚರಣೆಯನ್ನೇ ಕೈಬಿಡಲಾಗಿತ್ತು. ಬದುಕುಳಿದ ಕೆಲವು ಮಂದಿ ಉಳಿವಿಗಾಗಿ ತಮ್ಮ ಜೊತೆಗಾರರನ್ನೇ ತಿನ್ನುವ ನರಭಕ್ಷಕರಾಗಿ ಬದಲಾಗಿದ್ದರು. ಒಂದು ಹಿಮಪಾತದ ಅಡಿಯಲ್ಲಿ ಸುಮಾರು ಜನ ಸಿಲುಕಿ ಹೂತುಹಾಕಿದಂತೆ ಆಗಿದ್ದರು. ಹಿಮ ಕರಗಿದ ನಂತರ ಇಬ್ಬರು ರಗ್ಬಿ ಆಟಗಾರರು ಚಿಲಿ ದೇಶಕ್ಕೆ ಹೋಗುವ ಪ್ರಯತ್ನ ಮಾಡಿ ಈ ಬೆಟ್ಟ ಹತ್ತಲು ಶುರುಮಾಡಿದರು. ಅವರ ಬಳಿ ಯಾವುದೇ ರೀತಿಯ ಸಲಕರಣೆಗಳು ಅಥವಾ ಅನುಭವ ಇರಲಿಲ್ಲ. ಆದರೂ ಪ್ರಯತ್ನ ಬಿಡದ ಅವರು ಹಾಗೂ ಹೀಗೂ ರಕ್ಷಣಾ ಹೆಲಿಕಾಪ್ಟರ್‌ಗಳನ್ನು ಈ ವಿಮಾನ ಅಪ್ಪಳಿಸಿದ ಸ್ಥಳದತ್ತ ಸಾಗಲು ಸಹಾಯ ಮಾಡಿದರು. ಹದಿನಾರು ಜನ ಪ್ರಯಾಣಿಕರನ್ನು ಸಜೀವವಾಗಿ ಅಲ್ಲಿಂದ ರಕ್ಷಿಸಲಾಯಿತು. ಸುದ್ದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಡಿತು.
ಬಯೋನಾರ ಈ ಚಿತ್ರ ಪಾತ್ರಪೋಷಣೆಯ ಬಗ್ಗೆ ಬಹಳ ಸಮಯ ವ್ಯರ್ಥ ಮಾಡುವುದಿಲ್ಲ. ಚಿಲಿ ದೇಶಕ್ಕೆ ರಗ್ಬಿ ಪಂದ್ಯವಾಡಲು ಹೊರಡುವ ಉತ್ಸಾಹಿ ಯುವಕರ ಪಯಣದಿಂದ ಕಥೆ ಶುರುವಾಗುತ್ತದೆ. ಅವರಲ್ಲಿ ಎಷ್ಟೋ ಮಂದಿ ಮನೇ ಬಿಟ್ಟು ಹೊರಗಿನ ಪ್ರಪಂಚವನ್ನೇ ನೋಡದವರು. ನುಮ ಟೂರ್ಕಟ್ಟಿ ಕಥೆಯನ್ನು ನಿರೂಪಿಸುತ್ತಾ ಹೋಗುತ್ತಾನೆ. ಇಂಥ ಕಥೆಗಳಲ್ಲಿ ಪಾತ್ರಗಳನ್ನು ವೈಯಕ್ತಿಕವಾಗಿ ಬೆಳೆಸುವುದು ಒಂದು ಸವಾಲು. ನಿಜವಾದ ದುರಂತದ ಕ್ಷಣ ಎದುರಾದಾಗ ಎಲ್ಲ ಪಾತ್ರಗಳೂ ತಾವಾಗಿ ಅನಾವರಣಗೊಳ್ಳುತ್ತಾ ಹೋಗುತ್ತವೆ. ವಿಮಾನ ಪರ್ವತಕ್ಕೆ ಅಪ್ಪಳಿಸುವ ದೃಶ್ಯ ಅಮೋಘವಾಗಿ ಚಿತ್ರಿತವಾಗಿದೆ. ದುರಂತ ಹೇಗೆ ನಡೆದಿರಬಹುದು ಎಂಬ ಕಲ್ಪನೆಯನ್ನು ಯಥಾವತ್ತಾಗಿ ಚಿತ್ರಿಸಲಾಗಿದೆ. ಪೆಡ್ರೋ ಲಯೂಕ್ ಅವರ ಕ್ಯಾಮೆರಾ ಕೈಚಳಕದ ಅದ್ಭುತವನ್ನು ಇಲ್ಲಿ ಕಾಣಬಹುದು. ಪರ್ವತ, ಹಿಮದ ನಡುವಿನಲ್ಲಿ ಸಿಕ್ಕಿಬೀಳುವ ಪ್ರಯಾಣಿಕರ ಆರ್ತನಾದ, ಹತಾಶೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.
ಈ ಪುಸ್ತಕವನ್ನು ಆಧರಿಸಿದ ಹಿಂದಿನ ಚಿತ್ರಗಳಲ್ಲಿ ಈ ಘಟನೆಯ ಸುತ್ತ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಆಯಾಮಗಳನ್ನು ಹೆಣೆಯಲಾಗಿತ್ತು. ಆದರೆ ‘ಸೊಸೈಟಿ ಆಫ್ ದ ಸ್ನೋ’ ಚಿತ್ರದಲ್ಲಿ ಸ್ವಲ್ಪ ವಿಭಿನ್ನ ರೀತಿಯ ದೃಷ್ಟಿಕೋನವನ್ನು ಕಟ್ಟುವ ಪ್ರಯತ್ನವಿದೆ. ದುರಂತದ ಕೆಲವೇ ದಿನಗಳ ನಂತರ ಅವರಲ್ಲೊಬ್ಬ ನಾಯಕ ಉದ್ಭವವಾಗುತ್ತಾನೆ. ಬದುಕುಳಿದರಿಗೆ ಸಹಾಯ ಮಾಡುವ, ಅವರಲ್ಲಿ ಹುರುಪು ತುಂಬುವ, ಅವರಿಗೆ ಆಹಾರ ಹುಡುಕುವ ನಾಯಕನ ರೀತಿ ಕೆಲಸಕ್ಕೆ ತೊಡಗುತ್ತಾನೆ. ಆದರೆ ಈ ದುರಂತದ ತೀವ್ರತೆಯನ್ನು ತಡೆದುಕೊಳ್ಳಲು ಇಷ್ಟು ಸಾಕಾಗುವುದಿಲ್ಲ. ನಾಯಕನಾದರೂ ಅವನೂ ಮನುಷ್ಯನೇ. ಸಾಮಾನ್ಯರಂತೆ ಒಮ್ಮೆ ಕುಸಿಯುತ್ತಾನೆ. ಎಲ್ಲ ಪ್ರಯತ್ನಗಳೂ ವಿಫಲವಾದಾಗ ರಾಬರ್ಟ್ ಮತ್ತು ನಂದೋ ಹೇಗಾದರೂ ಮಾಡಿ ಸಹಾಯ ಹುಡುಕಲು ಹೊರಡುತ್ತಾರೆ.
ದುರಂತದಲ್ಲಿ ಮೃತಪಟ್ಟವರಿಗೆ ತೆರೆಯ ಮೇಲೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಯತ್ನ ಮಾಡಲಾಗಿದೆ. ಏನೇ ಆದರೂ ಇಷ್ಟೆಲ್ಲ ಪ್ರಯತ್ನಗಳ ನಂತರವೂ ಈ ದುರಂತದ ಬಗ್ಗೆ ಹೇಳಲು ಆಗದೆಯೇ ಇರುವಂತಹ ನಿಗೂಢ ಭಾವ ಮತ್ತು ವಿಷಾದವೊಂದು ಉಳಿದುಬಿಡುತ್ತದೆ. ನಮ್ಮ ನಿಮ್ಮೊಳಗೆ ಒಂದಷ್ಟು ಪ್ರಶ್ನೆಗಳನ್ನು ಉಳಿಸಿ ನಡೆದುಬಿಡುತ್ತದೆ. ಸತ್ತವರಿಗಿಂತ ದುರಂತದಲ್ಲಿ ಬದುಕುಳಿದವರ ಪಾಡನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಅವರ ಕೊನೆಯ ಉಸಿರಿನ ತನಕ ಆ ಘಟನೆ ಅವರನ್ನು ಬಾಧಿಸದೇ ಆ ಕರಿನೆರಳು ಅವರನ್ನು ಹಿಂಬಾಲಿಸದೇ ಬಿಡುವುದಿಲ್ಲ. ಬದುಕುಳಿದ ನಂತರದವರ ಮನಸ್ಥಿತಿ ಏನು? ನಾವೇ ಅವರ ಸ್ಥಳದಲ್ಲಿ ಇದ್ದಿದ್ದರೆ, ನಮಗೇ ಮತ್ತೊಬ್ಬರನ್ನು ತಿಂದು ಬದುಕುವ ಸ್ಥಿತಿ ಬಂದಿದ್ದರೆ ನಾವು ಏನನ್ನು ಆಯ್ಕೆ ಮಾಡಿಕೊಳ್ಳುತ್ತಾ ಇದ್ದೆವು? ಅಂತಿಮವಾಗಿ ನಮ್ಮ ಉಳಿವು ಇತರರ ಮೇಲಿನ ಅನುಕಂಪಕ್ಕಿಂತ ಮುಖ್ಯವೇ? ಮತ್ತೊಬ್ಬರನ್ನು ಭಕ್ಷಿಸಿ ನಾವು ಉಳಿದುಕೊಂಡರೂ ಅದು ನಮ್ಮನ್ನು ಕಾಡದೇ ಬಿಡುತ್ತದೆಯೇ? ಎಂಬಿತ್ಯಾದಿ ಅನೇಕ ತಾತ್ವಿಕ ದ್ವಂದ್ವಗಳನ್ನು ನಮ್ಮಲ್ಲಿ ಹುಟ್ಟುಹಾಕುವ ಚಿತ್ರವಿದು. ‘ಸೊಸೈಟಿ ಆಫ್ ದ ಸ್ನೋ’ Netflixನಲ್ಲಿ ಲಭ್ಯವಿದೆ.