99ರ ಹರೆಯದ ಅಮೆರಿಕದ ಜನಪ್ರಿಯ ನಟಿ ಬೆಟ್ಟೀ ವೈಟ್ ಅಗಲಿದ್ದಾರೆ. ಇದೇ ತಿಂಗಳ 17ಕ್ಕೆ ಅವರಿಗೆ ನೂರು ತುಂಬುತ್ತಿತ್ತು. ಜಾಗತಿಕ ಕಿರುತೆರೆ ಟಾಕ್‌ಶೋನ ಮೊದಲ ನಿರೂಪಕಿ ಎಂದೇ ಕರೆಸಿಕೊಂಡಿದ್ದ ಅವರು ಸಿಟ್ಕಾಮ್ ಮಾದರಿಯಲ್ಲಿ ಮನೆಮಾತನಾಗಿದ್ದವರು.
ಅಮೆರಿಕದ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಸಿಕೊಂಡಿದ್ದ ನಟಿ ಬೆಟ್ಟೀ ವೈಟ್ ಅಗಲಿದ್ದಾರೆ. ಎಂಟು ದಶಕಗಳ ಸಮೃದ್ಧ ಕಲಾ ಬದುಕು ಅವರದ್ದು. ತಮ್ಮ ವೃತ್ತಿ ಬದುಕಿನಲ್ಲಿ ಅವರು ಎಂಟು ಎಮ್ಮಿ ಪ್ರಶಸ್ತಿ, ಒಂದು ಗ್ರ್ಯಾಮಿ ಪುರಸ್ಕಾರ, ಮೂರು ಬಾರಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಪಡೆದಿದ್ದಾರೆ. ಅಮೆರಿಕ ಕಿರುತೆರೆಯ ದಂತಕತೆ ಎನಿಸಿಕೊಂಡಿದ್ದ ಅವರು ಮೂರು ತಲೆಮಾರಿನ ಕಲಾವಿದರಿಗೆ ಮಾದರಿಯಾಗಿದ್ದವರು. ‘ದಿ ಮೆರಿ ವಿಡೊ’ (1939) ಸರಣಿ ಮೂಲಕ ಕಿರುತೆರೆ ಪ್ರವೇಶಿಸಿದ ಅವರು ‘ಹಾಲಿವುಡ್’ ಲೈವ್ ಟಾಕ್ ಶೋ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದರು.
ಜಾಗತಿಕ ಕಿರುತೆರೆ ಟಾಕ್‌ಶೋ ಮಾದರಿಯ ಮೊದಲ ನಿರೂಪಕಿ ಎಂದೇ ಬೆಟ್ಟೀ ಹೆಸರಾಗಿದ್ದಾರೆ. ಅವರ ಟಾಕ್‌ಶೋ ‘ದಿ ಬೆಟ್ಟೀ ವೈಟ್ ಶೋ’ (1954) NBCಯಲ್ಲಿ ಮೂಡಿಬಂದಿತ್ತು. ಅವರ ನಟನೆ, ನಿರ್ಮಾಣದ ‘ಲೈಫ್ ವಿಥ್ ಎಲಜಬತ್’ ಸರಣಿ ಸಿಟ್ಕಾಂ ಮಾದರಿಯಲ್ಲಿ ಹೊಸ ಸಂಚಲನ ಮೂಡಿಸಿತ್ತು. 1970ರಲ್ಲಿ ಮೂಡಿಬಂದಿದ್ದ ‘ದಿ ಮೇರಿ ಟೈಲರ್ ಮೂರ್’ ಸರಣಿ ಸಿಟ್ಕಾಮ್ ಮೂಲಕ ಅವರು ಅಮೆರಿಕದ ಮನೆಮಾತಾಗಿದ್ದರು. ‘ದಿ ಗೋಲ್ಡನ್ ಗರ್ಲ್ಸ್’ ಅವರ ಮತ್ತೊಂದು ಯಶಸ್ವೀ ಸಿಟ್ಕಾಮ್. ಬೆಟ್ಟೀ ವೈಟ್ ನಿಧನಕ್ಕೆ ಅಮೆರಿಕ ಅಧ್ಯಕ್ಷ ಬೆಡೆನ್ ಸೇರಿದಂತೆ ಹಾಲಿವುಡ್ ಖ್ಯಾತನಾಮರು ಸಂತಾಪ ಸೂಚಿಸಿದ್ದಾರೆ.