‘ರಸ್ಟ್’ ಇಂಗ್ಲೀಷ್ ಸಿನಿಮಾ ಶೂಟಿಂಗ್ನಲ್ಲಿ ಹಿರಿಯ ನಟ ಅಲೆಕ್ ಬಾಲ್ಡ್ವಿನ್ ಹಾರಿಸಿದ ಗುಂಡು ಛಾಯಾಗ್ರಾಹಕಿ ಹಲಿನಾ ಹಚಿನ್ಸ್ ಪ್ರಾಣ ತೆಗೆದಿದೆ. ಚಿತ್ರದ ನಿರ್ದೇಶಕ ಜೋಲ್ ಸೋಝಾ ತೀವ್ರವಾಗಿ ಗಾಯಗೊಂಡಿದ್ದಾರೆ.
ಇದೊಂದು ಆಕಸ್ಮಿಕ ಘಟನೆ. ನ್ಯೂಮೆಕ್ಸಿಕೋ ಬಳಿಯ ಸಾಂತಾ ಫೆ ನಗರದಲ್ಲಿ ‘ರಸ್ಟ್’ ಇಂಗ್ಲೀಷ್ ಸಿನಿಮಾದ ಚಿತ್ರೀಕರಣ ನಡೆದಿತ್ತು. ಹಿರಿಯ ನಟ ಅಲೆಕ್ ಬಾಲ್ಡ್ವಿನ್ ನಟಿಸಿ, ನಿರ್ಮಿಸುತ್ತಿರುವ ಈ ಸಿನಿಮಾದ ನಿರ್ದೇಶಕ ಜೋಲ್ ಸೋಝಾ. ನಟ ಅಲೆಕ್ ಪ್ರಾಪ್ಗನ್ನಿಂದ ಶೂಟ್ ಮಾಡುವ ಸನ್ನಿವೇಶವೊಂದನ್ನು ಚಿತ್ರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಬಂದೂಕಿನಿಂದ ಹಾರಿದ ಗುಂಡು ಸಮೀಪದಲ್ಲೇ ಇದ್ದ ಛಾಯಾಗ್ರಾಹಕಿ ಹಲಿನಾ ಹಚಿನ್ಸ್ ಮತ್ತು ನಿರ್ದೇಶಕ ಜೋಲ್ ಸೋಝಾ ಅವರಿಗೆ ತಗುಲಿತು. ಕೂಡಲೇ ಹೆಲಿಕಾಪ್ಟರ್ನಲ್ಲಿ ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರವಾಗಿ ಗಾಯಗೊಂಡ 42ರ ಹರೆಯದ ಹಲಿನಾ ಹಚಿನ್ಸ್ ಕೊನೆಯುಸಿರೆಳೆದರು. ಗಂಭೀರವಾಗಿ ಗಾಯಗೊಂಡಿರುವ ನಿರ್ದೇಶಕ ಜೋಲ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಪ್ರಕರಣದಿಂದ ಹಿರಿಯ ನಟ ಅಲೆಕ್ ಬಾಲ್ಡ್ವಿನ್ ಘಾಸಿಗೊಂಡಿದ್ದಾರೆ. ಆಕಸ್ಮಿಕ ಘಟನೆಯಿಂದಾಗಿ ಅವರು ಎದೆಗುಂದಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಗನ್ನಲ್ಲಿ ಬ್ಲಾಂಕ್ಸ್ ಗುಂಡುಗಳನ್ನು ಬಳಕೆ ಮಾಡಲಾಗಿತ್ತು. ಈ ಪ್ರಾಪ್ ಗುಂಡುಗಳು ನೈಜ ಗುಂಡುಗಳಂತೆ ಮುಂದೆ ಚೂಪಾಗಿರುವುದಿಲ್ಲ. ಟ್ರಿಗರ್ ಒತ್ತಿದಾಗ ಶಬ್ಧದ ಜೊತೆ ಬೆಂಕಿಯೂ ಕಾಣಿಸುತ್ತದೆ. ಸಾಕಷ್ಟು ವೇಗದಲ್ಲಿ ಹಾರಿದ ಈ ಗುಂಡು ಗುರಿ ತಪ್ಪಿ ಹತ್ತಿರದಲ್ಲೇ ಇದ್ದ ಛಾಯಾಗ್ರಾಹಕಿ ಮತ್ತು ನಿರ್ದೇಶಕರಿಗೆ ತಗುಲಿದ್ದೇ ಅನಾಹುತವಾಗಿದೆ. ಹಾಲಿವುಡ್ನ ಹಿರಿಯ ನಟ ಅಲೆಕ್ ಬಾಲ್ಡ್ವಿನ್ ಹಲವು ಪ್ರಮುಖ ಇಂಗ್ಲೀಷ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗೋಲ್ಡನ್ಗ್ಲೋಬ್, ಎಮ್ಮಿ ಪ್ರಶಸ್ತಿ ಪುರಸ್ಕೃತ ನಟ ಅಸ್ಕರ್ ಪುರಸ್ಕಾರಕ್ಕೂ ನಾಮಿನೇಟ್ ಆಗಿದ್ದರು.