ಕನ್ನಡ ಸಿನಿಮಾ | ಬಡವ ರಾಸ್ಕಲ್

“ರಂಗಾಯಣ ರಘು ಮತ್ತು ತಾರಾ ನಮ್ಮ ಸಿನಿಮಾದ ಹೀರೋ – ಹಿರೋಯಿನ್” ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು ‘ಬಡವ ರಾಸ್ಕಲ್’ ಚಿತ್ರದ ಕಥಾನಾಯಕ ಧನಂಜಯ್. ಇನ್ನೊಂದು ಸಂದರ್ಶನವೊಂದರಲ್ಲಿ ನಟಿ ತಾರಾ, “ಚಿತ್ರದಲ್ಲಿ ನಾನು ತಂದೆ ಪಾತ್ರ ಮಾಡಿದ್ದರೆ, ರಂಗಾಯಣ ರಘು ಅವರದ್ದು ತಾಯಿ ಪಾತ್ರ!” ಎಂದಿದ್ದರು. ಸಿನಿಮಾ ನೋಡಿದ ನಂತರ ಇವರ ಮಾತುಗಳಲ್ಲಿ ಹುರುಳಿದೆ ಎನಿಸುತ್ತದೆ. ಚಿತ್ರವಿಡೀ ಧನಂಜಯ್ ಅವರೇ ಇದ್ದರೂ ಅವರ ತಂದೆ – ತಾಯಿ ಪಾತ್ರಗಳಲ್ಲಿ ನಟಿಸಿರುವ ರಂಗಾಯಣ ರಘು ಮತ್ತು ತಾರಾ ಅವರಿಗೂ ತೂಕದ ಸ್ಕ್ರೀನ್‌ಸ್ಪೇಸ್‌ ಸಿಕ್ಕಿದೆ. ಇತ್ತೀಚಿನ ದಿನಗಳ ಕಮರ್ಷಿಯಲ್ ಸಿನಿಮಾಗಳ ಪೈಕಿ ತಂದೆ – ತಾಯಿ ಪಾತ್ರಗಳನ್ನು ಚೆನ್ನಾಗಿ ಕಟ್ಟಿರುವ ಸಿನಿಮಾಗಳಲ್ಲಿ ‘ಬಡವ ರಾಸ್ಕಲ್’ ಗಮನಸೆಳೆಯುವ ಪ್ರಯೋಗ.

ಇನ್ನು ನಟಿ ತಾರಾ ಅವರು ಹೇಳಿದಂತೆ ಚಿತ್ರದಲ್ಲಿ ರಂಗಾಯಣ ರಘು ಪಾತ್ರಕ್ಕೆ ತಾಯಿಗುಣವೂ ಇದೆ. ಮಗನನ್ನು ತಿದ್ದಲು ಹೆಣಗಾಡುವ ಕೆಲವು ಸನ್ನಿವೇಶಗಳಲ್ಲಿ ತಾರಾ ಪಾತ್ರ ಅಪ್ಪನಂತೆ ವರ್ತಿಸುತ್ತದೆ. ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಚಿತ್ರದಲ್ಲಿ ನಟರಾದ ಅಚ್ಯುತ್ ಕುಮಾರ್ ಮತ್ತು ಯಶ್ ಅಭಿನಯದಲ್ಲಿ ತಂದೆ – ಮಗನ ಕೆಲವು ಸನ್ನಿವೇಶಗಳು ಚಿತ್ರ ಮುಗಿದ ನಂತರವೂ ಕಾಡುತ್ತವೆ. ‘ಬಡವ ರಾಸ್ಕಲ್’ ಚಿತ್ರದಲ್ಲೂ ಅಂತಹ ಕೆಲವು ಸೀನ್‌ಗಳಿವೆ. ಅಪ್ಪ – ಅಮ್ಮನ ಪಾತ್ರಗಳ ಮೂಲಕ ನಿರ್ದೇಶಕ ಶಂಕರ್ ಗುರು ಅವರು ಮಧ್ಯಮ ವರ್ಗದ ಕುಟುಂಬಗಳ ಕಷ್ಟ-ಸುಖ, ನೋವು-ನಲಿವುಗಳನ್ನು ಕಟ್ಟಿಕೊಡುತ್ತಾರೆ. ಚಿತ್ರದ ನಾಯಕನಟ ಧನಂಜಯ ಚಿತ್ರದ ನಿರ್ಮಾಪಕರೂ ಆಗಿರುವುದರ ಜೊತೆಗೆ ಸಮಾನಮನಸ್ಕ ಗೆಳೆಯರ ಸಿನಿಮಾ ಆದ್ದರಿಂದ ಈ ಸೂಕ್ಷ್ಮಗಳನ್ನು ತೆರೆಗೆ ಅಳವಡಿಸಲು ಸಾಧ್ಯವಾಗಿರಬಹುದು.

‘ಜಗತ್ತಿನಲ್ಲಿರುವುದೇ ಕೆಲವು ಕತೆಗಳು, ಹೊಸತನದ ನಿರೂಪಣೆಯೊಂದಿಗೆ ಪ್ರೇಕ್ಷಕರನ್ನು ಮುಟ್ಟಬೇಕು’ ಎನ್ನುವುದು ಸಿನಿಮಾಗೆ ಸಂಬಂಧಿಸಿದ ಒಂದು ಮಾತು. ನಿರೂಪಣೆ ತಂತ್ರಗಾರಿಕೆ ಜೊತೆ ಎಮೋಷನ್ಸ್ ಬಹುಮುಖ್ಯ. ಪ್ರೇಕ್ಷಕರಿಗೆ ಕತೆ, ಪಾತ್ರಗಳು ತಟ್ಟಬೇಕು. ನಗುವಿಗೋ, ಅಳುವಿಗೋ ಪ್ರೇಕ್ಷಕರ ಕಣ್ಗಳು ಒದ್ದೆಯಾಗದಿದ್ದರೆ ಸಿನಿಮಾ ಗೆಲ್ಲೋಲ್ಲ. ಈ ವಿಚಾರವಾಗಿ ‘ಬಡವ ರಾಸ್ಕಲ್’ ಚಿತ್ರಕ್ಕೆ ಹೆಚ್ಚು ಮಾರ್ಕ್ಸ್ ಕೊಡಬಹುದು. ಆರಂಭದಿಂದ ಕೊನೆಯವರೆಗೂ ಒಂದೇ ರೀತಿಯ ಎನರ್ಜಿಯಿಂದ ನಿರೂಪಣೆ ಇಂಟೆನ್ಸ್ ಆಗಿದೆ. ಆಕ್ಷನ್ ಸೀನ್‌ಗಳ ದೃಶ್ಯಸಂಯೋಜನೆಯಲ್ಲಿನ ವೇಗ ವಿಷಾದ, ವಿರಹ, ಸೆಂಟಿಮೆಂಟ್, ಕಾಮಿಡಿಯಲ್ಲೂ ವರ್ಕ್ ಆಗಿದೆ. ಕೊನೆಯ ಕ್ಷಣಗಳಲ್ಲಿ ಇದು ಹೀಗೇ ಆಗುತ್ತದೆ ಎಂದು ಒಂದಷ್ಟು ಪ್ರೇಕ್ಷಕರು ಊಹಿಸಬಹುದಾದ ಕ್ಲೈಮ್ಯಾಕ್ಸ್ ಚಿತ್ರದ್ದು. ಅದು ಬಹಳಷ್ಟು ಕಮರ್ಷಿಯಲ್ ಸಿನಿಮಾಗಳ ಮಿತಿ. “ಕೊನೇವರೆಗೂ ಕತೆಯನ್ನು ಎಂಗೇಜಿಂಗ್ ಆಗಿ, ಎಂಟರ್‌ಟೇನಿಂಗ್‌ ಆಗಿ ಹೇಳಿದ್ದಾರೆ. ಈ ಕ್ಲೈಮ್ಯಾಕ್ಸ್ ಇಲ್ದೇ ಇದ್ರೇ ಚೆನ್ನಾಗಿತ್ತು!” ಎಂದು ಪ್ರೇಕ್ಷಕರು ತಲೆ ಕೆರೆದುಕೊಂಡರೆ ಅದಕ್ಕೆ ನಿರ್ದೇಶಕರು ಮತ್ತು ನಿರ್ಮಾಪಕರೇ ನೇರ ಹೊಣೆ.

ಇನ್ನು ನಟ, ನಿರ್ಮಾಪಕ ಧನಂಜಯ ಚಿತ್ರದ ತುಂಬಾ ಆವರಿಸಿಕೊಂಡಿದ್ದಾರೆ. ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಮಾಡಬೇಕೆಂದೇ ಅವರು ಆಲೋಚಿಸಿ ಪ್ರಾಜೆಕ್ಟ್ ಶುರು ಮಾಡಿದ್ದಾರೆ. ಅವರೇ ನಿರ್ಮಾಪಕರೂ ಆಗಿರುವುದು ಮತ್ತು ಅವರ ಸ್ನೇಹಿತರೇ ಚಿತ್ರದ ನಿರ್ದೇಶಕರು ಹಾಗೂ ತಂತ್ರಜ್ಞರೂ ಆಗಿರುವುದು ಸಿನಿಮಾಗೆ ಲಾಭವಾಗಿದೆ. ಕಮರ್ಷಿಯಲ್ ಪ್ಯಾಕೇಜ್‌ನಲ್ಲಿ ಒಂದಷ್ಟು ಸೆನ್ಸಿಬಲ್ ಅಂಶಗಳನ್ನು ಅಳವಡಿಸಲು ಸಾಧ್ಯವಾಗಿದೆ. ಚಿತ್ರಕ್ಕೆ ಧನಂಜಯ ಎರಡು ಚೆಂದನೆಯ ಹಾಡುಗಳನ್ನು ಬರೆದಿದ್ದಾರೆ. ಈ ಹಾಡುಗಳ ಸಂಗೀತ ಮತ್ತು ಪಿಕ್ಚರೈಸೇಷನ್ ಕೂಡ ಚೆನ್ನಾಗಿದೆ. ಅವರೇ ಬರೆದ ಅಮ್ಮನ ಕುರಿತ ಕವಿತೆಯೊಂದು ಚಿತ್ರದಲ್ಲಿ ಬಳಕೆಯಾಗಿದೆ. ಈ ಕವಿತೆ ಪ್ರತ್ಯೇಕವಾಗಿ ಕೇಳಿಸದೆ, ಸನ್ನಿವೇಶದೊಂದಿಗೆ ಬೆರೆತಿದೆ. ಶಂಕರ (ಧನಂಜಯ) ಹೇಳುವ ಈ ಅವ್ವನ ಕವಿತೆಗೆ ಪ್ರೇಕ್ಷಕರ ಚಪ್ಪಾಳೆಯೂ ಸಿಗುತ್ತದೆ.

ಶಂಕರ ತನ್ನ ಪ್ರಿಯತಮೆಗೆ ಪ್ರೀತಿ ನಿವೇದಿಸಿಕೊಳ್ಳುವ ವಿಶೇಷ ಸನ್ನಿವೇಶವೊಂದು ಚಿತ್ರದಲ್ಲಿದೆ. ಈ ಸೃಜನಶೀಲತೆಗೆ ನಿರ್ದೇಶಕ ಶಂಕರ್ ಗುರುಗೆ ಸ್ಪೆಷಲ್ ಅಭಿನಂದನೆ ಹೇಳಬೇಕು. ಸಂಗೀತ ಸಂಯೋಜಕ ವಾಸುಕಿ ವೈಭವ್ ತಾವು ಕಮರ್ಷಿಯಲ್ ಮಾಸ್ ಸಿನಿಮಾಗೂ ಸಂಗೀತ ಸಂಯೋಜಿಸಬಲ್ಲೆ ಎನ್ನುವುದನ್ನು ಇಲ್ಲಿ ಸಾಬೀತು ಮಾಡಿದ್ದಾರೆ. ಹಿನ್ನೆಲೆ ಸಂಗೀತದ ಜೊತೆ ಹಾಡುಗಳ ಸಂಗೀತ ಸಂಯೋಜನೆಯಲ್ಲೂ ಅವರು ಸ್ಕೋರ್ ಮಾಡಿದ್ದಾರೆ. ಲವ್‌ಸ್ಟೋರಿಯಾದರೂ ಇಲ್ಲಿ ನಾಯಕಿ ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ವಿಶೇಷ. ಆದರೆ ಇದ್ದಷ್ಟೂ ಹೊತ್ತು ನಟಿ ಅಮೃತಾ ಅಯ್ಯಂಗಾರ್ ಇಷ್ಟವಾಗುತ್ತಾರೆ. ನಾಯಕ ಶಂಕರನ ಪ್ರೇಮಕತೆಗೆ ಕಿವಿಯಾಗುವ ಪಾತ್ರಗಳಲ್ಲಿ ಧನಂಜಯರ ನಿಜಜೀವನದ ಸ್ನೇಹಿತರೇ ನಟಿಸಿದ್ದಾರೆ. ಒಟ್ಟಿನಲ್ಲಿ ಸ್ನೇಹಿತರೆಲ್ಲರೂ ಸೇರಿ ಉತ್ಸಾಹದಿಂದ ನಿರ್ಮಿಸಿರುವ ಸಿನಿಮಾ ‘ಬಡವ ರಾಸ್ಕಲ್’. ಈ ಉತ್ಸಾಹ, ಹೊಂದಾಣಿಕೆ ತೆರೆಯ ಮೇಲೂ ಪ್ರತಿಫಲಿಸಿದೆ. ಅಲ್ಲಲ್ಲಿ ಕನ್ನಡ ಪ್ರೀತಿಯನ್ನೂ ನೋಡಬಹುದು. ಮುಂದೆ ಈ ತಂಡದಿಂದ ಲವ್‌, ಆಕ್ಷನ್‌, ಡ್ರಾಮಾ ಹೊರತಾದ ಕನ್ನಡತನದ ಸಿನಿಮಾಗಳೂ ತಯಾರಾಗಲಿ ಎನ್ನುವುದು ಆಶಯ.

ನಿರ್ಮಾಣ : ಡಾಲಿ ಪಿಕ್ಚರ್ಸ್‌ | ನಿರ್ದೇಶನ : ಶಂಕರ್‌ ಗುರು | ಸಂಗೀತ : ವಾಸುಕಿ ವೈಭವ್‌ | ಛಾಯಾಗ್ರಹಣ : ಪ್ರೀತಂ ಜಯರಾಂ | ತಾರಾಬಳಗ : ಧನಂಜಯ, ಅಮೃತಾ ಅಯ್ಯಂಗಾರ್‌, ರಂಗಾಯಣ ರಘು, ತಾರಾ, ಸ್ಪರ್ಷ ರೇಖಾ

LEAVE A REPLY

Connect with

Please enter your comment!
Please enter your name here