ಮಾತು ಇವರ ಶಕ್ತಿ, ನಗು ಇವರಿಗೆ ಭೂಷಣ, ನಟನೆ ಇವರ ಸೆಳೆತ. ಹೌದು, ಸ್ಪಷ್ಟವಾದ ಮಾತು, ಹದಬೆರೆತ ಹಾವಭಾವದ ಸುಂದರ ನಿರೂಪಕಿ ಜಾಹ್ನವಿ. ಸುದ್ದಿ ನಿರೂಪಣೆಯಲ್ಲಿ ಕಳೆದ 12 ವರ್ಷಗಳಿಂದ ಗಮನ ಸೆಳೆದವರು. ಇತ್ತೀಚೆಗಷ್ಟೇ ಮುಕ್ತಾಯವಾದ ‘ಗಿಚ್ಚಿ ಗಿಲಿಗಿಲಿ’ ಕಾಮಿಡಿ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡ ಜಾಹ್ನವಿ ಅವರ ಸುದ್ದಿ ಮಾಧ್ಯಮದ ನಂಟು, ನಟನೆಯ ತುಡಿತದ ಬಗ್ಗೆ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

ಜಾಹ್ನವಿ ನ್ಯೂಸ್‌ ಆಂಕರ್‌ ಆಗಿ ಕಿರುತೆರೆ ಪ್ರವೇಶಿಸಿದವರು. ವೃತ್ತಿಪರತೆ ಮತ್ತು ಕಠಿಣ ಪರಿಶ್ರಮದಿಂದ ನ್ಯೂಸ್‌ ಆಂಕರಿಂಗ್‌ನಲ್ಲಿ ಯಶಸ್ಸು ಸಾಧಿಸಿದರು. ಇದೀಗ ನ್ಯೂಸ್‌ನಿಂದ ಅವರು ರಿಯಾಲಿಟಿ ಶೋ, ನಟನೆಯತ್ತ ಹೊರಳಿದ್ದಾರೆ. ಬಾಲ್ಯದಲ್ಲಿ ಓದಿನಲ್ಲಿ ಮುಂದಿದ್ದ ಜಾಹ್ನವಿ ಎಲ್ಲಾ ಬಗೆಯ ಸ್ಪರ್ಧೆಗಳಲ್ಲೂ ಮುಂದು. ನಿರೂಪಕಿಯಾಗುತ್ತೇನೆ ಎನ್ನುವ ಆಸೆ, ಕನಸು ಎರಡೂ ಅವರಿಗಿರಲಿಲ್ಲ. ಸಿನಿಮಾ, ಧಾರಾವಾಹಿಗಳನ್ನು ನೋಡುವ ಗೀಳು ನಟನೆಯತ್ತ ಒಲವು ಮೂಡಿಸುತ್ತಿತ್ತು. ಆದರೆ ಅದರ ಅಭಿವ್ಯಕ್ತಿಗೆ ಮನೆಯಲ್ಲಿ ಪೂರಕ ವಾತಾವರಣ ಇರಲಿಲ್ಲ. ಬಾಯ್ಬಿಟ್ಟು ಹೇಳಿದರೂ ಬಣ್ಣದ ಜಗತ್ತಿನಿಂದ ದೂರವೇ ಇರುವ ಸಲಹೆ ಬರುತ್ತಿತ್ತಂತೆ ಮನೆ ಮಂದಿಯಿಂದ. ಆದರೂ ಅತ್ತಿಗೆಯ ಜತೆಗೆ ಕದ್ದುಮುಚ್ಚಿ ಶೂಟಿಂಗ್ ನೋಡಲು ಹೋಗುತ್ತಿದ್ದರಂತೆ.

ಆಗ ಪ್ರೊಡಕ್ಷನ್ ಮ್ಯಾನೇಜರ್‌ಗಳೆಲ್ಲ, ‘ಡೈಲಾಗ್ ಕೊಟ್ಟು ನಟಿಸು ಅಂದರೆ ನಟಿಸುತ್ತೀಯಾ?’ ಎಂದು ಕೇಳುತ್ತಿದ್ದಾಗ ಮನೆಯಲ್ಲಿ ಒಪ್ಪಲ್ಲ ಎಂದು ತಮ್ಮ ಮನದೊಳಗಿನ ಆಸೆಯನ್ನು ಮುಚ್ಚಿಟ್ಟುಕೊಂಡು ನಟನೆ ಇಷ್ಟ ಎಂದು ಸಹ ಹೇಳಲೂ ಹಿಂಜರಿಯುತ್ತಿದ್ದರಂತೆ. ಏಕೆಂದರೆ ಹಿಂದೊಮ್ಮೆ ಸೀರಿಯಲ್ ಆಡಿಷನ್ ಆಗಿ ಸೆಲೆಕ್ಟ್ ಆಗಿ ಕೊನೆಗೆ ಮನೆಯಲ್ಲಿ ದೊಡ್ಡ ರಾದ್ಧಾಂತವೇ ಆಗಿ ಹೋಗಿತ್ತಂತೆ. ಹೀಗಾಗಿ ಮನೆಯಲ್ಲಿ ನಟಿಸಲು ಬಿಡುವುದಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಮನೆಯವರಿಗೆ ಅವರು ಟೀವಿ ಪರದೆ ಮೇಲೆ ಕಾಣಿಸಿಕೊಳ್ಳುವುದು ಇಷ್ಟವಿರಲಿಲ್ಲ. ಆದರೆ ಕಾಣಿಸಿಕೊಳ್ಳಲೇಬೇಕು ಎಂದರೆ ಅದು ಸುದ್ದಿ ಮಾಧ್ಯಮದಲ್ಲಿ ಮಾತ್ರ ಎಂಬ ಷರತ್ತು ಅವರನ್ನು ಕಟ್ಟಿ ಹಾಕಿತ್ತು. ನಟಿಸಲು ಆಗದಿದ್ದರೇನಂತೆ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುವುದು ಕೂಡ ಪ್ರತಿಷ್ಠಿತ ಕೆಲಸವೇ ಎಂದುಕೊಂಡೇ ಅ ಕ್ಷೇತ್ರದಲ್ಲಿ ಒಂದೊಂದೇ ಹೆಚ್ಚೆ ಇಡುತ್ತಾ ಅಲ್ಲೂ ಸೈ ಎನಿಸಿಕೊಂಡರು ಜಾಹ್ನವಿ.

ನಮ್ಮಮ್ಮ ಸೂಪರ್‌ಸ್ಟಾರ್‌
ಆದರೆ ಅವರ ಒಳಗಡೆ ನಟನೆಯ ತುಡಿತ ಹಾಗೇ ಬೂದಿ ಮುಚ್ಚಿದ ಕೆಂಡದಂತಿತ್ತು. ಒಂಚೂರು ಗಾಳಿ ಬೀಸಿದರೂ ಸಾಕಿತ್ತು ಬೆಂಕಿಯಾಗಿ ಉರಿಯಲು ಎನ್ನುವಷ್ಟು ಆ ನಟನೆ ಎಂಬ ಕೆಂಡದ ತುಡಿತ ಉರಿಯಲು ತವಕಿಸುತ್ತಿತ್ತು. ‘ವಾರಸ್ದಾರ’ ಧಾರಾವಾಹಿಗೆ ಕಿಚ್ಚ ಕ್ರಿಯೇಷನ್ಸ್‌ನಿಂದ ಕರೆ ಬಂದಿತ್ತು. ಆದರೆ ಮನೆಯಲ್ಲಿ ಒಪ್ಪಲಿಲ್ಲ ಅಂತ ಬಿಟ್ಟರಂತೆ. ಮತ್ತೆ ಮತ್ತೆ ಧಾರಾವಾಹಿ, ಸಿನಿಮಾಗಳಿಗೂ ಅವಕಾಶ ಬಂದರೂ ‘ಇಲ್ಲ’ ಅಂತಲೇ ಹೇಳುತ್ತಿದ್ದರಂತೆ. ಅಂಥದ್ದೇ ಹೊತ್ತಲ್ಲಿ ಅವರನ್ನು ನಟನೆಯ ಜಗತ್ತಿಗೆ ಬರ ಮಾಡಿಕೊಂಡಿದ್ದು ರಿಯಾಲಿಟಿ ಶೋಗಳು. ‘ತಡವಾದರೂ ತಮ್ಮೊಳಗಿದ್ದ ನಟನೆ ಎಂಬ ಗೀಳು ಇದೀಗ ಅರಳಿ ನಿಂತಿದ್ದು ಖುಷಿ’ ಎನ್ನುತ್ತಾರೆ.

ವಾರ್ತಾ ವಾಚಕಿಯಾಗಿ ಟಿವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದ ಜಾಹ್ನವಿ ಇದೀಗ ಮನರಂಜನೆಯಲ್ಲೂ ಮುಂದಿದ್ದಾರೆ. ರಿಯಾಲಿಟಿ ಶೋಗಳ ಮೂಲಕ ಮನೆ ಮಾತಾಗಿದ್ದಾರೆ. ‘ನಮ್ಮಮ್ಮ ಸೂಪರ್ ಸ್ಟಾರ್’, ‘ಗಿಚ್ಚಿ ಗಿಲಿಗಿಲಿ’ ಯಲ್ಲಿ ಸೈ ಎನಿಸಿಕೊಂಡವರು ಇದೀಗ ‘ಫ್ಯಾಮಿಲಿ ಗ್ಯಾಂಗ್‌ಸ್ಟರ್’ ಮೂಲಕ ರಂಜಿಸುತ್ತಿದ್ದಾರೆ. ಜಾಹ್ನವಿ ಈಗ ಮನರಂಜನೆ ಕ್ಷೇತ್ರದಲ್ಲಿ ಹಲವು ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ.

ಗಿಚ್ಚಿ ಗಿಲಿಗಿಲಿ
ಗಿಚ್ಚಿ ಗಿಲಿಗಿಲಿ ರನ್ನರ್ ಅಪ್ ಪಟ್ಟ ಪಡೆದಿರುವ ಜಾಹ್ನವಿ ಅವರ ಈ ಕಾಮಿಡಿ ಶೋ ಜರ್ನಿ ಅದ್ಭುತವಾಗಿತ್ತಂತೆ. ಈ ಬಗ್ಗೆ ಅವರೇ ಹೇಳುವಂತೆ ‘ಆರಂಭದಲ್ಲಿ ಸಿಗುತ್ತಿದ್ದ ಪಾತ್ರದ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸ ಇರಲಿಲ್ಲ. ಅದೇ ರೀತಿ ಹೇಳಲಿಕ್ಕೆ ಡೈಲಾಗ್‌ಗಳೇ ಇರುತ್ತಿರಲಿಲ್ಲ. ಪ್ರತಿ ಸಲ ಸ್ಕ್ರಿಪ್ಟ್‌ ಬಂದಾಗ ಡೈಲಾಗ್ ಎಷ್ಟು ಇದೆ ಅಂತ ನೋಡ್ತಿದ್ದೆ. ಆದರೆ ನಿರಾಸೆ ಆಗುತ್ತಿತ್ತು’ ಎನ್ನುತ್ತಾರೆ.

ಆಗೆಲ್ಲ ಇನ್ನಷ್ಟು ಅನುಭವ ಬೇಕು ಎನ್ನುವ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಮತ್ತಷ್ಟು ಸಮಯ ಕಾಯಬೇಕು ಎಂಬ ಮಾತನ್ನು ತಾಳ್ಮೆಯಿಂದ ಸ್ವೀಕರಿಸಿದ್ದರ ಪರಿಣಾಮವೇ ಇರಬಹುದು, ಅವರು ನಟನೆಯಲ್ಲಿ ದಿನೇ ದಿನೇ ಮಾಗುತ್ತಾ ಹೋದರು. ‘ಯಾವಾಗ ಎಮೋಷನಲ್ ಸ್ಕಿಟ್ ಸಿಕ್ಕಿತೋ, ಅದು ನನ್ನ ನಟನೆಯ ಜರ್ನಿಯನ್ನೇ ಬದಲಿಸಿಬಿಟ್ಟಿತು. ಅಜ್ಜಿ ಮೊಮ್ಮಗಳ ಸ್ಕಿಟ್ ಅನ್ನು ತುಂಬ ಕಷ್ಟಪಟ್ಟು ಕಲಿತೆ. ಅದನ್ನು ಸುಂದರವಾಗಿ ಹೇಳಿಕೊಟ್ಟಿದ್ದು ಮಾನಸ ಅವರು. ಅದಕ್ಕೆ ಜಡ್ಜಸ್‌ನಿಂದ ಉತ್ತಮ ಅಭಿಪ್ರಾಯ ಸಿಗ್ತು. ನಂತರ ಅಂಥದ್ದೇ ಪಾತ್ರಗಳು ಸಿಗುತ್ತಾ ಹೋದವು. ಅಪ್ಪ ಮಗಳ ಸ್ಕಿಟ್, ಗಂಡ ಹೆಂಡತಿ, ಕಿವುಡ ಮೂಗರಾಗಿದ್ದ ಸ್ಕಿಟ್‌ಗಳು ನನ್ನ ನಟನೆಯ ಕಲಿಕೆಯ ಹಂತವನ್ನು ಮೇಲಕ್ಕೇರಿಸುತ್ತಾ ಹೋದವು’ ಎನ್ನುತ್ತಾರೆ.

ಕಾಮಿಡಿಯಾ, ಎಮೋಷನಲ್ಲಾ ಅಂದರೆ ‘ಎರಡನ್ನೂ ನಿಭಾಯಿಸುವುದು ಸುಲಭವಲ್ಲ. ಎರಡಕ್ಕೂ ಅದರದ್ದೇ ಆದ ಔಚಿತ್ಯ ಇರುತ್ತದೆ. ಆದರೆ ಭಾವನಾತ್ಮಕ ನಟನೆ ಇದೆಯಲ್ಲ ಅಲ್ಲೇ ನಮ್ಮ ನಟನೆಯನ್ನು ನಾವು ಹೆಚ್ಚೆಚ್ಚು ಫ್ರೂವ್ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ನನ್ನ ವಿಷಯದಲ್ಲೂ ಆಗಿದ್ದು ಅದೇ. ನನ್ನನ್ನು ಗೆಲ್ಲಿಸಿದ್ದು ಕೂಡ ಇಂಥದ್ದೇ ಎಮೋಷನಲ್ ಪಾತ್ರಗಳು. ಎಮೋಷನಲ್ ಸ್ಕಿಟ್‌ನಲ್ಲಿ ಅಭಿನಯಕ್ಕೆ ಪ್ರಾಧಾನ್ಯ ಇರತ್ತೆ. ಅದೇ ಟರ್ನಿಂಗ್ ಪಾಯಿಂಟ್’ ಎನ್ನುತ್ತಾರೆ.

ಮಗನಿಗೂ ನಟನೆ ಇಷ್ಟ
ಸುದ್ದಿ ವಾಹಿನಿಗಳಲ್ಲಿ ಹಲವು ವರ್ಷಗಳಿಂದ ನಿರೂಪಕಿಯಾಗಿ ಗುರುತಿಸಿಕೊಂಡಿದ್ದರೂ, ಸಾಕಷ್ಟು ಶೋಗಳಲ್ಲಿ ಕಾಣಿಸಿಕೊಂಡಿದ್ದರೂ ಜನ ಅವರನ್ನು ವಿಪರೀತ ಇಷ್ಟಪಡುವುದು ಮಾತ್ರ ‘ನಮ್ಮಮ್ಮ ಸೂಪರ್ ಸ್ಟಾರ್’ ಮೂಲಕವಂತೆ. ಜನ ಇವತ್ತಿಗೂ ಅದೇ ಹೆಸರಿನಿಂದ ಗುರುತಿಸುತ್ತಾರೆ. ‘ಮಗನ ಮೂಲಕ ನನ್ನ ಗುರುತಿಸುವುದು ನನ್ನ ಸೌಭಾಗ್ಯ. ಈ ಶೋ ಮೂಲಕ ಮಗ ಗ್ರಂಥ್ ಪ್ರತಿಭೆ ಕೂಡ ಹೊರಬಂದಿದ್ದು ಖುಷಿ. ಶೋಗೆ ಹೋಗುವ ಮುನ್ನ ಕ್ರಿಕೆಟ್ ಇಷ್ಟಪಡುತ್ತಿದ್ದವ ಈಗ ನಟನಾಗುತ್ತೇನೆ ಎನ್ನುವಷ್ಟು ಈ ಶೋ ನನ್ನ ಹಾಗೂ ನನ್ನ ಮಗನ ಬದುಕಿನಲ್ಲಿ ಹೊಸ ಹೊಳವು ಮೂಡಿಸಿದೆ’ ಎನ್ನುತ್ತಾರೆ.

ನಿರೂಪಣೆಯ ಜರ್ನಿ
12 ವರ್ಷಗಳ ಕಾಲ ಸುದ್ದಿ ವಾಹಿನಿಗಳಲ್ಲಿ ತಮ್ಮನ್ನು ತಾವು ನಿರೂಪಿಸಿಕೊಂಡ ಜಾಹ್ನವಿ ಅವರ ನಿರೂಪಣೆ ಬದುಕು ಕೂಡ ಶುರುವಾಗಿದ್ದು ಮಗು ಹುಟ್ಟಿದ ಮೇಲೆ. ಮಗುವಾದ ಮೇಲೆ ಕೆಲಸ ಅರಸಿಕೊಂಡು ಸುದ್ದಿ ವಾಹಿನಿಗಳಿಗೆ ಪುಟ್ಟ ಮಗುವನ್ನು ಕರೆದುಕೊಂಡು ಹೋಗಿ ಕೆಲಸ ಕೇಳುತ್ತಿದ್ದರಂತೆ. ಆದರೆ ಮದುವೆ, ಮಗುವಿನ ಕಾರಣಕ್ಕೆ ಕೆಲಸ ಸಿಗುತ್ತಿರಲಿಲ್ಲ. ಆನಂತರ ಉದಯ ನ್ಯೂಸ್ ಮೂಲಕ ನಿರೂಪಣೆಯ ಜರ್ನಿ ಶುರುವಾಯಿತು. ನಂತರ ಹಲವಾರು ವಾಹಿನಿಗಳಲ್ಲಿ ಕೆಲಸ ಮಾಡಿದ ಇವರು ಚರ್ಚೆ, ಬ್ರೇಕಿಂಗ್ ನ್ಯೂಸ್ ಸೇರಿದಂತೆ ಹಲವು ಬಗೆಯ ಸುದ್ದಿಗಳ ನಿರೂಪಣೆಯಲ್ಲಿ ಗಮನ ಸೆಳೆದರು. ‘ದೈವ ಸನ್ನಿಧಿ’ ಇವರಿಗೆ ತೃಪ್ತಿ ಕೊಟ್ಟ ಕಾರ್ಯಕ್ರಮ. ‘ದೇವರ ಸನ್ನಿಧಿಗೆಲ್ಲ ಹೋಗಿ ಗರ್ಭಗುಡಿಯೆಲ್ಲ ನೋಡಿದ್ದು, ನಿರೂಪಿಸಿದ್ದು ಮರೆಯಲಾಗದ ಅನುಭವ’ ಎನ್ನುತ್ತಾರೆ.
‘ಸುದ್ದಿ ನಿರೂಪಣೆ ಎಂದರೆ ಸದಾ ಸವಾಲು ಎಸೆಯುವ ಕೆಲಸ. ಅಲ್ಲಿ ನಿರಂತರ ಕಲಿಕೆ ಇದ್ದೇ ಇರುತ್ತದೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವಶ್ಯವಾಗಿ ತಿಳಿದಿರಲೇಬೇಕು. ಸೆಕೆಂಡ್ ಶಿಫ್ಟ್ ಅಂತ ಬೆಳಗ್ಗೆ ನಡೆಯುವ ವಿದ್ಯಮಾನಗಳನ್ನು ನಿರ್ಲಕ್ಷಿಸುವ ಹಾಗಿಲ್ಲ. ಅದನ್ನು ಗಮನಿಸಿದರೆ ಮಾತ್ರ ನಮ್ಮ ಕೆಲಸದ ಅವಧಿಯಲ್ಲಿ ಅಡೆತಡೆಯಿಲ್ಲದೆ ಸುಂದರವಾಗಿ ಸುದ್ದಿ ನಿರೂಪಿಸಲು ಸಹಕಾರಿ’ ಎನ್ನುತ್ತಾರೆ. ಇವರ ನಿರೂಪಣೆಗಾಗಿ ಸಾಕಷ್ಟು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ನಟನೆಯ ಮುಂದಿನ ನಿಲ್ದಾಣ
ಈಗಲೂ ಸುದ್ದಿ ವಾಹಿನಿಯ ಮೂಲಕವೇ ಬದುಕು ಕಟ್ಟಿಕೊಂಡಿರುವ ಜಾಹ್ನವಿ ನಿರೂಪಣೆಯ ಜತೆಗೆ ನಟನೆಯತ್ತಲೂ ಗಮನ ಹರಿಸಿದ್ದಾರೆ. ‘ಕಷ್ಟದ ಸಂದರ್ಭದಲ್ಲಿ ನನ್ನ ತಾಯಿ ಬೆನ್ನೆಲಬಾಗಿ ನಿಂತಿದ್ದಾರೆ. ಅವರಿಂದಲೇ ಇಷ್ಟೆಲ್ಲ ಕೆಲಸ, ನಟನೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ. ‘ಮನೆಯಲ್ಲಿ ಅಣ್ಣ ನಿರೂಪಕಿಯಾಗಷ್ಟೇ ನನ್ನನ್ನು ಟೀವಿಯಲ್ಲಿ ನೋಡಲು ಇಷ್ಟಪಡುತ್ತಿದ್ದ. ಆದರೆ ಎಮೋಷನಲ್ ಸ್ಕಿಟ್ ನೋಡಿ ನಟನೆ ಮುಂದುವರಿಸುವಂತೆ ಸಲಹೆ ಮಾಡಿದ. ಮುಂದಿನ ದಿನಗಳಲ್ಲಿ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವ ಇರಾದೆಯಿದೆ’ ಎನ್ನುತ್ತಾರೆ.

ಪರಿಶ್ರಮವಿದ್ದರೆ ಗೆಲುವು ನಿಶ್ಚಿತ
ನಿರೂಪಣೆ ಅಥವಾ ನಟನೆಯಲ್ಲಿಗುರುತಿಸಿಕೊಳ್ಳಬೇಕು ಎಂದು ಹಂಬಲಿಸುವ ಹುಡುಗಿಯರಿಗೆ ನಿಮ್ಮ ಕಿವಿ ಮಾತೇನು? ಅಂದರೆ ‘ಪ್ರಯತ್ನ, ಪರಿಶ್ರಮವೇ ನೀವು ಜಪಿಸುವ ಮಂತ್ರವಾಗಲಿ. ನೀವು ಶ್ರಮ ಹಾಕಿ ದುಡಿಯಿರಿ. ಪದೇಪದೆ ಸೋಲು ಎದುರಾಗಬಹುದು, ಆತ್ಮವಿಶ್ವಾಸ ಕುಗ್ಗಿಸುವ ಸನ್ನಿವೇಶಗಳು ಸೃಷ್ಟಿಯಾಗಬಹುದು. ಆದರೆ ಸೋಲಿಗೆ ಸವಾಲು ಹಾಕಿ. ಯಾವತ್ತೋ ಒಂದು ದಿನ ಗೆಲವು ಸಿಗುತ್ತದೆ. ನಾನು ಇವತ್ತು 12 ವರ್ಷ ನ್ಯೂಸ್‌ನಲ್ಲಿ ಇದ್ದೇನೆ ಅಂದರೆ ಸತತವಾಗಿ ಏಳುಬೀಳುಗಳ ನಡುವೆ ಹೋರಾಡಿದ್ದೇನೆ. ಯಾರೋ ನಿಮ್ಮಿಂದ ಆಗುವುದೇ ಇಲ್ಲ ಎಂದು ಕಾಲೆಳೆಯುತ್ತಾರೆ. ಆದರೆ ಹಿಂಜರಿಕೆ ಬೇಡ. ನಿಮ್ಮ ಶಕ್ತಿ ಏನು ಅಂತ ತಿಳಿದುಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗಿ. ಯಶಸ್ಸು ಸಿಗುವುದು ನಿಧಾನ ಆಗಬಹುದೇ ಹೊರತು ಅದು ಅಸಾಧ್ಯ ಅಂತಲ್ಲ. ಯಾರು ಏನು ಬೇಕಾದರೂ ಸಾಧಿಸಬಹುದು. ಮದುವೆ, ಮಗುವಿನ ನಂತರ ಏನು ಮಾಡಕ್ಕಾಗಲ್ಲ ಅನ್ನುವುದೆಲ್ಲ ಸುಳ್ಳು. ನಿಮಗೆ ನೀವೇ ಗಡಿ ಸೃಷ್ಟಿಸಿಕೊಳ್ಳಬೇಡಿ. ಯಾವುದೇ ಕ್ಷೇತ್ರವಾದರೂ ಮುಗ್ಗುಗ್ಗುವ, ಸಾಧಿಸುವ ಗುರಿ ಇರಲಿ’ ಎನ್ನುತ್ತಾರೆ ಜಾಹ್ನವಿ.

LEAVE A REPLY

Connect with

Please enter your comment!
Please enter your name here