ಪರಮ್‌ ಕತೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿ ನಿರ್ದೇಶಿಸಿರುವ ‘ಕೋಟಿ’ ಕನ್ನಡ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಡಾಲಿ ಧನಂಜಯ ಚಿತ್ರದ ಹೀರೋ. ನಿನ್ನೆ ಯುಗಾದಿಯಂತೆ ಚಿತ್ರದ ಫಸ್ಟ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಇದೇ ಏಪ್ರಿಲ್‌ 13ರಂದು ಟೀಸರ್‌ ಹೊರಬೀಳಲಿದೆ.

ನಟ ಧನಂಜಯ ನಟನೆಯ ನೂತನ ಸಿನಿಮಾ ‘ಕೋಟಿ’ ಸದ್ದಿಲ್ಲದೆ ತೆರೆಗೆ ಸಿದ್ಧವಾಗುತ್ತಿದೆ. ಪರಮ್‌ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ಚಿತ್ರವಿದು. ನಿನ್ನೆ ಯುಗಾದಿಯಂದು ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಕನ್ನಡ ಕಿರುತೆರೆಯಲ್ಲಿ ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್.‌ ಕಲರ್ಸ್‌ ಕನ್ನಡ ವಾಹಿನಿಯನ್ನು ಅವರು ಮುನ್ನಡೆಸುತ್ತಿದ್ದಾಗ ಅತಿ ಹೆಚ್ಚು ಕನ್ನಡ ಮೂಲದ ಕತೆಗಳು ಮೂಡಿಬಂದಿದ್ದವು. ಈಗ ಅಪ್ಪಟ ಕನ್ನಡದ ಕತೆಯೊಂದಿಗೆ ಅವರು ಮೊದಲ ಬಾರಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಯುಗಾದಿ ಹಬ್ಬದ ದಿನವಾದ ನಿನ್ನೆ ‘ಕೋಟಿ’ ಚಿತ್ರದ ಟೈಟಲ್‌ ಬಿಡುಗಡೆಯಾಗಿದೆ. ಐದುನೂರು ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ‘ಕೋಟಿ’ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷ. ತೀಕ್ಷ್ಣ ಕಣ್ಣುಗಳಿಂದ ಈ ಪೋಸ್ಟರ್‌ ಗಮನ ಸೆಳೆಯುತ್ತಿದೆ.

‘ಕೋಟಿ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕತೆ ಇದು. ದುಡ್ಡಿಗಾಗಿ ಒದ್ದಾಡುವ ಒಬ್ಬ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಈ ಸಿನಿಮಾ ಹೇಳಬಹುದು’ ಎಂಬ ಸೂಚನೆಯನ್ನು ನಟ ಧನಂಜಯ ಕೊಟ್ಟಿದ್ದರು. ಇದೀಗ ಸಿನಿಮಾ ತೆರೆಗೆ ಸಿದ್ಧವಾಗಿದೆ. ‘ಹೊಯ್ಸಳ’ ನಂತರ ಬರುತ್ತಿರುವ ಅವರ ಚಿತ್ರವಿದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ಡಾಲಿ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎನ್ನಲಾಗುತ್ತಿದೆ. ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಈ ವರ್ಷ ಒಂದಾದ ಮೇಲೆ ಒಂದು ಹಿಟ್‌ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ಜ್ಯೋತಿ ಮತ್ತು ಜಿಯೋ ಸ್ಟುಡಿಯೋಸ್ ಈ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಸುಕಿ ವೈಭವ್‌ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ ನೊಬಿನ್‌ ಪೌಲ್‌ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಸಿನಿಮಾಗೆ ಅರುಣ್‌ ಬ್ರಹ್ಮನ್‌ ಛಾಯಾಗ್ರಹಣವಿದೆ.

ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪರಮ್‌ ಅವರು ಸಿನಿಮಾ ಕುರಿತು ತಮ್ಮ Instagram ಖಾತೆಯಲ್ಲಿ ಬರೆದುಕೊಂಡಿರುವ ಒಕ್ಕಣ ಹೀಗಿದೆ – ‘ಕತೆಯೊಂದನ್ನು ಸಿನಿಮಾ ಮಾಡಬೇಕು ಎಂದು ಮೊಟ್ಟಮೊದಲ ಸಲ ತಲೆಗೆ ಬಂದಾಗ ಊರಿಗೆ ಹೊರಟಿದ್ದ ಕೆಂಪು ಬಸ್ಸು ನೆಲಮಂಗಲದ ಟ್ರಾಫಿಕ್‌ ಜಾಮ್‌ ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದು ನಿನ್ನೆ ಆಗಿದ್ದೇನೋ ಅನ್ನುವಷ್ಟು ಸ್ಪಷ್ಟವಾಗಿ ನೆನಪಿದೆ. ಅಲ್ಲಿಂದ ಹೊರಟ ಬಸ್ಸು ಹತ್ತಾರು ವರ್ಷಗಳಲ್ಲಿ ಎಲ್ಲೆಲ್ಲಿಗೋ ಕರೆದುಕೊಂಡು ಹೋಗಿದೆ. ಜನ ಹತ್ತಿದ್ದಾರೆ. ಇಳಿದಿದ್ದಾರೆ. ಏರಲ್ಲಿ ಬಸ್ಸು ನಿಂತಿದೆ. ಇಳಿಜಾರಲ್ಲಿ ಭಯ ಹುಟ್ಟಿಸಿದೆ. ನಡುರಾತ್ರಿ ಕೆಟ್ಟು ನಿಂತಿದೆ. ಒಂದೆರಡು ಆಕ್ಸಿಡೆಂಟ್‌ ಆಗಿದೆ. ಒಂದೆರಡು ಆಕ್ಸಿಡೆಂಟ್‌ ಮಾಡಿದೆ. ಎಲ್ಲವನ್ನೂ ಮೀರಿ ಮುಂದಿನ ಸ್ಟಾಪ್‌ ತಲುಪಿಸಿದೆ!
ಸಿನಿಮಾ ಎಂಬ ಕೀಟ ಗಟ್ಟಿಯಾಗಿ ಕಚ್ಚಿದ್ದರಿಂದ ಕಳೆದ ವರ್ಷ ಇದ್ದ ಕೆಲಸ ಬಿಟ್ಟೆ. ಹತ್ತಿದ್ದ ಬಸ್ಸು ಇಳಿದೆ. ಮತ್ತೊಂದು ಬಸ್ಸು ಹತ್ತಿದೆ. ಟೆಲಿವಿಷನ್‌ ಬಿಟ್ಟೆ. ಹಳೆಯ ಕೆಲಸ ತರುತ್ತಿದ್ದ ನಿರೀಕ್ಷೆಗಳ ಭಾರ ಇಳಿಸಿ ಹಗುರಾದೆ. ಈಗ ಎಡವಿ ಬೀಳುವುದಕ್ಕೆ ಲೈಸೆನ್ಸ್‌ ಸಿಕ್ಕಿದೆ! ಎಡವುತ್ತೇನೋ ನಡೆಯುತ್ತೇನೋ ಗೊತ್ತಿಲ್ಲದ ಕುತೂಹಲದಲ್ಲಿ ಒಂದು ರೋಮಾಂಚನವಿದೆ’

LEAVE A REPLY

Connect with

Please enter your comment!
Please enter your name here