ಸಿಂಪಲ್ ಸುನಿ ನಿರ್ದೇಶನದಲ್ಲಿ ಶರಣ್ ಹೀರೋ ಆಗಿ ನಟಿಸಿರುವ ಬಹುನಿರೀಕ್ಷಿತ ‘ಅವತಾರ ಪುರುಷ 2’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಸ್ಯಾಂಡಲ್‌ವುಡ್‌ನ ಹಲವು ಹೀರೋಗಳು ಒಟ್ಟಿಗೆ ಟ್ರೇಲರ್ ಬಿಡುಗಡೆ ಮಾಡಿದ್ದು ವಿಶೇಷ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಚಿತ್ರ ಇದೇ ಶುಕ್ರವಾರ (ಏಪ್ರಿಲ್ 5) ತೆರೆಕಾಣಲಿದೆ.
ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ನಾಯಕನಾಗಿ ನಟಿಸಿರುವ ‘ಅವತಾರ ಪುರುಷ 2’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಸಿಂಪಲ್ ಸುನಿ ನಿರ್ದೇಶನದ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಚಂದನವನದ ನಟರಾದ ನೆನಪಿರಲಿ ಪ್ರೇಮ್, ರಿಷಿ, ವಿಕ್ಕಿ ವರುಣ್, ಪ್ರವೀಣ್ ತೇಜ್ ಹಾಗೂ ನಿರ್ದೇಶಕ ಸಂತು ಅವರು ಆನಂದ್ ಆಡಿಯೋ ಮೂಲಕ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ”ಅವತಾರ ಪುರುಷ’ ಮೊದಲ ಭಾಗವನ್ನು ಚಿತ್ರಮಂದಿರ, ಓಟಿಟಿ ಹಾಗೂ ಖಾಸಗಿ ವಾಹಿನಿಯಲ್ಲಿ ಸಿನಿಪ್ರಿಯರು ವೀಕ್ಷಿಸಿದ್ದಾರೆ. ಅದೇ ರೀತಿ ಈ ಚಿತ್ರದ ಎರಡನೇ ಭಾಗವನ್ನೂ ನೋಡಿ ಯಶಸ್ವಿಗೊಳಿಸಿ. ಮೊದಲ ಭಾಗವನ್ನು ನೋಡಿದವರಿಗೆ ಹಾಗೂ ನೋಡದವರಿಗೆ ಇಬ್ಬರಿಗೂ ಭಾಗ 2 ಅರ್ಥವಾಗುತ್ತದೆ” ಎಂದ ಅವರು ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದರು.
ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾತನಾಡಿ, ‘ಕನ್ನಡ ಚಿತ್ರಗಳಲ್ಲಿ ಗುಣಮಟ್ಟ ಕಡಿಮೆ ಎಂದು ಕೆಲವರು ಹೇಳುತ್ತಾರೆ. ಆದರೆ ನಮ್ಮ ಚಿತ್ರದ ಟ್ರೇಲರ್ ನೋಡಿದರೆ, ಚಿತ್ರ ಹೇಗೆ ಬಂದಿರಬಹುದು ಎಂದು ಎಲ್ಲರಿಗೂ ತಿಳಿಯುತ್ತದೆ. ಯಾವುದೇ ಕೊರತೆಯಿಲ್ಲದೆ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದೇವೆ. ಏಪ್ರಿಲ್ 5ರಂದು ಚಿತ್ರ ಬಿಡುಗಡೆಯಾಗಲಿದೆ’ ಎಂದರು.
‘ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನಿರ್ದೇಶಕ ಸುನಿ ಅವರ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಸುನಿ ಅವರು ಚಿತ್ರದ ಕಥೆ ಹೇಳುತ್ತೇನೆ ಎಂದಾಗ ಕಾಮಿಡಿ ಜಾನರ್‌ನ ಕಥೆ ಅಂದುಕೊಂಡಿದ್ದೆ. ಆದರೆ, ಅವರು ಇದೊಂದು ವಿಭಿನ್ನ ಕಥೆ. ಈ ಕಥೆಯಲ್ಲಿ ಕಾಮಿಡಿ ಕೂಡ ಇರುತ್ತದೆ ಎಂದರು. ನನಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ. ಹಾಗಾಗಿ ಈ ಚಿತ್ರದ ಪಾತ್ರ ಇಷ್ಟವಾಯಿತು. ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಮೂಡಿಬಂದಿದೆ. ಎಲ್ಲರೂ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ’ ಎನ್ನುವುದು ಹೀರೋ ಶರಣ್ ಮಾತು.
”ನಾನು ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತಿದ್ದಾಗ ‘ಅವತಾರ ಪುರುಷ 2′ ಚಿತ್ರ ಯಾವಾಗ ಬಿಡುಗಡೆ ಎಂದು ಕೇಳುತ್ತಿದ್ದರು. ಜನರಿಗೆ ಈ ಚಿತ್ರದ ಬಗ್ಗೆ ಅಷ್ಟು ಕುತೂಹಲವಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿದೆ’ ಎಂದು ಚಿತ್ರದ ನಾಯಕನಟಿ ಆಶಿಕಾ ರಂಗನಾಥ್ ಭರವಸೆಯ ಮಾತುಗಳನ್ನಾಡಿದರು. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿತರಕ ಮೋಹನ್ ಸಹ ಭಾಗಿಯಾಗಿದ್ದರು.