ಮಹಿಳೆಯೊಬ್ಬರು ನಿರ್ದೇಶಕಿಯಾದರೆ ಆಕೆಯ ಒಳನೋಟಗಳು ವಿಭಿನ್ನವಾಗಿರುತ್ತದೆ ಎಂಬುದನ್ನು ‘ಡಾರ್ಲಿಂಗ್ಸ್’ ಸಾಬೀತುಪಡಿಸುತ್ತದೆ. ಆಗೊಮ್ಮೆ ಈಗೊಮ್ಮೆಯಾದರೂ ಬರುವ ಇಂತಹ ವಿಭಿನ್ನ ಸಿನಿಮಾಗಳು ಚಿತ್ರರಂಗದ ಬಗ್ಗೆ ಭರವಸೆ ಕಳೆದುಕೊಳ್ಳದೇ ಇರುವಂತೆ ನೋಡಿಕೊಳ್ಳುತ್ತವೆ ಎಂದರೆ ತಪ್ಪೇನೂ ಇಲ್ಲ. ‘ಡಾರ್ಲಿಂಗ್ಸ್’ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಚೇಳೊಂದಕ್ಕೆ ನದಿ ದಾಟಬೇಕಿದೆ. ಕಪ್ಪೆಗೂ ಆಚೆದಡಕ್ಕೆ ಹೋಗಬೇಕಿದೆ. ‘ನನ್ನನ್ನು ಕರೆದುಕೊಂಡು ಹೋಗು’ ಎನ್ನುತ್ತದೆ ಚೇಳು. ಆಗ ಕಪ್ಪೆ, ‘ಇಲ್ಲಪ್ಪಾ, ನೀನು ನನ್ನನ್ನು ಕಚ್ಚಿಬಿಟ್ಟರೆ ಏನು ಮಾಡುವುದು?’ ಎನ್ನುತ್ತದೆ. ಆಗ ಚೇಳು, ‘ಅಯ್ಯೋ, ನಿನ್ನನ್ನು ನಾನು ಕಚ್ಚಿದರೆ ಇಬ್ಬರೂ ಮುಳುಗಿ ಸಾಯುತ್ತೇವಲ್ಲ’ ಎನ್ನುತ್ತದೆ. ಕಪ್ಪೆ ಈ ಮಾತನ್ನು ನಂಬಿ ಚೇಳನ್ನು ಬೆನ್ನಿನ ಮೇಲೆ ಕೂರಿಸಿಕೊಂಡು ನದಿ ದಾಟಲಾರಂಭಿಸುತ್ತದೆ. ಆದರೆ ಅರ್ಧ ದಾರಿ ಸಾಗುತ್ತಿದ್ದಂತೆ ಚೇಳು ಕಪ್ಪೆಯನ್ನು ಕುಟುಕುತ್ತದೆ. ಇಬ್ಬರೂ ಕೊಚ್ಚಿ ಹೋಗಲಾರಂಭಿಸುತ್ತಾರೆ. ಕಪ್ಪೆ ಆ ನೋವಿನಲ್ಲೂ, ‘ಕಚ್ಚಿದ್ದೇಕೆ?’ ಎಂದು ಕೇಳುತ್ತದೆ. ಆಗ ಚೇಳು ಹೇಳುತ್ತದೆ, ‘ನಾನು ಚೇಳು, ಕುಟುಕುವುದೇ ನನ್ನ ಸ್ವಭಾವ!’
ಈ ಪುಟ್ಟ ಕಥೆಗೆ ಒಂದು ದೊಡ್ಡ ರೂಪಕದಂತಿರುವ ಸಿನಿಮಾ ಮೊನ್ನೆಯಷ್ಟೇ ತೆರೆಕಂಡ ‘ಡಾರ್ಲಿಂಗ್ಸ್’. ಕೆಳಮಧ್ಯಮ ವರ್ಗದ ಮುಸ್ಲಿಂ ತಾಯಿ ಮಗಳ ಕಥೆಯ ಈ ಸಿನಿಮಾದಲ್ಲಿ ಚೇಳಿನಂತೆ ತನಗೆ ತೊಂದರೆಯಾದರೂ ಹೆಂಡತಿಯನ್ನು ನೋಯಿಸುವ ಸ್ವಭಾವ ಬಿಡದ ಗಂಡನಿದ್ದಾನೆ. ಅಡಿಗೆಯಲ್ಲಿ ಸಿಕ್ಕ ಕಲ್ಲಿನಂತಹ ಜುಜುಬಿ ವಿಷಯಕ್ಕೂ ದಿನವೂ ಹೊಡೆಯುವ ಕುಡುಕ ಗಂಡ ಬದಲಾಗಿಯೇ ಆಗುತ್ತಾನೆ ಎಂದು ವರ್ಷಗಳಿಂದ ತಾಳ್ಮೆಯಿಂದ ಕಾಯುವ ಪತ್ನಿಯಿದ್ದಾಳೆ. ಹಿಂಸೆಯಿದೆ, ನಗುವಿನ ಸಂಭಾಷಣೆಗಳಿವೆ, ಎಲ್ಲಕ್ಕಿಂತ ಮಿಗಿಲಾಗಿ ಭಾರತೀಯ ಸಮಾಜ ಹೊರಗೆ ತೋರಿಸಲು ಹೆದರುವ ಕೌಟುಂಬಿಕ ಹಿಂಸೆಯ ಕೀವು ತುಂಬಿದ ವ್ರಣವಿದೆ. ಹಮ್ಝಾನೊಳಗಿನ ಕ್ರೌರ್ಯದ ಅರಿವಿಲ್ಲದೇ ಪ್ರೀತಿಸಿ ಮದುವೆಯಾದ ಬದ್ರುನ್ನಿಸಾ ಶೇಖ್, ಅತಿ ಎನ್ನುವಷ್ಟು ಆಶಾವಾದಿ. ಬಾಸ್ ಕೋಣೆಯ ಟಾಯ್ಲೆಟ್ ತೊಳೆದು ತನ್ನ ಕೆಲಸ ಆರಂಭಿಸುವ ಹಮ್ಝಾನಿಗೆ ತನ್ನ ಕಿರಿಕಿರಿಯನ್ನು ಹೊರಹಾಕಿ ಹಗುರಾಗಲು ಸಿಗುವ ಏಕೈಕ ವ್ಯಕ್ತಿ ಹೆಂಡತಿ.
ರಾತ್ರಿ ಕ್ಷುಲ್ಲಕ ವಿಚಾರಗಳಿಗೆ ಹೊಡೆದು ಮಾರನೇ ದಿನ ಬೆಳಿಗ್ಗೆ ಸಿಹಿಸಿಹಿ ಮಾತುಗಳನ್ನಾಡಿ ಹೆಂಡತಿಯನ್ನು ಮೋಸಗೊಳಿಸುವ ಗೋಸುಂಬೆತನದಲ್ಲಿ ಹಮ್ಝಾ ನಿಪುಣ. ಪ್ರೀತಿ ಇಲ್ಲದೆ ಇದ್ದರೆ ತಾನು ಹೊಡೆಯುತ್ತಿರಲಿಲ್ಲ ಎನ್ನುವ ಆತ ಹಿಂಸೆಯನ್ನೂ ಪ್ರೀತಿಗೆ ಸಮೀಕರಿಸುವವ! ತನ್ನ ಗಂಡ ತನ್ನನ್ನು ಬಹಳ ಪ್ರೀತಿಸುತ್ತಾನೆ, ಆದರೆ ಕುಡಿದಾಗ ಮಾತ್ರ ಅವನಿಗೆ ಏನು ಮಾಡುತ್ತೇನೆಂದೇ ಗೊತ್ತಿರುವುದಿಲ್ಲ ಎಂದೇ ಬಲವಾಗಿ ನಂಬಿಕೊಂಡಿರುವ ಬದ್ರು ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ಅಲ್ಲೇ ನಾಲ್ಕು ಮನೆಯ ಪಕ್ಕ ವಾಸಿಸುವ ಬದ್ರುಳ ತಾಯಿ ಶಂಸು ಈ ಕಪ್ಪೆ ಮತ್ತು ಚೇಳಿನ ಕಥೆ ಹೇಳುತ್ತಲೇ ಇರುತ್ತಾಳೆ. ನಿನ್ನ ಗಂಡ ಚೇಳಿನಂತವನು ಅವನು ಬದಲಾಗಲು ಸಾಧ್ಯವೇ ಇಲ್ಲ ಎಂದು ಮಗಳಿಗೆ ಎಷ್ಟು ತಿಳಿಸಿ ಹೇಳಿದರೂ ಬದ್ರು ಒಪ್ಪುವುದಿಲ್ಲ.
ಕೌಟುಂಬಿಕ ಹಿಂಸೆಯೆನ್ನುವುದು ಭಾರತೀಯ ಸಮಾಜಕ್ಕಂಟಿದ ಗುಣಪಡಿಸಲಾಗದ ಖಾಯಿಲೆ. ಇದು ವಾಸಿಯಾಗದೇ ಇರುವ ರೋಗ ಏಕೆಂದರೆ ಗಂಡ ಹೆಂಡತಿಯನ್ನು ಹೊಡೆಯುವುದು ಬಡಿಯುವುದು ಗಂಡನ ಹಕ್ಕು ಎಂದು ಸಮಾಜ ನಂಬಿದೆ. ಮತ್ತು ಕೌಟುಂಬಿಕ ದೌರ್ಜನ್ಯದ ವ್ಯಾಪ್ತಿಯನ್ನು ನಿರ್ಧರಿಸಲು ಆಗದೇ ಇರುವುದು ಇನ್ನೊಂದು ಸವಾಲು. ಹೀಗಾಗಿ ಕೋಟ್ಯಂತರ ಹೆಣ್ಣುಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ನಲುಗಿ ರಾತ್ರಿಯಿಡೀ ಕಣ್ಣೀರಲ್ಲಿ ಕೈ ತೊಳೆದರೂ ಬೆಳಗಾಗುತ್ತಿದ್ದಂತೆ ಮತ್ತೆ ತುಟಿಗಳಿಗೆ ಬಲವಂತದ ತಿಳಿನಗು ಲೇಪಿಸಿಕೊಂಡು ಸಮಾಜದೆದುರು ಕುಟುಂಬದ ‘ಮಾನ’ ಉಳಿಸಿಕೊಳ್ಳುತ್ತಾರೆ. (ಪುರುಷರೂ ಇದರ ಬಲಿಪಶುವಾದರೂ ಪ್ರಮಾಣ ಅತೀ ಕಡಿಮೆ)
ಜನಪ್ರಿಯ ಮತ್ತು ಬಾಕ್ಸ್ ಆಫೀಸ್ ದೃಷ್ಟಿಯಿಂದ ಸುರಕ್ಷಿತ ಎನ್ನುವಂತಹ ಮಾಮೂಲು ಕಥೆಗಳನ್ನು ಬಿಟ್ಟು ಈ ರೀತಿಯ ವಿಷಯವನ್ನು ಸಿನಿಮಾ ಮಾಡಲು ಆಯ್ಕೆ ಮಾಡಿಕೊಂಡುದ್ದಕ್ಕೆ ಈ ಚಿತ್ರದ ನಿರ್ಮಾಪಕರಿಗೆ (ಶಾರುಖ್ ಖಾನ್ ಮತ್ತು ಆಲಿಯಾ ಭಟ್) ಮತ್ತು ನಿರ್ದೇಶಕರಿಗೆ (ಜಸ್ಮೀತ್ ಕೆ ರೀನ್) ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಮಹಿಳೆಯೊಬ್ಬರು ನಿರ್ದೇಶಕಿಯಾದರೆ ಆಕೆಯ ಒಳನೋಟಗಳು ವಿಭಿನ್ನವಾಗಿರುತ್ತದೆ ಎಂಬುದನ್ನು ‘ಡಾರ್ಲಿಂಗ್ಸ್’ ಸಾಬೀತುಪಡಿಸುತ್ತದೆ. ಆಗೊಮ್ಮೆ ಈಗೊಮ್ಮೆಯಾದರೂ ಬರುವ ಇಂತಹ ವಿಭಿನ್ನ ಸಿನಿಮಾಗಳು ಚಿತ್ರರಂಗದ ಬಗ್ಗೆ ಭರವಸೆ ಕಳೆದುಕೊಳ್ಳದೇ ಇರುವಂತೆ ನೋಡಿಕೊಳ್ಳುತ್ತವೆ ಎಂದರೆ ತಪ್ಪೇನೂ ಇಲ್ಲ.
ಊಟ ಮಾಡುವಾಗ ಸಿಕ್ಕ ಕಲ್ಲನ್ನು ಹೆಂಡತಿಯ ನಡುಗುವ ಅಂಗೈಯಲ್ಲಿ ಉಗಿಯುವ ನೀಚ ಪ್ರವೃತ್ತಿಯ ತನ್ನ ಗಂಡ ಇಂದಲ್ಲ ನಾಳೆ ಬದಲಾಗುತ್ತಾನೆ ಎಂದು ಬಲವಾಗಿ ನಂಬಿರುವ ಬದ್ರು ತನ್ನ ಮಿತಿಯಲ್ಲೇ ಅವನನ್ನು ಬದಲಾಯಿಸಲು, ಕುಡಿತ ಬಿಡಿಸಲು ಪ್ರಯತ್ನ ಪಡುತ್ತಾಳೆ. ನಿರ್ದೇಶಕಿ ಜಸ್ಮೀತ್ ಈ ಚಿತ್ರದಲ್ಲಿ ಕೌಟುಂಬಿಕ ಹಿಂಸೆಯ ದೃಶ್ಯಗಳನ್ನು ಕೇವಲ ಸದ್ದಿನ ಮೂಲಕ ಎಷ್ಟು ಪ್ರಭಾವಶಾಲಿಯಾಗಿ ಕಟ್ಟಿಕೊಟ್ಟಿದ್ದಾರೆಂದರೆ ಬದ್ರುಳ ತಾಯಿಯಂತೆ, ಕೆಳಗಿನ ಮಹಡಿಯ ಬ್ಯೂಟಿ ಪಾರ್ಲರ್ ಒಡತಿಯಂತೆ ನಾವೂ ಒಳಗೇನು ನಡೆಯುತ್ತಿರಬಹುದೆಂದು ಊಹಿಸುತ್ತ ಸಂಕಟದಿಂದ ಮೂಕ ಪ್ರೇಕ್ಷಕರಾಗಿ ಬಿಡುತ್ತೇವೆ. ಕುಡಿತ ನಿಲ್ಲಿಸಿದರೆ, ಒಂದು ಮಗುವಾದರೆ ಗಂಡ ಸರಿಹೋದಾನು ಎಂಬ ಆಸೆ ಬದ್ರುಗೆ. ಪ್ರೀತಿಯಿಂದಲೇ ಗಂಡನನ್ನು ಗೆಲ್ಲಬಹುದು ಎನ್ನುವ ನಂಬಿಕೆ ಅವಳದ್ದು. ಆದರೆ ಹಮ್ಝಾನ ಸಮಸ್ಯೆಯ ಮೂಲ ಅವನ ಅಸುರೀ ಪ್ರವೃತ್ತಿಯಲ್ಲಿದೆ, ಅಸುರಕ್ಷತೆಯ ಭಾವದಲ್ಲಿದೆ. ಬಾಸ್ನ ಟಾಯ್ಲೆಟ್ ತೊಳೆದು ತನ್ನ ಕೆಲಸ ಆರಂಭಿಸುವ ಅವನಿಗೆ ತನ್ನ ಕಿರಿಕಿರಿಯನ್ನು ಹೊರಹಾಕಿ ಹಗುರಾಗಲು ಸಿಗುವ ಏಕೈಕ ವ್ಯಕ್ತಿ ಹೆಂಡತಿ.
ವೈದ್ಯರು ಲಿವರ್ ಕೆಡುವ ಸ್ಥಿತಿಯಲ್ಲಿದೆ ಎಂದಾಗ ಕುಡಿತ ಬಿಟ್ಟರೂ ಆತನ ಸ್ವಭಾವ ಬದಲಾಗುವುದಿಲ್ಲ. ಯಾವಾಗ ಅವನ ರಾಕ್ಷಸೀ ಪ್ರವೃತ್ತಿ ಹೆಚ್ಚುತ್ತಲೇ ಹೋಗುತ್ತದೆಯೋ ಆಗ ತಾಯಿಯ ಜತೆಗೂಡಿ ಗಂಡನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸುತ್ತಾಳೆ. ಚಿತ್ರದ ಮೊದಲಾರ್ಧದಲ್ಲಿ ಬಲಿಪಶುವಾಗಿದ್ದ ಬದ್ರು ಉತ್ತರಾರ್ಧದಲ್ಲಿ ಸಂಪೂರ್ಣವಾಗಿ ಬದಲಾಗಿದ್ದಾಳೆ. ಪ್ರಾಣವಾಯು ಎಂದುಕೊಂಡಿದ್ದ ಪ್ರೀತಿಯೇ ಉಸಿರುಗಟ್ಟಿಸತೊಡಗಿದ ಮೇಲೆ, ತನ್ನ ಮತ್ತು ತನ್ನಮ್ಮನ ಅಸ್ತಿತ್ವಕ್ಕೇ ಧಕ್ಕೆ ತಂದಮೇಲೆ ಆ ವಿಷಮಯ ದಾಂಪತ್ಯದಿಂದ ಬಿಡುಗಡೆ ಹೊಂದಲು, ಅವನಿಗೆ ಬುದ್ಧಿ ಕಲಿಸಲು ಹಿಂಸಾತ್ಮಕ ತಂತ್ರಗಳನ್ನು ಉಪಯೋಗಿಸುತ್ತಾಳೆ. (ಹಾಗಾಗಿ ಕೆಲವರು ಈ ಚಿತ್ರ ಪುರುಷರೆಡೆಗಿನ ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ‘ಬಾಯ್ಕಾಟ್ ಆಲಿಯಾ ಭಟ್’ ಎಂದು ಗಲಾಟೆಯೆಬ್ಬಿಸಿದ್ದರು.) ಚಿತ್ರದ ಕೊನೆ ಕೂಡ ಪರಿಣಾಮಕಾರಿಯಾಗಿದೆ.
ಈ ಚಿತ್ರದ ಸಹನಿರ್ಮಾಪಕಿ ಮತ್ತು ನಟಿ ಆಲಿಯಾ ಭಟ್ ಬಗ್ಗೆ ಹೇಳಲೇ ಬೇಕು. 2012ರಲ್ಲಿ ‘ಸ್ಟೂಡೆಂಟ್ ಆಫ್ ದ ಇಯರ್’ ಚಿತ್ರದಲ್ಲಿ ಆಕೆ ಪಾದಾರ್ಪಣೆ ಮಾಡಿದಾಗ ನೆಪೋಟಿಸಂ ಕುರಿತು ಆದ ಗಲಾಟೆಯನ್ನು, ಆಲಿಯಾಗೆ ಸಿಕ್ಕ ಟೀಕೆ ಅವಹೇಳನದ ಸ್ವಾಗತವನ್ನೂ ನೆನಪಿಸಿಕೊಳ್ಳಿ. ಇದೀಗ ಹತ್ತು ವರ್ಷಗಳ ನಂತರ ಆಲಿಯಾ ಬಾಲಿವುಡ್ನ ಅತ್ಯುತ್ತಮ ಅಭಿನೇತ್ರಿಯಾಗಿ ಬೆಳೆದು ನಿಂತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾದಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಅಭಿನಯಿಸಿದ್ದ ಆಲಿಯಾ ‘ಡಾರ್ಲಿಂಗ್ಸ್’ನಲ್ಲಿ ಪೂರ್ತಿಯಾಗಿ ಆವರಿಸಿಬಿಟ್ಟಿದ್ದಾರೆ.
”ನೀನೇನು ಶಾರುಖ್ ಖಾನ್ ಅಲ್ಲವಲ್ಲ?” ಎಂದು ಯಾರಿಂದಲೋ ತನ್ನ ವೃತ್ತಿಜೀವನದ ಆರಂಭದಲ್ಲಿ ಪ್ರಶ್ನೆ ಎದುರಿಸಿದ್ದ ನಟ ವಿಜಯ್ ವರ್ಮಾ, ‘ಗಲ್ಲಿಬಾಯ್’ ಸಿನಿಮಾದಲ್ಲಿ, ‘ಮಿರ್ಜಾಪುರ್’ ವೆಬ್ ಸರಣಿಯಲ್ಲಿ ಮಿಂಚಿದವರು. ‘ಡಾರ್ಲಿಂಗ್ಸ್’ನಲ್ಲಿ ಕುಡುಕ, ಪತ್ನಿ ಪೀಡಕ ಗಂಡನ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ. ತನ್ನ ರೊಮ್ಯಾಂಟಿಕ್ ಮತ್ತು ಕ್ರೂರಮುಖಗಳೆರಡನ್ನೂ ತೋರಿಸುವ ಗಂಡನಾಗಿ ಅತ್ಯಂತ ಸಹಜವಾಗಿ ಅಭಿನಯಿಸಿರುವ ವಿಜಯ್ರ ಈ ಚಿತ್ರದ ಅಭಿನಯಕ್ಕೆ ಎಲ್ಲೆಡೆ ಪ್ರಶಂಸೆ ಹರಿದುಬರುತ್ತಿದೆ. ಬದ್ರುವಿನ ತಾಯಿಯ ಪಾತ್ರದಲ್ಲಿ ನಟಿಸಿರುವ ಶೆಫಾಲಿ ಶಾ ಎಂದಿನಂತೆ ಸಹಜವಾಗಿ ನಟಿಸಿದ್ದಾರೆ. ಮಲಯಾಳಂ ನಟ ರೋಶನ್ ಮ್ಯಾಥ್ಯೂ ಪ್ರಮುಖ ಪಾತ್ರವೊಂದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಜೈಲಿನ ದೃಶ್ಯವೊಂದರಲ್ಲಿ ಸಬ್ಇನ್ಸ್ಪೆಕ್ಟರ್ ಈಗ ಕಾಲ ಬದಲಾಗಿದೆ ಎನ್ನುತ್ತಾನೆ. ಆಗ ಬದ್ರುವಿನ ಅಮ್ಮ, ”ಟ್ವಿಟರ್ನ ಜನರಿಗೆ ಮಾತ್ರ ಸರ್ ಕಾಲ ಬದಲಾಗಿರೋದು, ನಮಗಲ್ಲ” ಎನ್ನುತ್ತಾಳೆ. ಶತಶತಮಾನಗಳಿಂದ ವಿವಿಧ ರೂಪಗಳಲ್ಲಿ ಹೆಚ್ಚುತ್ತಲೇ ಇರುವ ಕೌಟುಂಬಿಕ ಹಿಂಸೆಯನ್ನು ಯಶಸ್ವಿಯಾಗಿ ಅನಾವರಣಗೊಳಿಸುವ ‘ಡಾರ್ಲಿಂಗ್ಸ್’ ನೋಡಬೇಕಾದ ಸಿನಿಮಾ.