ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇ ನಿಮಿತ್ತ ‘ಕಲ್ಕಿ 2898 AD’ ತಂಡ ಚಿತ್ರದಲ್ಲಿನ ಅವರ ಫಸ್ಟ್‌ಲುಕ್‌ ಬಿಡುಗಡೆಗೊಳಿಸಿದೆ. ಬಹುತಾರಾಗಣದ ಈ ಸಿನಿಮಾ 2024ರ ಜನವರಿ 24ರಂದು ತೆರೆಕಾಣಲಿದೆ.

ಪ್ರಭಾಸ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ಕಲ್ಕಿ 2898 AD’ (Kalki 2898 AD) ಚಿತ್ರದಿಂದ ಅಮಿತಾಬ್‌ ಬಚ್ಚನ್‌ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಅಮಿತಾಬ್‌ ಬಚ್ಚನ್‌ ಅವರ ಹುಟ್ಟುಹಬ್ಬವಾದ ಇಂದು ಪೋಸ್ಟರ್‌ ಬಿಡುಗಡೆ ಮಾಡಿ ಬಿಗ್‌ ಬಿ ಗೆ ಶುಭಾಶಯ ತಿಳಿಸಿದೆ ಚಿತ್ರತಂಡ. ಪೋಸ್ಟರ್‌ನಲ್ಲಿ ಅಮಿತಾಬ್‌ ಬಚ್ಚನ್‌ ಅವರು ಶತಮಾನದ ಪೌರಾಣಿಕ ಸಂತನಂತೆ ಕಾಣಿಸಿಕೊಂಡಿದ್ದಾರೆ. ನಿಗೂಢ ಗುಹೆಯೊಳಗೆ ದೇವಧೂತನ ರೀತಿ ನಿಂತಿದ್ದಾರೆ. ಅಮಿತಾಬ್‌ ಅವರ ಈ ಲುಕ್‌ ಸಾಕಷ್ಟು ಕುತೂಹಲ ಕೆರಳಿಸುವಂತಿದೆ. ತನ್ನ ಜ್ಞಾನ, ಬುದ್ಧಿವಂತಿಕೆ ಮತ್ತು ಕೌಶಲ್ಯಗಳಿಂದ ನಾಯಕನಿಗೆ ಸಲಹೆ ನೀಡುವ ವ್ಯಕ್ತಿಯಂತೆ ಭಾಸವಾಗುತ್ತದೆ. ಈ ಪೌರಾಣಿಕ-ವೈಜ್ಞಾನಿಕ-ಕಾಲ್ಪನಿಕ ಚಲನಚಿತ್ರವನ್ನು ನಾಗ್‌ ಅಶ್ವಿನ್‌ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಪಶುಪತಿ ಮತ್ತು ದಿಶಾ ಪಟಾನಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಚಿತ್ರವನ್ನು Vyjayanthi Productions ಬ್ಯಾನರ್‌ ನಡಿ ಸಿ ಅಶ್ವಿನ್‌ ದತ್‌ ನಿರ್ಮಿಸುತ್ತಿದ್ದು, ಸಂತೋಷ್‌ ನಾರಾಯಣ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಸಿನಿಮಾ ಜನವರಿ 24, 2024ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here