ರ್ಯಾಪಿಡೊ ಜಾಹೀರಾತಿನಲ್ಲಿ TSRTC ಇಮೇಜಿಗೆ ಧಕ್ಕೆಯಾಗುವಂತೆ ಮಾತನಾಡಿದ್ದಾರೆ ಎಂದು ನಟ ಅಲ್ಲು ಅರ್ಜುನ್‌ಗೆ ಲೀಗಲ್ ನೋಟೀಸ್ ಜಾರಿಯಾಗಬಹುದು ಎನ್ನಲಾಗಿದೆ. ಇದರಿಂದ ನಟ ಮುಜುಗರಕ್ಕೀಡಾಗಿದ್ದು, ಈ ಜಾಹೀರಾತು ರದ್ದಾಗುವ ಸಾಧ್ಯತೆಗಳಿವೆ.
ಖ್ಯಾತ ತೆಲುಗು ನಟ ಅಲ್ಲು ಅರ್ಜುನ್ ಜಾಹೀರಾತೊಂದಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೆಲಂಗಾಣ ಸ್ಟೇಟ್ ರೋಡ್ ಟ್ರಾನ್ಸ್’ಪೋರ್ಟ್ ಕಾರ್ಪೋರೇಷನ್ (TSRTC) ನಟನಿಗೆ ಲೀಗಲ್ ನೋಟೀಸ್ ಕಳುಹಿಸಲು ಸಿದ್ಧತೆ ನಡೆಸಿದೆ. ಬೈಕ್ ಟ್ಯಾಕ್ಸಿ ಆಪ್ ರ್ಯಾಪಿಡೋ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ಸಂಸ್ಥೆಯ ಘನತೆಗೆ ಕುಂದುಂಟಾಗುವಂಥ ಸಂಭಾಷಣೆ ಹೇಳಿದ್ದಾರೆ ಎನ್ನುವುದು TSRTC ಆರೋಪ. ರ್ಯಾಪಿಡೋ ವೀಡಿಯೋ ಜಾಹೀರಾತಿನಲ್ಲಿ ಅಲ್ಲು ಅರ್ಜುನ್, “TSRTC ಸಾದಾ ದೋಸೆಯಂತೆ. ಸಮಯವೂ ವ್ಯರ್ಥ, ರುಚಿಯೂ ಕಡಿಮೆ. ರ್ಯಾಪಿಡೋ ಬೈಕ್ ಟ್ಯಾಕ್ಸಿ ಸರ್ವೀಸ್ ಮಸಾಲಾ ದೋಸೆಯಂತೆ. ಅತಿ ಬೇಗ ಮತ್ತು ಕ್ಷೇಮವಾಗಿ ನೀವು ತಲುಪಬೇಕಾದ ಜಾಗ ತಲುಪುತ್ತೀರಿ” ಎನ್ನುವ ಅರ್ಥದ ಸಂಭಾಷಣೆ ಹೇಳಿದ್ದಾರೆ. ಇದು TSRTC ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ಮಾತನಾಡಿರುವ TSRTC ಮ್ಯಾನೇಜಿಂಗ್ ಡೈರೆಕ್ಟರ್ ವಿ.ಸಿ.ಸಜ್ಜನರ್, “ಜಾಹೀರಾತಿನ ಕಾನ್ಸೆಪ್ಟ್ ನಮ್ಮ ಸಂಸ್ಥೆಯ ಘನತೆಗೆ ಚ್ಯುತಿ ತಂದಿದೆ. ನಮ್ಮಲ್ಲಿ ಪ್ರಯಾಣಿಸುವವರು, ಸಂಸ್ಥೆಯ ಕೆಲಸಗಾರರು, ಈಗಾಗಲೇ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಎಲ್ಲರಿಗೂ ಅಲ್ಲಿನ ಸಂಭಾಷಣೆ ಅನುಚಿತವಾಗಿ ಕಾಣಿಸುತ್ತಿದೆ. ಜನರನ್ನು ಪ್ರಭಾವಿಸಲು ಸಾಧ್ಯವಿರುವ ಸಿನಿಮಾ ತಾರೆಯರು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಬೇಕು. ಅದರ ಹೊರತಾಗಿ ಸರ್ಕಾರಿ ಸಾರಿಗೆಯನ್ನು ಲಘುವಾದ ಮಾತುಗಳಿಂದ ದೂರಬಾರದು” ಎಂದಿದ್ದಾರೆ. ನಟ ಅಲ್ಲು ಅರ್ಜುನ್ ಅವರಿಂದ ಈವರೆಗೆ ಜಾಹೀರಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.