ಜಗನ್ ಮತ್ತು ಅವರ ತಂದೆಯ ನಡುವೆ ಮತ್ತು ಸಾರ್ವಜನಿಕರ ನಡುವೆ ಮತ್ತೊಂದಷ್ಟು ಭಾವುಕ ದೃಶ್ಯಗಳು ಇರಬೇಕಿತ್ತು ಎನಿಸುತ್ತದೆ. ಚಿತ್ರದ ಕಥೆಯ ಆಯಾಮಕ್ಕೆ ಮತ್ತಷ್ಟು ಆಳ ಸಿಕ್ಕಿ ಕಥೆ ಇನ್ನಷ್ಟು ಆಸಕ್ತಿಕರವಾಗಿ ಮೂಡಿಬರಬಹುದಿತ್ತು. ‘ಯಾತ್ರಾ 2’ ಮಮ್ಮೂಟ್ಟಿ ಅವರ ಅಭಿಮಾನಿಗಳಿಗಂತೂ ಖಂಡಿತವಾಗಿ ನಿರಾಸೆ ಮಾಡುವುದಿಲ್ಲ. ಸಿನಿಮಾ ಆಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.
ಮಮ್ಮೂಟ್ಟಿ, ಜೀವಾ, ಕೇತಕಿ ನಾರಾಯಣ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ತೆಲುಗು ಚಿತ್ರ ‘ಯಾತ್ರಾ -2’ ಬಿಡುಗಡೆಯಾಗಿದೆ. ಐದು ವರ್ಷಗಳ ಹಿಂದೆ ಇದರ ಮೊದಲನೇ ಭಾಗ ‘ಯಾತ್ರಾ’ ಬಿಡುಗಡೆಯಾಗಿ ಅಪಾರ ಜನಮನ್ನಣೆ ಗಳಿಸಿತ್ತು. ಇದೊಂದು ರಾಜಕೀಯ ಹಿನ್ನೆಲೆಯ ಡ್ರಾಮಾ ಮಾದರಿಯ ಚಿತ್ರವಾಗಿದ್ದು ಮೊದಲನೇ ಭಾಗ ಬಿಡುಗಡೆಯದಾಗ ಸಾಕಷ್ಟು ಚರ್ಚೆಗಳಾಗಿದ್ದವು. ಅಂದಿನ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರ ಮರಣದ ನಂತರ ನಡೆಯುವ 2009ರ ಆಂಧ್ರಪ್ರದೇಶದ ಚುನಾವಣೆ ಪ್ರಚಾರದ ಚಿತ್ರಣದೊಂದಿಗೆ ಆರಂಭವಾಗುವ ಈ ಚಿತ್ರದಲ್ಲಿ ನಂತರದ ದಿನಗಳಲ್ಲಿ ಅವರ ಪುತ್ರ ಜಗನ್ ಮೋಹನ್ ರೆಡ್ಡಿಯವರ ರಾಜಕೀಯ ಜೀವನ, ವೈಯಕ್ತಿಕ ಜೀವನ ಯಾವ ರೀತಿಯ ತಿರುವುಗಳನ್ನು ಪಡೆಯುತ್ತದೆ ಎನ್ನುವುದರ ಮೇಲೆ ಬೆಳಕು ಚೆಲ್ಲುತ್ತಾ ಹೋಗುತ್ತದೆ. ಜಗನ್ ಮೋಹನ್ ರೆಡ್ಡಿಯ ಪಾತ್ರದಲ್ಲಿ ಜೀವಾ ಮತ್ತು ರಾಜಶೇಖರ ರೆಡ್ಡಿ ಪಾತ್ರದಲ್ಲಿ ಮಮ್ಮೂಟ್ಟಿ ನಟಿಸಿದ್ದಾರೆ.
ಮಹಿ ವಿ ರಾಘವ್ ಈ ಚಿತ್ರದ ನಿರ್ದೇಶಕರು. ಅವರ ನಿರೂಪಣೆ ಆರಂಭದಿಂದಲೂ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕತೆಯನ್ನು ನಿಭಾಯಿಸಿರುವ ರೀತಿ ಮತ್ತು ಚಿತ್ರಕಥೆಯನ್ನು ನಿರೂಪಣೆ ಮಾಡಿರುವ ರೀತಿ ಬಹಳ ಪ್ರಭಾವಿಯಾಗಿ ಮೂಡಿಬಂದಿದೆ. ಜಗನ್ ಮೋಹನ್ ರೆಡ್ಡಿ ಪಾತ್ರದಲ್ಲಿ ಜೀವಾ ಅವರ ಅಭಿನಯ ಶ್ಲಾಘನೀಯ. ಅವರ ಪಾತ್ರಕ್ಕೆ ಇರುವ ಮಿತಿಗಳನ್ನು ಹೊರತುಪಡಿಸಿ ಆ ಚೌಕಟ್ಟಿನೊಳಗೆ ಸಮರ್ಥವಾದ ಅಭಿನಯವನ್ನು ನೀಡಿದ್ದಾರೆ. ಮಮ್ಮೂಟ್ಟಿ ಅವರ ಅಭಿನಯವಂತೂ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಸಾರ್ವಜನಿಕರ ಜೊತೆಗೆ ರಾಜಶೇಖರ ರೆಡ್ಡಿ ಮಾತನಾಡುವ ಸನ್ನಿವೇಶಗಳಲ್ಲಿ ಮಮ್ಮೂಟ್ಟಿ ಅವರ ಅಭಿನಯ ಬಹಳ ಪರಿಣಾಮಕಾರಿಯಾಗಿ ಬಂದಿದೆ.
ತಮ್ಮ ಅದ್ಭುತವಾದ ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಂದ ಚಿತ್ರಕ್ಕೆ ಜೀವ ತುಂಬಿರುವವರು ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್. ಆದರೆ ಇಷ್ಟೆಲ್ಲದರ ಹೊರತಾಗಿಯೂ ಚಿತ್ರದಲ್ಲಿ ಒಂದಷ್ಟು ಕೊರತೆಗಳಿವೆ. ನಿರ್ದೇಶಕರು ಬಹಳ ಜಾಣತನದಲ್ಲಿ ಕತೆ ಹೆಣೆದು ಕೆಲವು ಕೊರೆಗಳನ್ನು ಮುಚ್ಚಿಬಿಟ್ಟಿದ್ದಾರೆ. ಜಗನ್ ಮೋಹನ್ ರೆಡ್ಡಿ ಮತ್ತು ಅವರ ತಂದೆಯವರ ಜೀವನದಲ್ಲಿ ನಡೆದ ಕೆಲವು ಪ್ರಮುಖ ಹಾಗೂ ಮಹತ್ವದ ಘಟನೆಗಳನ್ನು ನಿರೂಪಿಸುವತ್ತ ನಿರ್ದೇಶಕರು ಗಮನ ಕೊಟ್ಟಿಲ್ಲ. ಆ ಘಟನೆಗಳನ್ನು ಕಟ್ಟಿಕೊಟ್ಟಿದ್ದರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು.
ಜೀವಾ ಅವರ ಪಾತ್ರಪೋಷಣೆಯನ್ನು ಕೂಡ ಇನ್ನಷ್ಟು ಪ್ರಭಾವಿಯಾಗಿ ಮಾಡಬಲ್ಲ ಅವಕಾಶವಿದ್ದರೂ ನಿರ್ದೇಶಕರು ಅದನ್ನು ಪೂರ್ಣವಾಗಿ ಬಳಸಿಕೊಂಡಿಲ್ಲ. ಜಗನ್ ಅವರ ನಿಜ ಜೀವನದ ಕೆಲವು ಸೂಕ್ಷ್ಮಗಳನ್ನು ಸಂಪೂರ್ಣವಾಗಿ ಮತ್ತು ಯಶಸ್ವಿಯಾಗಿ ಹೊರತರುವಲ್ಲಿ ಜೀವಾ ಮತ್ತು ನಿರ್ದೇಶಕರು ಇಬ್ಬರೂ ಸಫಲವಾಗಿಲ್ಲ. ಜಗನ್ ಮತ್ತು ಅವರ ತಂದೆಯ ನಡುವೆ ಮತ್ತು ಸಾರ್ವಜನಿಕರ ನಡುವೆ ಮತ್ತೊಂದಷ್ಟು ಭಾವುಕ ದೃಶ್ಯಗಳು ಇರಬೇಕಿತ್ತು ಎನಿಸುತ್ತದೆ. ಚಿತ್ರದ ಕಥೆಯ ಆಯಾಮಕ್ಕೆ ಮತ್ತಷ್ಟು ಆಳ ಸಿಕ್ಕಿ ಕಥೆ ಇನ್ನಷ್ಟು ಆಸಕ್ತಿಕರವಾಗಿ ಮೂಡಿಬರಬಹುದಿತ್ತು.
ಇನ್ನು ತಾಂತ್ರಿಕ ವಿಭಾಗಕ್ಕೆ ಬಂದರೆ ಎಲ್ಲ ವಿಭಾಗಗಳಲ್ಲಿಯೂ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಎಲ್ಲವೂ ಅಚ್ಚುಕಟ್ಟಾಗಿ ಬಂದಿದೆ. ಅದರಲ್ಲೂ ಸಂಕಲನ ಬಹಳ ಚುರುಕಾಗಿ ಮೂಡಿಬಂದಿದೆ. ಭಾವುಕತೆಗೆ ಇನ್ನಷ್ಟು ಒತ್ತುಕೊಟ್ಟು ಚಿತ್ರವನ್ನು ಮಾಡಿದ್ದರೆ ಪಾತ್ರಗಳ ಅಂತರಾಳ ವೀಕ್ಷಕರನ್ನು ತಲುಪಲು ಹೆಚ್ಚು ಸಹಾಯವಾಗಬಹುದಿತ್ತು. ಚಿತ್ರದ ತೂಕವೂ ಹೆಚ್ಚಾಗುತ್ತಿತ್ತು. ಚಿತ್ರಕ್ಕೆ ಆಯ್ಕೆ ಮಾಡಿಕೊಂಡ ಪಾತ್ರವರ್ಗವೂ ಬಹಳ ಅತ್ಯುತ್ತಮವಾಗಿದೆ. ಮಧೀ ಅವರ ಛಾಯಾಗ್ರಹಣ ಚಿತ್ರವನ್ನು ಮತ್ತೂ ಎತ್ತರಕ್ಕೆ ಏರಿಸಿದೆ. ಚಿತ್ರದ ದ್ವಿತೀಯಾರ್ಧ ಸ್ವಲ್ಪ ನಿಧಾನಗತಿ ಎನಿಸಿದಲ್ಲಿ ಚಿತ್ರಕಥೆಯ ಗತಿಯಲ್ಲಿ ನಿರ್ದೇಶಕರು ವಿಳಂಬ ಮಾಡಿರುವುದೇ ಕಾರಣ. ಬಹುಶಃ ಅದು ಉದ್ದೇಶಪೂರ್ವಕವೂ ಇರಬಹುದು.
ಒಟ್ಟಾರೆ ಹೇಳಬೇಕೆಂದರೆ ‘ಯಾತ್ರಾ -2’ ಒಂದು ಉತ್ತಮ ಪೊಲಿಟಿಕಲ್ ಡ್ರಾಮಾ. ರಾಜಶೇಖರ ರೆಡ್ಡಿಯವರ ಮರಣದ ನಂತರ ಪುತ್ರ ಜಗನ್ ಮೋಹನ್ ರೆಡ್ಡಿಯವರ ಬದುಕಿನ ಚಿತ್ರಣವನ್ನು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಡುವಂತಹ ಚಿತ್ರ. ನೀವು ರಾಜಕೀಯ ಘಟನೆಗಳಲ್ಲಿ ಆಸಕ್ತಿಯಿದ್ದವರಾಗಿ ಸದರಿ ರಾಜಕೀಯ ನಾಯಕರ ಪ್ರಶಂಸಕರಾಗಿ ಚಿತ್ರವನ್ನು ನೋಡಿದರೆ ಒಳ್ಳೆಯ ವ್ಯಕ್ತಿಚಿತ್ರದಂತೆ ಇದು ಭಾಸವಾಗುವುದರಲ್ಲಿ ಅನುಮಾನವಿಲ್ಲ. ಇದಾವುದೂ ಅಲ್ಲದ ಒಬ್ಬ ಸಾಮಾನ್ಯ ಪ್ರೇಕ್ಷಕರಾಗಿ ಚಿತ್ರವನ್ನು ನೋಡಿದರೂ ಉತ್ತಮ ನಿರ್ಮಾಣ ಮತ್ತು ಗುಣಮಟ್ಟದ ಚಿತ್ರಣ ಹೊಂದಿರುವ ಒಂದೊಳ್ಳೆ ಉತ್ತಮ ಚಿತ್ರ ಇದು ಎನ್ನುವುದರಲ್ಲೂ ಯಾವುದೇ ಅನುಮಾನವಿಲ್ಲ. ‘ಯಾತ್ರಾ 2’ ಮಮ್ಮೂಟ್ಟಿ ಅವರ ಅಭಿಮಾನಿಗಳಿಗಂತೂ ಖಂಡಿತವಾಗಿ ನಿರಾಸೆ ಮಾಡುವುದಿಲ್ಲ. ‘ಯಾತ್ರಾ 2’ ಆಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.