ನಿರ್ದೇಶಕ ಪ್ರೇಮ್ ಬಹು ವರ್ಷಗಳ ನಂತರ ‘ಏಕ್ ಲವ್ ಯಾ’ ಲವ್‌ಸ್ಟೋರಿಯೊಂದಿಗೆ ತೆರೆಗೆ ಮರಳುತ್ತಿದ್ಧಾರೆ. ಅವರ ತಾರಾ ಪತ್ನಿ ರಕ್ಷಿತಾ ಚಿತ್ರದ ನಿರ್ಮಾಪಕಿ. ರಕ್ಷಿತಾರ ಸಹೋದರ ರಾಣಾ ಈ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ರೀಷ್ಮಾ ನಾಣಯ್ಯ ಚಿತ್ರದ ಹಿರೋಯಿನ್.
‘ಕರಿಯ’, ‘ಎಕ್ಸ್‌ಕ್ಯೂಸ್ ಮೀ’, ‘ಜೋಗಿ’ಯಂತಹ ಯಶಸ್ವೀ ಚಿತ್ರಗಳ ನಿರ್ದೇಶಕ ಪ್ರೇಮ್ ವರ್ಷಗಳ ನಂತರ ಅಪ್ಪಟ ಲವ್‌ಸ್ಟೋರಿಯೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಅವರ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಏಕ್ ಲವ್ ಯಾ’ ನಾಳೆ 24ರಂದು ಬಿಡುಗಡೆಯಾಗುತ್ತಿದೆ. ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಚಿತ್ರದಲ್ಲಿ ಪ್ರೇಮ್ ಬಾಮೈದ ರಾಣಾ (ಅಭಿಷೇಕ್) ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಜೋಡಿಯಾಗಿ ರೀಶ್ಮಾ ನಾಣಯ್ಯ ನಟಿಸಿದ್ದು, ಅವರಿಗೂ ಇದು ಮೊದಲ ಸಿನಿಮಾ. ಈಗಾಗಲೇ ಹಾಡುಗಳ ಮೂಲಕ ಈ ಜೋಡಿ ಕ್ಯೂಟ್ ಪೇರ್ ಎನಿಸಿಕೊಂಡಿದೆ. ತೆರೆ ಮೇಲೆ ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದುನೋಡಬೇಕು. ನಟಿ ರಚಿತಾರಾಮ್ ಅವರು ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಏಕ್ ಲವ್ ಯಾ’ ಬಿಡುಗಡೆ ಪೂರ್ಣ ಸಮಾರಂಭದಲ್ಲಿ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಮಾತನಾಡಿದರು.
ಸಾಮಾನ್ಯವಾಗಿ ಪ್ರೇಮ್ ನಿರ್ದೇಶನದ ಚಿತ್ರಗಳೆಂದರೆ ಅಲ್ಲಿ ಸಂಗೀತಕ್ಕೆ ಪ್ರಥಮ ಪ್ರಾಶಸ್ತ್ಯ. ‘ಏಕ್ ಲವ್ ಯಾ’ ಚಿತ್ರದಲ್ಲೂ ಅರ್ಜುನ ಜನ್ಯ ಅವರ ಮೆಲೋಡಿ ಮ್ಯೂಸಿಕ್ ಸಿನಿಪ್ರೇಕ್ಷಕರಲ್ಲಿ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿದ್ದರೂ ಅದರಲ್ಲಿ ‘ಮೀಟ್ ಮಾಡಣ, ಇಲ್ಲ ಡೇಟ್ ಮಾಡಣ..’ ಸಾಂಗ್ ಹೆಚ್ಚು ಜನಪ್ರಿಯವಾಗಿದೆ. ಈ ಹಾಡನ್ನು ಬರೆದವರು ವಿಜಯ್ ಈಶ್ವರ್. ಆರಂಭದಲ್ಲಿ ಈ ಹಾಡು ಬೇಡ ಎಂದು ಹಲವರು ಪ್ರೇಮ್‌ಗೆ ಸಲಹೆ ನೀಡಿದ್ದರಂತೆ. ಆದರೆ ಪ್ರೇಮ್ ಮಾತ್ರ ಈ ಸಾಂಗ್ ಬೇಕೇಬೇಕು ಎಂದು ಅರ್ಜುನ್ ಜನ್ಯ ಅವರ ಬಳಿ ಹೊಸ ಟ್ಯೂನ್ ಮಾಡಿಸಿದ್ದರಂತೆ. ಐಶ್ವರ್ಯಾ ರಂಗರಾಜನ್ ಅವರ ಕಂಠದಲ್ಲಿ ಮೂಡಿಬಂದಿರುವ ಹಾಡು ಹಿಟ್ ಆಗಿದೆ.
ಸಹೋದರನಿಗಾಗಿ ಚಿತ್ರ ನಿರ್ಮಾಣ ಮಾಡಿರುವ ರಕ್ಷಿತಾ ಪ್ರೇಮ್ ಮಾತನಾಡಿ, “ರಾಣಾಗೆ 3 ವರ್ಷದ ಹಿಂದೆ ತಾನು ಹೀರೋ ಆಗಬೇಕು ಎಂಬ ಥಾಟ್ ಬಂತು. ಅಲ್ಲಿಂದ ಈ ಸಿನಿಮಾ ಜರ್ನಿ ಶುರುವಾಯ್ತು” ಎಂದರು. “ನಮ್ಮ ಸಿನಿಮಾ ಮ್ಯೂಸಿಕ್‌ನಲ್ಲಿ ಒಳ್ಳೇ ಟ್ರೀಟ್ ಕೊಡುತ್ತೆ. ಸೌಂಡ್ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತೇವೆ. ನನ್ನಜೊತೆ ಕೆಲಸ ಮಾಡುವವರಾರೂ ದುಡ್ಡಿಗೋಸ್ಕರ ಬಂದವರಲ್ಲ. ಗೆಲ್ಲಬೇಕೆಂದು ತುಂಬಾ ಶ್ರಮವಹಿಸಿ ವರ್ಕ್ ಮಾಡುತ್ತಾರೆ. ಹಾಗಾಗಿ ಎಲ್ಲರ ಫೋಟೋ ಹಾಕಿಸಿದ್ದೇನೆ. ಅಲ್ಲದೆ ನನ್ನ ಸಿನಿಮಾಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಛಾಯಾಗ್ರಾಹಕ ಮಹೇಂದ್ರ ಸಿಂಹ ಇಬ್ಬರು ಹೀರೋಗಳು. ನನ್ನ ಅರ್ಧ ಕೆಲಸವನ್ನು ಇವರೇ ಮಾಡಿದ್ದಾರೆ” ಎಂದರು ಪ್ರೇಮ್.
ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿರುವ ಹಿರಿಯ ನಟ ಚರಣರಾಜ್ ಮಾತನಾಡಿ, “ಚಿತ್ರದಲ್ಲಿ ನಾನು ಆಕ್ಟ್ ಮಾಡುತ್ತೇನೆ ಅಂದ್ಕೊಂಡೇ ಇರಲಿಲ್ಲ, ದಶಾವರ ಚಂದ್ರು ನನಗೆ ಒಮ್ಮೆ ಕಾಲ್ ಮಾಡಿ ಪ್ರೇಮ್ ಸರ್ ನಿಮ್ಮ ಬಳಿ ಮಾತಾಡಬೇಕಂತೆ ಎಂದರು. ನನಗೆ ಪ್ರೇಮ್ ಮೇಲೆ ಒಂಚೂರು ಕೋಪವಿತ್ತು. ಯಾಕೆ ನನಗೆ ಕರೀತಿಲ್ಲ, ಅಥವಾ ನನಗೊಪ್ಪುವ ಪಾತ್ರ ಇಲ್ಲವೇನೋ ಎಂದುಕೊಳ್ತಿದ್ದೆ. ನಂತರ ಪ್ರೇಮ್ ಬಳಿ ಕಥೆ ಕೇಳದೇ ಒಪ್ಪಿಕೊಂಡೆ. ಅವರು ದಿನದ 24 ಗಂಟೆ ಶೂಟಿಂಗ್ ಮಾಡಿದರೂ ನಗುನಗುತ್ತಲೇ ಇರುತ್ತಾರೆ. ಅವರ ರಕ್ತದಲ್ಲೇ ಸಿನಿಮಾ ಅನ್ನುವುದು ಜೊತೆಗಿದೆ. ನಮ್ಮ ಸಾಮರ್ಥ್ಯ ಎಷ್ಟಿದೆ ಎಂದು ತಿಳಿದುಕೊಂಡು ನಮ್ಮಿಂದ ಅವರು ಕೆಲಸ ತಗೋತಾರೆ. ಇನ್ನು ರಾಣಾ ಕೂಡ ಹೊಸ ಹುಡುಗ ಅನಿಸೋದೇ ಇಲ್ಲ, ಈತನ ಮೂಲಕ ಕನ್ನಡಕ್ಕೆ ಮತ್ತೊಬ್ಬ ಹೊಸ ಹೀರೋ ಬಂದಂತಾಗಿದೆ” ಎಂದು ರಾಣಾ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಹೀರೋ ರಾಣಾ, ಚಿತ್ರಕ್ಕೆ ಮಾಡಿಕೊಂಡ ಸಿದ್ದತೆ, ಮೊದಲು ಬಣ್ಣ ಹಚ್ಚಿದ ಅನುಭವಗಳನ್ನು ಹಂಚಿಕೊಂಡರು. ಚಿತ್ರದ ನಾಯಕಿ ರೀಷ್ಮಾ ನಾಣಯ್ಯ ಮಾತನಾಡುತ್ತಾ, “ನನಗೆ ಏಪ್ರಿಲ್ ಒಂದರಂದೇ ‘ಏಕ್ ಲವ್ ಯಾ’ ಸಿನಿಮಾದ ಆಫರ್ ಬಂದಿತ್ತು. ಮೊದಲು ಯಾರೋ ಫೂಲ್ ಮಾಡ್ತಿದಾರೆ ಅಂತ ನಂಬಲಿಲ್ಲ. ನಿಜ ಅಂತ ಗೊತ್ತಾದಾಗ ಖುಷಿಯಾಯ್ತು. ವರ್ಕ್ ಷಾಪ್ ಮಾಡಿ ನಂತರ ಆಕ್ಟ್ ಮಾಡಿದ್ದೇನೆ” ಎಂದರು.