ಗಿರೀಶ್ ಮೂಲಿಮನಿ ನಿರ್ದೇಶನದ ‘ಭುವನಂ ಗಗನಂ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಪ್ರಮೋದ್, ರೇಚೆಲ್ ಡೇವಿಡ್, ಅಶ್ವಥಿ ಮತ್ತು ಪೃಥ್ವಿ ಅಂಬಾರ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಮುನೇಗೌಡ ಚಿತ್ರದ ನಿರ್ಮಾಪಕರು. ನಟ ಧ್ರುವ ಸರ್ಜಾ ಟೀಸರ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಪ್ರಮೋದ್ ಹಾಗೂ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ನಟನೆಯ ಬಹುನಿರೀಕ್ಷಿತ ‘ಭುವನಂ ಗಗನಂ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಧ್ರುವ ಸರ್ಜಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ನಟ ‘ನೆನಪಿರಲಿ’ ಪ್ರೇಮ್, ನಿರ್ದೇಶಕ ಸಿಂಪಲ್ ಸುನಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಚಿತ್ರದ ನಿರ್ಮಾಪಕ ಎಂ ಮುನೇಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದೆ. ಟೀಸರ್ ಬಿಡುಗಡೆಯ ಬಳಿಕ ಧ್ರುವ ಸರ್ಜಾ ಮಾತನಾಡಿ, ‘ಚಿತ್ರದ ಶೀರ್ಷಿಕೆ ಕೇಳಿದ ತಕ್ಷಣ ನನಗೆ ಪುನೀತ್ ಸರ್ ನೆನಪಾದರು. ಭುವನಂ ಗಗನಂ ‘ವಂಶಿ’ ಚಿತ್ರದ ಗೀತೆ. ನಮ್ಮ ಅಣ್ಣ ಹಾಗೂ ಸುದೀಪ್ ಸರ್ ನಟಿಸಿದ್ದ ‘ವರದನಾಯಕ’ ಸಿನಿಮಾದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದವರು ಗಿರೀಶ್ ಮೂಲಿಮನಿ. ಇವರು ಈ ಚಿತ್ರದ ನಿರ್ದೇಶಕರು. ಸಿನಿಮಾದ ಟೀಸರ್ ನೋಡಿದೆ. ಟೇಕಿಂಗ್ಸ್ ಚೆನ್ನಾಗಿವೆ’ ಎಂದರು.
ಪ್ರಮೋದ್ ಮಾತನಾಡಿ, ‘ಭುವನಂ ಗಗನಂ ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಸಿನಿಮಾ. ಯಾಕೆಂದರೆ ನಾನು ಲವ್ ಸ್ಟೋರಿ ಮಾಡಿರಲಿಲ್ಲ. ಗಿರೀಶ್ ಸರ್ ಕತೆ ಹೇಳಿದಾಗ, ಸೀನ್ಸ್ ಹೇಳಿದಾಗ ಖುಷಿಯಾಯ್ತು. ಅಂದರೆ ಈ ತರಹದ್ದು ಸಿನಿಮಾ ಮಾಡಿದರೆ ತುಂಬಾ ಜನ, ಫ್ಯಾಮಿಲಿ, ಹೆಣ್ಣುಮಕ್ಕಳಿಗೆ ತಲುಪುತ್ತದೆ ಅಂತಾ ಖುಷಿಪಟ್ಟು ಒಪ್ಪಿಕೊಂಡಿದ್ದೇನೆ. ಎಲ್ಲರಿಗೂ ಸಿನಿಮಾ ಇಷ್ಟವಾಗುತ್ತದೆ’ ಎಂದರು. ನಿರ್ದೇಶಕ ಗಿರೀಶ್, ‘ನಿರ್ಮಾಪಕರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಟೀಸರ್ ಬಿಡುಗಡೆ ಮಾಡಿದ್ದೇವೆ. ಸಿನಿಮಾ ಜರ್ನಿ ಬಗ್ಗೆ ಹೇಳಲು ತುಂಬಾ ಇದೆ. ಇದು ಬರೀ ಟೀಸರ್. ಮುಂದೆ ಸಾಂಗ್ ಇದೆ. ಟ್ರೇಲರ್ ಇದೆ. ಸಿನಿಮಾ ಚೆನ್ನಾಗಿದೆ. ಅದರಲ್ಲೂ ಯುವಜನತೆಗೆ ಕನೆಕ್ಟ್ ಆಗುತ್ತೆ. ಕೌಟುಂಬಿಕ ಕತೆ ಇದೆ. ಸಿನಿಮಾದ ಪ್ರತಿ ಹಂತದಲ್ಲಿಯೂ ನಿರ್ಮಾಪಕರು ಬೆಂಬಲವಾಗಿ ನಿಂತಿದ್ದಾರೆ’ ಎಂದರು.
ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ‘ರಾಜರು’ ಎಂಬ ಚಿತ್ರ ಮಾಡಿದ್ದರು. ಇದೀಗ ‘ಭುವನಂ ಗಗನಂ’ ಮೂಲಕ ಮತ್ತೊಂದು ಹೊಸ ಕಥೆಯನ್ನು ಹೇಳೋದಿಕ್ಕೆ ಬರುತ್ತಿದ್ದಾರೆ. M ಮುನೇಗೌಡ ತಮ್ಮದೇ S V C Films Productions ಬ್ಯಾನರ್ ಅಡಿ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾ ಪ್ರೀತಿ, ಪ್ರಣಯ, ಕುಟುಂಬ, ಭಾವನಾತ್ಮಕ ಕಥಾಹಂದರವಾಗಿದೆ. ನಗರ, ಹಳ್ಳಿ ಎರಡು ವಾತಾವರಣದಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್‌ಗೆ ಜೋಡಿಯಾಗಿ ‘ಲವ್ ಮಾಕ್ಟೇಲ್ 2’ ಖ್ಯಾತಿಯ ರೇಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ‘ಸಿದ್ಲಿಂಗು’ ಶ್ರೀಧರ್, ಹರಿಣಿ, ‘ಸ್ಪರ್ಶ’ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಗುಮ್ಮಿನೇನಿ ವಿಜಯ್ ಸಂಗೀತ, ಸುನೀಲ್ ಕಶ್ಯಪ್ ಸಂಕಲನ ಸಿನಿಮಾಗಿದೆ.