ಖ್ಯಾತ ತೆಲುಗು ಚಿತ್ರಕಥೆಗಾರ, ಲೇಖಕ ಶ್ರೀರಮಣ ಅಗಲಿದ್ದಾರೆ. ಕಾಮರಾಜ ರಾಮರಾವ್‌ ರಮಣ ಅವರು ತಮ್ಮ ಕಾವ್ಯನಾಮ ‘ಶ್ರೀರಮಣ’ ಹೆಸರಿನಲ್ಲಿ ಬರೆಯುತ್ತಿದ್ದರು. ಎಸ್‌ ಪಿ ಬಾಲಸುಬ್ರಹ್ಮಣ್ಯಂ ಮತ್ತು ಲಕ್ಷ್ಮೀ ಅಭಿನಯದ ‘ಮಿಥುನಂ’ ಶ್ರೀರಮಣ ಅವರ ಕೃತಿಯನ್ನು ಆಧರಿಸಿದ ಸಿನಿಮಾ.

ತೆಲುಗಿನ ಜನಪ್ರಿಯ ಚಿತ್ರಕಥೆಗಾರ ಶ್ರೀರಮಣ (70) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿದ ಶ್ರೀರಮಣರ ಮೂಲ ಹೆಸರು ಕಾಮರಾಜ ರಾಮರಾವ್ ರಮಣ. ಅವರು ಚಿತ್ರಕಥೆಗಾರರಾಗಿ, ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತರಾಗಿ ಗುರುತಿಸಲ್ಪಟ್ಟಿದ್ದರು. ಮೂಲತಃ ಅಂಕಣಕಾರರಾದ ಇವರ ಅಂಕಣಗಳು ಜನಪ್ರಿಯವಾಗಿದ್ದವು. ಸಾಕ್ಷಿ ಪತ್ರಿಕೆಯಲ್ಲಿ ‘ಅಕ್ಷರ ತೂನೀರಂ’ ಕಾವ್ಯನಾಮದಲ್ಲಿ ಪ್ರಕಟವಾಗುತ್ತಿದ್ದ ಅವರ ಚುಟುಕುಗಳು ದೊಡ್ಡ ಸಂಖ್ಯೆಯಲ್ಲಿ ಓದುಗರನ್ನು ಸೆಳೆದಿದ್ದವು. ‘ಶ್ರೀ ರಮಣ’ ಕಾವ್ಯನಾಮದಿಂದ ಚಿರಪರಿಚಿತರಾಗಿದ್ದ ಇವರ ಪ್ರಸಿದ್ಧ ಕೃತಿಗಳಲ್ಲಿ ‘ಮಿಥುನಂ’ ಸಹ ಒಂದು. ಈ ಕೃತಿ 2012ರಲ್ಲಿ ಚಿತ್ರವಾಗಿ ತೆರೆಕಂಡಿದೆ. ಈ ರೋಮ್ಯಾಂಟಿಕ್ ಕಥೆಯಲ್ಲಿ ಖ್ಯಾತ ಗಾಯಕ ಎಸ್‌. ಪಿ ಬಾಲಸುಬ್ರಮಣ್ಯಂ ಮತ್ತು ಲಕ್ಷ್ಮಿ ನಟಿಸಿದ್ದರು.

ಈ ಚಿತ್ರಕ್ಕೆ ಆಂಧ್ರಪ್ರದೇಶ ರಾಜ್ಯ ಸರ್ಕಾರ ನೀಡುವ ಗೌರವಾನ್ವಿತ ‘ನಂದಿ ಪ್ರಶಸ್ತಿ’ ಸಹ ದೊರೆತಿದೆ. ರಮಣ ಅವರಿಗೆ ವ್ಯಾಪಕ ಜನಪ್ರಿಯತೆ ತಂದುಕೊಟ್ಟ ಸಿನಿಮಾವಿದು. ಭಾರತೀಯ ಚಲನಚಿತ್ರೋದ್ಯಮದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದ ಶ್ರೀರಮಣ ತಮ್ಮ ಕತೆ ಹೇಳುವ ಸಾಮರ್ಥ್ಯದಿಂದ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ‘ಜೋಕಿ ಜ್ಯೋತಿ’, ‘ಶ್ರೀ ಚಾನೆಲ್’, ‘ಪಂಡರಿ’, ‘ಮೊಗಲಿ ರೇಕುಲು’ ಅವರ ಕೆಲವು ಪ್ರಸಿದ್ದ ಕೃತಿಗಳು. ಶ್ರೀರಮಣ ಅಗಲಿಕೆಗೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here