ಡಯಾನಾ ಪಾತ್ರಧಾರಿ ಎಲಿಜಬೆತ್ ಡೆಬಿಕಿ ಅವರ ನಟನೆಯೇ ಈ ಸರಣಿಯ ಜೀವಾಳ. ಸೌಂದರ್ಯ, ತೀಕ್ಷ್ಣ ಕಣ್ಣೋಟ, ಮುಗುಳುನಗೆಯಲ್ಲೇ ಮನಸ್ಸನ್ನು ಆವರಿಸಿಬಿಡುತ್ತಾರೆ. ಆಕೆಯ ಜೀವನದ ರೀತಿ, ಆಕೆಯ ಸುತ್ತಲಿನ ಪ್ರಪಂಚ, ಆಕೆ ತನಗೆ ಸಿಗುತ್ತಿದ್ದ ಪ್ರಚಾರದಿಂದ ಹೊರಬರಲು ಹವಣಿಸುತ್ತಿದ್ದ ಪರಿ ಎಲ್ಲವೂ ವೀಕ್ಷಕರಿಗೆ ಆಕೆಯ ಜೀವನದ ಹತ್ತಿರದ ಚಿತ್ರಣ ಕೊಡುತ್ತದೆ. ‘ಕ್ರೌನ್‌ 6’ ಸೀಸನ್‌ 1 Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ನೆಟ್‌ಫ್ಲಿಕ್ಸ್‌ ನೋಡುಗರಿಗೆ ‘ಕ್ರೌನ್’ ಸರಣಿ ಚಿರಪರಿಚಿತ. ರಾಣಿ ಡಯಾನಾ ಕುರಿತಾದ ಈ ಸರಣಿಯ ಪ್ರತಿ ಸೀಸನ್ನುಗಳೂ ಸಂಚಲನ ಮೂಡಿಸಿ ನೋಡಿಸಿಕೊಂಡು ಹೋಗುವಂತವು. ಇದೀಗ ಕೊನೆಯ ಸೀಸನ್ 6ರ ಮೊದಲನೇ ಭಾಗ ಬಿಡುಗಡೆಯಾಗಿದೆ. ಕಳೆದ ಎರಡು ಸಂಚಿಕೆಗಳಲ್ಲಿ ಸರಣಿ ಡಯಾನ ಹಾಗೂ ಚಾರ್ಲ್ಸ್ ಅವರ ರಾಜವೈಭೋಗದ ಮದುವೆಯ ಮೇಲಷ್ಟೇ ಗಮನ ಕೊಟ್ಟಿತ್ತು. ಅದು ಸಹಜವೂ ಕೂಡ. ಎಷ್ಟೇ ಆದರೂ ಪ್ರಪಂಚವೇ ಇಂದಿಗೂ ನಿಬ್ಬೆರಗಾಗಿ ನಿಂತು ಜ್ಞಾಪಿಸಿಕೊಳ್ಳುವಂತಹ ಕಲ್ಯಾಣ ಅವರಿಬ್ಬರದ್ದು.

ಈ ಕೊನೆಯ ಸರಣಿಯನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದು ಈಗ ಸೀಸನ್ 6 ಮೊದಲನೇ ಭಾಗ ಬಿಡುಗಡೆಯಾಗಿದೆ. ಮೊದಲನೇ ಭಾಗದಲ್ಲಿ ರಾಜಕುಮಾರಿ ಡಯಾನಾರ ವಿಚ್ಛೇದನದ ನಂತರದ ಬದುಕು ಮತ್ತು ಆಕೆಯ ಸಾವಿನ ಬಗ್ಗೆ ತೋರಿಸಲಾಗಿದ್ದರೆ, ಮುಂಬರುವ ಎರಡನೇ ಭಾಗದಲ್ಲಿ ಆಕೆಯ ಮಗ ರಾಜಕುಮಾರ ವಿಲಿಯಮ್ ಹೇಗೆ ತನ್ನ ತಾಯಿಯ ಅಕಾಲಿಕ ಮರಣದಿಂದ ಬಾಧಿತನಾದ, ರಾಜಕುಮಾರ ಚಾರ್ಲ್ಸ್ ಮತ್ತು ಕಮೀಲಿಯಾ ನಡುವಿನ ಸಂಬಂಧ, ರಾಣಿ ಎಲಿಜಿಬೆತ್ ಅವರ ನಡವಳಿಕೆ ಇತ್ಯಾದಿಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

ಮುಂಬರುವ ದೊಡ್ಡ ದುರಂತದ ಮುನ್ನುಡಿಯಂತೆ ಸೀಸನ್ 6 ಪ್ಯಾರಿಸ್ ನಗರದ ಒಂದು ಮೌನ ರಾತ್ರಿಯೊಂದರ ಹಿನ್ನೆಲೆಯೊಂದಿಗೆ ಶುರುವಾಗುತ್ತದೆ. ಯಾವ ದುರಂತದ ಕರಿಛಾಯೆಯನ್ನು ಪ್ರಪಂಚ ಒಂದು ಕೆಟ್ಟ ಕನಸಿನಂತೆ ಮರೆಯ ಬಯಸಿತೋ ಆ ದುರಂತ ನಡೆದುಬಿಡುತ್ತದೆ. ಕಾರು ಅಪಘಾತದಲ್ಲಿ ರಾಜಕುಮಾರಿ ಡಯಾನ ಮತ್ತು ಆಕೆಯ ಡ್ರೈವರ್ ದುರ್ಮರಣ ಹೊಂದುತ್ತಾರೆ. ನಾಲ್ಕು ಸಂಚಿಕೆಗಳ ಈ ಭಾಗ ಒಂದರಲ್ಲಿ ಈ ಘಟನೆಯ ಮುಂಚಿನ ಎಂಟು ವಾರಗಳಲ್ಲಿ ನಡೆದ ಘಟನಾವಳಿಗಳ ಅನಾವರಣವಾಗುತ್ತದೆ. ಡಯಾನಾ ಮತ್ತು ಚಾರ್ಲ್ಸ್ ಅವರ ವಿಚ್ಛೇದನದ ಒಂದು ವರ್ಷದ ಬಳಿಕ ಈ ಘಟನೆ ಘಟಿಸುತ್ತದೆ.

ಚಾರ್ಲ್ಸ್, ಕಮೀಲಾಳ ಐವತ್ತನೇ ಹುಟ್ಟುಹಬ್ಬದ ತಯಾರಿಯಲ್ಲಿ ಮಗ್ನನಾಗಿದ್ದರೆ ಡಯಾನ, ಮೊಹಮ್ಮದ್ ದೋಡಿಯೊಡನೆ ಸೆಂಟ್ ಟ್ರೊಪೇಜ್ ಅಲ್ಲಿ ಆತನ ಕುಟುಂಬದೊಡನೆ ಪ್ರವಾಸಕ್ಕೆ ಹೊರಡಲು ತನ್ನ ಮಕ್ಕಳೊಂದಿಗೆ ಸಿದ್ಧವಾಗುತ್ತಾಳೆ. ಹಿರಿಯ ದೋಡಿಗೆ ರಾಜಕುಟುಂಬದ ಗಮನ ಸೆಳೆಯಲು ಮತ್ತು ಬ್ರಿಟನ್ ನಾಗರಿಕತೆ ಪಡೆಯಲು ಇದಕ್ಕಿಂತ ಸೂಕ್ತ ಮಾರ್ಗವಾದರೂ ಮತ್ತೆಲ್ಲಿ ಸಿಗುತ್ತದೆ. ಇತ್ತ ಚಾರ್ಲ್ಸ್ ತನ್ನ ಮತ್ತು ಕಮೀಲಾಳ ಸಂಬಂಧಕ್ಕೆ ರಾಜಮಾನ್ಯತೆ ಸಿಗಬೇಕೆನ್ನುವ ಪ್ರಯತ್ನದಲ್ಲಿ ಇರುತ್ತಾನೆ. ತನ್ನ ತಾಯಿ ಈ ಸಮಾರಂಭಕ್ಕೆ ಬರಬೇಕೆಂದು ಆಕೆಯಲ್ಲಿ ವಿನಂತಿಸುತ್ತಾನೆ. ಆದರೂ ಡಯಾನಾಗೆ ಇರುವ ಮಾನ್ಯತೆ, ಪ್ರಚಾರ ಆಕೆಯ ವರ್ಚಸ್ಸಿನ ಮುಂದೆ ಚಾರ್ಲ್ಸ್ ಕಮೀಲಾ ಮಂಕಾಗುತ್ತಾರೆ.

ಟೋನಿ ಬ್ಲೇರ್ ಅವರು ಹೇಳುವ ಹಾಗೆ ಡಯಾನ ಮಾತನಾಡಿದರೆ ಪ್ರಪಂಚ ಆಲಿಸುತ್ತದೆ. ಗಣಿಗಾರಿಕೆ ನಿಷೇಧದ ಬಗ್ಗೆ ಡಯಾನರ ನಿಲುವು ಇಡೀ ಪ್ರಪಂಚವನ್ನೇ ಅವರ ಪರ ನಿಲ್ಲಿಸಿದ್ದನ್ನು ಯಾರೂ ಮರೆಯುವ ಹಾಗಿಲ್ಲ. ಡಯಾನಳ ಪ್ರವಾಸದ ಸುದ್ದಿಯ ಮುಂದೆ ಕಮೀಲಾಳ ಹುಟ್ಟುಹಬ್ಬ ಮಾಂಕಾಗುತ್ತದೆ. ಡಯಾನ ಮತ್ತು ದೋಡಿಯ ಆಪ್ತ ಚಿತ್ರಗಳು ಎಲ್ಲೆಡೆ ರಾರಾಜಿಸುತ್ತವೆ. ರಾಜಮನೆತನ ಈ ಘಟನೆಯ ಲಾಭ ಪಡೆದುಕೊಂಡು ಚಾರ್ಲ್ಸ್ ಇಮೇಜನ್ನು ಸಾರ್ವಜನಿಕವಾಗಿ ಬಲಪಡಿಸಲು ಇದೇ ಸೂಕ್ತಸಮಯ ಎಂದು ಅರ್ಥಮಾಡಿಕೊಳ್ಳುತ್ತದೆ. ಎಲ್ಲ ನಾಲ್ಕು ಸಂಚಿಕೆಗಳಲ್ಲೂ ಡಯಾನ ತೆರೆಯನ್ನು ಆವರಿಸಿಕೊಳ್ಳುತ್ತಾಳೆ. ಆಕೆಯ ಸಾವಿನ ನಂತರ ರಾಣಿ ಎಲಿಜಬೆತ್ ಮತ್ತು ಚಾರ್ಲ್ಸ್ ಜೊತೆ ಡಯಾನ ಆತ್ಮ ಬಂದು ಮಾತನಾಡುವಂತಹ ಒಂದು ಸೃಜನಾತ್ಮಕ ಸ್ವಾತಂತ್ರ್ಯವನ್ನು ನಿರ್ದೇಶಕ ಪೀಟರ್ ಮಾರ್ಗನ್ಸ್ ತೆಗೆದುಕೊಂಡಿರುವುದು ಕೆಲವು ಅಭಿಮಾನಿಗಳಲ್ಲಿ ಇರುಸುಮುರುಸು ಉಂಟುಮಾಡುವುದು ನಿಜ.

ಡಯಾನ ಮುಂದೆ ಮಿಕ್ಕೆಲ್ಲ ಪಾತ್ರಗಳೂ ಹಿನ್ನೆಲೆಗೆ ಸರಿದುಬಿಡುವಂತೆ ಚಿತ್ರಿಸಲಾಗಿದೆ. ರಾಣಿ ಎಲಿಜಬೆತ್‌ಗಂತೂ ಬರೀ ಪ್ರತಿಕ್ರಿಯೆ ನೀಡುವ ಕೆಲವು ಸಂಭಾಷಣೆಗಳನ್ನು ಹೊರತುಪಡಿಸಿ ಮತ್ತಾವ ಪ್ರಾಮುಖ್ಯವನ್ನೂ ನೀಡಲಾಗಿಲ್ಲ. ಚಾರ್ಲ್ಸ್ ಪಾತ್ರ ಕೂಡ ಒಮ್ಮೆ ಕಮೀಲಾಳ ಹುಟ್ಟುಹಬ್ಬದ ಸಮಾರಂಭಕ್ಕೆ ತಾಯಿ ಬರುವಂತೆ ಗೋಗರೆಯುವ ಪಾತ್ರ ಒಂದಾದರೆ, ಡಯಾನಾಗೆ ಸಿಗುತ್ತಿರುವ ಪತ್ರಿಕಾ ಪ್ರಚಾರದ ಬಗ್ಗೆ ಅಸಮಾಧಾನ ತೋರುತ್ತಲೇ ಮತ್ತೊಮ್ಮೆ ಅದೇ ತಾಯಿಯ ಬಳಿ ಡಯಾನ ಬ್ರಿಟನ್‌ನ ಭವಿಷ್ಯದ ರಾಜನ ತಾಯಿ. ಆದ್ದರಿಂದ ಆಕೆಗೆ ಸಕಲ ಸರ್ಕಾರಿ ಹಾಗೂ ರಾಜಮನೆತನದ ಗೌರವದಿಂದ ಅಂತ್ಯಸಂಸ್ಕಾರ ಮಾಡಬೇಕು ಎಂದು ಗೋಗರೆಯುತ್ತಾನೆ. ನೋಡುಗರಿಗೆ ಚಾರ್ಲ್ಸ್ ಪಾತ್ರದ ಭಾವ ಗೊಂದಲದಂತೆ ಅನ್ನಿಸುವುದು ಇಲ್ಲೇ.

ಡಯಾನಾ ಪಾತ್ರಧಾರಿ ಎಲಿಜಬೆತ್ ಡೆಬಿಕಿ ಅವರ ನಟನೆಯೇ ಈ ಸರಣಿಯ ಜೀವಾಳ. ಸೌಂದರ್ಯ, ತೀಕ್ಷ್ಣ ಕಣ್ಣೋಟ, ಮುಗುಳುನಗೆಯಲ್ಲೇ ಮನಸ್ಸನ್ನು ಆವರಿಸಿಬಿಡುತ್ತಾರೆ. ಆಕೆಯ ಜೀವನದ ರೀತಿ, ಆಕೆಯ ಸುತ್ತಲಿನ ಪ್ರಪಂಚ, ಆಕೆ ತನಗೆ ಸಿಗುತ್ತಿದ್ದ ಪ್ರಚಾರದಿಂದ ಹೊರಬರಲು ಹವಣಿಸುತ್ತಿದ್ದ ಪರಿ ಎಲ್ಲವೂ ವೀಕ್ಷಕರಿಗೆ ಆಕೆಯ ಜೀವನದ ಹತ್ತಿರದ ಚಿತ್ರಣ ಕೊಡುತ್ತದೆ. ಡಯಾನಳ ವಿಷಾದಕರ ಅಂತ್ಯಸಂಸ್ಕಾರದ ದೃಶ್ಯದೊಂದಿಗೆ ಸೀಸನ್ 6 ಭಾಗ ಒಂದು ಮುಗಿಯುತ್ತದೆ. ಡಯಾನ ಸಾವಿನ ಸಮಯದ ನಿಜಜೀವನದ ಫೂಟೇಜುಗಳನ್ನು ಬಳಸಲಾಗಿದೆ. ಹೇಗೆ ಸಾರ್ವಜನಿಕರು ಸಾಗರೋಪಾದಿಯಲ್ಲಿ ಆಕೆಯ ಅಂತಿಮದರ್ಶನಕ್ಕೆ ಬಂದಿದ್ದರು ಎನ್ನುವುದರ ಮನಮುಟ್ಟುವ ಚಿತ್ರಣವಿದೆ. ವಿಚ್ಛೇದನದ ಬಳಿಕ ಆಕೆ ರಾಜಕುಟುಂಬದ ಭಾಗವಾಗದಿದ್ದರೂ ಜನಮಾನಸದಲ್ಲಿ ಆಕೆ ಎಂದಿಗೂ ರಾಜಕುಮಾರಿಯೇ ಆಗಿದ್ದರು ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಭಾಗ ಒಂದು ರಾಜಕುಮಾರಿ ಡಯಾನಳ ಸಾವಿನ ಅಧ್ಯಾಯದೊಂದಿಗೆ ಮುಕ್ತಾಯವಾಗುತ್ತಾ ಒಂದಷ್ಟು ಪ್ರಶ್ನೆಗಳನ್ನು, ಕುತೂಹಲವನ್ನು ಉಳಿಸಿ ಮುಗಿಯುತ್ತದೆ. ಡಯಾನ ಇಲ್ಲದ ಸೀಸನ್ 6 ಭಾಗ ಎರಡರಲ್ಲಿ ಆ ಪ್ರಶ್ನೆಗಳಿಗೆ ಮತ್ತು ಕುತೂಹಲಗಳಿಗೆ ಉತ್ತರ ಸಿಗುತ್ತದಾ ಕಾದು ನೋಡಬೇಕು.

LEAVE A REPLY

Connect with

Please enter your comment!
Please enter your name here