ಬಹುಭಾಷಾ ತಾರೆ ಅರ್ಜುನ್‌ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾರನ್ನು ಟಾಲಿವುಡ್‌ಗೆ ಪರಿಚಯಿಸುತ್ತಿದ್ದಾರೆ. ವಿಶ್ವಕ್‌ ಸೇನ್‌ ಹೀರೋ ಆಗಿ ನಟಿಸುತ್ತಿರುವ ಸಿನಿಮಾ ಸೆಟ್ಟೇರಿದೆ. ಹಿರಿಯ ನಟ ಜಗಪತಿ ಬಾಬು ಚಿತ್ರದಲ್ಲಿ ಖಳ ಪಾತ್ರ ನಿರ್ವಹಿಸಲಿದ್ದಾರೆ.

ಕನ್ನಡ ಮೂಲದ ಬಹುಭಾಷಾ ನಟ ಅರ್ಜುನ್‌ ಸರ್ಜಾ ನಿರ್ದೇಶನಕ್ಕೆ ಮರಳಿದ್ದಾರೆ. ಮತ್ತೊಮ್ಮೆ ಪುತ್ರಿ ಐಶ್ವರ್ಯಾಗಾಗಿ ತೆಲುಗು ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಎನ್ನುವುದು ವಿಶೇಷ. ಈ ಹಿಂದೆ ಐಶ್ವರ್ಯಾ ‘ಪ್ರೇಮಬರಹ’ ಕನ್ನಡ – ತಮಿಳು ದ್ವಿಭಾಷಾ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಅರ್ಜುನ್‌ ಸರ್ಜಾ ನಿರ್ದೇಶನ ಮತ್ತು ನಿರ್ಮಾಣದ ಚಿತ್ರಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಇದೀಗ ತಂದೆ – ಮಗಳು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಅರ್ಜುನ್‌ ತಮ್ಮ ಶ್ರೀ ರಾಮ್‌ ಫಿಲಂಸ್‌ ಇಂಟರ್‌ನ್ಯಾಷನಲ್‌ ಬ್ಯಾನರ್‌ ಅಡಿ ನಿರ್ಮಿಸುತ್ತಿರುವ 15ನೇ ಚಿತ್ರವಿದು. ಐಶ್ವರ್ಯಾ ಈ ಚಿತ್ರದೊಂದಿಗೆ ಟಾಲಿವುಡ್‌ಗೆ ಪರಿಚಯವಾಗುತ್ತಿದ್ದು, ಅವರಿಗೆ ನಾಯಕನಾಗಿ ಭರವಸೆಯ ನಟ ವಿಶ್ವಕ್ ಸೇನ್ ಆಯ್ಕೆಯಾಗಿದ್ದಾರೆ.

ವಿಶ್ವಕ್ ಸೇನ್ ನಿರ್ದೇಶನ ‘ಫಲಕ್ನುಮಾ ದಾಸ್’ ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿದ್ದು, ಸದ್ಯ ‘ದಸ್ ಕಾ ಧಮ್ಕಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಗೆ ಅರ್ಜುನ್‌ ಸರ್ಜಾ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ. ಹಿರಿಯ ನಟ ಜಗಪತಿ ಬಾಬು ಖಳ ಪಾತ್ರ ಪೋಷಿಸುತ್ತಿದ್ದು, ಇದೊಂದು ‘ರೋಡ್‌ ಟ್ರಿಪ್‌’ ಸಿನಿಮಾ ಎನ್ನಲಾಗಿದೆ. ಶೀರ್ಘದಲ್ಲೇ ಶೂಟಿಂಗ್‌ ಆರಂಭವಾಗಲಿದ್ದು, ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಸಿನಿಮಾದ ಮುಹೂರ್ತ ನೆರವೇರಿದ್ದು ಪವನ್ ಕಲ್ಯಾಣ್ ಚಿತ್ರಕ್ಕೆ ಕ್ಲ್ಯಾಪ್‌ ಮಾಡಿ ಶುಭ ಹಾರೈಸಿದರು.

Previous articleಬಾಲಿವುಡ್‌ನಲ್ಲಿ ಶಾರುಖ್‌ 30 ವರ್ಷ; ‘ಪಠಾಣ್‌’ ಮೋಷನ್‌ ಪೋಸ್ಟರ್‌ ಬಿಡುಗಡೆ
Next articleಸುಳಿಯೊಳಗೊಂದು ಒಳಸುಳಿ, ಅದರೊಳಗೆ ಇನ್ನೊಂದು ಸುಳಿ, ಅದರೊಳಗೆ ಮತ್ತೊಂದು…

LEAVE A REPLY

Connect with

Please enter your comment!
Please enter your name here