ಮೇಲ್ನೋಟಕ್ಕೆ ಇಷ್ಟು ಸರಳ ಕಥಾಹಂದರ ನಿರೂಪಿಸುತ್ತಾ… ಪನಾಹಿ ಸ್ವವಿಮರ್ಶೆ ಮಾಡಿಕೊಳ್ಳುತ್ತಾ… ಹೇಗೆ ಇರಾನಿನ ಸಾಮಾನ್ಯ ಜನರ ಬದುಕು ನಲುಗಿಹೋಗಿದೆ… ಹೇಗೆ ಬದುಕು ‘ನಕಲಿ’ಯಾಗಿದೆ ಎಂದು ಕನ್ನಡಿ ಹಿಡಿಯುವ ಪರಿ ಇರಾನಿ ನಿರ್ದೇಶಕರಿಗಷ್ಟೇ ಸಾಧ್ಯವಾಗಿರುವ ಜಾದೂ!
ಇರಾನಿನ ಚಲನಚಿತ್ರ ನಿರ್ದೇಶಕ ಜಾಫರ್ ಪನಾಹಿ ದೇಶ ಬಿಟ್ಟು ಹೋಗದ ಹಾಗೆ ಇರಾನಿನ ಸರ್ಕಾರ ಆದೇಶ ಹೊರಡಿಸಿದೆ. ಚಿತ್ರೋತ್ಸವದಲ್ಲಿ ಈತ ನಟಿಸಿ, ನಿರ್ದೇಶಿಸಿರುವ ಹೊಸ ಸಿನಿಮಾ ‘No Bears’ ನೋಡಿದೆ. ದೇಶ ಬಿಟ್ಟು ಪರಾರಿಯಾಗಲು ಸಿದ್ಧರಾದ ಪ್ರೇಮಿಗಳಿಬ್ಬರು ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳಲು ಹೆಣಗಾಡುವ ನೈಜ ಕತೆಯನ್ನು ಚಿತ್ರೀಕರಿಸಲು ನಿರ್ಧರಿಸಿರುವ ಜಾಫರ್ ಪನಾಹಿ, ಸ್ವತಃ ಚಿತ್ರನಿರ್ದೇಶನ ಮಾಡಬಾರದ ಸರ್ಕಾರದ ಆದೇಶದ ಹಾಗೆ ಇರಾನಿನ ಗಡಿನಾಡಿನ ಹಳ್ಳಿಯೊಂದರಲ್ಲಿ ನೆಲೆಸಿ ಅಕ್ರಮವಾಗಿ ಗಡಿ ದಾಟುವವರ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಕೊಳ್ಳಲು ಬಂದಿದ್ದಾನೆ. ಆ processನಲ್ಲಿ ದೇಶ ಬಿಟ್ಟು ಹೋಗುವುದು ಅಂತಹ ಕಷ್ಟದ ಕೆಲಸ ಅಲ್ಲ. ಈ ದೇಶದಲ್ಲೇ ಇರುವುದು ತನ್ನ ಆಯ್ಕೆ ಅನ್ನುವುದನ್ನು ಮನೋಜ್ಞವಾಗಿ ಕಾಣಿಸಿದ್ದಾನೆ.
ಸರಿ, ಗಡಿನಾಡ ಹಳ್ಳಿಗೆ ಬಂದಿದ್ದಾನೆ, ಸಿನಿಮಾ ಕೆಲಸ ಮುಗಿಸಿ ಹೋಗಬೇಕಲ್ಲವೇ? ಆದರೆ ಆ ಹಳ್ಳಿಯ ಜನಜೀವನದ ಫೋಟೋ ತೆಗೆಯುವಾಗ ಆ ಹಳ್ಳಿಯ ಯುವಪ್ರೇಮಿಗಳಿಬ್ಬರ ಫೋಟೋ ತೆಗೆದಿದ್ದಾನೆ ಮತ್ತು ಆ ಪ್ರೇಮಿಸಿರುವ ಹೆಣ್ಣು ಯಾರನ್ನು ಮದುವೆ ಆಗಬೇಕೆಂದು ಆ ಊರಿನ ಸಂಪ್ರದಾಯದಂತೆ ಹುಟ್ಟುವ ಸಮಯದಲ್ಲೇ ನಿರ್ಧಾರವಾಗಿರುವ ಕಾರಣ, ಈ ಪ್ರೇಮ ಪ್ರಕರಣ ಊರವರ ದೃಷ್ಟಿಯಲ್ಲಿ ಅಪರಾಧ. ಊರವರೆಲ್ಲ ಈ ಫೋಟೋ ಆಧಾರವಾಗಿ ಕೊಡಬೇಕೆಂದು ಬೆನ್ನುಬೀಳುತ್ತಾರೆ. ತಾನು ತೆಗೆಯಬೇಕಿಂದಿರುವ ಪ್ರೇಮಕತೆಯಲ್ಲಿ ಸರ್ಕಾರ ಅಡ್ಡವಾಗಿದ್ದರೆ… ಹಳ್ಳಿಯ ಸಾಮಾಜಿಕ ಕಟ್ಟುಪಾಡು ಈ ಪ್ರೇಮಿಗಳನ್ನು ನಿಯಂತ್ರಿಸುತ್ತಿದೆ.
ತಾನು ಹಳ್ಳಿಗೆ ಬಂದ ಉದ್ದೇಶ ಬೇರೇನೋ… ಆದರೆ ಮನುಷ್ಯನಾದವನು ತನ್ನ ಸುತ್ತಲಿನ ಘಟನೆಗಳಿಗೆ ಸ್ಪಂದಿಸುವುದು ಆಯ್ಕೆಯಲ್ಲದೆ ಮನುಷ್ಯನಾಗಿ ಬದುಕುವ ಅನಿವಾರ್ಯತೆಯ ಭಾಗ… ಅದು ರಾಜಕೀಯ ಎಂದು ಬೇರೆ ಮಾಡಲಾಗದ ವಾಸ್ತವ… ಕಲಾವಿದ ಅದಕ್ಕೆ ಹೊರತಲ್ಲ ಎನ್ನುವ ಸೂಕ್ಷ್ಮ ನಮ್ಮ ಕನ್ನಡನಾಡಿನ (ಅ)ಸೂಕ್ಷ್ಮ ಕಲಾವಿದರನ್ನು ಕಂಡಾಗ ಬಹಳ ಘನತೆಯ ವಿಷಯವಾಗಿ ಕಾಣುತ್ತೆ. ಮೇಲ್ನೋಟಕ್ಕೆ ಇಷ್ಟು ಸರಳ ಕಥಾಹಂದರ ನಿರೂಪಿಸುತ್ತಾ… ಪನಾಹಿ ಸ್ವವಿಮರ್ಶೆ ಮಾಡಿಕೊಳ್ಳುತ್ತಾ… ಹೇಗೆ ಇರಾನಿನ ಸಾಮಾನ್ಯ ಜನರ ಬದುಕು ನಲುಗಿಹೋಗಿದೆ… ಹೇಗೆ ಬದುಕು ‘ನಕಲಿ’ಯಾಗಿದೆ ಎಂದು ಕನ್ನಡಿ ಹಿಡಿಯುವ ಪರಿ ಇರಾನಿ ನಿರ್ದೇಶಕರಿಗಷ್ಟೇ ಸಾಧ್ಯವಾಗಿರುವ ಜಾದೂ…
ಸಿನಿಮಾ ಸಾಲಿನಲ್ಲಿ ನಮ್ಮ ಗೆಳೆಯರ ಮಾತುಕತೆಗಳಲ್ಲಿ ಸರ್ಕಾರದ ಇತ್ತೀಚಿನ ಮೀಸಲಾತಿ ಮೇಲಿನ ಆದೇಶಗಳನ್ನು ಬಯ್ಯುವ ಮಾತು ಕೇಳಿ ಸರ್ಕಾರದ ಪರವಾಗಿ ಮಾತನಾಡಿದ ಬಲಪಂತೀಯ ಒಲವಿರುವವನೊಬ್ಬ… ಜಾಫರ್ ಪನಾಹಿ ಹೇಗೆ ಆದೇಶದ ಸರ್ಕಾರ ಎದುರಿಸಿ ಜೈಲು ಸೇರಿದ್ದಾನೆ ಎಂದು ಹೆಮ್ಮೆಯಿಂದ ಹೇಳಿದ! ಈ ದೇಶದ ಕಲೆ,ಕಲಾವಿದರು ಇವರನ್ನೆಲ್ಲ ಇಷ್ಟರಮಟ್ಟಿಗೆ ‘ಸೆನ್ಸಿಸಿಟೈಸ್’ ಮಾಡಿದ ಪರಿ ಕಂಡು ನಾವು ಬೆರಗಾದೆವು.. ಇರಾನಿನ ಬಂಡುಕೋರನ ಪರವಾಗಿ ಮಾತಾಡುವ.. ಇಲ್ಲಿ ಮೂಲಭೂತವಾದಿಯಾಗಿ ಇರುವ.. ಪ್ಯಾರಲಲ್ ಸಿನಿಮಾ ನೋಡುವ ಸಂವೇದನೆ ಒಟ್ಟಿಗೆ ಇರಬೇಕೆಂದರೆ ಅದೊಂದು ಪವಾಡವೇ ಸರಿ!