ಅಮಿತ್‌ ರವೀಂದ್ರನಾಥ್‌ ಶರ್ಮ ನಿರ್ದೇಶನದ ‘ಮೈದಾನ್’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಭಾರತದ ಫುಟ್‌ಬಾಲ್‌ನ ಮಾಸ್ಟರ್‌ಮೈಂಡ್ ಎಂದು ಕರೆಯಲ್ಪಡುವ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಬಯೋಪಿಕ್‌ ಚಿತ್ರವಿದು. ಅಜಯ್‌ ದೇವಗನ್‌ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಜಯ್ ದೇವಗನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮೈದಾನ್’ ಹಿಂದಿ ಚಲನಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ಅಮಿತ್ ರವೀಂದ್ರನಾಥ್ ಶರ್ಮ ನಿರ್ದೇಶಿಸಿದ್ದಾರೆ. ಇದೊಂದು ಕ್ರೀಡಾ ಬಯೋಪಿಕ್ ಕಥಾಹಂದರವಾಗಿದ್ದು, ಭಾರತದ ಫುಟ್‌ಬಾಲ್‌ನ ಮಾಸ್ಟರ್‌ಮೈಂಡ್ ಎಂದು ಕರೆಯಲ್ಪಡುವ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಕಥೆಯನ್ನು ಹೇಳಲಿದೆ. ಅಜಯ್ ದೇವಗನ್, ಸೈಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ನಟಿಸಿದ್ದಾರೆ. ‘ನಮ್ಮದು ದೊಡ್ಡ ದೇಶವೂ ಅಲ್ಲ, ಶ್ರೀಮಂತ ರಾಷ್ಟ್ರವೂ ಅಲ್ಲ. ಪ್ರಪಂಚದ ಅರ್ಧದಷ್ಟು ಜನರಿಗೆ ನಮ್ಮ ಬಗ್ಗೆ ತಿಳಿದಿಲ್ಲ. ಇಡೀ ಜಗತ್ತು ಫುಟ್ಬಾಲ್ ಆಡುವುದರಿಂದ ತನ್ನ ಗುರುತನ್ನು ಕಂಡುಕೊಂಡಿದೆ. ಫುಟ್ಬಾಲ್ ನಮ್ಮ ಗುರುತನ್ನು ಸೃಷ್ಟಿಸಲಿದೆ. ಹಾಗಾಗಿ ಭಾರತ ಮುಂದಿನ 10 ವರ್ಷಗಳ ಕಾಲ ವಿಶ್ವ ದರ್ಜೆಯ ತಂಡವನ್ನು ರೂಪಿಸುವತ್ತ ಗಮನ ಹರಿಸಬೇಕಿದೆ’ ಎನ್ನುವ ಅಜಯ್ ಅವರ ವಾಯ್ಸ್‌ ಓವರ್‌ನೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ.

ಅಬ್ದುಲ್‌ (ಅಜಯ್) ಅವರು ತಂಡವನ್ನು ರಚಿಸುವಾಗ ಕೆಲವು ಆಟಗಾರರು ಭಾರತದ ಸ್ಲಂ ಪ್ರದೇಶಗಳಿಂದ ಬರುತ್ತಾರೆ. ಇವರನ್ನು ಆಯ್ಕೆ ಮಾಡಿದ್ದಕ್ಕಾಗಿ ಅಬ್ದುಲ್ ಅವರನ್ನು ಪ್ರಶ್ನಿಸಲಾಗುತ್ತದೆ. ಆದರೆ ಅಬ್ದುಲ್ ದೃಢ ನಿರ್ಧಾರದಿಂದ ಸಾಗುತ್ತಾರೆ. ಈ ಮಧ್ಯೆ ಅನೇಕ ವೈಫಲ್ಯಗಳನ್ನು ಎದುರಿಸುತ್ತಾರೆ. ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಸೋತರೆ ಮತ್ತೆ ಕೋಚ್ ಆಗುವುದಿಲ್ಲ ಎಂದು ಮಾತು ಕೊಡುತ್ತಾರೆ. ಈ ಚಿತ್ರವು 1952 ಮತ್ತು 1962ರ ನಡುವಿನ ಭಾರತೀಯ ಫುಟ್‌ಬಾಲ್‌ನ ಸುವರ್ಣ ಯುಗದ ಕುರಿತು ಹೇಳಲಿದೆ. ಚಲನಚಿತ್ರದಲ್ಲಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಜರಾಜ್ ರಾವ್ ಮತ್ತು ಬೆಂಗಾಲಿ ನಟ ರುದ್ರನೀಲ್ ಘೋಷ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. Zee Studio ಬ್ಯಾನರ್‌ ಅಡಿಯಲ್ಲಿ ಬೋನಿ ಕಪೂರ್, ಅರುಣವ್‌ ಜಾಯ್ ಸೇನ್‌ಗುಪ್ತಾ ಮತ್ತು ಆಕಾಶ್ ಚಾವ್ಲಾ ಚಿತ್ರ ನಿರ್ಮಿಸಿದ್ದಾರೆ. ಸೈವಿನ್ ಕ್ವಾಡ್ರಾಸ್ ಅವರ ಚಿತ್ರಕಥೆ, ರಿತೇಶ್ ಶಾ ಸಂಭಾಷಣೆ ಚಿತ್ರಕ್ಕಿದೆ. ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಏಪ್ರಿಲ್ 10ರಂದು ಸಿನಿಮಾ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here