‘ಫೈವ್ ಬ್ಲೈಂಡ್ ಡೇಟ್ಸ್’ ಸಂಪ್ರದಾಯಗಳನ್ನು ಗೌರವಿಸುವ ಮಹತ್ವ, ಸಂಸ್ಕೃತಿಯನ್ನು ಸಂರಕ್ಷಿಸುವುದು ಮತ್ತು ಹಿರಿಯ ಮಗಳ ಮೇಲೆ ಇಟ್ಟಿರುವ ನಿರೀಕ್ಷೆಗಳೊಂದಿಗೆ ಸೆಣಸಾಟದಂತಹ ವಿಷಯಗಳನ್ನು ಹೆಣೆದುಕೊಂಡಿದೆ. ಚಲನಚಿತ್ರವು ತನ್ನ ಹಾಸ್ಯದ ಕೊರತೆಯನ್ನು ಸಾಂಸ್ಕೃತಿಕ ಅವಲೋಕನಗಳೊಂದಿಗೆ ಸರಿದೂಗಿಸುತ್ತದೆ. ಊಹಿಸಬಹುದಾದ ಅಂತ್ಯದೊಂದಿಗೆ, ಚಲನಚಿತ್ರ ಹೊಸದೇನನ್ನೂ ನೀಡುವುದಿಲ್ಲ. ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಶಾನ್ ಸೀಟ್ ನಿರ್ದೇಶನ ಮತ್ತು ಶುವಾಂಗ್ ಹು ಮತ್ತು ನಾಥನ್ ರಾಮೋಸ್ – ಪಾರ್ಕ್ ಚಿತ್ರಕಥೆಯ ‘ಫೈವ್ ಬ್ಲೈಂಡ್ ಡೇಟ್ಸ್’, ಆಸ್ಟ್ರೇಲಿಯನ್ ರೊಮ್ಯಾಂಟಿಕ್ ಕಾಮಿಡಿ. ಲಿಯಾ ಆಗಿ ಶುವಾಂಗ್ ಹೂ, ರಿಚರ್ಡ್ ಆಗಿ ಯೋಸನ್ ಆನ್, ಮೇಸನ್ ಆಗಿ ಇಲಿಯಾಸ್ ಸ್ವಿಂಡೆಲ್ಸ್, ಕ್ಸಿಯಾನ್ ಆಗಿ ಟಿಜಿ ಮಾ ಮತ್ತು ಜಿಂಗ್ ಆಗಿ ರೆನೀ ಲಿಮ್ ಪಾತ್ರವರ್ಗದಲ್ಲಿದ್ದಾರೆ. ಲಿಯಾ ಟೀ ಅಂಗಡಿಯೊಂದನ್ನು ನಡೆಸಲು ಹೆಣಗಾಡುತ್ತಿರುವ ಯುವತಿ. ಈಕೆ ತನ್ನ ಬದುಕಿನಲ್ಲಿ ಪ್ರೀತಿಯನ್ನು ಹುಡುಕುವುದಕ್ಕಿಂತ ಹೆಚ್ಚಾಗಿ ತನ್ನ ಗಮನವನ್ನು ವ್ಯಾಪಾರದ ಮೇಲೆ ಕೇಂದ್ರೀಕರಿಸುತ್ತಾಳೆ. ಇದ್ದಕ್ಕಿದ್ದಂತೆ, ಭವಿಷ್ಯ ಹೇಳುವವರೊಬ್ಬರು ಲಿಯಾಳ ವ್ಯವಹಾರದ ಯಶಸ್ಸು ಮತ್ತು ಅವರ ಪ್ರೀತಿಯ ಬದುಕು ಪರಸ್ಪರ ಹೆಣೆದುಕೊಂಡಿದೆ ಎಂದು ಭವಿಷ್ಯ ನುಡಿಯುತ್ತಾರೆ. ತನ್ನ ಅಂಗಡಿಯನ್ನು ಉಳಿಸಲು ಮತ್ತು ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ಆಕೆ ಕುಟುಂಬವೇ ವ್ಯವಸ್ಥೆ ಮಾಡಿರುವ ಐದು ಬ್ಲೈಂಡ್ ಡೇಟ್ಸ್‌ಗೆ ಹೋಗಬೇಕಿದೆ.

ಭವಿಷ್ಯ ಹೇಳುವವರು ಲಿಯಾಗೆ ಮುಂದಿನ ಐದು ಬ್ಲೈಂಡ್ ಡೇಟ್ಸ್‌ನಲ್ಲಿ ಆಕೆ ತನ್ನ ಆತ್ಮ ಸಂಗಾತಿಯನ್ನು ಭೇಟಿಯಾಗುತ್ತಾರೆ ಎಂಬ ಭವಿಷ್ಯವಾಣಿಯನ್ನು ಹೇಳಿದ ನಂತರ, ಲಿಯಾಳ ಜೀವನ ಬದಲಾಗುತ್ತದೆ. ತನ್ನ ಸಹೋದರಿಯ ಮದುವೆಗೂ ನಿಗೂಢ ವ್ಯಕ್ತಿ ಬಂದಿರುತ್ತಾನೆ. ಆತ ತನ್ನ ಕುಟುಂಬದ ಚಹಾ ಅಂಗಡಿಯನ್ನು ನಷ್ಟದಿಂದ ಮೇಲೆತ್ತಿ ಅಜ್ಜಿಯ ಪರಂಪರೆಯನ್ನು ಉಳಿಸಲು ಸಹಾಯ ಮಾಡುತ್ತಾನೆ. ಹಾಗಾದರೆ ಅವನು ಯಾರು?

ತನ್ನ ಸಹೋದರಿಯ ಮದುವೆಗೆ ಎರಡು ತಿಂಗಳ ಮೊದಲು ಐದು ಬ್ಲೈಡ್ ಡೇಟ್ಸ್‌ನಲ್ಲಿ ಲಿಯಾ ಆತ್ಮ ಸಂಗಾತಿಯನ್ನು ಹುಡುಕುತ್ತಾಳೆಯೋ, ಇಲ್ಲವೋ ಎಂಬುದು ಕಥಾವಸ್ತು. ಆದರೂ ಕಥೆ ಅಲ್ಲಲ್ಲಿ ಜಾರಿದಂತಿದೆ. ಮುಂದಿನ ದೃಶ್ಯದಲ್ಲಿ ಏನಾಗುತ್ತದೆ ಎಂಬುದನ್ನು ನೋಡುಗರು ಸುಲಭವಾಗಿ ಊಹಿಸಬಹುದು . ಅಷ್ಟೇ ಅಲ್ಲ ಇದು ಹಲವಾರು ಪೂರ್ವಾಗ್ರಹಗಳನ್ನು ಹೊಂದಿದ್ದು, ಇದಕ್ಕೆ ಉದಾಹರಣೆಯೇ ನಾಯಕಿಯ ಗೆಳೆಯ ಗೇ(ಸಲಿಂಗಕಾಮಿ). ಆತನನ್ನು ತೋರಿಸಿದ ರೀತಿ ಪೂರ್ವಾಗ್ರಹಗಳಿಂದ ಕೂಡಿದ್ದರಿಂದ ಚಿತ್ರಕತೆಯ ಅಂಕ ಇಲ್ಲಿ ಮೈನಸ್ ಮಾಡಲೇಬೇಕಾಗುತ್ತದೆ.

90 ನಿಮಿಷದ ಈ ಸಿನಿಮಾದಲ್ಲಿ ತಮಾಷೆ ಅಂತ ನಗುವ ವಸ್ತು ಏನೂ ಇಲ್ಲ. ತಮಾಷೆ ಎಂದು ತೋರಿಸಿದ್ದು ವಿಚಿತ್ರವಾಗಿತ್ತು ಎಂದೇ ಹೇಳಬಹುದು. ಲಿಯಾ ಪಾತ್ರ ಅಷ್ಟೇನೂ ಸ್ಟ್ರಾಂಗ್ ಎಂದು ಅನಿಸಿಲ್ಲ. ಕೆಲವು ಬಾರಿ ಅವಳು ಹತಾಶಳಂತೆ ತೋರುತ್ತಾಳೆ. ಆಕೆ ಏನು ಮಾಡುತ್ತಿದ್ದಾಳೆ, ಆಕೆಯ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವುದೂ ಕಷ್ಟ. ಆಕೆಯ ಬೆಸ್ಟ್ ಫ್ರೆಂಡ್ ಮೇಸನ್ ಇಷ್ಟವಾಗುತ್ತಾನೆ. ಆತನ ಅಭಿನಯ ಪ್ರೇಕ್ಷಕರನ್ನು ಹಿಡಿದು ನಿಲ್ಲಿಸುತ್ತದೆ. ಅವನು ಮತ್ತು ಲಿಯಾ ಸ್ನೇಹವು ಕೆಲವು ಸುಂದರ ಕ್ಷಣಗಳನ್ನು ಹೊಂದಿದೆ. ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿದೆ.

ರೋಮ್ಯಾಂಟಿಕ್ ಕಾಮಿಡಿ ಸಿನಿಮಾಗಳು ಸಾಮಾನ್ಯವಾಗಿ ಸಸ್ಪೆನ್ಸ್ ಹೊಂದಿರುತ್ತವೆ. ಬಹುಶಃ ಅನಿರೀಕ್ಷಿತ ತ್ರಿಕೋನ ಪ್ರೇಮ ಅಥವಾ ಇನ್ಯಾವುದೋ ತಿರುವು. ಆದರೆ ಈ ಸಿನಿಮಾದಲ್ಲಿ ಅದು ಸಂಭವಿಸುವುದಿಲ್ಲ. ಚಲನಚಿತ್ರವು ಅರ್ಧದಷ್ಟು ಮುಗಿಯುವ ಮೊದಲು, ಲಿಯಾ ಅವಳ ಬಾಲ್ಯದ ಸ್ನೇಹಿತ ರಿಚರ್ಡ್‌ನನ್ನೇ ಆರಿಸಿಕೊಳ್ಳುತ್ತಾಳೆ ಎಂಬುದು ನೋಡುಗರಿಗೆ ಸ್ಪಷ್ಟವಾಗಿ ಬಿಡುತ್ತದೆ.

ಚಿತ್ರದ ಉದ್ದಕ್ಕೂ ಲಿಯಾ ಮತ್ತು ರಿಚರ್ಡ್ ನಡುವೆ ಹೆಚ್ಚು ರೋಮ್ಯಾಂಟಿಕ್ ಕೆಮಿಸ್ಟ್ರಿ ಇರಬೇಕಿತ್ತು. ಆದರೆ ಸಿನಿಮಾದಲ್ಲಿ ಅದು ಇಲ್ಲ. ಲಿಯಾ ಮತ್ತು ರಿಚರ್ಡ್ ವರ್ಷಗಳ ಹಿಂದೆ ಯಾಕೆ ಬೇರೆಯಾದರು ಎಂಬುದಕ್ಕೆ ಸಂಕ್ಷಿಪ್ತ ವಿವರಣೆಯೂ ಇದೆ. ಆದರೆ ಈ ಇಬ್ಬರು ಬಾಲ್ಯದ ಸ್ನೇಹಿತರ ನಡುವಿನ ಪ್ರೇಮ ಹುಟ್ಟಿದ್ದು ಹೇಗೆ ಎಂಬುದು ಇಲ್ಲಿ ಅಸ್ಪಷ್ಟ. ರಿಚರ್ಡ್ ‘ದಿ ಒನ್’ ಎಂದು ಲಿಯಾ ಹೇಳುತ್ತಾಳೆ. ಆದರೆ ಲಿಯಾ ಮತ್ತು ರಿಚರ್ಡ್ ಅವರ ಪ್ರೇಮಕತೆ ನಡುವೆ ಸಸ್ಪೆನ್ಸ್ ಕ್ಷಣಗಳಿದ್ದರೆ ಸಿನಿಮಾ ಮತ್ತಷ್ಟು ಚೆನ್ನಾಗಿರುತ್ತಿತ್ತು.

ಪ್ರೀತಿ, ಪ್ರಣಯದ ಜತೆ ಈ ಸಿನಿಮಾ ಕುಟುಂಬದ ಸೂಕ್ಷ್ಮ ವಿಷಯಗಳ ಬಗ್ಗೆಯೂ ಕೇಂದ್ರೀಕರಿಸುತ್ತದೆ. ಹಿರಿಯ ಮಗಳಾಗಿ ಲಿಯಾ ಅನುಭವಿಸುವ ಒತ್ತಡ, ಸಂಗಾತಿಯನ್ನು ಕಂಡುಹಿಡಿಯಲು ಅವಳ ಮೇಲೆ ಒತ್ತಡ ಹೇರುವ ಮಾತುಗಳು, ಒಂಟಿಯಾಗಿದ್ದಕ್ಕೆ ಕೇಳಿ ಬರುವ ಟೀಕೆಗಳು ಎಲ್ಲವೂ ಇಲ್ಲಿವೆ. ಈ ಕ್ಷಣಗಳು ಲಿಯಾ ಮತ್ತು ಅವರ ಕುಟುಂಬದಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಲಿಯಾ ಮತ್ತು ಅವಳ ತಾಯಿಯ ಜಗಳದ ಸಮಯದಲ್ಲಿ, ಲಿಯಾ ಆಡುವ ಮಾತುಗಳು, ಆಕೆಯ ಹತಾಶೆಗಳು ಹೆತ್ತವರ ನಡುವಿನ ಸಂಬಂಧಗಳು ಮಕ್ಕಳ ಮೇಲೆ ಹೇಗೆ ಪ್ರಭಾವವನ್ನು ಬೀರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ.

‘ಫೈವ್ ಬ್ಲೈಂಡ್ ಡೇಟ್ಸ್’ ಸಂಪ್ರದಾಯಗಳನ್ನು ಗೌರವಿಸುವ ಮಹತ್ವ, ಸಂಸ್ಕೃತಿಯನ್ನು ಸಂರಕ್ಷಿಸುವುದು ಮತ್ತು ಹಿರಿಯ ಮಗಳ ಮೇಲೆ ಇಟ್ಟಿರುವ ನಿರೀಕ್ಷೆಗಳೊಂದಿಗೆ ಸೆಣಸಾಟದಂತಹ ವಿಷಯಗಳನ್ನು ಹೆಣೆದುಕೊಂಡಿದೆ. ಸಂಪ್ರದಾಯವು ತನ್ನದೇ ಆದ ಸ್ಥಾನವನ್ನು ಹೊಂದಿದೆ, ಆದರೆ ಸ್ಥಿರವಾಗಿಲ್ಲ ಮತ್ತು ಎಂದಿಗೂ ಬದಲಾಗುವುದಿಲ್ಲ ಎಂಬುದು ಲಿಯಾ ಕಂಡುಕೊಂಡ ಸತ್ಯ. ಚಲನಚಿತ್ರವು ತನ್ನ ಹಾಸ್ಯದ ಕೊರತೆಯನ್ನು ಸಾಂಸ್ಕೃತಿಕ ಅವಲೋಕನಗಳೊಂದಿಗೆ ಸರಿದೂಗಿಸುತ್ತದೆ. ಊಹಿಸಬಹುದಾದ ಅಂತ್ಯದೊಂದಿಗೆ, ಚಲನಚಿತ್ರ ಹೊಸದೇನನ್ನೂ ನೀಡುವುದಿಲ್ಲ. ಪ್ರೇಮಕತೆಯಾಗಿರುವ ಕಾರಣ ಒಮ್ಮೆ ನೋಡಬಹುದು. ‘ಫೈವ್ ಬ್ಲೈಂಡ್ ಡೇಟ್ಸ್’ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here