ಆರಂಭದಲ್ಲಿ ಇದೊಂದು ಕ್ರೈಂ – ಥ್ರಿಲ್ಲರ್ ಎಂದೆನಿಸಿದರೂ ನಂತರ ಕತೆ ಬೇರೆಯದೇ ಶೇಡ್ ಪಡೆದುಕೊಳ್ಳುತ್ತದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿರ್ಮಾಣದ ಈ ಸಿನಿಮಾ ಸದ್ಯ Sony LIVನಲ್ಲಿ ಸ್ಟ್ರೀಮ್ ಆಗುತ್ತಿದೆ.
ಆತ ಸುಮಾರು 17 ವರ್ಷದ ಹುಡುಗ. ಹಳ್ಳಿಯಿಂದ ಮುಂಬಯಿಗೆ ಬಂದು ಹೋಟೆಲ್‌ವೊಂದರಲ್ಲಿ ಟೇಬಲ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿರುತ್ತಾನೆ. ಅವನಿಗೆ ಒಂದು ಆಸೆ. ತನ್ನ ಸ್ವಂತ ಊರಿನಲ್ಲಿ ಹೊಸದಾಗಿ ಓಪನ್ ಆಗುವ ಬಸ್ ನಿಲ್ದಾಣದ ಕಾಂಪ್ಲೆಕ್ಸ್’ನಲ್ಲಿ ಮಳಿಗೆಯೊಂದನ್ನು ಬಾಡಿಗೆಗೆ ಪಡೆದು ಅದರಲ್ಲಿ ಜ್ಯೂಸ್ ಅಂಗಡಿ ತೆರೆಯಬೇಕು ಎನ್ನುವುದು. ಅದಕ್ಕಾಗಿ ಅವನು ಕೆಲಸ ಮಾಡುತ್ತಾ ಒಂದಿಷ್ಟು ಹಣ ಶೇಖರಣೆ ಮಾಡಿರುತ್ತಾನೆ. ಹೀಗಿರುವಾಗ ಮಳಿಗೆಗೆ ಮುಂಗಡ ಹಣ ಕೊಡಬೇಕಾದ ಪರಿಸ್ಥಿತಿ ಬರುತ್ತದೆ ಆದರೆ ಅವನ ಬಳಿ ಅಷ್ಟು ಹಣ ಇರುವುದಿಲ್ಲ. ಏನು ಮಾಡಬೇಕೆಂದು ತೋಚದೆ ಸ್ನೇಹಿತನೊಬ್ಬನಲ್ಲಿ ಸಹಾಯ ಕೇಳುತ್ತಾನೆ.
ಅದಕ್ಕೆ ಸ್ಪಂದಿಸುವ ಸ್ನೇಹಿತ ಕೊಡುವ ಸಲಹೆಯಿಂದಾಗಿ ಮುಂದೆ ಇವನ ಜೀವನ ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಚಿತ್ರದ ಕತೆ. ಚಿತ್ರದಲ್ಲಿ ತುಂಬಾ ಇಷ್ಟವಾಗಿದ್ದು ಕತೆ, ಚಿತ್ರಕಥೆ. ಚಿತ್ರದ ಆರಂಭದಲ್ಲಿ ಇದು ಒಂದು ಕ್ರೈಂ ಥ್ರಿಲ್ಲರ್ ಎಂದೆನಿಸಿದರೂ ನಂತರ ಕತೆ ಬೇರೆಯದ್ದೇ ಶೇಡ್ ಪಡೆದುಕೊಳ್ಳುತ್ತದೆ. ಚಿತ್ರದ ಪ್ರತಿ ದೃಶ್ಯವನ್ನು ನೈಜವಾಗಿ ಚಿತ್ರಿಸಲಾಗಿದೆ. ಕಲಾವಿದರ ಅಭಿನಯವೂ ಸೊಗಸು. ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಆಶಯಕ್ಕೆ ಪೂರಕವಾಗಿದೆ. ಯಾವುದೇ ಫೈಟ್, ಕಾಮಿಡಿ, ಸಾಂಗ್ಸ್ ಇಲ್ಲದೆ ಒಂದೊಳ್ಳೆಯ ಸಿನಿಮಾ ಮಾಡಬಹುದು ಎನ್ನುವುದಕ್ಕೊಂದು ಉದಾಹರಣೆ ‘ಚುಂಬಕ್’.
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿರ್ಮಾಣದ ‘ಚುಂಬಕ್’ ಮರಾಠಿ ಸಿನಿಮಾ SonyLIVನಲ್ಲಿ ಸ್ಟ್ರೀಮ್ ಆಗುತ್ತಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾದಾಗ (2018) ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಚಿತ್ರವಿದು. ಸ್ವಾನಂದ್ ಕಿರ್ಕಿರೆ, ಸಾಹಿಲ್ ಜಾಧವ್, ಸಂಗ್ರಾಮ್ ದೇಸಾಯಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂದೀಪ್ ಮೋದಿ ನಿರ್ದೇಶನದ ಸಿನಿಮಾದಲ್ಲಿ ಉತ್ತಮ ನಟನೆಗಾಗಿ ಸ್ವಾನಂದ್ ಕಿರ್ಕಿರೆ ಅತ್ಯುತ್ತಮ ಪೋಷಕ ನಟ ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿದ್ದರು. ಮರಾಠಿ ಮತ್ತು ಹಿಂದಿ ಸಿನಿಮಾ ಚಿತ್ರಸಾಹಿತಿ ಸ್ವಾನಂದ್ ಕಿರ್ಕಿರೆ ಅವರು ಉತ್ತಮ ಗೀತೆ ರಚನೆಗಾಗಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.