ಬಾಲಿವುಡ್‌ ನಟಿ ಕಂಗನಾ ರನಾವತ್‌ ತಾವು ನಿರ್ಮಿಸುತ್ತಿರುವ ಮೊದಲ ಸಿನಿಮಾ ‘ಟಿಕು ವೆಡ್ಸ್‌ ಶೇರು’ ಫಸ್ಟ್ ಲುಕ್‌ ಹಂಚಿಕೊಂಡಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ನಟಿಸುತ್ತಿರುವ ಚಿತ್ರವನ್ನು ಸಾಯಿ ಕಬೀರ್ ನಿರ್ದೇಶಿಸಲಿದ್ದಾರೆ.

ಕಂಗನಾ ರನಾವತ್‌ ಬಾಲಿವುಡ್‌ನಲ್ಲಿ ತಮ್ಮದೇ ಆದ ಹಾದಿಯಲ್ಲಿ ನಡೆಯುವ ನಟಿ. ಸ್ಟಾರ್‌ ಹೀರೋಗಳನ್ನು ತಮ್ಮ ನಿರ್ಭಿಡೆಯ ಮಾತುಗಳಿಂದ ಎದುರು ಹಾಕಿಕೊಂಡಿದ್ದಾರೆ. ತಮ್ಮ ಈ ನಡೆಯಿಂದ ಅವರು ಸಿನಿಮಾ ಮಾರುಕಟ್ಟೆಯನ್ನೇನೂ ಕಳೆದುಕೊಂಡಿಲ್ಲ. ಒಂದಾದ ಮೇಲೊಂದು ಯಶಸ್ವೀ ಸಿನಿಮಾಗಳ ಮೂಲಕ ಅಚ್ಚರಿ ಮೂಡಿಸುತ್ತಾರೆ. ಇಲ್ಲಿಯವರೆಗೆ ನಟನೆ, ನಿರ್ದೇಶನದಲ್ಲಿ (ಮಣಿಕರ್ಣಿಕಾ) ತೊಡಗಿಸಿಕೊಂಡಿದ್ದ ನಟಿ ಈಗ ಚಿತ್ರನಿರ್ಮಾಣಕ್ಕಿಳಿದಿದ್ದಾರೆ. ಇಂದು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಚೊಚ್ಚಲ ನಿರ್ಮಾಣದ ಸಿನಿಮಾ ‘ಟಿಕು ವೆಡ್ಸ್‌ ಶೇರು’ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಸಾಯಿ ಕಬೀರ್ ನಿರ್ದೇಶಿಸಲಿದ್ದಾರೆ. ಈ ಚಿತ್ರವನ್ನು ಕಂಗನಾ ನೇರವಾಗಿ ಅಮೇಜಾನ್ ಪ್ರೈಮ್‌ OTTಗೆ ನಿರ್ಮಿಸಲಿದ್ದಾರೆ ಎನ್ನುವ ಮಾಹಿತಿಯೂ ಇದೆ.

“ಇಂದು ಪದ್ಮಶ್ರೀ ಪುರಸ್ಕಾರ ಪಡೆಯುತ್ತಿದ್ದೇನೆ. ಈ ವಿಶೇಷ ದಿನದಂದು ಚಿತ್ರನಿರ್ಮಾಪಕಿಯಾಗಿ ನನ್ನ ಹೊಸ ಜರ್ನೀ ಶುರುವಾಗುತ್ತಿದೆ. ನನ್ನ ‘ಮಣಿಕರ್ಣಿಕಾ ಫಿಲ್ಮ್ಸ್‌ ಪ್ರೈವೇಟ್ ಲಿಮಿಟೆಡ್‌’ ಬ್ಯಾನರ್‌ನಡಿ ನಿರ್ಮಿಸುತ್ತಿರುವ ‘ಟಿಕು ವೆಡ್ಸ್‌ ಶೇರು’ ಪೋಸ್ಟರ್‌ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ ಕಂಗನಾ. ಕಳೆದ ತಿಂಗಳು ಕಂಗನಾರ ‘ತಲೈವಿ’ ಸಿನಿಮಾ ತೆರೆಕಂಡಿತ್ತು. ಮೊನ್ನೆಯಷ್ಟೇ ಅವರು ತಮ್ಮ ಹೊಸ ಸಿನಿಮಾ ‘ದಿ ಇನ್‌ಕಾರ್ನೇಷನ್ ಸೀತಾ’ ಕುರಿತು ಹೇಳಿಕೊಂಡಿದ್ದರು. ‘ಧಾಕಡ್‌’ ಮತ್ತು ‘ತೇಜಸ್‌’ ತೆರೆಗೆ ಸಿದ್ಧವಾಗುತ್ತಿರುವ ಅವರ ಸಿನಿಮಾಗಳು.

LEAVE A REPLY

Connect with

Please enter your comment!
Please enter your name here