ಸರಳವಾದ ಕಥೆ ಮತ್ತು ಕುತೂಹಲ ಉಳಿಸಿಕೊಂಡು ಹೋಗುವ ಬಿಗಿಯಾದ ನಿರೂಪಣೆ ಇರುವ ರೋಚಕ ಸರಣಿ ‘ದೂತ’. ಹಲವು ಆಯಾಮಗಳನ್ನು ತೆರೆದಿಡುತ್ತಲೇ ಉತ್ತಮ ಸಂದೇಶ ಕೊಡುವ ಸರಣಿ. ನಟ ನಾಗಚೈತನ್ಯ ಅವರಿಗಿದು ಮೊದಲ ವೆಬ್‌ ಸರಣಿ. ಎರಡು ಶೇಡ್‌ ಇರುವ ಪಾತ್ರವನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ‘ದೂತ’ ತೆಲುಗು ಸರಣಿ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ತೆಲುಗು ಚಿತ್ರರಂಗದ ಜನಪ್ರಿಯ ನಟ ನಾಗಚೈತನ್ಯ ಅವರು ಮೊತ್ತಮೊದಲ ಬಾರಿಗೆ ವೆಬ್ ಸೀರೀಸ್ ಪ್ರಪಂಚಕ್ಕೆ ‘ದೂತ’ ತೆಲುಗು ಥ್ರಿಲ್ಲರ್ ಸರಣಿಯ ಮೂಲಕ ಪದಾರ್ಪಣೆ ಮಾಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ವಿಕ್ರಂ ಕುಮಾರ್ ಅವರು ಸರಣಿಯನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ನಾಗ ಚೈತನ್ಯ ಜೊತೆಗೆ ಪ್ರಿಯ ಭವಾನಿ ಶಂಕರ್, ಪಾರ್ವತಿ ತಿರುವೋತು, ಪ್ರಾಚಿ ದೇಸಾಯಿ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಪ್ರಖ್ಯಾತ ಪತ್ರಕರ್ತ ಸಾಗರ್, ‘ಸಮಾಚಾರ್’ ದಿನಪತ್ರಿಕೆಯ ಮುಖ್ಯ ಸಂಪಾದಕನಾಗಿ ನೇಮಕವಾಗುತ್ತಾನೆ. ತನ್ನ ಹೊಸ ಜವಾಬ್ದಾರಿಯ ಬಗ್ಗೆ ಸಾಗರ್ ಬಹಳ ಉತ್ಸುಕನಾಗಿರುತ್ತಾನೆ ಮತ್ತು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾನೆ. ಆದರೆ ಅವನ ಜೀವನದಲ್ಲಿ ಕನಸಿನಲ್ಲೂ ಎದುರುನೋಡದಂತಹ ಒಂದಷ್ಟು ದುರಂತಗಳು ಘಟಿಸಿಬಿಡುತ್ತವೆ. ಮತ್ತೂ ರೋಚಕ ಎಂದರೆ ಕೆಲವೊಂದು ದಿನಪತ್ರಿಕೆಗಳು ಈ ದುರಂತಗಳ ಬಗ್ಗೆ ಮೊದಲೇ ಮುನ್ಸೂಚನೆ ನೀಡುವಂತಹ ಭವಿಷ್ಯ ನುಡಿದಿರುತ್ತವೆ. ಅದು ಹೇಗೆ ಸಾಧ್ಯ? ಸಾಗರ್‌ಗೆ ತನ್ನ ವಲಯದಲ್ಲಿ ಯಾರಾದರೂ ಶತ್ರುಗಳು ಇದ್ದಾರಾ? ಈ ಘಟನೆಗಳಲ್ಲಿ ಅವರ ಕೈವಾಡ ಇರಬಹುದೇ? ದಿನಪತ್ರಿಕೆಗಳಲ್ಲಿ ಬಂದ ಭವಿಷ್ಯದ ಮುನ್ಸೂಚನೆಯ ರಹಸ್ಯವನ್ನು ಭೇದಿಸುವಲ್ಲಿ ಸಾಗರ್ ಯಶಸ್ವಿಯಾಗುತ್ತಾನಾ? ಎಂಬ ಪ್ರಶ್ನೆಗಳಿಗೆಲ್ಲ ಸರಣಿ ಉತ್ತರ ನೀಡುತ್ತಾ ಹೋಗುತ್ತದೆ.

ಯಾವುದೇ ಕಥೆಯಾದರೂ ಅದರ ನಿರೂಪಣೆಯ ವೈಶಿಷ್ಟ್ಯದಿಂದ ಮಾತ್ರ ನೋಡುಗರ ಮನಸ್ಸು ಗೆಲ್ಲಲು ಸಾಧ್ಯ. ಇಲ್ಲೇ ನಿರ್ದೇಶಕರ ಕೈಚಳಕ ಮುಖ್ಯವಾಗುವುದು. ಈ ಸರಣಿಯ ಕಥೆಯಲ್ಲೇನೂ ಅಂಥ ಹೊಸತನ ಇಲ್ಲ. ಹಾಗೆ ನೋಡಲು ಹೋದರೆ ನಿರ್ದೇಶಕರ ಹಳೆಯ ಚಿತ್ರ ’13B’ಯ ಕಥೆಯನ್ನೇ ಇದೂ ಹೋಲುತ್ತದೆ. ಆದರೆ ಈ ಸರಣಿಯಲ್ಲಿನ ನಿರೂಪಣೆ ಹೊಸತಾಗಿದೆ. ಆಸಕ್ತಿ ಹುಟ್ಟಿಸುವಂತಿದೆ. ಈಗಾಗಲೇ ಊಹಿಸಿಬಿಡಬಲ್ಲ ಕಥೆಯನ್ನು ವಿಶಿಷ್ಟವಾಗಿ ಕುತೂಹಲ ಉಳಿಯುವಂತೆ ಹೇಳುವುದು ಒಂದು ಕಲೆ. ಈ ವಿಭಾಗದಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಮೊದಲನೇ ಸಂಚಿಕೆಯಿಂದಲೇ ವೀಕ್ಷಕರನ್ನು ಕಥೆಯ ಒಳಗೆ ಕರೆದುಕೊಂಡು ಹೋಗಿಬಿಡುತ್ತಾರೆ. ನಿಗೂಢತೆ ಆಯಾಮವನ್ನು ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಅದಕ್ಕೆ ಪೂರಕವಾದ ದೃಶ್ಯಜೋಡಣೆ, ಹಿನ್ನೆಲೆ ಸಂಗೀತ, ನಿರ್ಮಾಣದ ಗುಣಮಟ್ಟ ಎಲ್ಲವೂ ಸರಣಿಯನ್ನು ಆಸಕ್ತಿಕರವಾಗಿ ಮಾಡುವಲ್ಲಿ ಸಹಕಾರ ನೀಡಿವೆ.

ರೋಚಕತೆಯ ಅಂಶ ಹೇರಳವಾಗಿದೆ. ಅಪರಾಧ ನಡೆಯುವ ಸನ್ನಿವೇಶಗಳು ಬೆಚ್ಚಿ ಬೀಳಿಸುವ ರೀತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿವೆ. ಸರಣಿಯಲ್ಲಿ ಬಹಳ ಪ್ರಬಲವಾದ ಸಂದೇಶವೊಂದನ್ನು ಬಹಳ ಯಶಸ್ವಿಯಾಗಿ ನೀಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಕಥೆಯಲ್ಲಿ ಮತ್ತು ಪಾತ್ರಗಳಲ್ಲಿ ಬಹಳಷ್ಟು ಆಯಾಮಗಳನ್ನು ನಿರೂಪಿಸಿದ್ದಾರೆ. ಕಥೆಯ ಉದ್ದೇಶಕ್ಕೆ, ಗುರಿಗೆ ಎಲ್ಲಿಯೂ ಧಕ್ಕೆ ಬರದ ಹಾಗೆ ಘಟನೆಗಳನ್ನು ಜೋಡಿಸಲಾಗಿದೆ. ಪ್ರತಿಯೊಂದು ಪಾತ್ರವೂ ಕಥೆಯ ವೇಗಕ್ಕೆ ಪೂರಕವಾಗಿ ನಡೆಸಿಕೊಂಡು ಹೋಗುತ್ತದೆ. ನಾಗಚೈತನ್ಯ ಅವರು ತಮ್ಮ ಮೊದಲ ವೆಬ್ ಸರಣಿಯಲ್ಲಿ ಭರ್ಜರಿಯಾಗೇ ಎಂಟ್ರಿ ಕೊಟ್ಟಿದ್ದಾರೆ ಎನ್ನಬಹುದು. ಅಭಿಮಾನಿಗಳು ಅವರಿಂದ ಏನು ನಿರೀಕ್ಷೆ ಮಾಡಿದ್ದರೋ ಅವರ ಅಭಿನಯ ಅದಕ್ಕೆ ಸರಿಯಾಗಿಯೇ ಇದೆ. ಎರಡು ಛಾಯೆಗಳು ಇರುವ ಪಾತ್ರದಲ್ಲಿ ನಾಗಚೈತನ್ಯ ಅವರ ಅಭಿನಯ ಸಶಕ್ತವಾಗಿ ಮೂಡಿಬಂದಿದೆ. ತನ್ನ ಕುಟುಂಬದ ಹಿತಾಸಕ್ತಿಯನ್ನು ಕಾಯುವ ಪಾತ್ರದಲ್ಲಿ ನಾಗಚೈತನ್ಯ ಪಾತ್ರಕ್ಕೆ ಪರಿಪೂರ್ಣ ನ್ಯಾಯ ಒದಗಿಸಿದ್ದಾರೆ. ಆದರೆ ಇವರನ್ನು ಮೀರಿಸುವ ಅಭಿನಯ ನೀಡಿರುವುದು ಪಾರ್ವತಿ. ಪ್ರತಿಯೊಂದು ಸನ್ನಿವೇಶಕ್ಕೂ ಜೀವ ತುಂಬುತ್ತಾ ಪಾತ್ರವನ್ನು ಪಾರ್ವತಿ ಜೀವಿಸಿದ್ದಾರೆ.

ಪ್ರಿಯ ಭವಾನಿ ಶಂಕರ್, ಪ್ರಾಚಿ ದೇಸಾಯಿ ಮತ್ತಿತರರು ಅವರವರ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಸರಣಿಯ ಕ್ಲೈಮಾಕ್ಸ್ ಬಹಳ ರೋಚಕವಾಗಿ ಮೂಡಿ ಬಂದಿದೆ. ಮಳೆಯ ಹಿನ್ನೆಲೆಯಲ್ಲಿ ಮಾಡಿರುವ ಚಿತ್ರಣ ರೋಚಕತೆಯನ್ನು ಹೆಚ್ಚಿಸಿದೆ. ಆದರೂ ಅಲ್ಲಲ್ಲಿ ಕೊರತೆಗಳು ಇಲ್ಲವೆಂದು ಹೇಳಲಾಗುವುದಿಲ್ಲ. ಫ್ಲಾಶ್‌ಬ್ಯಾಕ್‌ ಸನ್ನಿವೇಶಗಳು ಇನ್ನಷ್ಟು ಪರಿಣಾಮಕಾರಿಯಾಗಿ ಇರಬಹುದಿತ್ತು. ಸರಣಿ ಎಲ್ಲೋ ಸ್ವಲ್ಪ ಬಲ ಕಳೆದುಕೊಂಡಿದೆ ಎನಿಸಿದರೆ ಅದಕ್ಕೆ ಈ ಫ್ಲಾಶ್‌ಬ್ಯಾಕ್‌ ದೃಶ್ಯಗಳ ಸಾಧಾರಣ ನಿರೂಪಣೆಯೇ ಕಾರಣ. ಹಾಗೆಯೇ ಒಟ್ಟಾರೆ ಸರಣಿಯ ಅವಧಿ ಸ್ವಲ್ಪ ಕಡಿಮೆಯಾಗಿದ್ದರೆ ಮತ್ತಷ್ಟು ಪರಿಣಾಮಕಾರಿಯಾಗಿ ಇರುತ್ತಿತ್ತೇನೋ. ನಡುವಿನ ಕೆಲವು ಸಂಚಿಕೆಗಳಲ್ಲಿ ಇದು ಹೆಚ್ಚು ಭಾಸವಾಗುತ್ತದೆ. ಸರಣಿಯಲ್ಲಿ ಬಳಕೆಯಾಗಿರುವ ಭಾಷೆ ಕೂಡ ಕೆಲವು ವರ್ಗದ ಪ್ರೇಕ್ಷಕರಿಗೆ ಸ್ವಲ್ಪ ಇರುಸುಮುರುಸು ಉಂಟುಮಾಡುವಂತಿದೆ.

ಇಶಾನ್ ಛಾಬ್ರರ ಹಿನ್ನೆಲೆ ಸಂಗೀತ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಮಿಕೋಲಾಜ್ ಅವರ ಛಾಯಾಗ್ರಹಣವಂತೂ ಅಪ್ರತಿಮವಾಗಿದೆ. ನಿರ್ಮಾಣದ ಗುಣಮಟ್ಟವಂತೂ ಬಹಳ ಅದ್ಧೂರಿಯಾಗಿ ಮೂಡಿಬಂದಿದೆ. ಸಂಕಲನ ಇನ್ನಷ್ಟು ಚುರುಕಾಗಿ ಇರಬಹುದಿತ್ತು. ಒಟ್ಟಾರೆ ಹೇಳಬೇಕು ಎಂದರೆ ಸರಳವಾದ ಕಥೆ ಮತ್ತು ಕುತೂಹಲ ಉಳಿಸಿಕೊಂಡು ಹೋಗುವ ಬಿಗಿಯಾದ ನಿರೂಪಣೆ ಇರುವ ರೋಚಕ ಸರಣಿ ‘ದೂತ’. ಹಲವು ಆಯಾಮಗಳನ್ನು ತೆರೆದಿಡುತ್ತಲೇ ಉತ್ತಮ ಸಂದೇಶ ಕೊಡುವ ಸರಣಿ. ಮೊದಲನೇ ವೆಬ್ ಸರಣಿಯಲ್ಲಿ ನಾಗಚೈತನ್ಯ ಇಷ್ಟವಾಗುತ್ತಾರೆ. ‘ದೂತ’ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here