‘3 ಈಡಿಯಟ್ಸ್‌’ ಸಿನಿಮಾ ಖ್ಯಾತಿಯ ರಾಜ್‌ಕುಮಾರ್‌ ಹಿರಾನಿ ನಿರ್ದೇಶನದಲ್ಲಿ ಶಾರುಖ್‌ ಸಿನಿಮಾ ಸೆಟ್ಟೇರಿದೆ. ತಾಪ್ಸಿ ಪನ್ನು ಚಿತ್ರದ ನಾಯಕಿ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿರುವ ಶಾರುಖ್‌ರ ‘ಪಠಾಣ್‌’ ಸಿನಿಮಾ 2023ರ ಜನವರಿ 25ರಂದು ತೆರೆಗೆ ಬರಲಿದೆ.

2018ರ ‘Zero’ ನಂತರ ಶಾರುಖ್‌ರ ಮತ್ತೊಂದು ಸಿನಿಮಾ ತೆರೆಗೆ ಬಂದಿಲ್ಲ. ಸುದೀರ್ಘ ಅವಧಿಯ ಬ್ರೇಕ್‌ನ ನಂತರ ನಟ ಶಾರುಖ್‌ ಖಾನ್‌ ಈಗ ಸಂಪೂರ್ಣ ಬ್ಯುಸಿಯಾಗಿದ್ದಾರೆ. ‘ಪಠಾಣ್‌’ ಮತ್ತು ತಮಿಳು ನಿರ್ದೇಶಕ ಅಟ್ಲೀ ನಿರ್ದೇಶನದ ಚಿತ್ರಗಳ ನಂತರ ಅವರೀಗ ರಾಜಕುಮಾರ್‌ ಹಿರಾನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘3 ಈಡಿಯಟ್ಸ್‌’ ಸಿನಿಮಾ ಖ್ಯಾತಿಯ ರಾಜಕುಮಾರ್‌ ಹಿರಾನಿ ನಿರ್ದೇಶನದ ಈ ಸಿನಿಮಾ ಬಗ್ಗೆ ಎಲ್ಲಿಯೂ ಸುದ್ದಿಯಾಗಿಲ್ಲ. ಆದರೆ ಕಳೆದೊಂದು ವಾರದಿಂದ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗಿದೆ. ಬಾಲಿವುಡ್‌ ಮೂಲಗಳ ಪ್ರಕಾರ ಇದೊಂದು ವಲಸೆ ಹಿನ್ನೆಲೆಯ ಕತೆ. ಪಂಜಾಬ್‌ನ ಹಳ್ಳಿಯೊಂದರಲ್ಲಿ ಬಹುಪಾಲು ಸಿನಿಮಾ ಚಿತ್ರೀಕರಣಗೊಳ್ಳಲಿದ್ದು, ಬುಡಾಪೆಸ್ಟ್‌ ಮತ್ತು ಲಂಡನ್‌ನಲ್ಲೂ ಶೂಟಿಂಗ್‌ ನಡೆಯಲಿದೆ.

ಶಾರುಖ್‌ ಖಾನ್‌ ಅವರ ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ ಸಹನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರದ ನಾಯಕಿಯಾಗಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ಇನ್ನು ಅಟ್ಲೀ ನಿರ್ದೇಶನದಲ್ಲಿ ಶಾರುಖ್‌ ನಟಿಸುತ್ತಿರುವ ಚಿತ್ರದ ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ. ಚಿತ್ರದ ಶೀರ್ಷಿಕೆ ‘Lion’ ಎಂದಾಗುವ ಸಾಧ್ಯತೆಗಳಿವೆ. ನಯನತಾರಾ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಯೋಗಿ ಬಾಬು, ಸುನೀಲ್‌ ಗ್ರೋವರ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿದ್ದಾರ್ಥ್‌ ಆನಂದ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ಶಾರುಖ್‌ರ ‘ಪಠಾಣ್‌’ ಸಿನಿಮಾ 2023ರ ಜನವರಿ 25ರಂದು ತೆರೆಕಾಣಲಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್‌ ಅಬ್ರಹಾಂ ಚಿತ್ರದ ಪ್ರಮುಖ ಕಲಾವಿದರು.

LEAVE A REPLY

Connect with

Please enter your comment!
Please enter your name here