ಇರುವೆ ಹೇಗೆ ಶ್ರಮಜೀವಿಯೋ ಅಂತೆಯೇ ಈ ಮಕ್ಕಳು ಶ್ರಮವಹಿಸಿ ದುಡ್ಡು ಕೂಡಿಹಾಕುವ ಪ್ರಯತ್ನ ಮಾಡುತ್ತಾ ತಮಗೆ ಬಂದಿರುವ ಸಂಕಷ್ಟದಿಂದ ಹೊರಬರಲು ಪಡುವ ಪ್ರಯತ್ನ ಬಹಳ ಮನಮುಟ್ಟುವಂತೆ ಚಿತ್ರಿತವಾಗಿದೆ. ಒಂದು ಸರಳ, ಉತ್ತಮ ಹಾಗೂ ಕುಟುಂಬದೊಟ್ಟಿಗೆ ನೋಡಬಹುದಾದ ಸುಂದರ ಚಿತ್ರ. ‘ಎರಂಬು’ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಎರಂಬು ಅಂದರೆ ಇರುವೆ. ಇದೇನು ಚಿತ್ರಕ್ಕೆ ಇರುವೆ ಎಂದು ಹೆಸರಿಟ್ಟಿದ್ದಾರಲ್ಲ ಎಂದು ಆಶ್ಚರ್ಯ ಆಗುತ್ತದೆ. ಅದು ಯಾಕೆ ಎಂದು ಸಿನಿಮಾ ನೋಡಿದರೆ ಅರ್ಥವಾಗುತ್ತೆ. ಏನಿದೆ ಈ ಚಿತ್ರದಲ್ಲಿ? ಹಾಗೆ ನೋಡಲು ಹೋದರೆ ಇದು ಬಹಳ ಸರಳವಾದ ಚಿತ್ರ. ಯಾವುದೇ ಅಬ್ಬರ, ಆರ್ಭಟ, ಕೋಲಾಹಲಗಳಿಲ್ಲದ ಸರಾಗವಾದ ಸಿನಿಮಾ. ಹಾಗೆಂದು ಇಲ್ಲಿ ಭಾವನೆಗಳಿಗೆ ಬರವಿಲ್ಲ. ಅಕ್ಕ-ತಮ್ಮನ ನಡುವಿನ ನವಿರಾದ ಬಾಂಧವ್ಯ ಚಿತ್ರದುದ್ದಕ್ಕೂ ಇದೆ. ಮನೆಯಲ್ಲಿ ಸಂಕಷ್ಟ ಬಂದಾಗ ಅಕ್ಕ – ತಮ್ಮ ಹೇಗೆ ನಿಭಾಯಿಸುತ್ತಾರೆ? ಆ ಸಂಕಷ್ಟ ಏನು? ಎನ್ನುವುದೇ ಚಿತ್ರದ ತಿರುಳು.
ಒಂದು ಪುಟ್ಟ ಕುಟುಂಬ. ಸಿರಿವಂತರೇನಲ್ಲ. ಗ್ರಾಮದಲ್ಲಿ ಇರುವ ಒಂದು ಬಡಕುಟುಂಬ. ಅಮ್ಮ ಇಲ್ಲದ ಮಕ್ಕಳು ತಂದೆ, ಮಲತಾಯಿ ಮತ್ತು ಪುಟ್ಟ ಮಲತಮ್ಮನ ಜೊತೆ ವಾಸವಾಗಿರುತ್ತಾರೆ. ಅಪ್ಪನಿಗೆ ಊರ ತುಂಬಾ ಸಾಲ. ಮಲತಾಯಿಯೂ ಮಕ್ಕಳ ಬಗ್ಗೆ ನಿಷ್ಕರುಣಿ. ಮನೆಯ ಮುಂದೆ ಆಗಾಗ ಬಂದು ಕೂಗಾಡಿ ಹೋಗುವ ಸಾಲ ಕೊಟ್ಟವನ ಕಾಟ ಬೇರೆ. ಹಣ ಹೊಂದಿಸಲು ಅಪ್ಪ ಅಣ್ಣಾದೊರೆ ಮತ್ತು ಮಲತಾಯಿ ಕಮಲ, ಅಕ್ಕ – ತಮ್ಮ ಇಬ್ಬರನ್ನೂ ಅಜ್ಜಿಯ ಬಳಿ ಬಿಟ್ಟು ಪಕ್ಕದೂರಿಗೆ ಕೆಲಸ ಹುಡುಕಿ ಕೆಳದಿನಗಳ ಮಟ್ಟಿಗೆ ಹೋಗುತ್ತಾರೆ.
ಪುಟ್ಟ ಹುಡುಗನಿಗೋ ಅಪ್ಪ, ಮಲತಾಯಿಗೆಂದು ಮಾಡಿಸಿಕೊಟ್ಟ ಚಿನ್ನದ ಉಂಗುರದ ಮೇಲೆ ಬಹಳ ಆಸೆ. ಆಸೆಗೆ ಹಾಕಿಕೊಂಡ ಉಂಗುರ ಅಚಾತುರ್ಯದಿಂದ ಕಳೆದುಹೋಗುತ್ತದೆ. ಮಲತಾಯಿಯ ಕೋಪವನ್ನು ನೆನೆಸಿಕೊಂಡು ಹೆದರಿ ಹೇಗಾದರೂ ಮಾಡಿ ಉಂಗುರವನ್ನು ಮತ್ತೆ ಸಂಪಾದಿಸಿ ಮರಳಿ ಇಟ್ಟುಬಿಡಬೇಕು ಎಂದು ಅಕ್ಕ – ತಮ್ಮ ಇಬ್ಬರೂ ಊರಲ್ಲಿ ಚಿಟ್ಟು ಎಂಬುವನ ಬಳಿ ಹಣ ಹೊಂದಿಸಲು ಸಹಾಯ ಕೇಳುತ್ತಾರೆ. ದ್ವಿತೀಯಾರ್ಧ ಪೂರ್ತಿ ಮಕ್ಕಳು ಹಣವನ್ನು ಸಂಪಾದಿಸಲು ಪಡುವ ಪಾಡುಗಳು ಏನೇನು ಎನ್ನುವುದರ ಸುತ್ತ ಸುತ್ತುತ್ತದೆ.
ಇರುವೆ ಹೇಗೆ ಶ್ರಮಜೀವಿಯೋ ಅಂತೆಯೇ ಈ ಮಕ್ಕಳು ಶ್ರಮವಹಿಸಿ ದುಡ್ಡು ಕೂಡಿಹಾಕುವ ಪ್ರಯತ್ನ ಮಾಡುತ್ತಾ ತಮಗೆ ಬಂದಿರುವ ಸಂಕಷ್ಟದಿಂದ ಹೊರಬರಲು ಪಡುವ ಪ್ರಯತ್ನ ಬಹಳ ಮನಮುಟ್ಟುವಂತೆ ಚಿತ್ರಿತವಾಗಿದೆ. ಸುರೇಶ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಹಳ್ಳಿಯ ಪುಟ್ಟ ಬಡಕುಟುಂಬ, ಕುಟುಂಬ ಕಲಹ, ಮಕ್ಕಳ ಪಡಿಪಾಟಲು, ಚಿಕ್ಕಚಿಕ್ಕ ಆಸೆ ನೆರವೇರಿಸಿಕೊಳ್ಳಲೂ ಅವರು ಪಡುವ ಕಷ್ಟ, ಮಕ್ಕಳಾದರೂ ದೊಡ್ಡವರ ಕಷ್ಟ ಅರ್ಥಮಾಡಿಕೊಂಡು ಹೊಂದಿಕೊಂಡು ಹೋಗುವ ಪರಿ ಇವೆಲ್ಲ ಬಹಳ ನವಿರಾಗಿ ಮತ್ತು ಮನೋಜ್ಞವಾಗಿ ನಿರೂಪಿಸಲಾಗಿದೆ. ಜೊತೆಗೆ ನಿತ್ಯದ ಊಟಕ್ಕೂ ಪಾಡುಪಡಬೇಕಾದ ಸಮಾಜದ ಒಂದು ವರ್ಗದ ಜನರ ವಾಸ್ತವಗಳನ್ನು, ಕಾರ್ಪಣ್ಯಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಆದರೂ ಪ್ರಾಮಾಣಿಕತೆಯ ಫಲ ಯಾವತ್ತಿಗೂ ಸಿಹಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಹೇಗೆ ಆಶ್ಚರ್ಯಕರ ರೀತಿಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಪ್ರತಿಫಲಿಸುತ್ತದೆ ಎನ್ನುವುದನ್ನು ಈ ಚಿತ್ರದ ಅಂತ್ಯ ನಿರೂಪಿಸುತ್ತದೆ.
ಚಿಟ್ಟು ಪಾತ್ರ ಚಿತ್ರಕ್ಕೆ ಮತ್ತೂ ತೂಕ ಕೊಡುತ್ತಾ ಚಿತ್ರವನ್ನು ಆಪ್ತವಾಗಿಸುತ್ತಾ ಹೋಗುತ್ತದೆ. ಮಾನಸಿಕ ಸ್ಥಿಮಿತ ಸರಿಯಿಲ್ಲದವನ ಪಾತ್ರದಲ್ಲಿ ಚಿಟ್ಟು ಅಭಿನಯ ಶ್ಲಾಘನೀಯ. ಪಾತ್ರದ ನಡೆ ಹಾಗಿದ್ದರೂ ಹೇಗೆ ಕಥೆಗೆ ಪೂರಕವಾಗಿ ಹೆಣೆಯಲ್ಪಟ್ಟಿದೆ ಎಂದು ಚಿತ್ರ ನೋಡಿಯೇ ಆನಂದಿಸಬೇಕು. ಅಷ್ಟೇನೂ ಮುಖ್ಯವಲ್ಲದ ಪಾತ್ರ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಬಹಳ ಸುಂದರವಾಗಿ ಆ ಪಾತ್ರ ಚಿತ್ರದ ಓಟಕ್ಕೆ ಸಾಥ್ ಕೊಡುತ್ತಾ ಹೋಗುತ್ತದೆ. ಕೆಲವು ತಮಾಷೆಯಾದ ಘಳಿಗೆಗಳು ಮನಸ್ಸನ್ನು ಹಗುರವಾಗಿತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸು ಸೆಳೆಯುವುದು ಎಂದರೆ ಅಕ್ಕ – ತಮ್ಮನ ಪಾತ್ರ ಮಾಡಿರುವ ಪುಟಾಣಿಗಳು. ಮುಗ್ಧವಾಗಿಯೂ ಭಾವನಾತ್ಮಕವಾಗಿಯೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಮನಸ್ಸನ್ನು ಗೆದ್ದುಬಿಡುತ್ತಾರೆ.
ಹಾಗೆಂದು ಈ ಚಿತ್ರ ಪರಿಪೂರ್ಣ ಎಂದು ಹೇಳಲು ಬರುವುದಿಲ್ಲ. ಅಲ್ಲಲ್ಲಿ ಕಥೆ ತನ್ನ ಗಟ್ಟಿತನ ಕಳೆದುಕೊಂಡು ಸ್ವಲ್ಪ ಜಾಳಾಗಿದೆ ಅನ್ನಿಸಬಹುದು. ನಿರೂಪಣೆಯ ಮಾದರಿ ಕೆಲವೊಮ್ಮೆ ಸಾಕ್ಷ್ಯಚಿತ್ರದ ಛಾಯೆಯನ್ನು ಕೊಟ್ಟುಬಿಟ್ಟಿದೆ ಎಂದೂ ಅನಿಸುತ್ತದೆ. ಆದರೂ ಕಥೆಯ ಒಟ್ಟಾರೆ ಆಶಯ ಮತ್ತು ಪಾತ್ರಧಾರಿಗಳ ನಟನೆ ಇವೆಲ್ಲ ಕೊರತೆಗಳನ್ನೂ ಮರೆಸಿಬಿಡುತ್ತದೆ. ಕೆಲವು ಮುಖ್ಯವಾದ ದೃಶ್ಯಗಳಲ್ಲಿ ಹಿನ್ನೆಲೆ ಸಂಗೀತ ಇನ್ನೂ ಪರಿಣಾಮಕಾರಿಯಾಗಿರಬಹುದಿತ್ತು. ಒಟ್ಟಾರೆಯಾಗಿ ‘ಎರಂಬು’ ಒಂದು ಸರಳ, ಉತ್ತಮ ಹಾಗೂ ಕುಟುಂಬದೊಟ್ಟಿಗೆ ನೋಡಬಹುದಾದ ಸುಂದರ ಚಿತ್ರ. ಒಂದು ಉತ್ತಮ ಚಿತ್ರ ಕೊಟ್ಟ ನಿರ್ದೇಶಕ ಸುರೇಶ್ ಮತ್ತು ಚಿತ್ರತಂಡಕ್ಕೆ ಅಭಿನಂದನೆಗಳು.