‘777 ಚಾರ್ಲಿ’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದರು ತಮಿಳು ನಟ ಬಾಬಿ ಸಿಂಹ. ಈಗ ರಘು ಕೋವಿ ನಿರ್ದೇಶನದ ಚಿತ್ರದೊಂದಿಗೆ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ರಾಮ್‌ ನಟನೆಯ ಬಹುಭಾಷಾ ಸಿನಿಮಾದ ಪ್ರಮುಖ ಪಾತ್ರದಲ್ಲಿ ಬಾಬಿ ಸಿಂಹ ನಟಿಸುತ್ತಿದ್ದಾರೆ.

ಪ್ರತಿಭಾವಂತ ತಮಿಳು ನಟ ಬಾಬಿ ಸಿಂಹ ‘ಜಿಗರ್‌ ಥಂಡ’ ಚಿತ್ರದ ಶ್ರೇಷ್ಠ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದವರು. ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಚಿತ್ರದೊಂದಿಗೆ ಅವರು ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದರು. ಇದೀಗ ಅವರು ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ರಘು ಕೋವಿ ನಿರ್ದೇಶನದಲ್ಲಿ ತಯಾರಾಗುತ್ತಿದೆ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಬರಹಗಾರರಾಗಿ ಖ್ಯಾತಿ ಪಡೆದಿರುವ ರಾಜ್ಯ ಪ್ರಶಸ್ತಿ ವಿಜೇತ ರಘು ಕೋವಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ‘ದಿಲ್ ಮಾರ್’ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿರುವ ರಾಮ್‌ ಅವರಿಗೆ ರಘು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ರಾಮ್, ರಘು ಕೋವಿ ನಿರ್ದೇಶನದಲ್ಲಿ ನಟಿಸುತ್ತಿರುವುದು ವಿಶೇಷ.

ಹಂಸಲೇಖ ಕಥಾ ಕಣಜದಿಂದ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ರಘು ಕೋವಿ, ‘ಕೃಷ್ಣಲೀಲಾ’ ಅತ್ಯುತ್ತಮ ಬರವಣಿಗೆಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜೇಂದ್ರ ಸಿಂಗ್ ಬಾಬು, ಎಸ್ ಎಸ್ ರಾಜಶೇಖರ್ , ಕೆ ವಿ ರಾಜು, ಶಶಾಂಕ್, ಉಪೇಂದ್ರರ ಸಿನಿಮಾಗಳಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದು ಅವರಿಗೆ ಸ್ವತಂತ್ರ್ಯ ನಿರ್ದೇಶಕರಾಗಿ ಮೊದಲ ಸಿನಿಮಾ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಕಾಣಲಿರುವ ಈ ಸಿನಿಮಾದ ಹೀರೋ ರಾಮ್‌. ಚಿತ್ರದಲ್ಲಿ ಬಾಬಿ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರವೇನು ಎನ್ನುವುದನ್ನು ಚಿತ್ರತಂಡ ಹೇಳಿಲ್ಲ. ‘ಓ ಮೈ ಗಾಡ್ 2’ ನಿರ್ಮಾಪಕ ನಿಕುಲ್ ದೇಸಾಯಿ ಕನ್ನಡ ನಿರ್ಮಾಣ ಸಂಸ್ಥೆ ಜೊತೆ ಕೈ ಜೋಡಿಸಿ ಹಣ ಹಾಕುತ್ತಿದ್ದಾರೆ. ನೈಜ ಘಟನೆಯಾಧಾರಿತ ಕಥಾಹಂದರ ಹೊಂದಿರುವ ಸಿನಿಮಾಗೆ ಯುವರತ್ನ, ರಾಜಕುಮಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ಎ ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಇರಲಿದೆ. ಸದ್ಯ ಶೂಟಿಂಗ್ ಜಾರಿಯಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರತಂಡ ಟೈಟಲ್ ರಿವೀಲ್ ಮಾಡಲಿದೆ.

LEAVE A REPLY

Connect with

Please enter your comment!
Please enter your name here